ನಾಲ್ಕು ದಶಕಗಳ ಸಾಹಿತ್ಯ ಕೃಷಿಕ
ಸ್ಟಾಕ್‌ಹೋಮ್ (ಸ್ವೀಡನ್): ನಾರ್ವೆ ದೇಶದ ಖ್ಯಾತ ನಾಟಕಕಾರ, ಕಾದಂಬರಿಕಾರ ಹಾಗೂ ನಾರ್ಡಿಕ್ ಬರವಣಿಗೆಯ ಮಾಸ್ಟರ್ ಎಂದೇ ಪ್ರಸಿದ್ಧರಾದ ಜಾನ್ ಫಾಸ್ಸೆ ಅವರಿಗೆ 2023ನೇ ಸಾಲಿನ ಸಾಹಿತ್ಯದ ನೊಬೆಲ್ ಪುರಸ್ಕಾರ ದೊರೆತಿದೆ.
ಶೋಷಿತರು, ದನಿ ಇಲ್ಲದವರ ಕುರಿತಾದ ಅವರ ಸಾಹಿತ್ಯ ನಾರ್ವೆ ಮಾತ್ರವಲ್ಲದೆ, ಜಾಗತಿಕ ಸಾಹಿತ್ಯ ಕ್ಷೇತ್ರದಲ್ಲಿ ಬಹಳ ಚರ್ಚೆಗೆ ಒಳಗಾಗಿದೆ. ಅವರು ದಮನಿತರ ಪರವಾಗಿ ತಮ್ಮ ಬರವಣಿಗೆಯನ್ನು ಮೀಸಲಿಟ್ಟಿದ್ದಾರೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಹೇಳಿದೆ.
ಫಾಸ್ಸೆ ಅವರಿಂದ ನಾಟಕ, ಕಾದಂಬರಿಗಳು, ಕಾವ್ಯ, ಪ್ರಬಂಧಗಳು, ಮಕ್ಕಳ ಕೃತಿಗಳು ಮೂಡಿ ಬಂದಿವೆ. ಅಲ್ಲದೆ, ಅನೇಕ ಕೃತಿಗಳನ್ನು ಅವರು ಸ್ಥಳೀಯ ಭಾಷೆಗೆ ಅನುವಾದ ಮಾಡಿದ್ದಾರೆ. ನಾಲ್ಕು ದಶಕಗಳಿಂದಲೂ ಸಾಹಿತ್ಯ ಕೃಷಿಯಲ್ಲಿ ನಿರತರಾಗಿರುವ ಅವರ ಸಾಹಿತ್ಯ 40ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿವೆ.