ಜಿಜ್ಞಾಸೆಗಳಿಗೆ ಉತ್ತರ ಕೊಟ್ಟ ಇಸ್ರೋ
ಬೆಂಗಳೂರು/ಶ್ರೀಹರಿಕೋಟಾ: ಭೂಮಿಯಿಂದ 15 ಕೋಟಿ ಕಿ.ಮೀ.ಗಳಷ್ಟು ದೂರ ಇರುವ ಸೂರ್ಯನನ್ನು ಮುಟ್ಟಲು ಆದಿತ್ಯಾ ಎಲ್ 1 ನೌಕೆಗೆ ಸಾಧ್ಯವಾಗುತ್ತಾ? ಬೆಂಕಿ ಉಂಡೆಯಂತಿರುವ ಸೂರ್ಯನ ಕುರಿತಾಗಿ ಅಧ್ಯಯನ ಮಾಡಲು ಅದಕ್ಕೆ ಸಾಧ್ಯ ಇದೆಯಾ?
ಇಂತಹ ಹತ್ತಾರು ಜಿಜ್ಞಾಸೆಗಳು ಮತ್ತು ಪ್ರಶ್ನೆಗಳು ಸಾಮಾನ್ಯವಾಗಿ ಅನೇಕನ್ನು ಕಾಡುತ್ತಿವೆ. ಇಂಥ ಕೆಲ ಪ್ರಶ್ನೆಗಳಿಗೆ ಸ್ವತಃ ಇಸ್ರೋ ಉತ್ತರ ಕೊಟ್ಟಿದೆ.
ಆದಿತ್ಯ-L1 ನೌಕೆ ಸೂರ್ಯನ ಹತ್ತಿರಕ್ಕೇನೂ ಹೋಗುವುದಿಲ್ಲ. ಆದರೆ, ಅದು ಭೂಮಿಯಿಂದ ಸೂರ್ಯನಿಗೆ ಇರುವ ಒಟ್ಟಾರೆ ದೂರದ ಕೇವಲ ಶೇ.1 ರಷ್ಟು ದೂರವಷ್ಟೇ ಕ್ರಮಿಸಿ, ಸೂರ್ಯನ ಕುರಿತಾಗಿ ಅಧ್ಯಯನ ಮಾಡುತ್ತದೆ.
ಅಂದರೆ; ಇಸ್ರೋ ತಿಳಿಸಿರುವಂತೆ ನೌಕೆಯು ಭೂಮಿಯಿಂದ 15 ಲಕ್ಷ ಕಿ.ಮೀ. ದೂರದಲ್ಲಿದ್ದು, (ಇದು ಭೂಮಿ-ಚಂದ್ರನ ಅಂತರದ ನಾಲ್ಕು ಪಟ್ಟು) ಸೂರ್ಯನನ್ನು ಗಮನಿಸಲಿದೆ.
ಹಾಗೆಯೇ; ಆದಿತ್ಯ L1 ಅನ್ನು L1 ಪಾಯಿಂಟ್ ನಲ್ಲೇ ಸ್ಥಿರೀಕರಿಸಲು ಕಾರಣಗಳನ್ನು ಇಸ್ರೋ ಕೊಟ್ಟಿದೆ. X ಸಾಮಾಜಿಕ ತಾಣದಲ್ಲಿ ಅದು ನೀಡಿರುವ ಮಾಹಿತಿಯಂತೆ; L1 ಪಾಯಿಂಟ್ ನಲ್ಲಿ ಭೂಮಿ, ಸೂರ್ಯನ ಗುರುತ್ವಾಕರ್ಷಣೆ ಪರಸ್ಪರ ಶೂನ್ಯ ಸ್ಥಿತಿಯಲ್ಲಿ ಇರುತ್ತದೆ. ಹೀಗಾಗಿ ಅಲ್ಲಿ ನೌಕೆ ಭೂಮಿಯನ್ನು ಸುತ್ತುವ ಅಗತ್ಯ ಇರುವುದಿಲ್ಲ. L1 ಬಿಂದುವಿನ ಸುತ್ತ ಹಾಲೋ ಕಕ್ಷೆಯಲ್ಲಿ ನೆಲೆ ನಿಲ್ಲಬಹುದು. ಈ ಮೂಲಕ ಆದಿತ್ಯ L1 ನೌಕೆಯು ಸೂರ್ಯನನ್ನು ನಿರಂತರವಾಗಿ ವೀಕ್ಷಿಸಲು ಅನುಕೂಲ ಇರುತ್ತದೆ.
ಇಸ್ರೋ ಕಳಿಸಿರುವ ನೌಕೆಯು ಸೂರ್ಯನ ಮೇಲ್ಮೈ, ಸೂರ್ಯನ ಕಿರಣಗಳು, ಸೂರ್ಯನ ತಾಪಮಾನ, ಸೌರಜ್ವಾಲೆ, ಸೂರ್ಯನ ಸುತ್ತಮುತ್ತಲಿನ ವಾತಾವರಣದ ಕುರಿತಾಗಿ ಅಧ್ಯಯನ ನಡೆಸುವುದು. ಅಲ್ಲಿನ ಎಲ್ಲಾ ಮಾಹಿತಿಯನ್ನು ಇಸ್ರೋಗೆ ರವಾನಿಸಲಿದೆ..
