ಸೋಲಿಗೆ ಕಾರಣಗಳನ್ನು ಕೊಟ್ಟ ಬುಲೆಟ್ ಶ್ರೀನಿವಾಸ್
by GS Bharath Gudibande
ಗುಡಿಬಂಡೆ: ನಾನು 20 ವರ್ಷಗಳಿಂದ ಸಮಾಜಸೇವೆ ಮಾಡುತ್ತಾ ಬಂದಿದ್ದೇನೆ. ನಾನು ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ. ಆದರೂ ಕೆಲವೊಂದು ಪಟ್ಟಭದ್ರರಿಂದ ಉಪ ಚುನಾವಣೆಯಲ್ಲಿ ಸೋತಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಬುಲೆಟ್ ಶ್ರೀನಿವಾಸ್ ಅವರು ಹೇಳಿದ್ದಾರೆ.
ಸಿಕೆನ್ಯೂಸ್ ನೌ ಜತೆ ಮಾತನಾಡಿದ ಅವರು; “ನಾನು ರಾಜಕೀಯವಾಗಿ ಎಲ್ಲಿಯೂ ಗುರುತಿಸಿಕೊಂಡಿಲ್ಲ. ಕಳೆದ ಎರಡು ವರ್ಷಗಳ ಹಿಂದೆಯೇ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೆಲವೇ ಮತಗಳ ಅಂತರದಿಂದ ಸೋತಿದ್ದೆ. ಆಗಲೂ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ನೀಡುವುದಾಗಿ ಹೇಳಿದ್ದರು. ನಾನು ಹೋಗಿರಲಿಲ್ಲ” ಎಂದು ಹೇಳಿದರು. ಅವರೊಂದಿಗೆ ನಡೆಸಿರುವ ಪ್ರಶ್ನೋತ್ತರ ಇಲ್ಲಿದೆ.
ನಿಮಗೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಹೇಗೆ ನೀಡಿದರು?
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾಗಿದ್ದ ವಕೀಲ ಅನಿಲ್ ಅವರ ಅಕಾಲಿಕ ಮರಣದಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿ ಘೋಷಣೆ ಆಗಿತ್ತು. ಹಾಗಾಗಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಿದರು. ಹಾಗಾಗಿ ಆ ಪಕ್ಷದಿಂದ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದೆ.
ಕಾಂಗ್ರೆಸ್ ಟಿಕೆಟ್ ಪಡೆಯಲು ಹಣ ನೀಡಿದ್ದೀರಾ ಎಂದು ಜನರು ಮಾತಾಡುತ್ತಿದ್ದಾರೆ?
ಇದು ಶುದ್ಧ ಸುಳ್ಳು. ನನ್ನ ವಿರೋಧಿಗಳು ನಾನು ಗೆಲ್ಲುತ್ತೇನೆ ಎಂದು ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ಮಾಡಿರುವ ಅಭಿವೃದ್ಧಿ ಕೆಲಸಗಳು ಹಾಗೂ ಜನರ ಮೇಲಿರುವ ಪ್ರೀತಿ, ವಿಶ್ವಾಸ ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಹೋಯಿತು. ನಾನು ಕಾಂಗ್ರೆಸ್ ಟಿಕೆಟ್’ಗಾಗಿ ‘ನಯಾ ಪೈಸೆ’ ಹಣ ಯಾರಿಗೂ ಕೊಟ್ಟಿಲ್ಲ. 100% ಸತ್ಯಕ್ಕೆ ದೂರವಾದ ಮಾತು ಜನರು ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಬೇಕು.
ನೀವು ಶಾಸಕರನ್ನು ಸಾಕಷ್ಟು ಬಾರಿ ವಿರೋಧ ಮಾಡಿದ್ದಿರಿ. ಆದರೆ ಈಗ ಶಾಸಕರಿಗೆ ಬೆಂಬಲ ನೀಡುತ್ತಿದ್ದೀರಾ, ಯಾಕೆ?
ನನ್ನ ಹಾಗೂ ಶಾಸಕರ ನಡುವೆ ಯಾವುದೇ ವಿರೋಧ ಇಲ್ಲ. ಶಾಸಕರು ವೈಯಕ್ತಿಕವಾಗಿ ನನ್ನ ಬಗ್ಗೆ ಗೌರವ ಹೊಂದಿದ್ದಾರೆ. ನನ್ನ ಕೆಲಸದ ಬಗ್ಗೆ ಅನೇಕ ಬಾರಿ ಶ್ಲಾಘನೆ ಮಾಡಿದ್ದಾರೆ. ನಾನು ಕೆಲ ಅಭಿವೃದ್ಧಿ ಕೆಲಸಗಳಿಗಾಗಿ ಪ್ರಶ್ನೆ ಮಾಡಿದ್ದೇ. ಆದರೆ ನನ್ನ ಬಗ್ಗೆ ಕೆಲ ಮುಖಂಡರು ಇಲ್ಲಸಲ್ಲದ ಆರೋಪ ಮಾಡಿದ್ದರು. ಆದರೂ ಶಾಸಕರಿಗೆ ಯಾರು ಸರಿ ಮತ್ತು ಯಾರು ತಪ್ಪು ಎಂಬುದು ಗೊತ್ತಿದೆ. ಶಾಸಕರು ಯಾವ ಮುಖಂಡರ ವೈಟೇಜ್ ಏನು ಎಂಬುದನ್ನು ತುಂಬಾ ಚೆನ್ನಾಗಿ ಬಲ್ಲರು.
ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಹೋದೆ ಎನ್ನುತ್ತಿದ್ದೀರಿ?
ʼನಮ್ಮ ಊರು, ನಮ್ಮ ವಾರ್ಡ್ʼ ಎಂದು ನಾನು ಕಾಂಗ್ರೆಸ್ ಪಕ್ಷದಲ್ಲಿ ಬಿ ಫಾರಂ ಕೇಳಿದಾಗ ಕೆಲವೊಂದು ಹಿರಿಯ ಮುಖಂಡರು ವಾರ್ಡ್ ಗೆ ಬಂದು ಸಮೀಕ್ಷೆ ಮಾಡಿದ ನಂತರ ಶಾಸಕರಿಗೆ ವರದಿ ನೀಡಿದರು. ಅದರಲ್ಲಿ ಶೇ.80ರಷ್ಟು ಜನರು ನನ್ನ ಪರವಾಗಿ ಒಲವು ತೋರಿಸಿದ್ದಾರೆ. ಹಾಗಾಗಿ ಶಾಸಕರು ನನ್ನ ಮೇಲೆ ನಂಬಿಕೆ ಇಟ್ಟು ಟಿಕೆಟ್ ಕೊಟ್ಟರು. ಆದರೆ ರಾತ್ರೋರಾತ್ರಿ ಕೆಲ ಕಾಂಗ್ರೆಸ್’ನ ಪಟ್ಟಣ ಪಂಚಾಯಿತಿ ಸದಸ್ಯರು, ಮಾಜಿ ಸದಸ್ಯರು ನನ್ನ ಬೆನ್ನಿಗೆ ಇರಿದು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ ನನ್ನನ್ನು ಸೋಲಿಸಿದರು.
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 130 ಮತಗಳು ಬಂದಿದ್ದವು. ಉಪ ಚುನಾವಣೆಯಲ್ಲಿ ನಾನು 251 ಮತಗಳನ್ನು ಪಡೆದಿದ್ದೇನೆ. ಕೇವಲ 17 ಮತಗಳ ಅಂತರದಿಂದ ಸೋತಿದ್ದೇನೆ.
ಈ ಸೋಲನ್ನು ಹೇಗೆ ಜೀರ್ಣಿಸಿಕೊಳ್ಳುತ್ತೀರಿ?
