ಇನ್ನು ಕೆಲ ಕ್ಷಣಗಳಲ್ಲಿ ಆದಿತ್ಯ L-1 ಪ್ರಯಾಣ ಆರಂಭ
by Dr. Guruprasad Hawaladar
ನಮ್ಮ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸೂರ್ಯನತ್ತ ಚಿತ್ತ ನಟ್ಟಿದೆ, ಚಂದ್ರಯಾನ-3 ಯಶಸ್ವಿಗೊಳಿಸಿದ ಬಳಿಕ ನಮ್ಮ ವಿಜ್ಞಾನಿಗಳು ವಿರಮಿಸದೆ ಸೂರ್ಯನ ಬಗೆಗಿನ ಕೌತುಕವನ್ನು ತಿಳಿಯಲು ರೆಡಿಯಾಗಿದ್ದಾರೆ. ಈ ಮೂಲಕ ಜಗತ್ತಿಗೆ ಆದಿತ್ಯನ ಬಗ್ಗೆ ತಿಳಿಸಲು ಹೊರಟಿದ್ದಾರೆ.
ಭಾರತದ ಪ್ರಪ್ರಥಮ ಸೂರ್ಯ ಅಧ್ಯಯನ ಯೋಜನೆಗೆ ಮೊದಲ ಬಾಹ್ಯಾಕಾಶ ಆಧಾರಿತ ವೈಜ್ಞಾನಿಕ ಸೌರ ಮಿಷನ್ ನ್ನು ಇಂದು (ಸೆಪ್ಟೆಂಬರ್ 2) ಬೆಳಗ್ಗೆ 11.50ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆಗೊಳ್ಳಲಿದೆ.
ISRO ವಿನ ಈ ವೇಗಕ್ಕೆ ದೈತ್ಯ ದೇಶಗಳೇ ಕಂಗಾಲು ಆಗಿವೆ. ನಮ್ಮ ಇಸ್ರೋ ವಿಜ್ಞಾನಿಗಳ ಕಠಿಣ ಪರಿಶ್ರಮ ಏನೆಂಬುದು ಚಂದ್ರಯಾನ-3 ಯಶಸ್ಸಿನ ಬಳಿಕ ಜಗತ್ತಿಗೆ ಅರಿವಾಗಿದೆ. ಅತಿ ಕಡಿಮೆ ಬಜೆಟ್ನಲ್ಲಿ ಇಸ್ರೋ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಚಂದ್ರನ ದಕ್ಷಿಣ ಧೃವದಲ್ಲಿ ಇಳಿಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ. ಈಗ ಸೂರ್ಯ ನಡೆಗೆ ತಮ್ಮ ಚಿತ್ತ ನೆಟ್ಟಿರುವುದನ್ನು ಜಗತ್ತಿನಾದ್ಯಂತ ಆಶ್ಚರ್ಯ ಚಕಿತವಾಗಿ ಎದುರು ನೋಡಲಾಗುತ್ತಿದೆ.
ಇಸ್ರೋ ತನ್ನ ಉಪಗ್ರಹವನ್ನು ಸೂರ್ಯನ ಪ್ರಭಾವಲಯ ಕಕ್ಷೆಯಲ್ಲಿ L1 (ಲಾಗ್ರೇಂಜ್ ಪಾಯಿಂಟ್ 1) ಎಂದು ಕರೆಯಲಾಗುವ ಪ್ರದೇಶದಲ್ಲಿ ನಿಲ್ಲಿಸಲು ಮತ್ತು ಆ ಮೂಲಕ ಸೂರ್ಯನನ್ನು ಅಧ್ಯಯನ ಮಾಡಲು ಯೋಜಿಸಿದೆ. ಇಸ್ರೋ ಈ ಯೋಜನೆಗೆ ಆದಿತ್ಯ ಎಲ್1 ಎಂದು ಹೆಸರಿಟ್ಟಿದ್ದು, ಇದಕ್ಕಾಗಿ ಉಪಗ್ರಹ ಸಂಪೂರ್ಣ ಸಿದ್ಧವಾಗಿದೆ. ವಿವಿಧ ಪರೀಕ್ಷೆಗಳ ನಂತರ ಯೋಜನೆಯನ್ನು ಸಂಪೂರ್ಣವಾಗಿ ಸಿದ್ಧಪಡಿಸಲಾಗಿದೆ. ಇದಕ್ಕಾಗಿ ಆದಿತ್ಯ-ಎಲ್1 ಸೋಲಾರ್ ಮಿಷನ್ ರಿಹರ್ಸಲ್ ಕೂಡ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಉಡಾವಣಾ ಪೂರ್ವಾಭ್ಯಾಸ ಮತ್ತು ರಾಕೆಟ್ಟಿನ ಆಂತರಿಕ ತಪಾಸಣೆ ಪೂರ್ಣಗೊಂಡಿದೆ. ಸೂರ್ಯನನ್ನು ಅಧ್ಯಯನ ಮಾಡಲು ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ವೀಕ್ಷಣಾಲಯ – PSLV-C57 ರಾಕೆಟ್ ಮೂಲಕ ಉಡಾವಣೆ ಮಾಡಲಾಗುತ್ತದೆ.
