ಅಸಲಿ-ನಕಲಿ ಒಂದೇ; ಜಾಲತಾಣದಲ್ಲಿ ಲೀಕ್ ಆಗಿದ್ದ ಪಟ್ಟಿಗೂ ಒಕ್ಕೂಟದ ಅಧ್ಯಕ್ಷರು ಓದಿದ ಪಟ್ಟಿಗೂ 75% ಸಾಮ್ಯತೆ
ನೋಟೀಸ್ ಬೋರ್ಡ್ʼನಲ್ಲೂ ಅಂಟಿಸಲು ನಕಾರ; ಮಾಧ್ಯಮಗಳಿಗೆ ಅಂತಿಮ ಆಯ್ಕೆ ಪಟ್ಟಿ ನೀಡದೇ ಪಲಾಯನ ಮಾಡಿದ ಒಕ್ಕೂಟದ ಅಧ್ಯಕ್ಷ, ಎಂಡಿ
ಕೋಲಾರ: ಇಡೀ ದೇಶದ ಗಮನ ಸೆಳೆದಿದ್ದ PSI ಹಗರಣವನ್ನು ನಾಚಿಸುವ ರೀತಿಯಲ್ಲಿ ನಡೆದಿರುವ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ನೇಮಕಾತಿ ಹಗರಣಕ್ಕೆ ಅಂದುಕೊಂಡ ಹಾಗೆಯೇ ಹೊಸ ಟ್ವಿಸ್ಟ್ ಸಿಕ್ಕಿದೆ.
ಕೋಚಿಮುಲ್ ಆಡಳಿತ ಮಂಡಳಿಯ ನಡೆ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು; ನೇಮಕಾತಿಯಲ್ಲಿ ಕೋಟಿ ಕೋಟಿ ಡೀಲ್ ನಡೆದಿರುವುದು ಮೇಲ್ನೋಟಕ್ಕೆ ಸಾಭೀತಾಗಿದೆ. ಈ ಹಿಂದೆ ಜಾಲತಾಣಗಳಲ್ಲಿ ವೈರಲ್ ಪಟ್ಟಿ ಇಂದು ರಿಲೀಸ್ ಆದ ಪಟ್ಟಿಗೂ 75% ಸಾಮ್ಯತೆ ಇರುವುದು ನಾನಾ ಅನುಮಾನಗಳಿಗೆ ಕಾರಣವಾಗಿದೆ.
ಅರ್ಹ ಅಭ್ಯರ್ಥಿಗಳು ತಮಗೆ ನೇಮಕಾತಿಯಲ್ಲಿ ವಂಚನೆ ಆಗಿದೆ ಎಂದು ಮಾಡುತ್ತಿರುವ ಆರೋಪದಲ್ಲಿ ಹುರುಳಿದ್ದು, ಈ ನೇಮಕಾತಿಯಲ್ಲಿ ವ್ಯವಸ್ಥಿತವಾಗಿ ಆಡಳಿತ ಮಂಡಳಿಯೇ ಅಕ್ರಮ ಎಸಗಿರುವುದು ಎದ್ದು ಕಾಣುತ್ತಿದೆ.
ಕೋಲಾರದಲ್ಲಿರುವ ಕೋಚಿಮುಲ್ ಆಡಳಿತ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡರು; ಆಡಳಿತ ಮಂಡಳಿ ಕರಾಮತ್ತು ಹಾಗೂ ಶಿಫಾರಸುಗಳಿಂದ ಆಯ್ಕೆ ಆಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ನೀಡುವಂತೆ ಮಾಧ್ಯಮದವರು ಪಟ್ಟು ಹಿಡಿದರೂ, ಪಟ್ಟಿ ಕೊಡಲು ನಿರಾಕರಿಸಿದರು. ಹೀಗಾಗಿ ಈ ಅನುಮಾನಗಳಿಗೆ ಮತ್ತಷ್ಟು ಪುಷ್ಠಿ ಸಿಕ್ಕಿದಂತಾಗಿದೆ.
ಮಾಧ್ಯಮಗೋಷ್ಠಿಯಲ್ಲಿ ಜಾಲತಾಣದಲ್ಲಿ ಹರಿದಾಡಿದ ಪಟ್ಟಿಯ ಬಗ್ಗೆ ಆಡಳಿತ ಮಂಡಳಿ ಇನ್ನಿಲ್ಲದ ಆಕ್ರೋಶ ವ್ಯಕ್ತಪಡಿಸಿತಾದರೂ, ಆಯ್ಕೆ ಆಗಿರುವ ಹೊಸ ಅಭ್ಯರ್ಥಿಗಳ ಪಟ್ಟಿ ನೀಡಿ ಎಂದರೆ, ಅವರು ಸುತರಾಂ ಒಪ್ಪಲಿಲ್ಲ.
