ಅಪಮಾನ ಸಹಿಸುತ್ತಲೇ ತೆರೆಮರೆಗೆ ಸರಿದ ಆಧುನಿಕ ಚಾಣಾಕ್ಷ
ಮಾಜಿ ಪ್ರಧಾನಿಗಳಾದ ಶ್ರೀ ಪಿ.ವಿ.ನರಸಿಂಹರಾವ್ ಅವರ ಬಗ್ಗೆ ಎಷ್ಟು ಬರೆದರೂ, ಅದೆಷ್ಟು ಹೇಳಿದರೂ ಸಾಲದು.ಪಿವಿಎನ್ ಅವರ ಬಗ್ಗೆ ಕೆದಕುತ್ತಾ ಹೋದರೆ ಹಿಂದೂ ಮಹಾಸಾಗರಕ್ಕೆ ಹೊಕ್ಕಂತೆಯೇ. ಆಳವೂ ಕಾಣದು, ಅಗಲವೂ ತಿಳಿಯದು. ಪಿವಿಎನ್ ಅವರೂ ಹಾಗೆಯೇ.
ವಿತ್ತ, ವಿದೇಶ, ರಾಜನೀತಿ, ಚಾಣಕ್ಯ ನೀತಿ ಸೇರಿ ಭಾಷೆ, ಕಲೆ, ವಿಜ್ಞಾನ, ಸಂಗೀತ, ಸಾಹಿತ್ಯ.. ಹೀಗೆ ಹೇಳುತ್ತಾ ಹೋದರೆ ಅವರಿಗೆ ಪ್ರವೇಶವಿಲ್ಲದ ವಿಷಯವೇ ಇಲ್ಲವೇ ಎನಿಸಿ ಸೋಜಿಗಕ್ಕೂ ಸೊಕ್ಕಡಗಿದಂತೆ ಭಾಸವಾಗುತ್ತದೆ.
ನಿಜಕ್ಕಾದರೆ, ಅವರು ಭಾರತೀಯ ರಾಜಕೀಯ ಕ್ಷಿತಿಜದಲ್ಲಿ ತೆರೆಮರೆಯಲ್ಲಿಯೇ ಅತಿಹೆಚ್ಚು ಕಂಗೊಳಿಸಿದ ಧೃವತಾರೆ. ಹೆದರಿಸಿ ಬೆದರಿಸುವ ರಾಜಕಾರಣಕ್ಕಿಂತ ತಲೆ ಓಡಿಸಿ ದಾಳ ಉರುಳಿಸುತ್ತಿದ್ದ ಚಾಣಾಕ್ಷ. ರೈಡು ರಾಜಕಾರಣದಲ್ಲಿ ನಂಬಿಕೆ ಇಲ್ಲದಿದ್ದ ಮುತ್ಸದ್ಧಿ. ದುರಿತ ಕಾಲದಲ್ಲಿ ಕಾಂಗ್ರೆಸ್ ಪಕ್ಷವನ್ನು, ಸಂಕಷ್ಟ ಸಂದರ್ಭದಲ್ಲಿ ಭಾರತವನ್ನು ಮುನ್ನಡೆಸಿದ ಮಹಾನ್ ಜ್ಞಾನಿ. ಅಸ್ಥಿರ ಸಂದರ್ಭದಲ್ಲಿಯೂ ರೂಪಾಯಿಯ ಮಾನ ಕಾಪಾಡಿದ ಮೇಧಾವಿ. ಹಳ್ಳ ಹಿಡಿದುಹೋಗಿದ್ದ ಆರ್ಥಿಕತೆಯನ್ನು ಹಳಿಗೆ ತಂದು ಗಟ್ಟಿಯಾಗಿ ನಿಲ್ಲಿಸಿದ ನಿಜನಾಯಕ.
ಅಂಥವರ ಬಗ್ಗೆ ಕಾಂಗ್ರೆಸ್ ಪಕ್ಷ ನಡೆದುಕೊಂಡ ರೀತಿ ದಕ್ಷಿಣ ಭಾರತೀಯರ ಬಗ್ಗೆ ಉತ್ತರ ಭಾರತದವರಿಗೆ ಇರುವ ನಿರಂತರ ಅನಾದರ ಎಂತದ್ದು ಎನ್ನುವುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಅವರ ಸಾವಿನ ಕ್ಷಣದಲ್ಲಿಯೂ ಸೌಜನ್ಯ ಮೆರೆಯದ ಆ ಪಕ್ಷದ ಬಗ್ಗೆ ಬಹಳ ಬೇಸರವಾಗುತ್ತದೆ. ದಿವಾಳಿ ಎದ್ದು ಹೋಗಿದ್ದ ದೇಶವನ್ನು ಆರ್ಥಿಕವಾಗಿ ಪುನರುಜ್ಜೀವನಗೊಳಿಸಿ ಸ್ವಾವಲಂಬನೆಯತ್ತ ಮುನ್ನಡೆಸಿದ ಆ ನೇತಾರನಿಗೆ ದಿಲ್ಲಿಯಲ್ಲಿ ಒಂದು ಸಮಾಧಿಗೂ ದಿಕ್ಕಿಲ್ಲದಂತಾಯಿತು.
