ಹಗರಣ ಕಿಂಗ್‌ಪಿನ್ ಬಂಧನಕ್ಕೆ ಹೆಚ್ಚಿದ ಒತ್ತಡ
ಬೆಂಗಳೂರು: PSI ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ ಸಂಬಂಧ ಎಡಿಜಿಪಿ ಅಮೃತ್ ಪೌಲ್ ಅವರನ್ನು ಬಂಧಿಸಲಾಗಿದ್ದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಂತಾಗಿದೆ.
ಸಿಐಡಿ ಪೊಲೀಸರು ಅಮೃತ್ ಪೌಲ್ ಅವರನ್ನು ವಿಚಾರಣೆಗೆ ಕರೆಸಿದ್ದರು. ಈ ವೇಳೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಿಐಡಿ ಪೊಲೀಸ್ ಹಿರಿಯ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ.
ರಾಜ್ಯದ ಪೊಲೀಸ್ ಇತಿಹಾಸದಲ್ಲೇ ಅತ್ಯುನ್ನತ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರ ಬಂಧನವಾಗಿರುವುದು ನಿಜಕ್ಕೂ ದುರ್ದೈವದ ಸಂಗತಿ ಎಂದು ಐಪಿಎಸ್ ಅಧಿಕಾರಿಗಳ ವಲಯದಲ್ಲಿ ಕೇಳಿಬರುತ್ತಿರುವ ಮಾತು.
ತಲಾ 30 ಲಕ್ಷ ರೂಪಾಯಿಗಳನ್ನು ಅಭ್ಯರ್ಥಿಗಳಿಂದ ವಸೂಲಿ ಮಾಡಲಾಗಿತ್ತು ಎಂಬ ಮಾಹಿತಿ ಕೂಡಾ ಹೊರಬಿದ್ದಿದೆ. ಒಎಂಆರ್ ಶೀಟ್ ಗಳನ್ನು ಪೌಲ್ ಕಚೇರಿಯಲ್ಲೇ ತಿದ್ದಿದ ಆರೋಪವೂ ಪೌಲ್ ಅವರ ಮೇಲಿದೆ.
ಮೊದಲಿಗೆ ಅಮೃತ್ ಪೌಲ್ ಅವರನ್ನು ಒಂದನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನಂತರ ಪೊಲೀಸ್ ಕಸ್ಟಡಿಗೆ ಪಡೆಯಲಾಯಿತು.
ಪೌಲ್ ಮೇಲೆ ಬಹಳಷ್ಟು ಗಂಭೀರ ಆರೋಪಗಳು ಇರುವುದರಿಂದ ನಾಲ್ಕು ಬಾರಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.ಆದರೆ ಅವರು ಹಾಜರಾಗಿರಲಿಲ್ಲ.ಕಡೆಗೆ ಸೋಮವಾರ ವಿಚಾರಣೆಗೆ ಬಂದ ಕೂಡಲೇ ಅವರನ್ನು ವಶಕ್ಕೆ ಪಡೆಯಲಾಯಿತು.
ಕಿಂಗ್ ಪಿನ್ ಬಂಧನವಾಗಲಿ
ಅಮೃತ್ ಪೌಲ್ ಬಂಧನ ಆಗುತ್ತಿದ್ದಂತೆಯೇ ಇಡೀ ಪಿಎಸ್‌ಐ ಹಗರಣದ ಕಿಂಗ್ ಪಿನ್ ರಾಜಕೀಯ ಪ್ರಭಾವಿಯನ್ನೂ ಬಂಧಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು; ಸಿಐಡಿ ಪೊಲೀಸರನ್ನು ಶ್ಲಾಘಿಸಿದ್ದಾರೆ.
ಪಿಎಸ್ಐ ಹಗರಣದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆದು, ಇಂದು ಎಡಿಜಿಪಿ ದರ್ಜೆಯ ಉನ್ನತ ಅಧಿಕಾರಿಯನ್ನೇ ಬಂಧಿಸಿರುವ ಘಟನೆ ರಾಜ್ಯ ಪೊಲೀಸ್ ವ್ಯವಸ್ಥೆಯಲ್ಲೇ ಐತಿಹಾಸಿಕ ದಿನ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಐಡಿ ತನಿಖಾ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸಿಐಡಿ ನೇತೃತ್ವ ವಹಿಸಿರುವ ದಕ್ಷ ಅಧಿಕಾರಿ, ಪಿ.ಎಸ್.ಸಂಧು ಅವರು, ಎಷ್ಟೇ ರಾಜಕೀಯ ಮತ್ತು ಅಧಿಕಾರಿಶಾಹಿ ಮಟ್ಟದಲ್ಲಿ ಒತ್ತಡ ಎದುರಾದರೂ ಮಣಿಯದೆ ತನಿಖಾ ತಂಡವನ್ನು ಮುನ್ನಡೆಸಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.
ಇನ್ನು, ಪಿಎಸ್ಐ ಕರ್ಮಕಾಂಡದ ತನಿಖೆಯಲ್ಲಿ ಸಿಐಡಿ ಸಾಗಬೇಕಿರುವ ದೂರ ಬಹಳಷ್ಟಿದೆ. ಕೆಳ, ಹಿರಿಯ ಹಂತದ ಅಧಿಕಾರಿಗಳ ಜತೆಗೆ ಸರ್ಕಾರದ ಮಟ್ಟದಲ್ಲಿ ಅತ್ಯಂತ ಪ್ರಭಾವೀ ಸ್ಥಾನಗಳಲ್ಲಿರುವ ಕಿಂಗ್ ಪಿನ್ ಗಳನ್ನು ಸಿಐಡಿ ಹಿಡಿಯಬೇಕಿದೆ. ಯಾವುದೇ ಕಾರಣಕ್ಕೂ ಈ ಪ್ರಭಾವಿಗಳು ತಪ್ಪಿಸಿಕೊಳ್ಳಬಾರದು ಎಂದು ಹೇಳಿದ್ದಾರೆ.
ನಾನು ಮೊದಲೇ ಹೇಳಿದ್ದೆ. ಪಿಎಸ್ಐ ಹಗರಣದಲ್ಲಿ ಒಬ್ಬರು ಮಹಾನ್ ಕಿಂಗ್ ಪಿನ್ ಇದ್ದಾರೆ. ಅವರ ಹೆಸರು ಹೇಳಿದರೆ ಸರ್ಕಾರವೇ ಬಿದ್ದು ಹೋಗುತ್ತದೆ. ಹೀಗೆ ಹೇಳಿದಾಗ ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡ್ತಾರೆ ಎಂದಿದ್ದರು. ದಾಖಲೆ ಕೊಡಿ ಎಂದಿದ್ದರು. ಈಗ ಅವರು ಏನು ಹೇಳುತ್ತಾರೆ? ಎಂದು ಹೆಚ್ ಡಿಕೆ ಪ್ರಶ್ನಿಸಿದ್ದಾರೆ.