ನೇಮಕಾತಿ ಸಂದರ್ಭದಲ್ಲಿ ವರ್ಷಕ್ಕೆ ಒಂದು ಕೃಪಾಂಕ
ಬೆಂಗಳೂರು: ಸರಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 7,800 ಉಪನ್ಯಾಸಕ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ತಿಳಿಸಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಅತಿಥಿ ಉಪನ್ಯಾಸಕರ ಮಾಸಿಕ ವೇತನದಲ್ಲಿ 5,000 ರೂ. ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ 36 ದಿನಗಳಿಂದ ಮುಷ್ಕರ ನಿರತ ಅತಿಥಿ ಉಪನ್ಯಾಸಕ ಸಂಘಟನೆಗಳ ಜತೆ ಇಂದಿಲ್ಲಿ ಚರ್ಚೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಚಿವರು, ಅತಿಥಿ ಉಪನ್ಯಾಸಕರನ್ನು ಸದ್ಯಕ್ಕೆ ಕಾಯಂ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಗರಿಷ್ಠ 15 ಕೃಪಾಂಕ
ಮುಂದಿನ ನೇಮಕಾತಿ ಸಂದರ್ಭದಲ್ಲಿ ಐದರಿಂದ 10 ವರ್ಷಗಳ ಕಾಲ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವವರಿಗೆ ವರ್ಷಕ್ಕೆ ಒಂದು ಕೃಪಾಂಕದಂತೆ ಗರಿಷ್ಠ ಐದು ಕೃಪಾಂಕಗಳನ್ನು ನೀಡಲು ತೀರ್ಮಾನಿಸಲಾಗಿದೆ.
ಇದರಿಂದ 300 ಅಂಕಗಳ ಪರೀಕ್ಷೆಯಲ್ಲಿ 15 ಕೃಪಾಂಕಗಳು ಇವರಿಗೆ ಲಭ್ಯವಾಗಲಿವೆ, ಹಾಲಿ 1,800 ಉಪನ್ಯಾಸಕರ ನೇಮಕಾತಿ ಚಾಲನೆಯಲಿದ್ದು ಮತ್ತೆ 6,000 ಉಪನ್ಯಾಸಕರ ನೇಮಕಾತಿಗೆ ಹಣಕಾಸು ಇಲಾಖೆಯ ಅನುಮತಿ ಕೋರಲಾಗಿದೆ ಎಂದರು ಸಚಿವರು.
ಅತಿಥಿ ಉಪನ್ಯಾಸಕರಿಗೆ ಮಾಸಿಕ 5,000 ರೂ. ವೇತನ ಹೆಚ್ಚಳದೊಂದಿಗೆ ಒಂದು ದಿನ ವೇತನ ಸಹಿತ ರಜೆ ನೀಡಲಾಗುವುದು ಎಂದು ಸಚಿವರು ಹೇಳಿದರು.
ಗೌರವದಿಂದ ನಡೆಸಿಕೊಳ್ಳಿ
ಅತಿಥಿ ಉಪನ್ಯಾಸಕರನ್ನು ಗೌರವದಿಂದ ನಡೆಸಿಕೊಳ್ಳುವಂತೆ ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ಆದೇಶಿಸಲಾಗಿದೆ. ಜತೆಗೆ ವರ್ಕ್ ಲೋಡ್ ಬಗ್ಗೆಯೂ ಮಾಹಿತಿ ನೀಡಿದ್ದೇವೆ. ಅರವತ್ತು ವರ್ಷ ಪೂರೈಸಿದ ಅತಿಥಿ ಉಪನ್ಯಾಸಕರು ಕೆಲಸ ಬಿಡುವಾಗ 5 ಲಕ್ಷ ರೂ. ನೀಡಲು ನಿರ್ಧರಿಸಿದ್ದು, ಇವರಿಗೆ ಆರೋಗ್ಯ ವಿಮೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಹೆಚ್ಚು ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಗೌರವ ಧನ ಹೆಚ್ಚಳ ಮಾಡಲಾಗುವುದು, ಈ ಎಲ್ಲಾ ನಿರ್ಧಾರಗಳು 2,800 ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಉಪನ್ಯಾಸಕರಿಗೂ ಅನ್ವಯವಾಗುತ್ತದೆ.
ಬೊಕ್ಕಸಕ್ಕೆ ಹೊರೆಸರ್ಕಾರದ ಈ ನಿರ್ಧಾರದಿಂದ ಬೊಕ್ಕಸಕ್ಕೆ ವಾರ್ಷಿಕ 55 ಕೋಟಿ ರೂ. ಹೊರೆ ಬೀಳಲಿದ್ದು, ಇಡುಗಂಟಿಗೆ 72 ಕೋಟಿ ರೂ. ವಿಮೆಗೆ 5 ಕೋಟಿ ರೂ. ಹೊರೆ ಬೀಳಲಿದೆ ಎಂದರು ಸಚಿವರು.
ಮುಷ್ಕರ ನಿರತ ಉಪನ್ಯಾಸಕರು ತಮ್ಮ ಹೋರಾಟದಿಂದ ಹಿಂದೆ ಸರಿದು ಜನವರಿ 1ರಿಂದ ಸೇವೆಗೆ ಮರಳುವಂತೆ ಮನವಿ ಮಾಡಿಕೊಂಡರು ಅವರು.
Comments 2