ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಯಿಂದ ಕಾಂಗ್ರೆಸ್ ನಲ್ಲಿ ತಲ್ಲಣ
- ರಾಜ್ಯ ನಾಯಕರಿಂದ ಮಾಹಿತಿ ಕೇಳಿದ ವರಿಷ್ಠರು
- ಪ್ರಭಾವೀ ಸಚಿವರು ಯಾರು? ಅವರ ಜತೆ ಯಾರಿದ್ದಾರೆ ಎನ್ನುವ ಬಗ್ಗೆ ಆತ್ಮಾವಲೋಕನ
ಬೆಂಗಳೂರು: ಲೋಕಸಭೆ ಚುನಾವಣೆ ನಂತರ ರಾಜ್ಯ ಕಾಂಗ್ರೆಸ್ ಸರಕಾರ ಪತನವಾಗುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಡಿಸಿರುವ ಬಾಂಬ್ ಕಾಂಗ್ರೆಸ್ ವಲಯದಲ್ಲಿ ತೀವ್ರ ಅಲ್ಲೋಲಕಲ್ಲೊಲ ಉಂಟು ಮಾಡಿದೆ.
136 ಸೀಟುಗಳ ಭರ್ತಿ ಬಹುಮತ ಇದೆ, ಸರಕಾರವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ವಿಶ್ವಾಸದಲ್ಲಿದ್ದ ಕೈ ಪಕ್ಷಕ್ಕೆ ಮಾಜಿ ಸಿಎಂ ಕೊಟ್ಟಿರುವ ಶಾಕ್ ನಾಯಕರ ನಿದ್ದೆಗೆಡಿಸಿದೆ.
ಕುಮಾರಸ್ವಾಮಿ ಅವರು ಹೇಳಿದ್ದೇನು?
ಸರಕಾರದ ಪ್ರಭಾವೀ ಸಚಿವರೊಬ್ಬರು ತಮ್ಮ ಅಕ್ರಮಗಳಿಂದ ಪಾರಾಗಲು ಬಿಜೆಪಿಯ ಕೇಂದ್ರ ನಾಯಕರ ಜತೆ ಚೌಕಾಸಿ ನಡೆಸುತ್ತಿದ್ದಾರೆ. ಲೋಕಸಭೆ ಚುನಾವಣೆವರೆಗೂ ತಮ್ಮನ್ನು ಪಾರು ಮಾಡಿ. ಆಮೇಲೆ ನಾನೇ 50-60 ಶಾಸಕರನ್ನು ಕರೆದುಕೊಂಡು ಬಿಜೆಪಿಗೆ ಬರುತ್ತೇನೆ ಎಂದು ಅಲವಟ್ಟುಕೊಳುತ್ತಿದ್ದಾರೆ ಎಂದಿದ್ದರು ಕುಮಾರಸ್ವಾಮಿ ಅವರು.
Operation: 50-60 ಶಾಸಕರ ಜತೆ ಬಂದುಬಿಡ್ತೀನಿ, ರಕ್ಷಿಸಿ ಎಂದು ಕೇಂದ್ರ ಬಿಜೆಪಿ ನಾಯಕರ ಜತೆ ಪ್ರಭಾವೀ ಸಚಿವರಿಂದ ಚೌಕಾಸಿ
ಹಾಗಾದರೆ ಕುಮಾರಸ್ವಾಮಿ ಅವರು ಹೇಳಿದ ಆ ಪ್ರಭಾವೀ ಸಚಿವರು ಸಚಿವರು ಯಾರು? ಎಂದು ಅನೇಕರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.
ಕೆಲ ಮಾಧ್ಯಮಗಳು, ಆ ಪ್ರಭಾವೀ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಆಗಿರಬಹುದು ಎಂದು ವಿಶ್ಲೇಷಣೆ ಮಾಡುತ್ತಿವೆ.
ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಕುಮಾರಸ್ವಾಮಿ ಅವರ ಹೇಳಿಕೆ ವಿದ್ಯುತ್ ಕಂಪನ ಉಂಟು ಮಾಡಿದೆ. ಬಿಜೆಪಿ ನಾಯಕರು, ಕುಮಾರಸ್ವಾಮಿ ಅವರು ಹೇಳಿದ್ದು ಸರಿ ಇರುತ್ತದೆ. ಎರಡು ಬಾರಿ ಈ ರಾಜ್ಯಕ್ಕೆ ಸಿಎಂ ಆಗಿದ್ದವರು ಅವರು. ಹೀಗಾಗಿ ಅವರಿಗೆ ಸರಿಯಾದ ಮಾಹಿತಿ ಇದ್ದೇ ಇರುತ್ತದೆ ಎಂದು ಅವರು ಮುಗುಮ್ಮಾಗಿ ಹೇಳುತ್ತಿದ್ದಾರೆ.
