ಚೇಳೂರಿನಲ್ಲಿ ಕನ್ನಡ ಕಲಿಕೆ ಕುರಿತ ವಿಚಾರ ಸಂಕಿರಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ; ಗಡಿನಾಡಿನಲ್ಲಿ ಕಂಗೊಳಿಸಿದ ಕನ್ನಡ
ಬಾಗೇಪಲ್ಲಿ: ಕನ್ನಡ ಸಾಹಿತ್ಯ, ಸಂಸ್ಕೃತಿ, ಭಾಷೆಯ ಅಭಿವೃದ್ಧಿಗೆ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿರುವ ಸೇವೆ ಅಭಿನಂದನೀಯ. ಕನ್ನಡ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಲು ಅನುಕೂಲವಾಗುವಂತೆ ಬಾಗೇಪಲ್ಲಿ ಮತ್ತು ಚೇಳೂರು ತಾಲೂಕು ಕೇಂದ್ರಗಳಲ್ಲಿ ಕನ್ನಡ ಭವನಗಳನ್ನು ನಿರ್ಮಾಣ ಮಾಡಲಾಗುವುದು, ಅದಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.
ನೂತನ ತಾಲ್ಲೂಕು ಕೇಂದ್ರ ಚೇಳೂರಿನ ಮಾನಸ ಕಾಲೇಜು ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ಕಲಿಕೆ ಕುರಿತ ವಿಚಾರ ಸಂಕಿರಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಡೀ ದೇಶದಲ್ಲಿಯೇ ನೂರು ವರ್ಷಗಳ ಇತಿಹಾಸ ಇರುವ ಏಕೈಕ ಸಂಸ್ಥೆ ಕನ್ನಡ ಪರಿಷತ್ತು ಆಗಿದ್ದು, ದೇಶದಲ್ಲಿಯೇ ದೊಡ್ಡ ಮಟ್ಟದ ಗೌರವ ಕಸಾಪಗೆ ಇದೆ. ರಾಜ್ಯದಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ, ಭಾಷೆ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದೆ. ನೂತನ ತಾಲ್ಲೂಕು ಕೇಂದ್ರ ಚೇಳೂರಿನಲ್ಲಿ ಶೈಕ್ಷಣಿಕ ವಿಚಾರ ಸಂಕಿರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಕನ್ನಡ ಜಾಥಾದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗಡಿ ಪ್ರದೇಶದಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿರುವುದು ಶ್ಲಾಘನೀಯವಾದ ಕಾರ್ಯವಾಗಿದ್ದು ಇನ್ನೂ ಹೆಚ್ಚು ಹೆಚ್ಚಾಗಿ ಇಂತಹ ಕಾರ್ಯಕ್ರಮಗಳನ್ನು ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳುವಂತೆ ತಿಳಿಸಿದರು.
ತೆಲುಗು ಭಾಷೆಯ ಪ್ರಭಾವ ಇರುವ ಈ ಪ್ರದೇಶದಲ್ಲಿ ಮಾತೃಬಾಷೆಗೆ ಹೆಚ್ಚು ಒತ್ತು ನೀಡಲೇಬೇಕಾದ ಅಗತ್ಯವಿದೆ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಪಡೆದಿರುವವರು ಅತ್ಯುನ್ನತ ಸಾಧನೆಗಳನ್ನು ಮಾಡಿ ತೋರಿಸುತ್ತಿದ್ದು ಇದೊಂದು ಹೆಮ್ಮೆಯ ವಿಚಾರ ಎಂದರು ಅವರು.
ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಮಾತನಾಡಿ, “ಕನ್ನಡ ಸಾಹಿತ್ಯ ಪರಿಷತ್ತಿನ ಮನವಿಯಂತೆ ಕನ್ನಡ ಭವನ ನಿರ್ಮಿಸಲು ಸೂಕ್ತ ಸ್ಥಳವನ್ನು ಗುರಿತಿಸಲು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಸೂಚನೆ ಕೊಟ್ಟಿದ್ದಾರೆ. ಅದರಂತೆ ಒಂದು ವಾರದಲ್ಲಿ 22 ಗುಂಟೆ ಜಮೀನು ಗುರುತಿಸಿ ಕನ್ನಡ ಭವನ ನಿರ್ಮಾಣಕ್ಕೆ ಸಹಕರಿಸುತ್ತೇನೆ” ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ ಮಾತನಾಡಿ, “ಪಂಪನ ಕಾಲದಿಂದ ಇಂದಿನವರೆವಿಗೂ ಕನ್ನಡ ಸಾಹಿತ್ಯ ಶ್ರೀಮಂತವಾಗಿದ್ದು, ಅದನ್ನು ಓದಿದರೆ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಲು ಸಾಧ್ಯವಾಗುತ್ತದೆ. ಒಂದು ಭಾಷೆಯನ್ನು ಚೆನ್ನಾಗಿ ಕಲಿತರೆ ಅನೇಕ ಭಾಷೆಗಳನ್ನು ಕಲಿಯಲು ಸಾಧ್ಯವಾಗುತ್ತದೆ. ದಿನಕ್ಕೆ ಕನಿಷ್ಠ ಐದು ಗಂಟೆ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಿ, ಕನ್ನಡದ ಮೇಲೆ ಅಭಿಮಾನ, ಪ್ರೀತಿಯನ್ನು ಇಟ್ಟುಕೊಳ್ಳಿ” ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ವೆಂಕಟರಾಮಪ್ಪ ಮಾತನಾಡಿ, “ಗಡಿಯಲ್ಲಿ ಕನ್ನಡದ ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಇಂದಿನ ಕಾರ್ಯಕ್ರಮ ಉಪಯುಕ್ತವಾಗಿದ್ದು, ಚೇಳೂರು ಭಾಗದ ಶಿಕ್ಷಕರು, ವಿದ್ಯಾರ್ಥಿಗಳು ವಿವಿಧ ಕನ್ನಡದ ಅಭಿಮಾನಿಗಳು ತೋರಿದ ಆಸಕ್ತಿ ಅಭಿನಂದನೀಯವಾದುದು” ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಅಮೃತಕುಮಾರ್, ಸತೀಶ್, ಖಜಾಂಚಿ ಮಲ್ಲಿಕಾರ್ಜುನಯ್ಯ, ಬಾಗೇಪಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ, ಗೌರವ ಕಾರ್ಯದರ್ಶಿ ಎನ್.ಶಿವಪ್ಪ, ಶ್ರೀನಿವಾಸ್ ಬಾಣಾಲಪಲ್ಲಿ, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಆರ್.ಹನುಮಂತರೆಡ್ಡಿ, ಚಿಂತಾಮಣಿ ಕಸಾಪ ಅಧ್ಯಕ್ಷ ಪ್ರಕಾಶ್, ಚೇಳೂರು ಗ್ರಾಪಂ ಅಧ್ಯಕ್ಷೆ ಕೌಸ್ತರ್, ಉಪಾಧ್ಯಕ್ಷ ಪೈಂಟರ್ ರಾಮು, ಪಿಡಿಒ ವೆಂಕಟಾಚಲಪತಿ, ಚೇಳೂರು ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ರಾಧಾಕೃಷ್ಣ, ಎಇಇ ಪ್ರದೀಪ್, ಪೊಲೀಸ್ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ, ಪಿ.ಎಸ್.ಐ ಹರೀಶ್, ಮಾನಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾಂಡುರAಗಶೆಟ್ಟಿ, ಪ್ರಾಂಶುಪಾಲ ಟಿ.ಪಿ.ಅಶೋಕ್, ನಿವೃತ್ತ ಬಿಇಓ ನಾರಾಯಣರೆಡ್ಡಿ, ಪಾ.ಮು.ಚಲಪತಿಗೌಡ, ಕೆ.ಪಿ.ಅಂಜಿನಪ್ಪ, ನಾಗರಾಜ್, ಕರ್ನಾಟಕ ಪಬ್ಲಿಕ್ ಶಾಲೆ ಮುಖ್ಯೋಪಾಧ್ಯಾಯ ಜಿಲಾನ್ ಬಾಷ ಮುಂತಾದವರು ಹಾಜರಿದ್ದರು.
ಅರ್ಥಪೂರ್ಣ ವಿಚಾರ ಸಂಕಿರಣ, ಮನಸೂರೆಗೊಂಡ ಜಾಥಾ, ಸಾಂಸ್ಕೃತಿಕ ಕಾರ್ಯಕ್ರಮ
ಚೇಳೂರು ತಾಲೂಕು ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಬೃಹತ್ ಕನ್ನಡ ಜಾಥಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೂರೆಗೊಳ್ಳುವಲ್ಲಿ ಯÀiಶಸ್ವಿಯಾದವು.
