ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ; ವಿದ್ಯುತ್ ಉತ್ಪಾದನೆಗೆ ಸಾಧ್ಯವಿದ್ದರೂ ಖಾಸಗಿ ಕಂಪನಿಗಳಿಂದ ಖರೀದಿಸಿ ಪರ್ಸಂಟೇಜ್ ಕಲೆಕ್ಷನ್ʼಗೆ ಹುನ್ನಾರ
ಬೆಂಗಳೂರು: ವಿವಿಧ ಮೂಲಗಳಿಂದ ವಿದ್ಯುತ್ ಉತ್ಪಾದನೆಗೆ ಹೇರಳ ಅವಕಾಶವಿದ್ದರೂ ಖಾಸಗಿ ಕಂಪನಿಗಳಿಂದ ವಿದ್ಯುತ್ ಖರೀದಿಸಲು ರಾಜ್ಯದಲ್ಲಿ ಕೃತಕ ವಿದ್ಯುತ್ ಅಭಾವ ಸೃಷ್ಟಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.
ಪಂಚರಾಜ್ಯಗಳ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯ ವೇಳೆ ದೊಡ್ಡ ಪ್ರಮಾಣದಲ್ಲಿ ಹಣ ಹಂಚುವ ಉದ್ದೇಶದಿಂದ ಖಾಸಗಿ ಕಂಪನಿಗಳಿಂದ ವಿದ್ಯುತ್ ಖರೀದಿ ಮಾಡಿ ಕಮೀಷನ್ ಸಂಗ್ರಹ ಮಾಡಲು ರಾಜ್ಯ ಸರಕಾರ ಹುನ್ನಾರ ನಡೆಸಿದೆ, ಖಾಸಗಿ ಕಂಪನಿಗಳಿಂದ ಖರೀದಿ ಮಾಡಿದರೆ ತಾನೇ ಇವರ ಜೇಬು ತುಂಬುವುದು ಎಂದು ಅವರು ದೂರಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಅವರಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಮಳೆಯ ಅಭಾವದಿಂದ ಜಲ ವಿದ್ಯುತ್ ಉತ್ಪಾದನೆ ಕಡಿಮೆ ಆಗಿದೆ, ನಿಜ. ಆದರೆ, ಇತರೆ ಮೂಲಗಳಿಂದ ಸಾಕಷ್ಟು ವಿದ್ಯುತ್ ಉತ್ಪಾದನೆ ಮಾಡಬಹುದು. ಅಧಿಕಾರ ಬಂದಾಗಿನಿಂದಲೇ ಸರಕಾರ ಮುನ್ನೆಚ್ಚರಿಕೆ ವಹಿಸಿದ್ದಿದ್ದರೆ ಅಗತ್ಯವಾದಷ್ಟು ಕಲ್ಲಿದ್ದಲನ್ನು ದಾಸ್ತಾನು ಮಾಡಿಕೊಳ್ಳಬಹುದಿತ್ತು. ಖರೀದಿ ವ್ಯವಹಾರ ನಡೆಸಿ ಕಮೀಷನ್ ಹೊಡೆಯುವ ದುರುದ್ದೇಶದಿಂದ ವಿದ್ಯುತ್ ಉತ್ಪಾದನೆಯನ್ನು ಉಪೇಕ್ಷೆ ಮಾಡಲಾಗಿದೆ ಎಂದು ದೂರಿದರು ಅವರು.
- ಮುಖ್ಯಾಂಶಗಳು
- ಕಲ್ಲಿದ್ದಲು ಖರೀದಿಯಲ್ಲೂ ಉಪೇಕ್ಷೆ
- ಗ್ಯಾರಂಟಿ ಅಮಲಿನಲ್ಲಿ ತೇಲಿ ಇಂಧನ ಕ್ಷೇತ್ರ ಅಲಕ್ಷ್ಯ
- ಪಂಚರಾಜ್ಯ, ಲೋಕಸಭೆ ಚುನಾವಣೆಗೆ ಹಣ ಸಂಗ್ರಹ
- ಬಹುಶಃ ಜಾರ್ಜ್ʼಗೆ ಹಣ ಬೇಕಿರಲಿಕ್ಕಿಲ್ಲ
- ಕ್ರಿಕೆಟ್ ಮ್ಯಾಚ್ʼನಲ್ಲಿ ಪಾಕಿಸ್ತಾನಕ್ಕೆ ಬೆಂಬಲಿಸಲು ಹೋಗಿದ್ದಿರಾ?
