ಅಸಹಿಷ್ಣುತೆ ಮೀರಿ ಸಹಿಷ್ಣುತೆಯ ಸಾಕ್ಷಾತ್ಕಾರ
by Pavan Kumar G angajala
ಬಾಗೇಪಲ್ಲಿ: ಪವಿತ್ರ ಮೊಹರಂ ಆಚರಣೆ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಸಾಮಾನ್ಯ ಬೆಂಗಳೂರಿನಂಥ ನಗರಗಳಲ್ಲಿ ಇನ್ನವೇ, ನಗರ ಪಟ್ಟಣಗಳಲ್ಲಿ, ಮುಸ್ಲೀಂ ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುವ ಸ್ಥಗಳಲ್ಲಿಈ ಆಚರಣೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಆದರೆ, ಹಳ್ಳಿಯಲ್ಲಿ ಮೊಹರಂ ಜೋರಾಗಿ ಆಚರಿಸಲ್ಪಡುತ್ತದೆ ಎಂದರೆ.. ಮುಂದೆ ಓದಿ..
ಬಾಗೇಪಲ್ಲಿ ತಾಲೂಕು, ಅದರಲ್ಲಿಯೂ ಐತಿಹಾಸಿಕ ತಾಣ, ಗುಮ್ಮನಾಯಕನಪಾಳ್ಯ ಪಾಳೇಗಾರರ ನೆಲದ ದೇವಿಕುಂಟೆ ಗ್ರಾಮಕ್ಕೆ ಮೊಹರಂ ಜೀವಕಳೆ ತಂದಿದೆ. ಇಡೀ ಗ್ರಾಮವೇ ಮೊಹರಂ ಸಂಭ್ರಮದಲ್ಲಿ ತೇಲಿದೆ. ಗ್ರಾಮದ ಮನೆಗಳು ಸುಣ್ಣಬಣ್ಣದಿಂದ ಸಿಂಗಾರಗೊಂಡು ಕಂಗೊಳಿಸಿವೆ. ಮುಸ್ಲಿಂ ಸಮುದಾಯವನ್ನು ಮೀರಿಸುವಂತೆ ಆಚರಣೆಗಳು ನಡೆದಿವೆ. ಇದು ಹಿಂದೂ ಮುಸ್ಲೀಮರ ನಡುವಿನ ಸೌಹಾರ್ದತೆಗೆ ಮಹೋನ್ನತ ಸಾಕ್ಷ್ಯ!
ಹೌದು, ಇದು ನಿಜ. ಈ ಹಬ್ಬದಿಂದ ಮುಸ್ಲಿಮರು ಸಹೋದರತ್ವ ಸಂದೇಶವನ್ನು ಸಮಾಜಕ್ಕೆ ಸಾರಿದ್ದಾರೆ.
ದೇವಿಕುಂಟೆ ಒಂದು ಸಾವಿರ ಜನಸಂಖ್ಯೆಯುಳ್ಳ ಗ್ರಾಮ. ಇಲ್ಲಿನ ಹಿಂದು ಮುಸ್ಲಿಮರು ಪ್ರೀತಿ ಬಾಂಧವ್ಯದಿಂದ ಅವಿಭಕ್ತ ಕುಟುಂಬದಂತೆ ಬಾಳಿ ಬದುಕುತ್ತಿದ್ದಾರೆ. ಅವರು ಪರಸ್ಪರ ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ -ಚಿಕ್ಕಮ್ಮ, ಮಾವ-ಅತ್ತೆ, ಅಣ್ಣ ತಂಗಿ ಎಂದು ಸಂಬೋಧಿಸುತ್ತಾ ಬದುಕುತ್ತಿದ್ದಾರೆ. ಆ ಶಬ್ದಗಳು ಕೇವಲ ಕೂಗಾಗಿ ಕೇಳದೇ ಪರಸ್ಪರ ಹೃದಯಗಳಿಂದ ಹೊರಹೊಮ್ಮುತ್ತಿವೆ. ತತ್ಪರಿಣಾಮವಾಗಿ ಹಳ್ಳಿಯಲ್ಲಿ ಸಂಬಂಧಗಳಿಗೆ ಮೀರಿದ ಮಾನವೀಯತೆ, ಸೌಹಾರ್ದತೆ ತುಂಬಿದೆ. ಮೊಹರಂ ಆಚರಣೆಯಲ್ಲೂ ಇದು ಪ್ರತಿಫಲಿಸಿತು.
