ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡುವ ಭರವಸೆ
ಬೆಂಗಳೂರು: ಪರಿಶಿಷ್ಠ ಪಂಗಡದ ಮೀಸಲು ಪ್ರಮಾಣವನ್ನು ಶೇ.7.5ಕ್ಕೆ ಹೆಚ್ಚಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಅವರು ನಡೆಸುತ್ತಿರುವ ಧರಣೆಗೆ ಬೆಂಬಲ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ಈ ಬಗ್ಗೆ ವಿಧಾನಸಭೆ ಕಲಾಪದಲ್ಲಿ ಪ್ರಸ್ತಾಪ ಮಾಡುವುದಾಗಿ ತಿಳಿಸಿದರು.
ಸ್ವಾಮೀಜಿ ಅವರು ಧರಣಿ ಸತ್ಯಾಗ್ರಹ ನಡೆಸುತ್ತಿರುವ ನಗರದ ಸ್ವಾತಂತ್ರ್ಯ ಉದ್ಯಾನವನಕ್ಕೆ ಪಕ್ಷದ ಹಿರಿಯ ಮುಖಂಡರು, ಶಾಸಕರ ಜತೆ ಭೇಟಿ ನೀಡಿ ಶ್ರೀಗಳ ಕ್ಷೇಮ ವಿಚಾರಿಸಿದ ಕುಮಾರಸ್ವಾಮಿ ಅವರು, ನಾಯಕ ಸಮುದಾಯದ ಮೀಸಲು ಬೇಡಿಕೆಗೆ ಪಕ್ಷದ ಬೆಂಬಲವಿದೆ ಎಂದು ಘೋಷಿಸಿದರು.
ಬಳಿಕ ಅವರು ಮಾಧ್ಯಮಗಳ ಜತೆ ಮಾತನಾಡಿದರು.
“ನಾನು ಮುಖ್ಯಮಂತ್ರಿಯಾಗಿದ್ದಾಗ ಸ್ವಾಮೀಜಿ ಅವರು ಮೀಸಲು ಪ್ರಮಾಣ ಹೆಚ್ಚಿಸುವಂತೆ ಒತ್ತಾಯಿಸಿ ಪಾದಯಾತ್ರೆ ನಡೆಸಿದ್ದರು. ಆ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ರಾಜ್ಯ ಹೈಕೋರ್ಟ್ʼನ ನಿವೃತ್ತ ನ್ಯಾಯಮೂರ್ತಿ ಹೆಚ್.ಎಸ್.ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಲಾಗಿತ್ತು. ಆ ಸಮಿತಿಯೂ ಈಗಾಗಲೇ ವರದಿ ಸಲ್ಲಿಸಿದ್ದರೂ ಸರಕಾರ ಅನುಷ್ಠಾನಕ್ಕೆ ತಂದಿಲ್ಲ. ಕೂಡಲೇ ಸರಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು” ಎಂದು ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸಾ.ರಾ.ಮಹೇಶ್, ವೆಂಕಟರಾವ್ ನಾಡಗೌಡ, ಶಾಸಕರಾದ ಡಾ.ಅನ್ನದಾನಿ, ಅಶ್ವಿನ್ ಕುಮಾರ್, ರಾಜಾ ವೆಂಕಟಪ್ಪ ನಾಯಕ್, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಹಿರಿಯ ಮುಖಂಡರಾದ ತಿಮ್ಮರಾಯಪ್ಪ, ಜಫ್ರುಲ್ಲಾ ಖಾನ್ ಮುಂತಾದವರು ಮಾಜಿ ಮುಖ್ಯಮಂತ್ರಿಗಳ ಜತೆಯಲ್ಲಿದ್ದರು.