- ಬಂದೀಖಾನೆಯಿಂದಲೇ ಬಂದವರು ಡಿಕೆಶಿ!!
ಈ ಸರಕಾರಕ್ಕೆ ಹಣ ಮಾಡುವುದು ಒಂದೇ ಉದ್ದೇಶ ಇದೆ. ಹೈಕಮಾಂಡ್ ಮುಂದೆ ವಸೂಲಿ ಮಾಡುತ್ತೇವೆ ಎಂದು ನುಡಿದಿದ್ದರು. ಅದರಂತೆ ಈಗ ಕಲೆಕ್ಷನ್ ಮಾಡುತ್ತಿದ್ದಾರೆ. ನುಡಿದಂತೆ ನಡೆಯುತ್ತಿದ್ದಾರೆ. ಅದೇ ಇದು ಎಂದು ಅವರು ಟೀಕಾಪ್ರಹಾರ ನಡೆಸಿದರು.
ಸಮರ್ಥವಾಗಿ ದುಡ್ಡು ಹೊಡೆಯುವ ಕಾರ್ಯಕ್ರಮಗಳನ್ನಷ್ಟೇ ಕಾಂಗ್ರೆಸ್ಸಿನವರು ಹಾಕಿಕೊಳ್ಳುತ್ತಿದ್ದಾರೆ. ಅದೇ ಮುತುವರ್ಜಿಯನ್ನು ಜನರ ಬಗ್ಗೆ ತೂರಿಸಿದ್ದಿದ್ದರೆ ಬೇಕಾದಷ್ಟು ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಬಹುದಿತ್ತು ಎಂದು ಕುಮಾರಸ್ವಾಮಿ ಅವರು ಹೇಳಿದರು.
ಸದ್ಯದ ಪರಿಸ್ಥಿತಿಯಲ್ಲಿ 16867.63 ಮೆಗಾವ್ಯಾಟ್ ವಿದ್ಯುತ್ ಅನ್ನು ಇವತ್ತೂ ಉತ್ಪಾದನೆ ಮಾಡಬಹುದು. ಜಲಾಶಯಗಳಲ್ಲಿ ನಿರೀಕ್ಷಿತ ನೀರು ಸಂಗ್ರಹ ಇಲ್ಲದಿರುವುದರಿಂದ ಮೊದಲಿಗಿಂತ ಅರ್ಧದಷ್ಟು ಜಲ ವಿದ್ಯುತ್ತನ್ನೇ ಮಾಡಲಿ. ಆದರೆ, ಇವರು ಉತ್ಪಾದನೆ ಮಾಡುತ್ತಿಲ್ಲ, ಮಾಡುವುದೂ ಇಲ್ಲ. ಇಂತಹ ಬರಗಾಲದ ನಡುವೆಯೂ ಉತ್ಪಾದನೆ ಮಾಡಲು ಸಮಸ್ಯೆ ಇಲ್ಲ. ಗ್ಯಾರಂಟಿಗಳ ಜಪ ಮಾಡಿಕೊಂಡು ವಿದ್ಯುತ್ ಉತ್ಪಾನೆ ನಿರ್ಲಕ್ಷ್ಯ ಮಾಡಿದರು. ಗೃಹಜ್ಯೋತಿ ಕೊಡುತ್ತಿದ್ದೇವೆ, ಕೊನೆಪಕ್ಷ ಆಗಲಾದರೂ ಅವರು ಉತ್ಪಾದನೆಯತ್ತ ಗಮನ ಕೊಡಬೇಕಿತ್ತು. ಕಮೀಷನ್ ದುರಾಸೆಯಿಂದ ಅದನ್ನೂ ಮಾಡಲಿಲ್ಲ ಎಂದು ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಮಾತಿಗೆ ಮುಂಚೆ ಕಮೀಷನ್, ಪರ್ಸಂಟೇಜ್, ವರ್ಗಾವಣೆ ಧಂದೆ ಮಾಡಿಕೊಂಡು ಕೂತಿದ್ದಾರೆ ಕಾಂಗ್ರೆಸ್ ನವರು. ಇನ್ನೊಂದು ತಿಂಗಳು ಕಳೆದರೆ ರಾಜ್ಯದ ರೈತರ ಪರಿಸ್ಥಿತಿ ಮತ್ತೂ ಬಿಗಡಾಯಿಸುತ್ತದೆ. ಸಾಲ ಕೊಟ್ಟವರು ಮನೆ ಹತ್ತಿರ ಬರುತ್ತಾರೆ. ವಿದ್ಯುತ್ ಕ್ಷಾಮ ಮತ್ತಷ್ಟು ತೀವ್ರವಾಗಲಿದೆ. ಇವರು ನೋಡಿದರೆ ವರುಷದ ಕೂಳಿಗೆ ಎಳ್ಳೂನೀರು ಬಿಟ್ಟು ಹರುಷದ ಕೂಳಿನ ಗ್ಯಾರಂಟಿ ಮಾದರಿಯನ್ನು ಇಡೀ ದೇಶಕ್ಕೆ ಬೃಹದೀಕರಿಸಿ ವಿಸ್ತರಣೆ ಮಾಡುತ್ತಿದ್ದಾರೆ. ಮುಂದೆ ಎಲ್ಲಾ ರಾಜ್ಯಗಳಲ್ಲಿಯೂ ಇದೇ ದುಃಸ್ಥಿತಿಯನ್ನು ಸೃಷ್ಟಿ ಮಾಡುವುದು ಕಾಂಗ್ರೆಸ್ ಹುನ್ನಾರವಾಗಿದೆ.
ಎಲ್ಲ ಕಡೆ ಭ್ರಷ್ಟಾಚಾರದ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಐದೇ ತಿಂಗಳಲ್ಲಿ ಈ ಸತ್ಯಹರಿಶ್ಚಂದ್ರ ರ ಸರಕಾರ ಹೇಗೆ ನಡೆಯುತ್ತಿದೆ ಎಂದು ಇವರು ತೋರಿಸ್ತಾ ಇದ್ದಾರೆ. ಹಿಂದೆ ಬಿಜೆಪಿಯವರು ಮಾಡಿದ ಪಾಪದ ಫಲಕ್ಕೆ ರಾಜ್ಯಕ್ಕೆ ವಿದ್ಯುತ್ ಕೊರತೆ ಎದುರಾಗಿದೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರು ಪುಣ್ಯದ ಫಲದಿಂದ ಅಧಿಕಾರಕ್ಕೆ ಬಂದರಲ್ಲ, ಐದು ತಿಂಗಳಿಂದ ಇಂಧನ ಇಲಾಖೆಯ ಕಡೆ ಗಮನ ಕೊಡದೆ ಏನು ಮಾಡುತ್ತಿದ್ದರು? ಎಂದು ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಧನ ಇಲಾಖೆಗೆ ಸಂಬಂಧಿಸಿದ ಸಭೆ ನಡೆಸಿದರು. ರಾಜ್ಯದಲ್ಲಿ 15000 ಮೆಗಾವ್ಯಾಟ್ ಕೊರತೆ ಇದೆ, ಖರೀದಿ ಮಾಡ್ತೀವಿ ಎಂದು ಹೇಳಿದ್ದಾರೆ. ಐದು ತಿಂಗಳಿಂದ ಸುಮ್ಮನೆ ಇದ್ದವರು ಈಗ ಹಿಂದಿನ ಸರಕಾರದ ಪಾಪದ ಫಲ ಎಂದು ಹೇಳುತ್ತಿದ್ದಾರೆ. ಅವರದ್ದೇನೋ ಪಾಪದ ಫಲ, ನೀವು ಪುಣ್ಯ ಮಾಡಿದ್ದೀರಲ್ಲ.. ನಿಮ್ಮ ಪುಣ್ಯದ ಫಲವನ್ನು ಜನತೆಗೆ ಕೊಡಬೇಕಲ್ಲಾ? ಎಂದು ಮಾಜಿ ಮುಖ್ಯಮಂತ್ರಿಗಳು ಟಾಂಗ್ ನೀಡಿದರು.