ನಾನು ಸೋತಿರಬಹುದು, ಸತ್ತಿಲ್ಲ. ನನಗೆ ಯಾವುದೇ ಪದವಿ ಇಲ್ಲದಿದ್ದರೂ ಹಲವು ವರ್ಷಗಳಿಂದ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಅವರ ಸೇವೆ ಮಾಡುತ್ತಿದ್ದೇನೆ. ಬುಲೆಟ್ ಶ್ರೀನಿವಾಸ್ ಗೆದ್ದು ಪಟ್ಟಣ ಪಂಚಾಯಿತಿಗೆ ಹೋದರೆ, ಅಲ್ಲಿ ಭ್ರಷ್ಟಾಚಾರಕ್ಕೆ ಕಷ್ಟ ಎಂದು ಪಟ್ಟಣ ಪಂಚಾಯಿತಿಯ ಕೆಲವು ಸದಸ್ಯರು ಹಾಗೂ ಅಧ್ಯಕ್ಷರು ರಾತ್ರೋರಾತ್ರಿ ನನ್ನ ಬೆನ್ನಿಗೆ ಚೂರಿ ಹಾಕಿ ಸೋಲಿಸಿದರು.
ನಿಮ್ಮ ಮುಂದಿನ ಹೋರಾಟ ಯಾವ ರೀತಿ ಇರುತ್ತದೆ?
ನನ್ನ ಹೋರಾಟ ನಿಲ್ಲುವುದಿಲ್ಲ. ರಸ್ತೆ ಅಗಲೀಕರಣದಲ್ಲಿ ಮನೆ ಕಳೆದುಕೊಂಡ ಕುಟುಬಂಗಳ ಮನೆಗಳಿಗಾಗಿ ಹೋರಾಟ, ಕೋವಿಡ್ ಸೋಂಕಿಗೆ ಮೃತರಾದವರ ಕುಟುಂಬಕ್ಕೆ ಪರಿಹಾರ ಕೊಡಿಸಲು ಹೋರಾಟ, ಕನ್ನಡ ಪರ ಹೋರಾಟ, ಆಸ್ಟ್ರೇಲಿಯಾದಿಂದ ಗುಡಿಬಂಡೆಗೆ ಆಕ್ಸಿಜನ್ ಕಾನ್ಸನ್’ಟ್ರೇಟರ್ ಗಳನ್ನು ತರಿಸಿದ್ದುಸೇರಿ ಅನೇಕ ಕೆಲಸಗಳನ್ನು ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ.
ಜನರು ಅಧಿಕಾರ ಕೊಡದಿದ್ದರೂ ನನ್ನ ಕೆಲಸ ನಾನು ಮಾಡುತ್ತೇನೆ. ನಾನು ಸೋತಿರುವುದು ಶಾಸಕರಿಗೂ ತುಂಬಾ ನೋವಾಗಿದೆ. ನನ್ನ ಸೋಲಿನ ಹಿಂದ ಕಾರಣವನ್ನು ಶಾಸಕರ ಗಮನಕ್ಕೆ ತಂದಿದ್ದೇನೆ. ಅಲ್ಲದೇ; ಅದರ ಬಗ್ಗೆ ಅವರು ಮಾಹಿತಿ ಪಡೆದಿದ್ದಾರೆ. ನಮ್ಮ ವಾರ್ಡಿನ ಜನರಿಗೆ ಈಗ ಅರ್ಥವಾಗುತ್ತಿದೆ. ನಾನು ಸೋತರೂ ಜನರ ಪರವಾಗಿ ನನ್ನ ಕೊನೆ ಉಸಿರಿರುವವರೆಗೂ ಹೋರಾಟ ಮಾಡುತ್ತೇನೆ. ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು ಉತ್ತಮ ಸೇವೆ ಮಾಡುತ್ತೇನೆ.
ಬುಲೆಟ್ ಶ್ರೀನಿವಾಸ್, ಕಾಂಗ್ರೆಸ್ ಮುಖಂಡ