ದೇಶದ ಪಾಲಿನ ದೇಗುಲ ನೂತನ ಸಂಸತ್ ಭವನದ ವಿಶೇಷಗಳು ಅನೇಕ
ನವದೆಹಲಿ: ಭಾರತದ ನೂತನ ಸಂಸತ್ ಭವನ ಇಂದು ಉದ್ಘಾಟನೆಯಾಗಿದ್ದು ಇದು ದೇಶದ ಜನರ ಪಾಲಿಗೆ ದೇಗುಲವಿದ್ದಂತೆ. 1200 ಕೋಟಿ ರೂ. ವೆಚ್ಚದಲ್ಲಿ 39.6 ಮೀಟರ್ ಎತ್ತರದಲ್ಲಿ ನಾಲ್ಕು ಅಂತಸ್ತಿನ ನೂತನ ಸಂಸತ್ ಭವನ ನಿರ್ಮಾಣ ಮಾಡಲಾಗಿದೆ.
1272 ಆಸನ ಸಾಮರ್ಥ್ಯವನ್ನು ಇದು ಹೊಂದಿದೆ. ಲೋಕಸಭೆಯನ್ನು ಗರಿಬಿಚ್ಚಿರುವ ನವಿಲಿನ ವಿನ್ಯಾಸದಲ್ಲಿ ನಿರ್ಮಾಣ ಮಾಡಿರುವುದು ವಿಶೇಷ. ಸುಮಾರು 6 ಸಾವಿರ ಕಾರ್ಮಿಕರು ಈ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಹೊಸ ಸಂಸತ್ ಭವನ ಕಟ್ಟಡ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ 2020ರ ಡಿಸೆಂಬರ್‌ನಲ್ಲಿ ಶಂಕು ಸ್ಥಾಪನೆ ಮಾಡಿದ್ದರು. ಹೊಸ ಸಂಸತ್ ಭವನ ಸ್ವಾವಲಂಬಿ ಭಾರತದ ಒಂದು ಆಂತರಿಕ ಭಾಗವಾಗಿದೆ ಮತ್ತು ಸ್ವಾತಂತ್ರ್ಯದ ನಂತರ ಪ್ರಥಮ ಬಾರಿಗೆ ಜನರನ್ನು ಸಂಕೇತಿಸುವ ಸಂಸತ್ತನ್ನು ನಿರ್ಮಿಸಲು ದೊರೆತ ಸದಾವಕಾಶವಾಗಿದೆ” ಎಂದು ಮೋದಿ ಹೇಳಿದ್ದರು.
ಲೋಕಸಭಾ ಸ್ಪೀಕರ್ ಕುರ್ಚಿ ಬಳಿ ಐತಿಹಾಸಿಕ ರಾಜದಂಡ ‘ಸೆಂಗೊಲ್’ ಅನ್ನು ಸ್ಥಾಪಿಸಿರುವುದು ಮತ್ತೊಂದು ವಿಶೇಷ. ಟಾಟಾ ಪ್ರಾಜೆಕ್ಟ್ ಲಿಮಿಟೆಡ್ ಈ ಕಟ್ಟಡ ನಿರ್ಮಿಸಿದೆ. ಹೊಸ ಸಂಸತ್ತಿನ ಕಟ್ಟಡವು ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸಲು ಭವ್ಯವಾದ ಸಂವಿಧಾನ ಭವನವನ್ನು ಹೊಂದಿದೆ.
ಹೊಸ ಸಂಸತ್ ಭವನದ ವೈಭವ ನೋಡಲು ಈ ಸ್ಲೈಡ್ ಶೋ ಕ್ಲಿಕ್ ಮಾಡಿ..
ಸಂಸದರಿಗೆ ವಿಶ್ರಾಂತಿ ಕೋಣೆ, ಗ್ರಂಥಾಲಯ, ಬಹು ಕಮಿಟಿ ಕೊಠಡಿಗಳು, ಊಟದ ಪ್ರದೇಶಗಳು ಮತ್ತು ಸಾಕಷ್ಟು ಪಾರ್ಕಿಂಗ್ ಸ್ಥಳವನ್ನು ಹೊಂದಿದೆ. ತ್ರಿಕೋನ ಆಕಾರದ ನಾಲ್ಕು ಅಂತಸ್ತಿನ ಕಟ್ಟಡವು 64,500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಸಂಸತ್ ಭವನ ಮೂರು ಮುಖ್ಯ ದ್ವಾರಗಳನ್ನು ಹೊಂದಿದೆ. ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ಕರ್ಮ ದ್ವಾರ.
ಸಂಸತ್ ಭವನದಲ್ಲಿ ವಿಐಪಿಗಳು, ಸಂಸದರು ಮತ್ತು ಸಂದರ್ಶಕರಿಗೆ ಪ್ರತ್ಯೇಕ ಪ್ರವೇಶದ್ವಾರಗಳಿವೆ. ಹೊಸ ಕಟ್ಟಡಕ್ಕೆ ಬಳಸಲಾದ ವಸ್ತುಗಳನ್ನು ದೇಶದ ವಿವಿಧ ಭಾಗಗಳಿಂದ ತರಿಸಿಕೊಳ್ಳಲಾಗಿದೆ. ಈ ಕಟ್ಟಡದ ಲೋಕಸಭೆಯಲ್ಲಿ 888 ಸದಸ್ಯರು ಮತ್ತು ರಾಜ್ಯಸಭಾ ಕೊಠಡಿಯಲ್ಲಿ 300 ಸದಸ್ಯರು ಆರಾಮವಾಗಿ ಕುಳಿತುಕೊಳ್ಳಬಹುದಾಗಿದೆ. ಉಭಯ ಸದನಗಳ ಜಂಟಿ ಅಧಿವೇಶನಕ್ಕಾಗಿ, 1,280 ಸಂಸದರಿಗೆ ಲೋಕಸಭೆಯ ಕೊಠಡಿಯಲ್ಲಿ ಅವಕಾಶ ಕಲ್ಪಿಸಿರುವುದೂ ವಿಶೇಷವೆ ಆಗಿದೆ.