ಕಳೆದ ಜೂನ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡುವಾಗ ವಿದ್ಯುತ್ ಇಲಾಖೆಗೆ ಸಂಬಂಧಿಸಿದ ಒಂದಷ್ಟು ಮಾಹಿತಿ ಕೊಡಲು ಮುಂದಾಗಿದ್ದೆ. ಆಗ ಸರಕಾರದವರು ಮಾತಾಡಲು ಅವಕಾಶ ಕೊಡಲಿಲ್ಲ. ಅವತ್ತೇ ನಾನು ಸರಕಾರಕ್ಕೆ ವಿದ್ಯುತ್ ಕೊರತೆ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸಲಹೆ ಮಾಡಿದ್ದೆ. ನನ್ನ ಮಾತನ್ನು ಸರಕಾರ ಕೇಳಿಸಿಕೊಳ್ಳಲಿಲ್ಲ. ಈಗ ನೋಡಿದರೆ ಹಿಂದಿನ ಸರಕಾರದ ಕಡೆ ಬೆರಳು ತೋರಿಸುತ್ತಿದೆ ಎಂದು ಅವರು ತರಾಟೆಗೆ ತೆಗೆದುಕೊಂಡರು.
ಜನ ಕಷ್ಟದಲ್ಲಿದ್ದರೆ ಇವರು ಮಜಾ ಮಾಡುತ್ತಿದ್ದಾರೆ!
ಒಂದೆಡೆ ಬರ, ಇನ್ನೊಂದು ಕಡೆ ವಿದ್ಯುತ್ ಕ್ಷಾಮದಿಂದ ಜನರು ಅತೀವ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯುತ್ ಕೊಟ್ಟು ಕಾಪಾಡಿ ಎಂದು ಜನ ಕೇಳುತ್ತಿದ್ದರೆ ಬ್ಲೂ ಎನರ್ಜಿ ಉತ್ಪಾದನೆ ಮಾಡಲು ಒಂದು ಟೀಂ ಕರೆಸಿಕೊಂಡಿದ್ದಾರೆ ಇಂಧನ ಸಚಿವರು. ಸಮುದ್ರದಿಂದ ವಿದ್ಯುತ್ ಉತ್ಪಾದನೆ ಮಾಡಿ, ಬೇಡ ಎಂದವರು ಯಾರು? ಸದ್ಯಕ್ಕೆ ಜನರ ಕಷ್ಟ ಬಗೆಹರಿಸುವ ಕಡೆ ಗಮನ ಕೊಡಿ ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.
