ಇನ್ನೆರಡು ದಿನದಲ್ಲಿ ಹಣ್ಣಾಗಲಿದ್ದ ರೇಷ್ಮೆಬೆಳೆ ಸರ್ವನಾಶ; ವೇಮಗಲ್ ಠಾಣೆ ವ್ಯಾಪ್ತಿಯಲ್ಲಿ ಪಾತಕ ಘಟನೆ
ಕೋಲಾರ: ದ್ವೇಷ ಮತ್ತು ಅಸೂಯೆಯಿಂದ ದುಷ್ಕರ್ಮಿಗಳು ಹಿಪ್ಪುನೇರಳೆ ಸೊಪ್ಪಿನ ಮೇಲೆ ವಿಷಕಾರಕ ಟಿಮಿಟ್ ಅನ್ನು ಚೆಲ್ಲಿದ ಪರಿಣಾಮ, ಸುಮಾರು ನೂರು ಮೊಟ್ಟೆಯಷ್ಟು ರೇಷ್ಮೆಬೆಳೆ ಸರ್ವನಾಶವಾಗಿರುವ ಧಾರುಣ ಘಟನೆ ತಾಲೂಕಿನ ವೇಮಗಲ್ ಪೊಲೀಸ್ ಠಾಣೆಯ ಕಾಜಿ ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ರೇಷ್ಮೆ ಹುಳು ಇನ್ನೆರಡು-ಮೂರು ದಿನಗಳಲ್ಲಿ ಹಣ್ಣಾಗಿ ವಾರದೊಳಗೆ ಗೂಡು ಮಾರುಕಟ್ಟೆಗೂ ಹೋಗುವುದಿತ್ತು. ಪ್ರಸ್ತುತ ಒಂದು ಕೆಜಿ ರೇಷ್ಮೆಗೂಡು 800 ರೂಪಾಯಿಗೂ ಹೆಚ್ಚು ದರಕ್ಕೆ ಮಾರಾಟವಾಗುತ್ತಿದ್ದು, ಕೈಗೆ ಬರಲಿದ್ದ ಬೆಳೆಯನ್ನು ಕಿಡಿಗೇಡಿಗಳು ಹಾಳು ಮಾಡಿದ್ದಾರೆ.
ಬೆಳೆ ಕಳೆದುಕೊಂಡ ರೇಷ್ಮೆ ಬೆಳೆಗಾರ ಚೌಡಪ್ಪ ಈಗ ತಲೆಮೇಲೆ ಕೈಹೊತ್ತು ಕೂತಿದ್ದು, ದಿಕ್ಕುತೋಚದ ಸ್ಥಿತಿಯಲ್ಲಿದ್ದಾರೆ. ಅವರಿಗೆ ಸುಮಾರು 80,000ದಿಂದ 1 ಲಕ್ಷ ರೂಪಾಯಿವರೆಗೂ ನಷ್ಟವಾಗಿದೆ.
ಬುಧವಾರ (ಏಪ್ರಿಲ್ 13) ಮಧ್ಯಾಹ್ನದ ನಂತರ ದುಷ್ಕರ್ಮಿಗಳು ಚೌಡಪ್ಪ ಅವರ ಹಿಪ್ಪುನೇರಳೆ ಸೊಪ್ಪಿನ ತೋಟದ ಮೇಲೆ ಟಿಮಿಟ್’ನ್ನು ಪೂರ್ಣವಾಗಿ ಚೆಲ್ಲಿದ್ದು, ಗುರುವಾರ ನಸುಕಿನಲ್ಲಿಯೇ, ಅಂದರೆ; ಬೆಳಗ್ಗೆ 5 ಗಂಟೆ ಸುಮಾರಿಗೆ ಅವರು ಸೊಪ್ಪು ಕುಯ್ದಿದ್ದಾರೆ. ಆ ಸಂದರ್ಭದಲ್ಲಿ ಕೊಂಚ ಕತ್ತಲಿದ್ದ ಕಾರಣಕ್ಕೆ ಅವರಿಗೆ ಟಿಮಿಟ್ ಚೆಲ್ಲಿರುವುದು ಗಮನಕ್ಕೆ ಬಂದಿಲ್ಲ.
ರೇಷ್ಮೆ ಸೊಪ್ಪಿನ ಮೇಲೆ ಟಿಮಿಟ್ ಚೆಲ್ಲಿರುವುದನ್ನು ರೇಷ್ಮೆ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದು, ಅವರೂ ಚೌಡಪ್ಪ ಅವರ ಹಿಪ್ಪುನೇರಳೆ ತೋಟಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ವರದಿ ನೀಡುವುದಾಗಿ ರೈತನಿಗೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಈ ಬಗ್ಗೆ ಸಿಕೆನ್ಯೂಸ್ ನೌ ಜತೆ ಮಾತನಾಡಿದ ರೈತ ಚೌಡಪ್ಪ ಹೇಳಿದ್ದಿಷ್ಟು;
ಈ ಘಟನೆ ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ. ಇನ್ನೆರಡು ದಿನಗಳಲ್ಲಿ ರೇಷ್ಮೆಹುಳ ಹಣ್ಣಾಗುತ್ತಿತ್ತು. ವಾರದಲ್ಲಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿತ್ತು. ಯಾರೋ ಕಿಡಿಗೇಡಿಗಳು ಈ ಬೆಳೆಯನ್ನು ನೋಡಿ ಸಹಿಸಲಾಗದೇ ದ್ವೇಷ ಮನೋಭಾವದಿಂದ ಇಂಥ ಹೀನ ಕೃತ್ಯ ಎಸಗಿದ್ದಾರೆ ಎಂದು ಅಳಲು ತೋಡಿಕೊಂಡರು.