ಬಹುನಿರೀಕ್ಷಿತ ಆದಿತ್ಯ-L1 ಬಾಹ್ಯಾಕಾಶ ನೌಕೆಯು ಸೂರ್ಯನ ಕರೋನಾ ಭಾಗದ ವೀಕ್ಷಣೆ ಮಾಡಲಿದೆ. ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಲಾಂಗ್ರೇಜ್ ಪಾಯಿಂಟ್ನಲ್ಲಿ ನೆಲೆಗೊಂಡು, ಸೌರ ಮಾರುತದ ಬಗ್ಗೆ ಅಧ್ಯಯನ ನಡೆಸಲಿದೆ. ಬಾಹ್ಯಾಕಾಶ ಸಂಸ್ಥೆಯ ಬೆಂಗಳೂರಿನ ಪ್ರಧಾನ ಕಚೇರಿಯಿಂದ ಇದರ ನಿಯಂತ್ರಣ ಇರಲಿದೆ. ಸೂರ್ಯನ ವೀಕ್ಷಣೆಗಾಗಿ ಇದು ಮೊದಲ ಭಾರತೀಯ ಬಾಹ್ಯಾಕಾಶ ಕಾರ್ಯಾಚರಣೆಯಾಗಿದೆ ಎಂಬುದು ವಿಶೇಷ.
ಆದಿತ್ಯ-L1 ಮಿಷನ್ ಸಂಪೂರ್ಣ ಸ್ಥಳೀಯವಾಗಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಆದಿತ್ಯ L1, ಸೌರ ಮಿಷನ್- ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ಮಿಷನ್ ಆಗಿದೆ. ಬಾಹ್ಯಾಕಾಶ ನೌಕೆಯು ಉಪಗ್ರಹವನ್ನು ಲಾಂಗ್ರೇಜ್ ವಲಯದ ಹಾಲೋ ಕಕ್ಷೆಯಲ್ಲಿ ನೆಲೆಗೊಳಿಸಲಾಗುತ್ತದೆ.
ನೌಕೆಯನ್ನ ಲಾಂಗ್ರೇಜ್ ಬಿಂದುವಿನ ಸುತ್ತ ಹಾಲೋ ಕಕ್ಷೆಯಲ್ಲಿ ಒಮ್ಮೆ ಇರಿಸಿದರೆ, ಉಪಗ್ರಹವು ಯಾವುದೇ ಅಡೆತಡೆ ಇಲ್ಲದೇ ಸೂರ್ಯನನ್ನು ನಿರಂತರವಾಗಿ ವೀಕ್ಷಿಸುವ ಸಾಮರ್ಥ್ಯ ಪಡೆದುಕೊಳ್ಳಲಿದೆ. ಇದು ಸೌರ ಚಟುವಟಿಕೆಗಳನ್ನು ಮತ್ತು ನೈಜ ಸಮಯದಲ್ಲಿ ಬಾಹ್ಯಾಕಾಶ ಹವಾಮಾನದ ಮೇಲೆ ಆಗುವ ಪರಿಣಾಮಗಳನ್ನು ಸೆರೆ ಹಿಡಿದು ವಿಜ್ಞಾನಿಗಳಿಗೆ ರವಾನಿಸಲಿದೆ.
ಉಡಾವಣಾ ವಾಹನವು ವಿದ್ಯುತ್ಕಾಂತೀಯ ಮತ್ತು ಕಣ ಮತ್ತು ಕಾಂತೀಯ ಕ್ಷೇತ್ರ ಶೋಧಕಗಳನ್ನು ಬಳಸಿಕೊಂಡ ದ್ಯುತಿಗೋಳ, ವರ್ಣಗೋಳ ಮತ್ತು ಸೂರ್ಯನ ಹೊರಗಿನ ಪದರಗಳನ್ನು ವೀಕ್ಷಿಸಲು ಏಳು ಪೇಲೋಡುಗಳನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಲಿದೆ. ನಾಲ್ಕು ಪೇಲೋಡ್ಗಳು ಸೂರ್ಯನನ್ನು ನೇರವಾಗಿ ವೀಕ್ಷಿಸುತ್ತವೆ ಮತ್ತು ಅದರ ವೀಕ್ಷಣೆಗಳನ್ನು ದಾಖಲಿಸುತ್ತವೆ. ಹೀಗೆ ಸೆರೆ ಹಿಡಿದ ಮಾಹಿತಿಯನ್ನು ಭೂಮಿಯಲ್ಲಿರುವ ಇಸ್ರೋ ಕೇಂದ್ರಕ್ಕೆ ರವಾನಿಸುತ್ತದೆ. ಇತರ ಮೂರು ಪೇಲೋಡ್ಗಳು L1 ನಲ್ಲಿ ಕಣಗಳು ಮತ್ತು ಕ್ಷೇತ್ರಗಳ ಸ್ಥಳದಲ್ಲೇ ಅಧ್ಯಯನಗಳನ್ನು ನಡೆಸುತ್ತವೆ. ಇದು ಅಂತರಗ್ರಹ ಮಾಧ್ಯಮದಲ್ಲಿ ಸೌರ ಡೈನಾಮಿಕ್ಸ್ನ ಪ್ರಸರಣ ಪರಿಣಾಮದ ಪ್ರಮುಖ ವೈಜ್ಞಾನಿಕ ಅಧ್ಯಯನಗಳನ್ನು ಮಾಡಲಿದೆ.
ಆದಿತ್ಯ-ಎಲ್ 1 ವೀಕ್ಷಣಾಲಯದ ಮುಖ್ಯ ಸಾಧನವಾದ ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ ಅಥವಾ VELC ಎಂದು ಕರೆಯಲಾಗುತ್ತದೆ. ಇದು ಪ್ರತಿ ನಿತ್ಯ ಸೂರ್ಯನ ಒಟ್ಟು 1,440 ಅಲ್ಟ್ರಾ-ಹೈ-ರೆಸಲ್ಯೂಶನ್ ಫೋಟೊಗಳನ್ನು ಇಸ್ರೋಗೆ ಕಳುಹಿಸುತ್ತದೆ .
VELC, ಮಂಡಳಿಯಲ್ಲಿ ಮುಖ್ಯ ಸಾಧನ
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಸಂಸ್ಥೆಯು ಆದಿತ್ಯ ಎಲ್1 ನಲ್ಲಿ ಅಳವಡಿಸಲಾದ ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (VELC) ಸಾಧನವನ್ನು ಅಭಿವೃದ್ಧಿಪಡಿಸಿದೆ. ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಮೀ ವರೆಗೆ ಸಾಗುತ್ತದೆ. ನಂತರ ಅಷ್ಟು ದೂರದಲ್ಲಿದ್ದುಕೊಂಡೇ ಸೂರ್ಯನ ಕೊರೊನಾವನ್ನು ನಿರಂತರವಾಗಿ ಅಧ್ಯಯನ ಮಾಡುವ ಸಾಮರ್ಥ್ಯ ಈ ಸಾಧನಕ್ಕಿದೆ.
ಪೇಲೋಡ್ ಪ್ರಧಾನ ತನಿಖಾಧಿಕಾರಿ ಪ್ರೊಫೆಸರ್ ಆರ್.ರಮೇಶ್ ಅವರು ಹೇಳುವಂತೆ, ಈ ಸಾಧನವನ್ನು ಸೂರ್ಯನ ಕರೋನಾಗ್ರಾಫ್ ಅನ್ನು ಪ್ರತಿ ನಿಮಿಷವೂ ಸೂರ್ಯನ ನಿಖರ ಚಿತ್ರಗಳನ್ನು ಸೆರೆಹಿಡಿಯಲು ರಚಿಸಲಾಗಿದೆ.
ಇನ್ನೂ ಮುಖ್ಯವಾಗಿ ಆದಿತ್ಯ ಎಲ್1 ಕಳುಹಿಸುವ ಮಾಹಿತಿ, ಫೋಟೊಗಳನ್ನು ನೈಜ ಸಮಯದಲ್ಲಿ ನಿರ್ವಹಿಸಲು, ಆಪರೇಟ್ ಮಾಡಲು ಇಸ್ರೋ ಸಿದ್ಧವಾಗಬೆಕಿದೆ. ದೊರೆತ ದತ್ತಾಂಶವನ್ನು ನಿರ್ವಹಿಸಿದ 24 ಗಂಟೆಗಳ ನಂತರ ಅವುಗಳು ಭೂಮಿಗೆ (ISRO) ಬರಲಿವೆ. ಅದರ ಕುರಿತು ಸಾರ್ವಜನಿಕ ಪ್ರಸಾರ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.
ಅಗಾಧ ಕಂಪ್ಯೂಟಿಂಗ್ ಶಕ್ತಿ
ಆದಿತ್ಯ ಎಲ್1 ನಿತ್ಯ ಕಳುಹಿಸುವ ಬೃಹತ್ ದತ್ತಾಂಶವನ್ನು ಸಂಪೂರ್ಣ ವಾಗಿ ವಿಶ್ಲೇಷಿಸಲು, ಅಧ್ಯಯನ ಮಾಡಲು ISRO ಮತ್ತು IIA, ಸಂಸ್ಥೆಗಳಿಗೆ ಆಗಾಧವಾದ ಕಂಪ್ಯೂಟಿಂಗ್ ಶಕ್ತಿಯ ಅಗತ್ಯವಿದೆ. ಸ್ಟೋರೇಜ್, ಡೌನ್ಲೋಡ್ ಅತ್ಯಂತ ವೇಗವಾಗಿ ನಡೆಯಬೇಕಿರುತ್ತದೆ.
ಇನ್ನೂ ಸೂರ್ಯನ ಕುರಿತು ಭೂಮಿಗೆ ಬರುವ ತಡೆರಹಿತ ಡೇಟಾ ನಿರ್ವಹಣೆ ಮಾಡಲು ಎಲ್ಲಾ ಸಾಫ್ಟ್ವೇರ್ ಘಟಕಗಳಲ್ಲಿ ತೀವ್ರ ತಪಾಸಣೆ ನಡೆಯುತ್ತಿದೆ. ಎಲ್ಲ ಸಾಫ್ಟ್ವೇರ್ ಗಳನ್ನು ಈಗಾಗಲೇ ಪರೀಕ್ಷಿಸುವ ಕಾರ್ಯ ಆರಂಭವಾಗಿದೆ. ಕನಿಷ್ಠ ಸಮಯದಲ್ಲಿ ಆದಿತ್ಯ ಎಲ್ಲ ಕಳುಹಿಸುವ ಮಾಹಿತಿಯನ್ನು ಇಂಡಿಯನ್ ಡೀಪ್ ಸ್ಪೇಸ್ ನೆಟ್ವರ್ಕ್ ನಲ್ಲಿ ಡೌನ್ಲೋಡ್ ಮಾಡಲಾಗುವುದು. ನಂತರ ಮಾಹಿತಿ ಕ್ರಮೇಣ ಪ್ರಕ್ರಿಯೆಗೆ ಒಳಪಡುತ್ತದೆ. ಆಮೇಲೆ ಪೆಲೋಡ್ ಕಾರ್ಯಾಚರಣೆಗೆ ಕಳುಹಿಸುತ್ತಾರೆ.
ಬೆಂಗಳೂರಿನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಕೇಂದ್ರವು ಕೇವಲ ಒಂದೇ ದಿನದಲ್ಲಿ ದತ್ತಾಂಶಗಳನ್ನು ಪ್ರಕ್ರಿಯೆಗೊಳಿಸುತ್ತದೆ. ನಂತರ ಸಾರ್ವಜನಿಕ ಪ್ರಸಾರಕ್ಕಾಗಿ ಭಾರತೀಯ ಬಾಹ್ಯಾಕಾಶ ವಿಜ್ಞಾನ ದತ್ತಾಂಶ ಕೇಂದ್ರಕ್ಕೆ ಕಳುಹಿಸತ್ತದೆ.
VELC ಆದಿತ್ಯ-L1 ವೀಕ್ಷಣಾಲಯದಲ್ಲಿ ಅತ್ಯಂತ ಪ್ರಮುಖವಾದ ಪೇಲೋಡ್ ಆಗಿದೆ. ಇದು ಆರು ಇನ್ನಿತರ ಪೇಲೋಡ್ಗಳ ಜತೆಗೂಡಿ ಮುಂದಿನ ಐದು ವರ್ಷಗಳ ವರೆಗೆ ಸೂರ್ಯನನ್ನು ವೀಕ್ಷಣೆ ಮಾಡಲಿದೆ. ನಿಗದಿತ ಕಕ್ಷೆ ಸುತ್ತಲಿದೆ.
ಆದಿತ್ಯ-ಎಲ್1 ಸೌರ ಮಿಷನ್ ಅತಿ ಮುಖ್ಯ
ಇಸ್ರೋ ಪ್ರಕಾರ, ಆದಿತ್ಯ-L1 ಬಾಹ್ಯಾಕಾಶ ನೌಕೆಯನ್ನು ಸೂರ್ಯನ ಪ್ರಭಾ ವಲಯದ ವೀಕ್ಷಣೆಗಳನ್ನು ಒದಗಿಸಲು ಮತ್ತು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ L1 (ಸೂರ್ಯ-ಭೂಮಿಯ ಲಗ್ರಾಂಜಿಯನ್ ಪಾಯಿಂಟ್) ನಲ್ಲಿ ಸೌರ ಮಾರುತದ ಸ್ಥಳ ವೀಕ್ಷಣೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.
ಈ ಬಾಹ್ಯಾಕಾಶ ಕಾರ್ಯಕ್ರಮವು ಯಶಸ್ವಿಯಾದರೆ, ಆದಿತ್ಯ-ಎಲ್1 ಸೌರ ಮಿಷನ್ ಐದು ಲಗ್ರೇಂಜ್ ಪಾಯಿಂಟ್ಗಳಲ್ಲಿ ಒಂದರ ಸುತ್ತ ಹಾಲೋ ಕಕ್ಷೆಗೆ ಪ್ರವೇಶಿಸುತ್ತದೆ. ಅಲ್ಲಿಂದ, ಆದಿತ್ಯ-L1 ಸೂರ್ಯನ ಅಡೆತಡೆಯಿಲ್ಲದ ನೋಟವನ್ನು ಸೆರೆಹಿಡಿಯುವ ಸಾಧ್ಯತೆಯಿದೆ ಮತ್ತು ಭೂಮಿ ಮತ್ತು ಇತರ ಗ್ರಹಗಳ ಸುತ್ತಮುತ್ತಲಿನ ಪರಿಸರದ ಪರಿಸ್ಥಿತಿಗಳ ಮೇಲೆ ನೈಜ ಸಮಯದಲ್ಲಿ ಅದರ ಪರಿಣಾಮವನ್ನು ಅಧ್ಯಯನ ಮಾಡುತ್ತದೆ.