- ಮತ್ತಷ್ಟು ಚಿತ್ರಗಳಿಗೆ ಕೆಳಗಿನ ಸ್ಲೈಡ್ ಶೋ ನೋಡಿ..
ಸಾವಿರಾರು ವಿದ್ಯಾರ್ಥಿಗಳು ಕನ್ನಡ ಬಾವುಟಗಳನ್ನು ಕೈಯಲ್ಲಿ ಹಿಡಿದು ತಾಯಿ ಭುವನೇಶ್ವರಿಗೆ ಜಯಕಾರಗಳನ್ನು ಕೂಗುತ್ತಾ, ಕನ್ನಡಪರ ಘೋಷಣೆಗಳನ್ನು ಕೂಗುತ್ತಾ ಕರ್ನಾಟಕ ಪಬ್ಲಿಕ್ ಶಾಲೆಯಿಂದ ಹೊರಟು ಚೇಳೂರು ಮುಖ್ಯರಸ್ತೆಗಳಲ್ಲಿ ಭವ್ಯವಾದ ಮೆರವಣಿಗೆಯನ್ನು ನಡೆಸಿದರು. ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ ಜಾಥಾಗೆ ಚಾಲನೆ ನೀಡಿದರು. ಚೇಳೂರು ಮುಖ್ಯ ವೃತ್ತದಲ್ಲಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ಕನ್ನಡ ಬಾವುಟಗಳ ಹಾರಾಟ ಆಂಧ್ರಪ್ರದೇಶಕ್ಕೆ ಕೂಗಳತೆಯಲ್ಲಿರುವ ಚೇಳೂರಿನಲ್ಲಿ ಅಪ್ಪಟ ಕನ್ನಡದ ಪ್ರದೇಶದಂತೆ ಕಂಗೊಳಿಸಿತು.
ನಂತರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ‘ಗಡಿಭಾಗದ ಶೈಕ್ಷಣಿಕ ಮತ್ರು ಸಾಂಸ್ಕೃತಿಕ ಸ್ಥಿತಿಗತಿಗಳು’ ವಿಷಯದ ಬಗ್ಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಕೆ.ಎಂ.ನಯಾಜ್ ಅಹಮದ್, ‘ಗಡಿಭಾಗದ ಶಾಲೆಗಳಲ್ಲಿ ಮಕ್ಕಳ ಶಿಕ್ಷಣದ ಹಕ್ಕು ಮತ್ತು ಭಾಷಾ ಕಲಿಕೆಯ ಸ್ಥಿತಿಗತಿಗಳು’ ವಿಷಯದ ಬಗ್ಗೆ ಡಾ.ಕೋಡಿರಂಗಪ್ಪ ಹಾಗೂ ‘ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉತ್ತೇಜನಕ್ಕೆ ಮಾರ್ಗೋಪಾಯಗಳು’ ವಿಷಯದ ಬಗ್ಗೆ ಲೇಖಕ ಹಾಗು ಪತ್ರಕರ್ತ ಬಿ.ಆರ್.ಕೃಷ್ಣ ವಿಷಯ ಮಂಡನೆ ಮಾಡಿದರು. ನ್ಯಾಷನಲ್ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ರಾಮಯ್ಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಪ್ರಸಿದ್ದ ಜಾನಪದ ಗಾಯಕ ಮುನಿರೆಡ್ಡಿ ಮತ್ತು ತಂಡದವರು ನಡೆಸಿಕೊಟ್ಟ ಗಾಯನ ಕಾರ್ಯಕ್ರಮ ಜನರನ್ನು ರಂಜಿಸಿತು. ಗೋಪಿನಾಯಕ್, ಡಿ.ನಾರಾಯಣಸ್ವಾಮಿ, ವಸಂತಮ್ಮ, ವೈ.ನಾರಾಯಣ ಗೀತೆಗಳನ್ನು ಹಾಡಿದರು. ವಿವಿಧ ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟು ಭರತ ನಾಟ್ಯ, ನೃತ್ಯರೂಪಕಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದವು.
ಸುದ್ದಿ ಚೆನ್ನಾಗಿ ಪ್ರಕಟವಾಗಿದೆ, ಧನ್ಯವಾದಗಳು