ಯಾವುದೇ ಕಾರಣಕ್ಕೂ ಪಟ್ಟಿಯನ್ನು ಯಾರಿಗೂ ಕೊಡುವುದಿಲ್ಲ ಎಂದು ನೇಮಕಾತಿಯಾದವರ ಹೆಸರು ಓದಿ ಹೇಳಿದ ಕೋಚಿಮುಲ್ ಅಧ್ಯಕ್ಷ ನಂಜೇಗೌಡರು, ಅದೇ ಪಟ್ಟಿಯನ್ನು ನೊಟೀಸ್ ಬೋರ್ಡ್‌ನಲ್ಲಿ ಅಂಟಿಸಿಲ್ಲ ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ನೀಡದೇ ನುಣಚಿಕೊಂಡರು.
ಒಂದು ಹಂತದಲ್ಲಿ ಮಾಧ್ಯಮಗಳ ಮೇಲೆಯೇ ಹರಿಹಾಯ್ದ ಆಡಳಿತ ಮಂಡಳಿ ಸದಸ್ಯರು; “ನಿಮ್ಮಿಂದಲೇ ಕೋಚಿಮುಲ್ ಪ್ರತಿಷ್ಠೆಗೆ ಧಕ್ಕೆ ಉಂಟಾಗಿದೆ. ನೇಮಕಾತಿ ಪಾರದರ್ಶಕವಾಗಿದೆ” ಎಂದು ಸಮರ್ಥನೆ ಮಾಡಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡಿದರು. ನಾಲ್ಕು ದಿನಗಳ ನಂತರ ಒಕ್ಕೂಟದ ಅಧ್ಯಕ್ಷರು ಹಾಗೂ ನಿರ್ದೇಶರುಗಳ ಈ ನಡೆಯು ಹತ್ತು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಾತ್ರವಲ್ಲದೆ; ಇಲ್ಲಿ PSI ಹಗರಣವನ್ನು ಮೀರಿಸುವಂಥ ದೊಡ್ಡ ಹಗರಣವೇ ನಡೆದಿದೆ ಎನ್ನುವ ಗುಮಾನಿ ಮತ್ತಷ್ಟು ಗಾಢವಾಗಿದೆ.
ಅಕ್ರಮದ ಹಿನ್ನೆಲೆ-ಮುನ್ನೆಲೆ
ಕೋಲಾರ ಹಾಲು ಒಕ್ಕೂಟದಲ್ಲಿ ಖಾಲಿ ಇದ್ದ ಸುಮಾರು 75 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿತ್ತು. ಈ ನಡುವೆ ನೇಮಕಾತಿ ಪ್ರಕ್ರಿಯೆ ಅಂತಿಮವಾಗುವ ಮೊದಲೇ ಅಂತಿಮ ಪಟ್ಟಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯಕ್ಷವಾಗಿತ್ತು. ಈ ಪಟ್ಟಿಯಲ್ಲಿ ಅಭ್ಯರ್ಥಿಗಳು ಕೆಲಸ ಪಡೆಯಲು ಶಿಫಾರಸ್ಸು ಪತ್ರ ಅತಿ ಮುಖ್ಯ ಎನ್ನುವುದು ಕಂಡು ಬಂದಿತ್ತು. ಕಾರಣ ಅಭ್ಯರ್ಥಿಗಳ ಹೆಸರ ಮುಂದೆ ಶಿಫಾರಸ್ಸು ಮಾಡಿದವರ ಹೆಸರನ್ನು ಬರೆಯಲಾಗಿತ್ತು, ಈ ಪಟ್ಟಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ; ನೇಮಕಾತಿಯಲ್ಲಿ ದೊಡ್ಡ ಹಗರಣವೇ ನಡೆದಿರುವುದನ್ನು ಇದೆಲ್ಲಾ ಬೊಟ್ಟು ಮಾಡಿ ತೋರಿಸಿತ್ತು.
ಈ ಎಲ್ಲಾ ವಿವಾದಗಳ ನಡುವೆ ಡಿಸೆಂಬರ್ 19ರಂದು ಒಕ್ಕೂಟದ ಅಧ್ಯಕ್ಷ ನಂಜೇಗೌಡ ಮತ್ತು ನಿರ್ದೇಕರುಗಳು ಪತ್ರಿಕಾಗೋಷ್ಠಿ ಕರೆದು ಇದಕ್ಕೆ ಸ್ಪಷ್ಟನೆ ನೀಡಿದ್ದರು. “ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ನಕಲಿ ಪಟ್ಟಿ, ಅಸಲಿ ಪಟ್ಟಿ ನೋಡಿದರೆ ನೀವೇ ಚಕಿತರಾಗುತ್ತೀರಿ. ಪಟ್ಟಿಯಲ್ಲಿರುವ ಶೇ.50ಕ್ಕಿಂತ ಹೆಚ್ಚಿನ ಜನರಿಗೆ ಕೆಲಸ ಸಿಕ್ಕರೆ ಇದರಲ್ಲಿ ಹಗರಣ ನಡೆದಿದೆ ಅನ್ನುವುದನ್ನು ಒಪ್ಪಿಕೊಳ್ಳುತ್ತೇವೆ” ಎಂದಿದ್ದರು.
ಅರ್ಹ ಅಭ್ಯರ್ಥಿಗಳ ಆಕ್ರೋಶದ ನಡುವೆಯೇ ಡಿಸೆಂಬರ್ 20ರಂದು ತರಾತುರಿಯಲ್ಲಿ ನೇಮಕಾತಿ ಪಟ್ಟಿಯನ್ನು ಬಿಡುಗಡೆ ಮಾಡಿ ‘ಬೇಕಾದ’ ಅಭ್ಯರ್ಥಿಗಳಿಗೆ ಆದೇಶ ಪತ್ರ ನೀಡಿ, ಬೆಂಗಳೂರಿನ ಕೆಎಂಎಫ್ ಕೇಂದ್ರ ಕಚೇರಿಗೆ ತರಬೇತಿಗೂ ಕಳಿಸಲಾಗಿದೆ.
ಮತ್ತೆ ಇಂದ ಮಾಧ್ಯಮಗೋಷ್ಠಿ ನಡೆಸಿದ ಅಧ್ಯಕ್ಷ ಮತ್ತು ಆಡಳಿತ ಮಂಡಳಿ ಸದಸ್ಯರು; ಅಂತಿಮ ನೇಮಕಾತಿ ಪಟ್ಟಿಯನ್ನು ಬಿಡುಗಡೆ ಮಾಡಲಿಲ್ಲ. ಬದಲಿಗೆ ಪಟ್ಟಿಯನ್ನು ಮಾಧ್ಯಮಗಳಿಗೆ ನೀಡದೇ ಕೇವಲ ಪಟ್ಟಿಯಲ್ಲಿದ್ದ ಹೆಸರುಗಳನ್ನು ಓದಿ ಹೇಳಿದರು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಪಟ್ಟಿಯಲ್ಲಿದ್ದ ಬಹುತೇಕ ಹೆಸರುಗಳು, ನಂಜೇಗೌಡರು ಓದಿದ ಪಟ್ಟಿಯಲ್ಲಿ ಇದ್ದವು. ಅಲ್ಲಿಗೆ ನೇಮಕಾತಿ ಅಕ್ರಮ ನಡೆದಿರುವುದು ಸಾಭೀತಾದಂತಾಗಿದೆ.
ರಚ್ಚೆ ಹಿಡಿದ ಕೋಚಿಮುಲ್ ಅಧ್ಯಕ್ಷ
ನೇಮಕಾತಿ ಪ್ರಕ್ರಿಯೆ ಪಾರದರ್ಶಕ ಹಾಗೂ ನ್ಯಾಯಯುತವಾಗಿದೆ ಅನ್ನುವುದಾದರೆ ನೇಮಕಾತಿ ಅಂತಿಮ ಪಟ್ಟಿಯನ್ನು ಮಾಧ್ಯಮಗಳಿಗೆ ಕೊಡಿ. ಇಲ್ಲವೇ, ಒಕ್ಕೂಟದ ನೋಟಿಸ್ ಬೋರ್ಡ್‌ನಲ್ಲಾದರೂ ಅಂಟಿಸಿ ಎಂದು ಪತ್ರಕರ್ತರು ಕೇಳಿದರು.
ಈ ಮಾತಿಗೆ ಇನ್ನಿಲ್ಲದಷ್ಟು ಆಕ್ರೋಶಗೊಂಡ ನಂಜೇಗೌಡರು; ನೇಮಕಾತಿ ಪಟ್ಟಿಯನ್ನು ತಮ್ಮಲ್ಲಿಯೇ ಮರೆಮಾಚಿಕೊಂಡರಲ್ಲದೆ, ಅದನ್ನು ಯಾರಿಗೂ ನೀಡದೆ ಪ್ರಶ್ನೆ ಮಾಡಿದ ಪತ್ರಕರ್ತರ ಮೇಲೆಯೇ ಕೆಂಡಾಮಂಡಲಗೊಂಡರು. ಅಲ್ಲದೆ, ಒಕ್ಕೂಟದ ನಿರ್ದೇಶಕರು ಕೂಡ ಪತ್ರಕರ್ತರನ್ನು ಗದರುವ ಪ್ರಯತ್ನ ಮಾಡಿದರು.
“ಯಾವುದೇ ಕಾರಣಕ್ಕೂ ಅಂತಿಮ ಪಟ್ಟಿಯನ್ನು ಯಾರಿಗೂ ಕೊಡುವುದಿಲ್ಲ. ನೇಮಕಾತಿ ಪಾರದರ್ಶಕವಾಗಿದೆ ಎನ್ನುವ ನಿಲುವು ಆಡಳಿತ ಮಂಡಳಿಯದ್ದು” ಎಂದ ನಂಜೇಗೌಡರು, ನೇಮಕವಾದ 75 ಮಂದಿ ಹೆಸರುಗಳನ್ನು ಓದಿದರು. ಇಂದು ಘೋಷಿಸಿದ ಅಧಿಕೃತ ಪಟ್ಟಿಗೂ ನಾಲ್ಕು ದಿನದ ಹಿಂದೆ ಬಯಲಾಗಿದ್ದ ನೇಮಕಾತಿ ಪಟ್ಟಿಗೆ ಶೇಕಡ 70ರಷ್ಡು ಸಾಮ್ಯತೆ ಇರುವುದು ಸ್ಪಷ್ಟವಾಗಿದೆ.
ಇನ್ನು ಈ ಬಗ್ಗೆ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಕೂಡ ಒಬ್ಬ ಅಧಿಕಾರಿಯಾಗಿ ನೇಮಕಾತಿ ಪಟ್ಟಿಯನ್ನು ಬಿಡುಗಡೆ ಮಾಡಿ ಎಂದರೂ ಅವರೂ ಪಟ್ಟಿ ನೀಡಲಿಲ್ಲ. ಹೋಗಲಿ ನೇಮಕಾತಿ ಪಟ್ಟಿ ಬಿಡುಗಡೆ ಮಾಡಬಾರದು ಎಂದು ನಿಯಮ ಇದೆಯೇ? ಎಂದು ಕೇಳಿದರೆ, ಒಕ್ಕೂಟದ ವ್ಯವಸ್ಥಾಪಕ ವ್ಯವಸ್ಥಾಪಕ ನಿರ್ದೇಶಕರು ಉತ್ತರ ನೀಡದೆ ಜಾರಿಕೊಂಡರು.
ಇನ್ನೊಂದೆಡೆ, ನೇಮಕಾತಿಯಿಂದ ವಂಚಿತರಾದ ಅರ್ಹ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ. ಆಡಳಿತ ಮಂಡಳಿ ವರಸೆ ನೋಡಿದರೆ ದಾಖಲೆಗಳನ್ನು ಹೊರಬಿಟ್ಟರೆ ಉದ್ಯೋಗ ವಂಚಿತ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಿ ನೇಮಕಾತಿ ಪ್ರಕ್ರಿಯೆಗೆ ತಡೆಯಾಜ್ಞೆ ತರುವ ಆತಂಕವೂ ಮಂಡಳಿಗಿದೆ.
ಒಟ್ಟಾರೆಯಾಗಿ, ಕೋಚಿಮುಲ್ ನೇಮಕಾತಿಯಲ್ಲಿ ಕೋಟ್ಯಂತರ ರೂಪಾಯಿ ಕೈ ಬದಲಾಗಿದೆ ಎನ್ನುವ ಅನುಮಾನ ಬಲವಾಗಿದ್ದು, ಆಡಳಿತ ಮಂಡಳಿಯ ಪ್ರತೀ ಹೆಜ್ಜೆಯೂ ಇದಕ್ಕೆ ಪುಷ್ಠಿ ನೀಡುವಂತಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆದಾಗ ಮಾತ್ರವೇ ನೇಮಕಾತಿ ಹಗರಣದಲ್ಲಿ ನಡೆದಿರುವ ಗೋಲ್ ಮಾಲ್ ಹೊರಬೀಳಲಿದೆ.