ಬಾಗೇಪಲ್ಲಿ ಪೊಲೀಸರ ಭರ್ಜರಿ ಆಪರೇಷನ್
by GS Bharath Gudibande
ಬಾಗೇಪಲ್ಲಿ / ಚಿಕ್ಕಬಳ್ಳಾಪುರ: ಪಿಎಸ್‍ಐ ಹುದ್ದೆ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ ಆರೋಪದ ಮೇರೆಗೆ ನವೀನ್ ಧಳಬಂಜನ್ (31) ಎಂಬ ವ್ಯಕ್ತಿಯನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿ ಮೂಲದ ನವೀನ್ ಧಳಬಂಜನ್, ಪಿಎಸ್ ಐ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ್ದಾನೆ ಎಂಬ ಕಾರಣಕ್ಕೆ ಬಾಗೇಪಲ್ಲಿ ಪೊಲೀಸರು ಆರೋಪಿಯನ್ನು ಮಂಗಳವಾರ ಬಂಧಿಸಿದ್ದಾರೆ.
ರಾಜ್ಯದಲ್ಲಿ ಪಿಎಸ್‍ಐ ಹುದ್ದೆಗಳ ಪರೀಕ್ಷೆ ಅಕ್ರಮ ಮತ್ತು ನೇಮಕಾತಿ ಪ್ರಕರಣವು ಬಯಲಿಗೆ ಬಂದ ಮೇಲೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳ ಸಮೇತ ಹಲವರ ಬಂಧನ ಆಗಿದ್ದು ತನಿಖೆ ಮುಂದುವರಿದಿದೆ.
ಏನಿದು ಪ್ರಕರಣ?
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ನಿವೃತ್ತ ಶಿಕ್ಷಕ ಸತ್ಯನಾರಾಯಣರೆಡ್ಡಿ ಅವರ ಮಗ ಕಿರಣ್ ಅವರು 2019ರಲ್ಲಿ 300 ಪಿಎಸ್‍ಐ ಅಭ್ಯರ್ಥಿಗಳ ನೇಮಕಾತಿ ವೇಳೆ ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ. ಆದರೆ, ಈ ವೇಳೆ ಸತ್ಯನಾರಾಯಣ ಅವರ ಸ್ನೇಹಿತ ಜಯರಾಮ ರೆಡ್ಡಿ ಮೂಲಕ ಪರಿಚಯವಾದ ಹುಬ್ಬಳ್ಳಿ ಮೂಲದ ನವೀನ್ ಧಳಬಂಜನ್, “ನಿಮ್ಮ ಮಗನಿಗೆ ನಾನು ಪಿಎಸ್‍ಐ ಹುದ್ದೆ ಕೊಡಿಸುತ್ತೇನೆ” ಎಂದು ಹೇಳಿ ಹಂತ, ಹಂತವಾಗಿ ಸತ್ಯನಾರಾಯಣರೆಡ್ಡಿ ಅವರಿಂದ 21.20 ಲಕ್ಷ ರೂಪಾಯಿ ಪಡೆದಿದ್ದಾನೆ. ಇಷ್ಟೂ ಮೊತ್ತವನ್ನು ತನ್ನ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದಾನೆ.
ನಂತರ ಹಣ ಪಡೆದ ಆರೋಪಿ ನವೀನ್ ಧಳವಂಜನ್, ಕೆಲಸ ಕೊಡಿಸದ ಹಿನ್ನೆಲೆಯಲ್ಲಿ ಸತ್ಯನಾರಾಯಣ ರೆಡ್ಡಿ ಅವರು ದುಡ್ಡು ವಾಪಸ್ ನೀಡುವಂತೆ ದುಂಬಾಲು ಬಿದ್ದಿದ್ದಾರೆ. ಕಿಲಾಡಿ ಆರೋಪಿ ಈಗ ಕೊಡುತ್ತೇನೆ, ಆಗ ಕೊಡುತ್ತೇನೆ ಎಂದು ಕಥೆಕಟ್ಟಿ ಕಾಗೆ ಹಾರಿಸುತ್ತಿದ್ದ. ಕೊನೆಗೆ ಬೇಸತ್ತ ಸತ್ಯನಾರಾಯಣ ರೆಡ್ಡಿ ಅವರು ಆರೋಪಿ ನವೀನ್ ವಿರುದ್ಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅವರ ದೂರಿನಂತೆ ಪೊಲೀಸರು ನವೀನ್ ಧಳಬಂಜನ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಆರೋಪಿಯು ಸತ್ಯನಾರಾಯಣ ರೆಡ್ಡಿ ಅವರಿಂದ ಪಡೆದ ಹಣದಲ್ಲಿ ಭರ್ಜರಿ ಶೋಕಿ ಮಾಡಿ ಖರ್ಚು ಮಾಡಿರುವುದಾಗಿ ಹೇಳಿದ್ದಾನೆ. ಸದ್ಯಕ್ಕೆ ಆರೋಪಿ, ಸತ್ಯನಾರಾಯಣ ರೆಡ್ಡಿ ಒಬ್ಬರಿಗೆ ಮಾತ್ರ ಮೋಸ ಮಾಡಿದ್ದಾನಾ ಅಥವಾ ಇನ್ನೂ ಯಾರಿಗಾದರೂ ಮೋಸ ಮಾಡಿದ್ದಾನೆಯೇ ಎಂದು ತನಿಖೆ ನಡೆಸಲಾಗುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಪೊಲೀಸ್ ಇನಸ್ಪೆಕ್ಟರ್ ಡಿ.ಆರ್.ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಸಿಬ್ಬಂದಿ ಹೆಚ್.ಸಿ, ನಟರಾಜ್, ಅರುಣ್, ವಿನಾಯಕ, ಅಶೋಕ, ಶಬ್ಬೀರ್ ಅವರುಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಾಗೇಪಲ್ಲಿ ಠಾಣೆಯ ಸಿಬ್ಬಂದಿಯ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ರೀತಿ ಕೆಲಸ ಕೊಡಿಸುವುದಾಗಿ ಹಣ ವಸೂಲಿ ಮಾಡಿ ವಂಚಿಸುವವರನ್ನು ನೇಣಿಗೆ ಏರಿಸಬೇಕು