ರಾಜ್ಯ ಹೈಕೋರ್ಟ್ ಮಹತ್ವದ ