ಉದ್ಘಾಟನೆ ಜತೆಯಲ್ಲೇ ಸೆಂಗೊಲ್ ಪ್ರತಿಷ್ಠಾಪನೆ
ನವದೆಹಲಿ: ಹೊಸ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ರಾಷ್ಟ್ರಕ್ಕೆ ಸಮರ್ಪಿಸಿದರು. ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಮತ್ತು ಪವಿತ್ರವಾದ ‘ಸೆಂಗೊಲ್’ ಅನ್ನು ಪ್ರತಿಷ್ಠಾಪಿಸಿದುದು ವಿಶೇಷವಾದ ಸಂಗತಿ.
ಭಾನುವಾರ ಮುಂಜಾನೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ವಿವಿಧ ಕೇಂದ್ರ ಸಚಿವರು ಉಪಸ್ಥಿತರಿದ್ದರು.
ಪೂಜೆಯ ಬಳಿಕ ಐತಿಹಾಸಿಕ ಮತ್ತು ಪವಿತ್ರವಾದ ‘ಸೆಂಗೊಲ್’ ಅನ್ನು ಪುರೋಹಿತರು ಪ್ರಧಾನಿ ನರೇಂದ್ರ ಮೋದಿಗೆ ಹಸ್ತಾಂತರ ಮಾಡಿದರು. ಭಕ್ತಿಯಿಂದ ಸಾಷ್ಟಾಂಗ ನಮಸ್ಕಾರ ಮಾಡಿದ ಮೋದಿ, ‘ಸೆಂಗೊಲ್’ ಅನ್ನು ಲೋಕಸಭೆ ಸ್ಪೀಕರ್ ಪೀಠದ ಸಮೀಪ ಪ್ರತಿಷ್ಠಾಪಿಸಿದರು.
ಶನಿವಾರ ತಮಿಳುನಾಡಿನಿಂದ ಆಗಮಿಸಿದ್ದ ಪುರೋಹಿತರ ವಿಶೇಷ ನಿಯೋಗ ಚೋಳರ ಕಾಲದ ಚಿನ್ನದ ಸೆಂಗೊಲ್ (ರಾಜದಂಡ)ಅನ್ನು ಪ್ರಧಾನಿ ನರೇಂದ್ರ ಮೋದಿಗೆ ಹಸ್ತಾಂತರ ಮಾಡಿತ್ತು.ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಈ ಪವಿತ್ರ ‘ಸೆಂಗೊಲ್’ ಅನ್ನು ಬ್ರಿಟಿಷರು ಭಾರತಕ್ಕೆ ಅಧಿಕಾರದ ಹಸ್ತಾಂತರದ ಸಂಕೇತವಾಗಿ ಹಸ್ತಾಂತರ ಮಾಡಿದ್ದರು.
ಐದು ಅಡಿ ಎತ್ತರವಿರುವ ಇದರ ತುದಿಯಲ್ಲಿ ಚಿಕ್ಕ ನಂದಿಯ ವಿಗ್ರಹವಿದೆ. ಹೊಸ ಸಂಸತ್ ಕಟ್ಟಡ ನಿರ್ಮಾಣದ ಸಂಕೇತವಾಗಿ ಇದನ್ನು ಲೋಕಸಭೆ ಸ್ಪೀಕರ್ ಪೀಠದ ಸಮೀಪ ಪ್ರತಿಷ್ಠಾಪಿಸಲಾಗಿದೆ. ಸೆಂಗೊಲ್ ಅನ್ನು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಆಗಸ್ಟ್ 14ರ ರಾತ್ರಿ ತಮ್ಮ ನಿವಾಸದಲ್ಲಿ ಹಲವಾರು ನಾಯಕರ ಸಮ್ಮುಖದಲ್ಲಿ ಸ್ವೀಕರಿಸಿದ್ದರು.
‘ಸೆಂಗೊಲ್’ ಅರ್ಥದಲ್ಲಿ ಆಳವಾದದ್ದು, ಇದು ತಮಿಳು ಪದ ‘ಸೆಮ್ಮೈ’ ನಿಂದ ಬಂದಿದೆ. ಅಂದರೆ ‘ಸದಾಚಾರ’. ಇದು ತಮಿಳುನಾಡಿನ ಪ್ರಮುಖ ಧಾರ್ವಿುಕ ಮಠದ ಪ್ರಧಾನ ಅರ್ಚಕರಿಂದ ಆಶೀರ್ವಾದ ಪಡೆದಿದೆ. ಸೆಂಗೊಲ್ ತುದಿಯಲ್ಲಿರುವ ನಂದಿಯ ವಿಗ್ರಹ ನ್ಯಾಯಾಅದ ವೀಕ್ಷಕನಂತೆ. ಸೆಂಗೊಲ್ ಮೇಲ್ಭಾಗದಲ್ಲಿ ಅದನ್ನು ಕೈಯಿಂದ ಕೆತ್ತಲಾಗಿದೆ.
ಬಹು ಮುಖ್ಯವಾಗಿ ಸೆಂಗೊಲ್ ಸ್ವೀಕರಿಸುವವರು ನ್ಯಾಯಯುತವಾಗಿ ಮತ್ತು ನ್ಯಾಯಯುತವಾಗಿ ಆಡಳಿತ ನಡೆಸಲು ‘ಆದೇಶ’ (ತಮಿಳಿನಲ್ಲಿ “ಆನೈ”) ಹೊಂದಿರುತ್ತಾರೆ. ಇದನ್ನು ರಾಷ್ಟ್ರವು ನೋಡುವುದಕ್ಕಾಗಿ ಪ್ರದರ್ಶಿಸಲಾಗುತ್ತದೆ ಮತ್ತು ವಿಶೇಷ ಸಂದರ್ಭಗಳಲ್ಲಿ ಹೊರತೆಗೆಯಲಾಗುತ್ತದೆ.
ಐತಿಹಾಸಿಕ ಸೆಂಗೊಲ್ ಅನ್ನು ಸ್ಥಾಪಿಸಲು ಸಂಸತ್ ಭವನವು ಅತ್ಯಂತ ಸೂಕ್ತವಾದ ಮತ್ತು ಪವಿತ್ರ ಸ್ಥಳವಾಗಿದೆ ಎಂದು ನರೇಂದ್ರ ಮೋದಿ ತೀರ್ಮಾನ ಕೈಗೊಂಡಿದ್ದರು. ಆಗಸ್ಟ್ 14, 1947ರ ರಾತ್ರಿ ಭಾರತದ ಸ್ವಾತಂತ್ರ್ಯವನ್ನು ಆಚರಿಸುವ ವಿಶೇಷ ಸಂದರ್ಭವಾಗಿತ್ತು. ಆ ರಾತ್ರಿ ಜವಾಹರಲಾಲ್ ನೆಹರು ತಮಿಳುನಾಡಿನ ತಿರುವಾಡುತುರೈ ಅಧೀನಂ (ಮಠ) ಅಧೀನಮ್ (ಅರ್ಚಕರು) ಅವರಿಂದ ‘ಸೆಂಗೊಲ್’ ಸ್ವೀಕರಿಸಿದ್ದರು.
ಸಂಸತ್ ಭವನ ಉದ್ಘಾಟನೆಯ ದೃಶ್ಯಗಳ ಸ್ಲೈಡ್ ಶೋ
ಸರ್ವಧರ್ಮ ಸಮ್ಮಿಲನ
ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಸರ್ವಧರ್ಮೀಯರ ಸಮ್ಮಿಲನವು ವಿಶೇಷವಾಗಿ ಗಮನ ಸೆಳೆಯಿತು. ಇದು ನಿಜ.ನೂತನ ಸಂಸತ್ ಭವನ ಉದ್ಘಟನಾ ಕಾರ್ಯಕ್ರಮದ ಅಂಗವಾಗಿ ಪೂಜಾ ಕೈಂಕರ್ಯಗಳು ಬೆಳಗ್ಗೆ 7.30 ರಿಂದ ಆರಂಭವಾಗಿ ಪೂಜಾ-ವಿಧಿವಿಧಾನಗಳು ನಡೆದವು.
ವಿವಿಧ ಧರ್ಮದ ಮುಖಂಡರು ಪ್ರಾರ್ಥನೆ ಸಲ್ಲಿಸುವ ಮೂಲಕ ಸೌಹಾರ್ದತೆಯ ಸಂದೇಶವನ್ನು ಸಾರಿದರು. ಪ್ರಾರ್ಥನಾ ಸಭೆಯಲ್ಲಿ ಪಂಡಿತರು, ಸಾಧು-ಸಂತರು ಭಾಗಿಯಾಗಿದ್ದು, 12 ಮಂದಿ ಧಾರ್ಮಿಕ ನಾಯಕರಿಂದ ಪ್ರಾರ್ಥನೆ ನಡೆಯಿತು ಈ ಮಧ್ಯೆ ಕಾರ್ಮಿಕರಿಗೆ ಶಾಲು ಹೊದಿಸಿ ಪ್ರಧಾನಿಯವರು ಸನ್ಮಾನಿಸಿದರು.
ಕಾರ್ಯಕ್ರಮಕ್ಕೆ ಸುಮಾರು 60 ಧಾರ್ಮಿಕ ಮುಖ್ಯಸ್ಥರನ್ನು ಕರೆಸಲಾಗಿದ್ದು, ಅವರಲ್ಲಿ ಹಲವರು ತಮಿಳುನಾಡಿನವರು.ಧಾರ್ವಿಕ ಕಾರ್ಯಕ್ರಮದಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠದ ಋತ್ವಿಜರಾದ ಟಿ.ವಿ. ಸೀತಾರಾಮ ಶರ್ಮ, ಶ್ರೀರಾಮ ಶರ್ಮ, ಲಕ್ಷ್ಮೀಶ ತಂತ್ರಿ ಹಾಗೂ ದೆಹಲಿ ಶಾಖಾ ಮಠದ ನಾಗರಾಜ ಅಡಿಗ, ಋಷ್ಯಶೃಂಗ ಭಟ್ ಭಾಗಿಯಾಗಿದ್ದಾರೆ.