ಭಾನುವಾರ ಮಾಜಿ ಮುಖ್ಯಮಂತ್ರಿಗಳು ಹಾಸನದಲ್ಲಿ ಪ್ರಭಾವೀ ಸಚಿವರ ಚೌಕಾಸಿ ಬಗ್ಗೆ ಮೊದಲ ಬಾರಿಗೆ ಹೇಕಿದ್ದರು. ಮಧ್ಯಾಹ್ನದ ಹೊತ್ತಿಗೆ ಕೆ.ಆರ್.ಪೇಟೆಗೆ ಬಂದ ಅವರು, ಕಾರ್ಯಕ್ರಮ ಒಂದರಲ್ಲಿ ಅದೇ ಮಾತನ್ನು ಪುನರುಚ್ಛಾರ ಮಾಡಿದ್ದರು.
ಭಾನುವಾರದಿಂದಲೇ ಈ ಹೇಳಿಕೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದಾದ ಮೇಲೆ ಕುಮಾರಸ್ವಾಮಿ ಅವರು ಮತ್ತೆ ಮಾಧ್ಯಮಗಳ ಜತೆ ಮಾತನಾಡಿಲ್ಲ. ಆದರೆ, ಸರಕಾರ ಬೀಳುತ್ತದೆ ಎನ್ನುವ ಅವರ ಹೇಳಿಕೆ ರಾಜ್ಯ, ರಾಷ್ಟ್ರ ಮಟ್ಟದ ಮಾಧ್ಯಮಗಳಲ್ಲಿ ವಿಜೃಂಭಿಸುತ್ತಿದೆ.
ಬಿಜೆಪಿ, ಜೆಡಿಎಸ್ ಭ್ರಮಾಲೋಕದಲ್ಲಿದ್ದಾರೆ
ಈ ನಡುವೆ ಸಿಎಂ ಸಿದ್ದರಾಮಯ್ಯ ಸೇರಿ ಹಿರಿಯ ಸಚಿವರೆಲ್ಲರೂ ಕುಮಾರಸ್ವಾಮಿ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ನೀರಿನಿಂದ ತೆಗೆದ ಮೀನಿನಂತೆ ವಿಲಿ ವಿಲಿ ಎಂದು ಒದ್ದಾಡುತ್ತಿದ್ದು, ಭ್ರಮಾಲೋಕದಲ್ಲಿದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಪ್ರತಿಪಕ್ಷ ನಾಯಕ ಆರ್. ಅಶೋಕ ಮಾತನಾಡಿ; ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆಗಿದ್ದವರು. ಅವರಿಗೂ ಮಾಹಿತಿ ಇರುತ್ತದೆ ಎಂದು ಹೇಳಿದ್ದಾರೆ.
ಮಾಹಿತಿ ಕೇಳಿದ ಹೈಕಮಾಂಡ್
ಕುಮಾರಸ್ವಾಮಿ ಅವರ ಸರಕಾರದ ಪತನದ ಕುರಿತ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಂದ ಮಾಹಿತಿ ಕೇಳಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಪೂರ್ಣ ಬಹುಮತ ಇದ್ದರೂ ಪದೇಪದೆ ಸರಕಾರ ಬೀಳುತ್ತದೆ ಎನ್ನುವ ಮಾತು ಕೇಳಿಬರುತ್ತಿದೆ. ಇದರ ಹಿಂದೆ ಯಾರಿದ್ದಾರೆ? ಆಡಳಿತ ಪಕ್ಷದ ಶಾಸಕರು ಬಿಜೆಪಿ ಜತೆ ಸಂಪರ್ಕದಲ್ಲಿ ಇದ್ದಾರೆಯೇ ಎನ್ನುವುದನ್ನು ಪರಿಶೀಲಿಸಿ ಎಂದು ಕೇಂದ್ರ ನಾಯಕರು ಸೂಚಿಸಿದ್ದಾರೆ ಎನ್ನಲಾಗಿದೆ.
Comments 1