ಆಹಾರ ತಜ್ಞ, ಬಹುಮುಖ ಪ್ರತಿಭೆಯ ಜ್ಞಾನ ಕಣಜ
ಬೆಂಗಳೂರು: ಹೆಸರಾಂತ ಆಹಾರ ತಜ್ಞ, ಅಂಕಣಕಾರ ಕೆ.ಸಿ. ರಘು ಅವರು ಅನಾರೋಗ್ಯದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ದಾಸರಹಳ್ಳಿಯ ಅಮೃತ ನಗರದಲ್ಲಿರುವ ಅವರ ನಿವಾಸದಲ್ಲಿ ಕೊನೆಯುಸಿರೆಳೆದ್ದಾರೆ.
“ನನ್ನ ಪತಿ ಶ್ರೀ ಕೆ.ಸಿ.ರಘು ಅವರು ಇಂದು ಬೆಳಗಿನ ಜಾವ ಸುಮಾರು 7.30ಕ್ಕೆ ನಮ್ಮನ್ನು ಅಗಲಿದ್ದಾರೆ. ಅವರು ಲಂಗ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು” ಎಂದು ಅವರ ಪತ್ನಿ ಶ್ರೀಮತಿ ಆಶಾ ರಘು ಅವರು ತಿಳಿಸಿದ್ದಾರೆ. ಆಶಾರವರು ಲೇಖಕಿ ಮತ್ತು ಕಾದಂಬರಿಕಾರ್ತಿ.
ರಾಜ್ಯದ ಹೊಸ ತಲೆಮಾರಿನ ಪ್ರಮುಖ ಚಿಂತಕರಲ್ಲಿ ಒಬ್ಬರಾಗಿದ್ದ ರಘು ಅವರು, ಮುಖ್ಯವಾಗಿ ಆಹಾರದ ಬಗ್ಗೆ ಅಧಿಕಾರಯುತವಾಗಿ ಬರೆಯುತ್ತಿದ್ದರು, ಮಾತನಾಡುತ್ತಿದ್ದರು.
ಕೆ.ಸಿ.ರಘು ಅವರು ಅನೇಕ ವರ್ಷಗಳ ಕಾಲ ಫುಡ್ ಅಂಡ್ ನ್ಯೂಟ್ರೇಷನ್ ವರ್ಲ್ಡ್ ಎಂಬ ಆಂಗ್ಲ ನಿಯತಕಾಲಿಕದ ಸಂಪಾದಕರಾಗಿದ್ದರು. ಅನೇಕ ದಿನಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದರು. ಸಾಮಾನ್ಯ ವಿಜ್ಞಾನ ಮತ್ತು ಆರ್ಥಿಕತೆಯ ವಿಷಯಗಳನ್ನು ಅತಿಥಿ ಉಪನ್ಯಾಸಕರಾಗಿ ನಿರ್ವಹಿಸಿದ್ದಾರೆ. ಅವರು ಸ್ಥಾಪಿಸಿದ ಪ್ರಿಸ್ಟೀನ್ ಆರ್ಗ್ಯಾನಿಕ್ಸ್ ಎಂಬ ಸಂಸ್ಥೆಯಲ್ಲಿ ನವಜಾತ ಶಿಶುಗಳಲ್ಲಿ ಕಂಡುಬರುವ ಮಾರಕ ಕಾಯಿಲೆಗಳಿಗೆ ಪೌಷ್ಟಿಕಾಂಶದ ಪರಿಹಾರವನ್ನು ಸಂಶೋಧನೆಯಿಂದ ಕಂಡುಹಿಡಿದು, ದೇಶಾದ್ಯಂತ ಹಾಗೂ ವಿದೇಶಕ್ಕೂ ಒದಗಿಸುತ್ತಿದ್ದರು. ಈ ಕಾರ್ಯದಿಂದ ಸುಮಾರು 5 ಸಾವಿರ ನವಜಾತ ಶಿಶುಗಳನ್ನು ಸಾವಿನ ದವಡೆಯಿಂದ ಪಾರು ಮಾಡಲಾಗಿತ್ತು.
ಭಾರತದಲ್ಲಿ ಈ ರೀತಿಯ ಪರಿಹಾರ ಒದಗಿಸುವ ಏಕೈಕ ಸಂಸ್ಥೆ ಇದಾಗಿತ್ತು. ಕೆ.ಸಿ.ರಘು ಅವರು ಅನೇಕ ವಿಷಯಗಳ ಆಳವಾದ ಆಸಕ್ತಿ ಮತ್ತು ಜ್ಞಾನವನ್ನು ಉಳ್ಳವರಾಗಿ ಸದಾ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದರು. ಅವರು ಲೇಖಕರಾಗಿ ಆಹಾರಕ್ಕೆ ಸಂಬಂಧಪಟ್ಟ ‘ಆಹಾರ ರಾಜಕೀಯ’ಮತ್ತು ‘ತುತ್ತು ತತ್ವ’ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ದೇಹದಾನ
ಕೆ.ಸಿ.ರಘು ಅವರ ಆಶಯದಂತೆ ಅವರ ದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾನ ಮಾಡಲಾಗುವುದು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ರಘು ಅವರ ನಿಧನದ ಬಗ್ಗೆ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರ ಮಾತುಗಳು ರಘು ಅವರ ವ್ಯಕ್ತಿತ್ವದ ಎತ್ತರವನ್ನು ತಿಳಿಸುತ್ತವೆ.
“ಕೆಲವರ ತಲೆಯಲ್ಲಿ ಬರೀ ಅಕ್ಷರಗಳಿರುತ್ತವೆ, ಇನ್ನು ಕೆಲವರ ತಲೆಯಲ್ಲಿ ಒಂದಷ್ಟು ಪುಸ್ತಕಗಳಿರುತ್ತವೆ, ಕೆ.ಸಿ.ರಘು ಅವರಂತಹ ತಲೆಗಳಲ್ಲಿ ಗ್ರಂಥಾಲಯವೇ ಇತ್ತು. ಅವರನ್ನು ಕಳೆದುಕೊಂಡ ನಾವೆಲ್ಲ ಬಡವಾಗಿದ್ದೇವೆ. ಇಂತಹ ಒಂದು ಪ್ರತಿಭೆಯನ್ನು ಕನಿಷ್ಠ ನನ್ನ ಜೀವಮಾನದಲ್ಲಿ ಕಾಣುವುದು ಕಷ್ಟ. ತುಂಬಲಾರದ ನಷ್ಟ.ಹೋಗಿ ಬನ್ನಿ” ಎಂದು ಅಮೀನ್ ಮಟ್ಟು ಅವರು ಹೇಳಿದ್ದಾರೆ.