ನಾನೇ 5 ವರ್ಷ ಸಿಎಂ ಎಂದಿದ್ದು ಅನಾರೋಗ್ಯಕರ ಬೆಳವಣಿಗೆ ಎಂದು ಎಸ್.ಎಂ.ಕೃಷ್ಣ ಬೇಸರ
ಬೆಂಗಳೂರು: ಹಾಲಿ ಸಿಎಂ ಸಿದ್ದರಾಮಯ್ಯಅವರು ಐದು ವರ್ಷ ನಾನೇ ಸಿಎಂ ಎಂದು ಹೇಳಿರುವುದು ಅನಾರೋಗ್ಯಕರ ಬೆಳವಣಿಗೆ. ಜಾತಿ ಹೆಸರಿನಲ್ಲಿ ಮುಖ್ಯಮಂತ್ರಿ ಆಯ್ಕೆ ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಮಾಜಿ ಮುಖ್ಯಮಂತ್ರಿ, ನಾಡಿನ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಅವರು ಹೇಳಿದ್ದಾರೆ.
ಅಲ್ಲದೆ, ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿರುವ ಅವರು, ಮಂಡ್ಯದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ್ದಾರೆ.
ದೇಶ, ಪ್ರಜಾಪ್ರಭುತ್ವ, ಸಂವಿಧಾನ ದೊಡ್ಡವು. ಅವುಗಳಿಗೆ ನಿಷ್ಠರಾಗಿ ಎಲ್ಲರೂ ನಡೆದುಕೊಳ್ಳಬೇಕು. ಜಾತಿ ಆಧಾರದಲ್ಲಿ ಸಿಎಂ ಆಯ್ಕೆ ನಡೆಯುವುದು ಅಪಾಯಕಾರಿ. ನಾನೇ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಹೇಳುವುದೂ ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾಯಕತ್ವ ಎನ್ನುವುದು ಸುಲಭದ್ದಲ್ಲ. ಅದು ಯೋಗ್ಯತೆ, ಸಾಧನೆ ಹಾಗೂ ಬದ್ಧತೆ ಆಧಾರದ ಮೇಲೆ ನಿರ್ಧಾರ ಆಗಬೇಕು. ಆದರೆ, ನಾನೇ ಐದು ವರ್ಷ ಸಿಎಂ ಆಗಿರುತ್ತೇನೆ ಎಂದು ಹಾಲಿ ಮುಖ್ಯಮಂತ್ರಿ ಒಬ್ಬರು ಹೇಳುವಂಥ ಪರಿಸ್ಥಿತಿ ಸೃಷ್ಟಿ ಆಗಿದ್ದು ಅತ್ಯಂತ ದುರದೃಷ್ಟಕರ ಎಂದಿದ್ದಾರೆ ಕೃಷ್ಣ ಅವರು.
ನಾನು ಹೇಳಿದ್ದೇ ಬೇರೆ ಎಂದ ಸಿದ್ದರಾಮಯ್ಯ
ನಾನು ಹೇಳಿದ್ದೇ ಒಂದು, ನೀವು ಬರೆದಿದ್ದೇ ಒಂದು.. ಹೀಗೆಂದು ನಾನೇ ಸಿಎಂ, ನಾನೇ ಸಿಎಂ ಆಗಿ ಐದು ವರ್ಷ ಮುಂದುವರಿಯುತ್ತೇನೆ ಎನ್ನುವ ತಮ್ಮ ಹೇಳಿಕೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಯೂಟರ್ನ್ ಹೊಡೆದಿರುವ ರೀತಿ ಇದು.
ನಮ್ಮದು ಹೈಕಮಾಂಡ್ ಪಕ್ಷ. ನಾನು ನೀಡಿದ್ದ ಹೇಳಿಕೆಯೇ ಬೇರೆ. ನಾನು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದೆ. ಆದರೆ, ತಪ್ಪಾಗಿ ವರದಿಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