ಈ ಕೃತ್ಯವನ್ನು ಪರಿಚಿತರೇ ಎಸಗಿರಬಹುದು ಎಂದು ಚೌಡಪ್ಪ ಅನುಮಾನ ವ್ಯಕ್ತಪಡಿಸಿದ್ದು, ಶನಿವಾರ ರೇಷ್ಮೆ ಅಧಿಕಾರಿಗಳು ವರದಿ ನೀಡಿದ ನಂತರ ವೇಮಗಲ್ ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.
ಬುಧವಾರ ಮಧ್ಯಾಹ್ನದ ನಂತರ ಕಿಡಿಗೇಡಿಗಳು ಟಿಮಿಟ್ ಚೆಲ್ಲಿರುವ ಸಂಶಯ ನಮಗಿದೆ. ನಾವು ಗುರುವಾರ ನಸುಕಿನಲ್ಲಿ ಸೊಪ್ಪು ಕೊಯ್ದೆವು. ಆಗ ನಮಗೆ ಟಿಮಿಟ್ ಚೆಲ್ಲಿರುವುದು ಗೊತ್ತಾಗಲಿಲ್ಲ. ಗುರುವಾರ ಬೆಳಗ್ಗೆ ಮಂಗಳವಾರ ಸಂಜೆ ಕತ್ತರಿಸಿದ್ದ ಸೊಪ್ಪು ಇತ್ತು, ಅದನ್ನೇ ರೇಷ್ಮೆಹುಳಕ್ಕೆ ಕೊಟ್ಟಿದ್ದೆವು. ಆದರೆ, ಅಂದು ರಾತ್ರಿ ಕೊಟ್ಟ ಸೊಪ್ಪಿನಲ್ಲಿ ಟಿಮಿಟ್ ಅಂಶವಿತ್ತು. ಸೊಪ್ಪು ಹಾಕಿದ 15 ನಿಮಿಷಕ್ಕೆಲ್ಲ ರೇಷ್ಮೆಹುಳಗಳು ವಿಸ್ತೇಜಗೊಂಡಂತೆ ಕಂಡುಬಂದವು. ನನಗೆ ಬಹಳಷ್ಟು ಗಾಬರಿಯಾಯಿತು. ಏನಾಗುತ್ತಿದೆ ಎಂದು ನಾನು ಯೋಚಿಸುವಷ್ಟರಲ್ಲಿ ಎಲ್ಲ ಹುಳಗಳು ಅಸುನೀಗಿದವು. ತಲೆ ಮೇಲೆ ಆಕಾಶವೇ ಕಳಚಿ ಬಿದ್ದಂತಾಯಿತು ಎಂದು ಚೌಡಪ್ಪ ದುಃಖ ತೋಡಿಕೊಂಡರು.
ಟಿಮಿಟ್ ಚೆಲ್ಲಿದ ಪಾತಕ ಕೃತ್ಯಕ್ಕೆ ಇಲ್ಲಿವೆ ಸಾಕ್ಷ್ಯ; ಚಿತ್ರಗಳ ಸ್ಲೈಡ್ ನೋಡಿ..
ನಮ್ಮ ತೋಟದ ಸುತ್ತ ಎಲ್ಲರೂ ರಾಗಿ ಬೆಳೆದಿದ್ದಾರೆ. ನಮ್ಮ ತೋಟದಲ್ಲಿ ಮಾತ್ರ ಹಿಪ್ಪುನೇರಳೆ ಸೊಪ್ಪು ಇತ್ತು. ಯಾರೋ ಬೇಕೆಂದೇ ಹೊಂಚು ಹಾಕಿ ಈ ಕೃತ್ಯ ಎಸಗಿದ್ದಾರೆ. ಪೊಲೀಸರಿಗೆ ದೂರು ಕೊಡುತ್ತೇನೆ. ಅವರು ಅಪರಾಧಿಗಳನ್ನು ಪತ್ತೆ ಹಚ್ಚುತ್ತಾರೆಂಬ ವಿಶ್ವಾಸವಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ನಮ್ಮ ಪರಿಸ್ಥಿತಿ ಬಹಳ ದುಸ್ತರವಾಗಿತ್ತು. ಈಗಷ್ಟೇ ಬೆಳೆಗಳು ಕೈಗೆ ಬರುತ್ತಿದ್ದವು. ಅಷ್ಟರಲ್ಲಿ ಈ ಘಟನೆ ನಡೆದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ನಡೆಸಿ ಸಂತ್ರಸ್ತ ರೈತನಿಗೆ ಪರಿಹಾರ ಕೊಡಿಸಬೇಕು ಎಂದು ರೈತ ಮುಖಂಡರು ಒತ್ತಾಯ ಮಾಡಿದ್ದಾರೆ. ಶನಿವಾರ ರೈತ ಮುಖಂಡರು, ಪೊಲೀಸರು ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ನನ್ನ ಕಣ್ಣೆದುರೇ ರೇಷ್ಮೆಹುಳಗಳೆಲ್ಲವೂ ಸತ್ತು ಹೋದವು. ಬಹಳ ದುಃಖವಾಯಿತು. ಬಹಳ ಕಷ್ಟಕಾಲದಲ್ಲಿ ಬೆಳೆ ಕೈಗೆ ಬರುವುದಿತ್ತು. ಆದರೆ, ಯಾರೋ ಕಿಡಿಗೇಡಿ ಇಂಥ ಹೀನ ಕೆಲಸ ಮಾಡಿದ್ದಾರೆ. ಅವರ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ.
ಚೌಡಪ್ಪ, ಸಂತ್ರಸ್ತ ರೈತ