ಹಲವಾರು ದಶಕಗಳಿಂದ ಐತಿಹಾಸಿಕ ಸೈಸವಲಿಬಾಬಾ ದರ್ಗಾದಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳು ಬಾಬಾ ಅವರ ಮೇಲೆ ಅಪಾರವಾದ ನಂಬಿಕೆ, ಭಕ್ತಿ ಇಟ್ಟುಕೊಂಡು ಶ್ರದ್ಧೆಯಿಂದ ನಡೆದುಕೊಳ್ಳುತ್ತಿದ್ದಾರೆ. ಎಲ್ಲ ಸಮುದಾಯದ ಜನರು ಕೌಟುಂಬಿಕ ಸಮಸ್ಯೆ, ಸಂತಾನ ಭಾಗ್ಯ, ಇನ್ನಿತರೆ ಏನೇ ಕಷ್ಟಕಾರ್ಪಣ್ಯ ಇದ್ದರೆ ಈ ದರ್ಗಾಕ್ಕೆ ಹರಿಕೆ ಹೊತ್ತುಕೊಳ್ಳುತ್ತಾರೆ. ಅವರ ಕಷ್ಟಗಳು ಪರಿಹಾರವಾದ ಮೇಲೆ ದರ್ಗಾಕ್ಕೆ ಬಂದು ಬಾಬಾ ಅವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಅವರವರ ಸಂಪ್ರದಾಯ, ಧರ್ಮಾಚರಣೆಯಂತೆ ಇಲ್ಲಿ ವೊಧಿ ವಿಧಾನಗಳು ನಡೆಯುತ್ತವೆ.
ಹೀಗೆ ಮೋಹರ ಆಚರಣೆ;
ಮುಸ್ಲಿಮರು ಆಶುರಾ ದಿನದಂದು ಉಪವಾಸ ಮಾಡುತ್ತಾರೆ, ಹಾಗೆಯೇ, ಮೊಹರಂ ತಿಂಗಳಲ್ಲಿ ಕೃತಜ್ಞತೆಯನ್ನು ಅರ್ಪಿಸುತ್ತಾರೆ. ಶಿಯಾ ಮುಸ್ಲಿಮರು ಸಹ ಶೋಕಾಚರಣೆಯಲ್ಲಿ ತೊಡಗುತ್ತಾರೆ. ಮೋಹರಂ ಹಬ್ಬವನ್ನು ಹತ್ತು ದಿನ ಆಚರಣೆ ಮಾಡುತ್ತಾರೆ. ಮೊದಲ ದಿನ ಗುದ್ದಲಿಪೂಜೆ ಮಾಡಿ ಹಬ್ಬಕ್ಕೆ ಚಾಲನೆ ನೀಡುತ್ತಾರೆ. ಅವತ್ತಿನಿಂದ ಊರಿನಲ್ಲಿ ಚಿಕ್ಕಮಕ್ಕಳಿಂದ ಮೊದಲುಗೊಂಡು ಇಳಿವಯಸ್ಸಿನ ಹಿರಿಯರು ನಿತ್ಯವೂ ಸಂಜೆ ಸಾರ್ವಜನಿಕ ಆಚರಣೆಗಳಲ್ಲಿ ಭಾಗಿಯಾಗುತ್ತಾರೆ. ಈ ವೇಳೆ ಆಲಾಯಿ ಕುಣಿತ, ಜಿಲ್ಲಾಲಪಲ್ಲಿ ಕುಣಿತ, ಬಜಾರ್ ಕುಣಿತ ಮೊಹರಂ ಪದಗಳು ಹಾಡುವುದು, ದೇವರ ಕುಣಿತ, ಬೆಂಕಿಯಲ್ಲಿ ನಡೆದಾಡುವುದು ಸೇರಿದಂತೆ ಕೆಲವು ಆಚರಣೆಗಳು ಇರುತ್ತವೆ.
ಪ್ರತಿಯೊಂದು ಸಮುದಾಯವೂ ತನ್ನದೇ ಆದ ಹಬ್ಬ ಆಚರಣೆಯನ್ನು ಹೊಂದಿರುತ್ತದೆ ಹಾಗೂ ಪ್ರತಿಯೊಬ್ಬರೂ ತಮ್ಮ ಧರ್ಮದ ತತ್ತ್ವಗಳು, ಪದ್ಧತಿಗಳ ಪ್ರಕಾರ ಎಲ್ಲವನ್ನೂ ಆಚರಿಸುತ್ತಾರೆ. ಒಂದು ಸಮುದಾಯದ ಆಚರಣೆಗಳ ಸಂದರ್ಭದಲ್ಲಿ ಇತರೆ ಸಮುದಾಯಗಳ ಜನರು ಅಸಹಿಷ್ಣುತೆ ಮೀರಿ ಸಹಿಷ್ಣುತೆಯ ಸಾಕ್ಷಾತ್ಕಾರ ಮಾಡುವುದು ಎಂದರೆ ಈ ಕಾಲಘಟ್ಟದಲ್ಲಿ ಅಪರೂಪದಲ್ಲಿ ಅಪರೂಪ. ದೇವಿಕುಂಟೆ ಗ್ರಾಮದಲ್ಲಿ ಅದೆಲ್ಲಾ ಸಾಧ್ಯವಾಗಿದೆ.