ಇಂದಿರಾ ಗಾಂಧಿ ಅವರ ರಾಜಕೀಯ ಪುರ್ಜನ್ಮಕ್ಕಾಗಿ ಕ್ಷೇತ್ರ ತ್ಯಾಗ ಮಾಡಿದ್ದ ಧೀಮಂತ ನಾಯಕ
ಚಿಕ್ಕಮಗಳೂರು: ಕರ್ನಾಟಕದ ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ಡಿ. ಬಿ ಚಂದ್ರೇಗೌಡ ವರು ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಚಿಕ್ಕಮಗಳೂರು ಜಿಲ್ಲೆ, ದಾರದ ಹಳ್ಳಿಯಲ್ಲಿ ನಿನ್ನೆ ರಾತ್ರಿ ಕೊನೆ ಉಸಿರೆಳೆದಿದ್ದಾರೆ. ಪತ್ನಿ ಪೂರ್ಣ ಚಂದ್ರೇಗೌಡ, ನಾಲ್ಕು ಹೆಣ್ಣು ಮಕ್ಕಳು ಹಾಗೂ ಬಂಧುಬಳಗ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಡಿ.ಬಿ.ಚಂದ್ರೇಗೌಡ ಅವರು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು, ಮೂರು ಅವಧಿಯಲ್ಲಿ ಶಾಸಕರಾಗಿದ್ದರು, ಎಂಎಲ್ಸಿ ಮತ್ತು ಮೂರು ಬಾರಿ ಲೋಕಸಭೆ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಡಿ.ಬಿ.ಸಿ ಅವರು 1971 ರಲ್ಲಿ ಮತ್ತು ನಂತರ 1977 ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಮೊದಲ ಬಾರಿಗೆ ಲೋಕಸಭೆಗೆ ಚುನಾಯಿತರಾದರು.
1978 ರಲ್ಲಿ ಅವರು ಚಿಕ್ಕಮಗಳೂರು ಕ್ಷೇತ್ರದಿಂದ ಇಂದಿರಾ ಗಾಂಧಿಯವರು ಲೋಕಸಭೆಗೆ ಪ್ರವೇಶಿಸಲು ಅನುಕೂಲ ಮಾಡಿಕೊಡಲು ರಾಜೀನಾಮೆ ನೀಡಿದ್ದರು. 2009ರಲ್ಲಿ ಬಿಜೆಪಿ ಟಿಕೆಟ್ ಪಡೆದು ಲೋಕಸಭೆಗೆ ಆಯ್ಕೆಯಾಗಿದ್ದರು.
ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿಯೂ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸುದೀರ್ಘ ರಾಜಕೀಯ ಜೀವನದಲ್ಲಿ ಅವರು ಜನತಾದಳ, ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.