ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ರಾಜ್ಯಪಾಲ ಗೆಹ್ಲೋತ್ ಅವರಿಗೆ ದೂರು ನೀಡುವೆ ಎಂದ ಎಸ್.ಮುನಿಸ್ವಾಮಿ
ಕೋಲಾರ: ತಮ್ಮ ಕುತ್ತಿಗೆ ಪಟ್ಟಿ ಹಿಡಿದು ಹೊರದಬ್ಬಿ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಅವರ ವಿರುದ್ಧ ಲೋಕಸಭೆಯಲ್ಲಿ ಹಕ್ಕುಚ್ಯುತಿ ನಿರ್ಣಯ ಮಂಡಿಸುವುದಾಗಿ ಸಂಸದ ಎಸ್.ಮುನಿಸ್ವಾಮಿ ಅವರು ಹೇಳಿದ್ದಾರೆ.
ಕೋಲಾರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; ಎಂಟು ವಿಧಾನಸಭೆ ಕ್ಷೇತ್ರಗಳನ್ನು ಪ್ರತಿನಿಧಿಸುವ ಓರ್ವ ಸಂಸದ, ಅದರಲ್ಲಿಯೂ ದಲಿತ ಸಂಸದನಾದ ನನ್ನನ್ನು ಅಮಾನುಷವಾಗಿ ಸಭೆಯಿಂದ ಹೊರದಬ್ಬಲಾಗಿದೆ. ಪೊಲೀಸ್ ಅಧಿಕಾರಿ ಸಂಸದರ ಕುತ್ತಿಗೆ ಪಟ್ಟಿ ಹಿಡಿಯುವುದು ಎಂದರೆ ಏನರ್ಥ? ಅವರ ಹಿಂದೆ ಯಾರಿದ್ದಾರೆ? ಹಾಗೆ ಮಾಡಲು ಅವರಿಗೆ ಆದೇಶ ಕೊಟ್ಟವರು ಯಾರು ಎಂದು ಮುನಿಸ್ವಾಮಿ ಪ್ರಶ್ನಿಸಿದರು.
ನನ್ನ ಹಕ್ಕುಚ್ಯುತಿ ಆಗಿದೆ. ನಾನು ಲೋಕಸಭೆ ಸ್ಪೀಕರ್ ಅವರ ಮೊರೆ ಹೋಗುವೆ. ರಾಜ್ಯಪಾಲರಿಗೆ ಕೂಡ ದೂರು ಕೊಡುತ್ತೇನೆ ಎಂದು ಅವರು ಹೇಳಿದರು.
ಸೋಮವಾರ ಕೋಲಾರದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದ ನಡೆದ ಎಲ್ಲಾ ಘಟನೆಗಳ ಬಗ್ಗೆ ಎಲ್ಲಾ ಮಾಹಿತಿ ಸಂಗ್ರಹ ಮಾಡಿದ್ದೇನೆ. ಅವೆಲ್ಲವನ್ನೂ ಲೋಕಸಭೆ ಸ್ಪೀಕರ್ ಹಾಗೂ ರಾಜ್ಯಪಾಲರಿಗೆ ಸಲ್ಲಿಸುತ್ತೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೋಲಾರ ಜಿಲ್ಲಾ ಎಸ್ಪಿ ನಾರಾಯಣ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಏಜೆಂಟ್. ಜಿಲ್ಲೆಯಲ್ಲಿ ವೇಶ್ಯಾವಾಟಿಕೆ, ಬೆಟ್ಟಿಂಗ್, ಇಸ್ಪೀಟ್ ಅಡ್ಡೆಗಳಿಗೆ ಅವರು ಪ್ರೋತ್ಸಾಹ ನೀಡುತ್ತಿದ್ದಾರೆ. ಕೊಲೆ, ಸುಲಿಗೆ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗಿವೆ. ಅವರ ವಿರುದ್ದ ಸರಕಾರ ಶಿಸ್ತುಕ್ರಮ ತೆಗೆದುಕೊಳ್ಳಬೇಕು. ಇಂಥ ಪೊಲೀಸ್ ವರಿಷ್ಠಾಧಿಕಾರಿ ನಮ್ಮ ಜಿಲ್ಲೆಗೆ ಬೇಕಿಲ್ಲ ಎಂದು ಮುನಿಸ್ವಾಮಿ ಒತ್ತಾಯ ಮಾಡಿದರು.
ಎಸ್ಪಿ ನಾರಾಯಣ ವರ್ತನೆ ಬಗ್ಗೆ ನಮ್ಮ ಪಕ್ಷದ ಹಿರಿಯ ನಾಯಕರ ಗಮನಕ್ಕೆ ತಂದಿದ್ದೇನೆ. ದೌರ್ಜನ್ಯ ವಿರುದ್ದ ಲೋಕಸಭಾ ಸ್ಪೀಕರ್ ಗೆ ಹಕ್ಕುಚ್ಯುತಿ ದೂರು ಕೊಡಲು ಎಲ್ಲರೂ ಸಲಹೆ ಮಾಡಿದ್ದಾರೆ. ಸಚಿವರನ್ನು ಮೆಚ್ಚಿಸಲು ಎಸ್ಪಿ ನಾರಾಯಣ ನನ್ನ ಮೇಲೆ ದರ್ಪ ತೋರಿಸಿದ್ದಾರೆ. ಒಬ್ಬ ಸಂಸದನಿಗೆ ಸರಕಾರದಿಂದಲೇ ಅಪಮಾನವಾಗಿದೆ ಎಂದು ಅವರು ಕಿಡಿಕಾರಿದರು.
ಜಿಲ್ಲಾಧಿಕಾರಿ ವಿರುದ್ಧವೂ ಆರೋಪ
ಇದೇ ಸಂಸದ ಮುನಿಸ್ವಾಮಿ ಅವರು ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ ವಿರುದ್ಧವೂ ಆರೋಪ ಮಾಡಿದರು. ಜಿಲ್ಲಾಧಿಕಾರಿ ಕಚೇರಿ ರಿಯಲ್ ಎಸ್ಟೇಟ್ ತಾಣವಾಗಿದೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಗಳು ಸದಾ ಅವರ ಕಚೇರಿಯಲ್ಲಿ ಬೀಡು ಬಿಟ್ಟಿರುತ್ತಾರೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಕೋಲಾರದಲ್ಲಿರುವ ಜಿಲ್ಲಾಧಿಕಾರಿ, ಎಸ್ಪಿ ಅಂತವರನ್ನು ನಾನು ನೋಡಿಯೇ ಇಲ್ಲ. ಸಂಜೆಯಾದರೆ ಜಿಲ್ಲಾಧಿಕಾರಿ ಕಚೇರಿ ಬೆಂಗಳೂರಿನ ಬಿಲ್ಡರುಗಳೆಲ್ಲ ಬೀಡು ಬಿಟ್ಟಿರುತ್ತಾರೆ. ಸಂಜೆಯಾದರೆ ಅಲ್ಲಿ ವ್ಯಾಪಾರ ನಡೆಯುತ್ತಿರುತ್ತದೆ. ಮಾಧ್ಯಮದವರು ಯಾರೇ ಹೋಗಿ ಕೇಳಿದರೂ ʼನೋ ಬೈಟ್ʼ ಅಂತ ಹೇಳುವ ಲೆಕ್ಕಾಚಾರದಲ್ಲಿದ್ದಾರೆ.