ಇಡೀ ರಾಜ್ಯವೇ ಕತ್ತಲೆಯಲ್ಲಿ ಇದ್ದರೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ತಮ್ಮ ಸಚಿವರು, ಅಧಿಕಾರಿಗಳ ಪಟಾಲಂ ಕಟ್ಟಿಕೊಂಡು ಎಳೆಂಟು ಗಂಟೆ ಕ್ರಿಕೆಟ್ ಪಂದ್ಯ ನೋಡಲು ಹೋಗಿದ್ದಾರೆ. ಅಲ್ಲಿ ಇವರೆಲ್ಲ ಮಜಾ ಮಾಡಿಕೊಂಡು ಕೂತಿದ್ದರು. ಇವರು ಯಾವ ದೇಶಕ್ಕೆ ಬೆಂಬಲ ನೀಡಲು ಹೋಗಿದ್ದರು? ಆಸ್ಟ್ರೇಲಿಯಾಕ್ಕಾ? ಅಥವಾ ಪಾಕಿಸ್ತಾನಕ್ಕಾ? ಜನರಿಗೆ ಹೇಳಬೇಕಲ್ಲವೆ? ಭಾರತದ ತಂಡ ಆಡುತ್ತಿದ್ದರೆ, ನಮ್ಮ ತಂಡಕ್ಕೆ ಬೆಂಬಲ ಕೊಡಲು ಹೋಗಿದ್ದಾರೆ ಎಂದು ಭಾವಿಸಬಹುದಿತ್ತು. ಇಂಥ ದುರಿತ ಕಾಲದಲ್ಲಿಯೂ ಇವರಿಗೆ ಎಂಜಾಯ್ ಮಾಡುವ ಮನಃಸ್ಥಿತಿ ಇದೆ. ಅದಕ್ಕೆ ಏನೆಂದು ಹೇಳುವುದು ಎಂದು ಅವರು ಖಾರವಾಗಿ ಉತ್ತರಿಸಿದರು.
ಕೊಳ್ಳೆ ಹೊಡೆಯುವ ಯೋಜನೆಗಳಿಗೆ ವಾತಾವರಣ ಹೇಗೆ ಸೃಷ್ಟಿ ಮಾಡಿಕೊಳ್ಳಬೇಕು ಎನ್ನುವುದು ಸರಕಾರಕ್ಕೆ ಚೆನ್ನಾಗಿ ಗೊತ್ತಿದೆ. ಈಗ ವಿದೇಶದಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತೇವೆ ಎನ್ನುತ್ತಿದೆ. ದುಬಾರಿ ಬೆಲೆ ಕೊಟ್ಟಾದರೂ ಖರೀದಿ ಮಾಡುತ್ತವೆ ಎಂದು ಸಚಿವರೊಬ್ಬರು ಹೇಳುತ್ತಾರೆ. ಹಾಗಾದರೆ, ಇಷ್ಟು ದಿನ ಏನು ಮಾಡುತ್ತಿದ್ದಿರಿ? ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಪಂಪ್ ಸೆಟ್ ಗಳಿಗೆ ಒಂದು ತಾಸು ಕರೆಂಟ್ ಕೂಡ ಸಿಗುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಆದರೆ, ಪ್ರತಿಪಕ್ಷದವರು ಅಂಗಿ ಹರಿದುಕೊಂಡು ಓಡಾಡುತ್ತಿದ್ದಾರೆ ಎಂದು ಟೀಕೆ ಮಾಡುತ್ತಾರೆ. ಇನ್ನು ಸ್ವಲ್ಪ ದಿನ ನೋಡೋಣ, ಯಾರು ಬಟ್ಟೆ ಹರಿದುಕೊಂಡು ಓಡಾಡ್ತಾರೆ.
