ಬಂದ್ ತಡೆಯಲು KSRTC ಅಧಿಕಾರಿಗಳ ವಿಫಲ
ಗುಡಿಬಂಡೆ: KSRTC ಅಧಿಕಾರಿಗಳ ವೈಫಲ್ಯ ಹಾಗೂ ಸರಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಇಂದು ಬೆಳಗ್ಗೆಯಿಂದಲೇ ಗುಡಿಬಂಡೆ ಬಂದ್ ಆರಂಭವಾಗಿದೆ.
ಗುಡಿಬಂಡೆಗೆ ಸರಕಾರಿ ಬಸ್ ಡಿಪೋ ಮಂಜೂರು ಮಾಡಬೇಕು ಇಲ್ಲವೇ ಗುಡಿಬಂಡೆ ತಾಲೂಕನ್ನು ಕೆಂಪು ಬಸ್ (KSRTC) ಮುಕ್ತ ಮಾಡಬೇಕು ಎನ್ನುವ ಒತ್ತಾಯದೊಂದಿಗೆ ಬಂದ್ ಶುರುವಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
KSRTC ಅವ್ಯವಸ್ಥೆ ಖಂಡಿಸಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಬೆಳ್ಳಂಬೆಳಗ್ಗೆ ಬೀದಿಗಿಳಿದು ಹೊರಟ ನಡೆಸುತ್ತಿದ್ದಾರೆ. ಅಂಗಡಿ ಮುಂಗಟ್ಟು, ಶಾಲಾ-ಕಾಲೇಜುಗಳು ಸೇರಿದಂತೆ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು, ಅಧಿಕಾರಿಗಳ ಮಾತ್ರ ಮೌನವಾಗಿದ್ದಾರೆ.
ಜಿಲ್ಲಾKSRTC ಅಧಿಕಾರಿಗಳು ಗುಡಿಬಂಡೆ ಬಗ್ಗೆ ಮಲತಾಯಿ ಧೋರಣೆ ತಾಳಿದ್ದು, ಇದು ತಾಲೂಕು ಜನರನ್ನು ಸಿಟ್ಟಿಗೆಬ್ಬಸಿದೆ. ತಾಲೂಕಿಗೆ ಬಸ್ ಡಿಪೋ ಅನುಮೋದನೆಯಾಗಿ ವರ್ಷಗಳೇ ಕಳೆದಿದ್ದರೂ, ಅದನ್ನು ಸಾಕಾರ ಮಾಡಿಲ್ಲ. ಹಾಗಾಗಿ ಕೂಡಲೇ KSRTC ಘಟಕ ಸ್ಥಾಪಿಸಿ ಅಥವಾ ಕೆಂಪು ಬಸ್ ರಹಿತ ತಾಲೂಕು ಮಾಡುವಂತೆ ಹೋರಾಟಗಾರರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಗುಡಿಬಂಡೆ ನಮ್ಮ ಜಿಲ್ಲೆಯ ಇತರೆ ತಾಲೂಕುಗಳು ಹುಟ್ಟುವ ಮೊದಲೇ ತಾಲೂಕು ಕೇಂದ್ರ ಆಗಿತ್ತು. ಆದರೂ ಸರಕಾರ, ರಾಜಕೀಯ ವ್ಯಕ್ತಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಗುಡಿಬಂಡೆ ತಾಲೂಕು ಶೋಷಣೆಗೆ ಒಳಗಾಗಿದೆ. ತಾಲೂಕು ಕೇಂದ್ರದಿಂದ ಸರಿಯಾದ ಬಸ್ ಗಳ ವ್ಯವಸ್ಥೆ ಇಲ್ಲ. ಇದರಿಂದ ಶೈಕ್ಷಣಿಕವಾಗಿ ಮಕ್ಕಳು ಹಿಂದುಳಿಯುತ್ತಿದ್ದಾರೆ. ನಮ್ಮ ಸಮಸ್ಯೆ ಕೂಡಲೇ ಬಗೆಹರಿಸಲು ಮುಂದಾಗಿ ಎಂದು ಹೋರಾಟಗಾರರು ನೇರವಾಗಿ ಎಚ್ಚರಿಕೆ ನೀಡುತ್ತಿದ್ದಾರೆ.
ಬಂದ್ʼಗೆ ಗುಡಿಬಂಡೆ ಜನರು ಉತ್ತಮ ಬೆಂಬಲ ವ್ಯಕ್ತಪಡಿಸಿದ್ದು, ಆರೋಗ್ಯ, ಮೆಡಿಕಲ್ ಶಾಪ್ ಸೇರಿದಂತೆ ಅಗತ್ಯ ಸೇವೆಗಳನ್ನು ಹೊರತುಪಡಿಸಿದರೆ, ಉಳಿದ ಎಲ್ಲ ಬಂದ್ ಆಗಿವೆ.
ಗುಡಿಬಂಡೆಯಲ್ಲಿ ಸಾರಿಗೆ ಘಟಕ ಸ್ಥಾಪನೆ ಹೋರಾಟ ಸಮಿತಿಯಿಂದ ಬಂದ್ ಗೆ ಕರೆ ನೀಡಲಾಗಿದೆ. ಸಾರಿಗೆ ಘಟಕ ಸ್ಥಾಪಿಸಲು ಬಂದ್ ಆರಂಭ ಮಾಡಿದ್ದೇವೆ, ನಗರ ಹಾಗೂ ತಾಲೂಕಿನ ಎಲ್ಲಾ ಸಾರ್ವಜನಿಕರು, ಸಂಘಟನೆಗಳು, ಮುಖಂಡರು ನಿಷ್ಪಕ್ಷಪಾತವಾಗಿ ಸಹಕಾರ ನೀಡಬೇಕು. ನಾವು ನಮ್ಮ ಹಕ್ಕನ್ನು ಪಡೆಯಲು ಮುಂದಾಗಬೇಕು. ಪಕ್ಕದ ಗೌರಿಬಿದನೂರು ತಾಲೂಕಿನ ನಗರಗೆರೆ ಹೋಬಳಿ, ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು ಹೋಬಳಿ ಬಂದ್ ಗೆ ಬೆಂಬಲ ನೀಡಿದ್ದಾರೆ. ನಮ್ಮ ಪಟ್ಟಣದ ಎಲ್ಲರೂ ಈ ಹೋರಾಟದಲ್ಲಿ ಯುವಕರು ಹೆಚ್ಚಾಗಿ ಭಾಗವಹಿಸಿ ಹೋರಾಟಕ್ಕೆ ಶಕ್ತಿ ನೀಡಬೇಕು.
ದ್ವಾರಕನಾಥ್ ನಾಯ್ಡು, ಮಾಜಿ ಅಧ್ಯಕ್ಷ, ಪಟ್ಟಣ ಪಂಚಾಯಿತಿ, ಗುಡಿಬಂಡೆ