ಇನ್ನು, ಪಿವಿಎನ್ ಅವರ ಆರ್ಥಿಕ ಸುಧಾರಣಾ ಪರ್ವದ ಸಾರಥ್ಯ ವಹಿಸಿದ್ದ ಡಾ.ಮನಮೋಹನ್ ಸಿಂಗ್ ಅವರ ಪಕ್ಷದಲ್ಲಿನ ಅಸ್ತಿತ್ವವೂ ಅಗಮ್ಯಗೋಚರವೇ ಆಗಿದೆ. ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಕೊಡುವಾಗ ಭಾಷಣ ಮಾಡಿದ ನಾಯಕರಿಗೆ ನೆಹರು, ಲಾಲ ಬಹದ್ದೂರ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ನೆನಪಾದರೆ ಹೊರತು ಅಪ್ಪಿತಪ್ಪಿಯೂ ನರಸಿಂಹರಾಯರು, ಮನಮೋಹನ್ ಸಿಂಗ್ ಅವರೂ ನೆನಪಾಗಲೇ ಇಲ್ಲ. ಹೊಗಳಿಕೆಯಲ್ಲೂ ಊಳಿಗ ಕಂಡಿದ್ದು ಆಗಲೇ.
ಉಸಿರು ಕೊಟ್ಟ ಕೊರಳಿಗೇ ವಿಷವುಣಿಸುವ ಕೈ ಪಕ್ಷವು ನರಸಿಂಹರಾಯರಿಗೆ ಮಾಡಿದ ಅನ್ಯಾಯವನ್ನು ನೆನಪು ಮಾಡಿಕೊಂಡರೆ ರಕ್ತ ಕುದಿಯುತ್ತದೆ. ದಕ್ಷಿಣದ ಇನ್ನೊಬ್ಬರು ದೇವೇಗೌಡರು ಪ್ರಧಾನಿ ಆಗಿದ್ದನ್ನು ಸಂಭ್ರಮಿಸಿದ್ದವರು ರಾಯರು. ಸೀತಾರಾಂ ಕೇಸರಿಯನ್ನು ಮುನ್ನಲೆಗಿಟ್ಟು ಗೌಡರನ್ನು ಕೆಳಗಿಳಿಸಿತ್ತು ಕಾಂಗ್ರೆಸ್. ಆ ಪಕ್ಷದ ಅಂಗೈನಲ್ಲೇ ಅಡಗಿರುವ ದಕ್ಷಿಣದವರ ಕುರಿತಾದ ಆಳದ್ವೇಷ ಜಗಜ್ಜಾಹೀರಾಗಿದ್ದು ಅಕಾರಣವಾಗಿ ದೇವೇಗೌಡರ ಸರಕಾರವನ್ನು ತೆಗೆದಾಗಲೇ.
ನರಸಿಂಹರಾಯರು ತಮ್ಮ ಅಮೋಘ ಜ್ಞಾನದಿಂದಲೇ ಅಜರಾಮರರಾದವರು. ದಿಲ್ಲಿ ಗದ್ದುಗೆಯ ಮೇಲೆ ಕೂತಿದ್ದಾಗಲೂ ಕಲಿಕೆ, ಆಲಿಕೆಯ ಮನಃಸ್ಥಿತಿ ಹೊಂದಿದ್ದವರು, ಕರಗದ ಜ್ಞಾನ ಕಣಜ ಅವರಾಗಿದ್ದರು. ಪ್ರಧಾನಿ ಆಗಿದ್ದಾಗ ಒಮ್ಮೆ ಹೈದ್ರಾಬಾದ್ ನಲ್ಲಿ ಶ್ರೀ ಮಾಡುಗಲ ನಾಗಫಣಿ ಶರ್ಮ ಅವರ ಅಷ್ಟಾವಧಾನದಲ್ಲಿ ಭಾಗಿಯಾಗಿದ್ದರು. ಆ ದಿನ ಅವರು ಮಾಡಿದ್ದ ಭಾಷಣ, ಅನನ್ಯ ವಿದ್ವತ್ತಿಗೆ ತೊಡಿಸಿದ ರಮಣೀಯ ಆಭರಣ. ಸಾಕ್ಷಾತ್ ಸರಸ್ವತಿ ಪುತ್ರರೇ ಆಗಿದ್ದ ಪಿವಿಎನ್ ಮಾತುಗಳನ್ನು ಕೇಳುತ್ತಲೇ ನಾನು ಮೈ ಮರೆತದ್ದು ಅತ್ಯಂತ ವಿರಳ ರಸಕ್ಷಣವೇ ಸರಿ.
ಭಾಷೆಯ ಬಳಕೆ, ಭಾಷೆಯ ಶುದ್ದಿ, ವ್ಯಾಕರಣ, ಮಾತೃಭಾಷೆ, ತೆಲುಗು ಸಾಹಿತ್ಯ, ಅನ್ಯಭಾಷೆಗಳ ಸಾಹಿತ್ಯ, ಮುಖ್ಯವಾಗಿ ಉತ್ತರ ಭಾರತೀಯ ಸಾಹಿತ್ಯ, ಕಾವ್ಯ, ಸಾಹಿತ್ಯದಲ್ಲಿ ಭಾವುಕತೆ, ಶಾಬ್ದಿಕ ರಮ್ಯತೆ, ರಸಜ್ಞತೆ, ಭಾಷೆ ಮತ್ತು ಭಾವ, ಆಗಷ್ಟೇ ಕಂಪ್ಯೂಟರ್ ಸೃಷ್ಟಿಸುತ್ತಿದ್ದ ತಲ್ಲಣಗಳು.. ಹೀಗೆ ಅನೇಕ ವಿಷಯಗಳ ಬಗ್ಗೆ ಅವರು ಮಾತನಾಡಿದ್ದರು.
ಕೆಳಗೆ ಲಿಂಕ್ ಇದೆ. ಕೇಳಬಹುದು.. ಆದರೆ.. ಭಾಷಣ ತೆಲುಗಿನಲ್ಲಿದೆ.