ಸೂರ್ಯನ ಮೇಲ್ಮೈ ವಾತಾವರಣ, ತಾಪಮಾನ, ಉಷ್ಣಗಾಳಿ, ಸೂರ್ಯನ ಪ್ರಭಾವಲಯದ ಭೌತವಿಜ್ಞಾನ (Physics Of Solar Corona), ಕ್ರೋಮೋಸ್ಫಿರಿಕ್ ಮತ್ತು ಕರೋನಲ್ ಹೀಟಿಂಗ್, ಭಾಗಶಃ ಅಯಾನೀಕರಿಸಿದ ಪ್ಲಾಸ್ಮಾದ ಭೌತಶಾಸ್ತ್ರ, ಕರೋನಲ್ ಮಾಸ್ ಎಜೆಕ್ಷನ್ಗಳು ಮತ್ತು ಜ್ವಾಲೆಗಳ ಅಧ್ಯಯನ ಸೂರ್ಯನಿಂದ ಕಣದ ಡೈನಾಮಿಕ್ಸ್ ನ ಅಧ್ಯಯನ ಉಷ್ಣವಲಯದ ಪ್ರಭಾವ ಸೇರಿ ಹಲವು ಅಂಶಗಳ ಕುರಿತು ಉಪಗ್ರಹವು ಅಧ್ಯಯನ ನಡೆಸಲಿದೆ. ಚಂದ್ರನಿಗಿಂತ ನಾಲ್ಕು ಪಟ್ಟು ಹೆಚ್ಚು ದೂರದಲ್ಲಿ ಮಿಷನ್ ಕಾರ್ಯನಿರ್ವಹಿಸಲಿದೆ. ಗ್ರಹಣ ಸೇರಿ ಯಾವುದೇ ಸಂದರ್ಭದಲ್ಲಿಯೂ ಮಿಷನ್ ಸೂರ್ಯನ ಕುರಿತು ಅಧ್ಯಯನ ನಡೆಸಲಿದೆ .
ಚಂದ್ರಯಾನ-3 ಮಿಷನ್ ನೊಂದಿಗೆ ಭಾರತವು ಆಗಸ್ಟ್ ನಲ್ಲಿ ಚಂದ್ರನ ದಕ್ಷಿಣ ಧ್ರುವದ ಹತ್ತಿರ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ದೇಶವಾಗಿ ಹೊರ ಹೊಮ್ಮಿದ ನಂತರ ಆದಿತ್ಯ-ಎಲ್1 ಸೌರ ಮಿಷನ್ನ ಯಶಸ್ಸು ಭಾರತಕ್ಕೆ ಮತ್ತೊಂದು ಪ್ರಮುಖ ಸಾಧನೆಯಾಗಬೇಕಿದೆ.
ಆದಿತ್ಯ-ಎಲ್1 ಸೌರ ಮಿಷನ್ ವೆಚ್ಚ ಎಷ್ಟು?
ಆದಿತ್ಯ-ಎಲ್ 1 ಸೌರ ಮಿಷನ್ನ ವೆಚ್ಚದ ಕುರಿತು ಇಸ್ರೋ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಅಥವಾ ನವೀಕರಣವನ್ನು ಬಿಡುಗಡೆ ಮಾಡಿಲ್ಲ, ಆದಾಗ್ಯೂ, 2019 ರಲ್ಲಿ, ಆದಿತ್ಯ-ಎಲ್ 1 ಸೌರ ಮಿಷನ್ಗೆ ಕೇಂದ್ರವು ಸುಮಾರು ಕೋಟ್ಯಂತರ ರುಪಾಯಿ ಹಣವನ್ನು ಮಂಜೂರು ಮಾಡಿದೆ.
ಬಾಹ್ಯಾಕಾಶದಲ್ಲಿ ಸೂರ್ಯನ ಅಧ್ಯಯನ ನಡೆಸಲು ಭಾರತ ಕೈಗೊಂಡಿರುವ ಮೊಟ್ಟ ಮೊದಲ ಯೋಜನೆ ಇದಾಗಿದ್ದು, ಈ ಅಧ್ಯಯನದಿಂದ ಸೂರ್ಯನ ಭೂತ, ಭವಿಷ್ಯ ಹಾಗೂ ವರ್ತಮಾನಗಳ ಕುರಿತಾದ ಮಹತ್ವದ ಮಾಹಿತಿ ಲಭ್ಯವಾಗಲಿದೆ.
ಚಂದ್ರಯಾನ-3 ಭವ್ಯ ಯಶಸ್ಸಿನ ನಂತರ, ಈಗ ನಮ್ಮ ಮುಂದಿನ ಟಾರ್ಗೆಟ್ ಸೂರ್ಯ ಎಂದು ಇಸ್ರೋ ತಿಳಿಸಿದೆ. ಇಸ್ರೋ ಸೆಪ್ಟೆಂಬರ್ 2 ರಂದು ಆದಿತ್ಯ L1 ಅನ್ನು ಉಡಾವಣೆ ಮಾಡಲು ಸಜ್ಜಾಗಿಬಿಟ್ಟಿದೆ. ಇದನ್ನು ಕಂಡು ವಿಶ್ವ ದೇಶಗಳಿಗೆ ಈಗ ನಡುಕ ಶುರುವಾಗಿದೆ. ಏಕೆಂದರೆ ಭಾರೀ ಬಜೆಟ್ನೊಂದಿಗೆ ಮಾಡುವ ಯೋಜನೆಗಳನ್ನು ನಮ್ಮ ಇಸ್ರೋ ಅತಿ ಕಡಿಮೆ ಬಜೆಟ್ನಲ್ಲಿ ಮುಗಿಸುತ್ತಿದೆ.
ಇದರಿಂದಾಗಿ ಇಸ್ರೋ ವಿಜ್ಞಾನಿಗಳನ್ನು ಕಂಡು ಜಗತ್ತಿನಾದ್ಯಂತದ ವಿಜ್ಞಾನಿಗಳು ಬೆರಗಾಗಿದ್ದಾರೆ. ಇಸ್ರೋ ಕೂಡ ತಮ್ಮ ಬಾಹ್ಯಾಕಾಶ ಸಾಧನೆಗಳನ್ನು ಇಲ್ಲಿಗೆ ನಿಲ್ಲಿಸದೇ ವಿರಾಮವಿಲ್ಲದೇ ಮುನ್ನುಗ್ಗುತ್ತಿದೆ. ಚಂದ್ರಯಾನದ ಯಶಸ್ಸಿನೊಂದಿಗೆ ಇಸ್ರೋ ಮುಂದಿನ ಹಂತವಾಗಿ ಮಂಗಳಯಾನ ಹಾಗೂ ಚಂದ್ರಯಾನ-4ರ ಬಗ್ಗೆ ಅಧ್ಯಯನ ನಡೆಯುತ್ತಿದೆ.
ಇಸ್ರೋ ವಿಜ್ಞಾನಿಗಳ ಈ ಸಾಹಸವೂ ಯಶಸ್ಸಿಯಾಗಲಿ ಎಂದು ನಾವೆಲ್ಲರೂ ಭಗವಂತನಲ್ಲಿ ಪ್ರಾರ್ಥಿಸೋಣ ಮತ್ತು ಹಾರೈಸೋಣ
ಆಲ್ ದಿ ಬೆಸ್ಟ್ ಇಸ್ರೋ..
Dr. Guruprasad Hawaladar
ವೃತ್ತಿಯಲ್ಲಿ ಶಿಕ್ಷಕರು, ಪ್ರವೃತ್ತಿಯಲ್ಲಿ ಲೇಖಕರು. ಅಧ್ಯಾತ್ಮ ಮತ್ತು ಪುರಾಣ ಕಥನಗಳ ಬರವಣಿಗೆಯಲ್ಲಿ ಎತ್ತಿದ ಕೈ. ಸಮಕಾಲೀನ ಸಂದರ್ಭಗಳ ಬಗ್ಗೆಯೂ ಅವರ ಬರಹ ಬಹಳ ಮೊನಚು. ರಾಜ್ಯದ ಅನೇಕ ಪತ್ರಿಕೆ, ವೆಬ್ ತಾಣ್, ಡಿಜಿಟಲ್ ಮಾಧ್ಯಮಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ.
Comments 1