ಹೆಚ್.ಡಿ.ಕುಮಾರಸ್ವಾಮಿ
ಇಂತಹ ಕಷ್ಟ ಕಾಲದಲ್ಲಿಯೂ ಜನರು ಸರಕಾರಕ್ಕೆ ತೆರಿಗೆ ಕಟ್ಟುತ್ತಿದ್ದಾರೆ. ತೆರಿಗೆ ಸಂಗ್ರಹ ಕಡಿಮೆ ಆಗಿಲ್ಲ. ಸರಕಾರದಲ್ಲಿ ಹಣದ ಕೊರತೆ ಆಗಿಲ್ಲ. ಆರು ತಿಂಗಳಿನಿಂದ 79,000 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹವಾಗಿದೆ. ಆದರೆ ಗ್ಯಾರಂಟಿ ಎನ್ನುತ್ತಾ ಜನರ ಮೂತಿಗೆ ತುಪ್ಪ ಸವರುತ್ತಿದೆ ಸರಕಾರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಕ್ಕೆ ಅಗತ್ಯವಾದಷ್ಟು ವಿದ್ಯುತ್ ಉತ್ಪಾದನೆ ಮಾಡಿಕೊಳ್ಳುವ ಸಾಮರ್ಥ್ಯ ನಮಗೆ ಇದೆ. 3906.6 ಮೆ.ವ್ಯಾ. ಜಲ ವಿದ್ಯುತ್, 5020 ಮೆ.ವ್ಯಾ. ಉಷ್ಣ ವಿದ್ಯುತ್, 2050 ಮೆ.ವ್ಯಾ. ಖಾಸಗಿ ಕಂಪನಿಗಳ ವಿದ್ಯುತ್ ಸೇರಿದಂತೆ ಒಟ್ಟು 9947 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ರಾಜ್ಯಕ್ಕಿದೆ. ಆದರೂ, ಸರಕಾರ ಕೃತಕ ಅಭಾವ ಸೃಷ್ಟಿಸುತ್ತಿದೆ. ವಿದ್ಯುತ್ ಹಾಹಾಕಾರ ಉಂಟು ಮಾಡುತ್ತಿದೆ. ಪರ್ಸಂಟೇಜ್ ಹೊಡೆಯಲು ಇದೆಲ್ಲವನ್ನೂ ಮಾಡಲಾಗುತ್ತಿದೆ. ಇನ್ನೂ ಎಷ್ಟು ಅಂತಾ ಕೊಳ್ಳೆ ಹೊಡೆಯುತ್ತೀರಿ, ಸಚಿವ ಜಾರ್ಜ್ ಅವರಿಗೆ ಹಣದ ಕೊರತೆ ಇಲ್ಲ, ಬಹುಶಃ ಹೈಕಮಾಂಡ್ ಇವರಿಂದ ಕಮೀಷನ್ ಸಂಗ್ರಹಕ್ಕೆ ಒತ್ತಡ ಹೇರುತ್ತಿರಬೇಕು ಎಂದು ಅವರು ಆರೋಪಿಸಿದರು.
ಡಿಸಿಎಂ ಡಿಕೆಶಿಗೆ ಟಾಂಗ್
ಎಲ್ಲರದ್ದುನ್ನು ಬಿಚ್ಚಿಡುತ್ತೇನೆ ಎಂದು ಹೇಳಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕುಮಾರಸ್ವಾಮಿ ಅವರು ತಿರುಗೇಟು ನೀಡಿದರು.
ನಾನು ಮಾಹಿತಿ ಇಲ್ಲದೇ ಯಾವ ವಿಚಾರವನ್ನೂ ಚರ್ಚೆ ಮಾಡುವುದಿಲ್ಲ. ಮಾತೆದ್ದರೆ ಬಿಚ್ಚಿಡ್ತೀನಿ ಅಂತಾರಲ್ಲ,
ಅದೇನು ಬಿಚ್ಚಿಡುತ್ತಾರೋ ಬಿಚ್ಚಿಡಲಿ. ನನ್ನದೇನೂ ತಕರಾರು ಇಲ್ಲ. ಅವರು ಬಂಧೀಖಾನೆ ಸಚಿವರಾಗಿ ಕರಿಯರ್ ಆರಂಭ ಮಾಡಿದ್ದರು. ಎಷ್ಟಾದರೂ ಅವರು ಅಲ್ಲಿಂದಲೇ ಬಂದವರಲ್ಲವೇ? ಬಿಚ್ವಿಡಲಿ ಬೇಗ, ಅದಕ್ಕೂ ಮೊದಲೇ ಅವರಿಗೆ ಬೇರೆ ಏನಾದರೂ ಆದರೆ ಕಷ್ಟ ಎಂದು ಮಾಜಿ ಮುಖ್ಯಮಂತ್ರಿಗಳು ಟಾಂಗ್ ಕೊಟ್ಟರು.
ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಮಾಜಿ ಶಾಸಕರಾದ ಸುರೇಶ್ ಗೌಡ, ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಹಿರಿಯ ಮುಖಂಡ ರಾಜಣ್ಣ ಮುತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.