ಏನಿದು L1 ಪಾಯಿಂಟ್?
courtesy: Wikipedia
ಭೂಮಿ ಮತ್ತು ಸೂರ್ಯನ ನಡುವೆ 15 ಕೋಟಿ ಕಿ.ಮೀ. ದೂರವಿದೆ ಎಂದು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. ಅಂದರೆ; ಭೂಮಿಯಿಂದ 15 ಲಕ್ಷ ಕಿ.ಮೀ. ದೂರದಲ್ಲಿ L1 ಲ್ಯಾಗ್ರೇಂಜ್ ಬಿಂದುವಿದೆ. (ಲ್ಯಾಗ್ರೇಂಜ್ ಬಿಂದು ಎಂದರೆ ಎರಡು ಗ್ರಹಗಳ ನಡುವಿನ ಗುರುತ್ವಾಕರ್ಷಕ ಶಕ್ತಿ ಶೂನ್ಯವಾಗಿರುವ ಪ್ರದೇಶ) ಭೂಮಿ ಹಾಗೂ ಸೂರ್ಯನ ಗುರುತ್ವಾಕರ್ಷಣೆ ಪರಸ್ಪರ ಶೂನ್ಯವಾಗಿರುವ ಈ ಜಾಗವನ್ನು ಲ್ಯಾಗ್ರೇಂಜ್ ಬಿಂದು 1 ಇಲ್ಲವೇ L1 ಎನ್ನಲಾಗುವುದು.
ಸೂರ್ಯನು ಸೌರಮಂಡಲದ ನಡುವೆ ಇರುವ ನಕ್ಷತ್ರ. ಭೂಮಿ ಸೇರಿದಂತೆ ಇನ್ನಿತರ ಗ್ರಹಗಳು ಸೂರ್ಯನನ್ನು ಪರಿಭ್ರಮಿಸುತ್ತವೆ. ಮಹತ್ವದ ಸಂಗತಿ ಎಂದರೆ ಸೂರ್ಯನೊಬ್ಬನೇ ಸೌರಮಂಡಲದ ಶೇ.99ರಷ್ಟು ದ್ರವ್ಯರಾಶಿಯನ್ನು ಹೊಂದಿದ್ದಾನೆ. ಸೂರ್ಯನ ಬೆಳಕು ದ್ಯುತಿಸಂಶ್ಲೇಷಣೆಯ ಮೂಲಕ ಭೂಮಿಯ ಬಹುತೇಕ ಎಲ್ಲಾ ಜೀವಿಗಳಿಗೂ ಆಧಾರವಾಗಿದ್ದು, ಭೂಮಿಯ ಹವಾಮಾನದ ಮೇಲೂ ಗಾಢ ಪ್ರಭಾವ ಬೀರುತ್ತದೆ. ಭೂಮಿಯಿಂದ 15 ಕೋಟಿ ಕಿ.ಮೀ.ಗಳಷ್ಟು ದೂರ ಇರುವ ಸೂರ್ಯನ ಮೇಲ್ಮೈಯಲ್ಲಿ 1.5 ಕೋಟಿ ಡಿಗ್ರಿ ಸೆಲ್ಸಿಯಸ್‌ನಷ್ಟು ಅತ್ಯಂತ ಗರಿಷ್ಠ ತಾಪಮಾನವಿದೆ. ಸುಮಾರು 4.6 ಶತಕೋಟಿ ವರ್ಷಗಳಷ್ಟು ಹಿಂದೆ ಸೂರ್ಯ ರೂಪುಗೊಂಡಿದ್ದಾನೆ ಎಂದು ಖಗೋಳ ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. ಹೈಡ್ರೋಜನ್ ಮತ್ತು ಹೀಲಿಯಂ ಅನಿಲಗಳಿಂದ ಕೂಡಿರುವ ಸೂರ್ಯ 5 ಶತಕೋಟಿ ವರ್ಷಗಳಿಗಿಂತಲೂ ಹೆಚ್ಚು ಸ್ಥಿರವಾಗಿ ಉಳಿಯುತ್ತಾನೆ ಎನ್ನಲಾಗಿದೆ.
ಸೂರ್ಯನು ಭೂಮಿಗೆ ಅತ್ಯಂತ ನಿಕಟದಲ್ಲಿರುವ ನಕ್ಷತ್ರ. ಹೀಗಾಗಿ ವಿಜ್ಞಾನಿಗಳು ಸೂರ್ಯನನ್ನು ಸಾಕಷ್ಟು ಆಳವಾಗಿ ಅಧ್ಯಯನ ಮಾಡಲು ಪ್ರಯತ್ನಿಸಿದ್ದಾರೆ. ಆದರೂ, ಸೂರ್ಯನ ಬಗ್ಗೆ ಹಲವಾರು ಪ್ರಶ್ನೆಗಳಿಗೆ ಇನ್ನೂ ಉತ್ತರಗಳು ಸಿಕ್ಕಿಲ್ಲ. ಈಗ ಇಸ್ರೋ ಆ ನಿಟ್ಟಿನಲ್ಲಿ ದೊಡ್ಡ ಪ್ರಯತ್ನ ಆರಂಭ ಮಾಡಿದೆ.
ಅಂದಹಾಗೆ; ಶ್ರೀಹರಿಕೋಟಾದ ಸತೀಶ್ ಉಡಾವಣೆ ಕೇಂದ್ರದಿಂದ ಉಡಾವಣೆ ಕೇಂದ್ರದಿಂದ ಆದಿತ್ಯ ಎಲ್-1 ನೌಕೆಯನ್ನು ಶನಿವಾರ ಪೂರ್ವಾಹ್ನ 11.50 ಗಂಟೆಗೆ ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿತು. ಒಟ್ಟು 125 ದಿನಗಳ ಮಿಷನ್ ಇದಾಗಿದ್ದು, ಈಗಾಗಲೇ ನೌಕೆಯು ಬೇರ್ಪಟ್ಟು ನಿಖರ ಕಕ್ಷೆಗೆ ಸೇರಿಕೊಂಡಿದೆ.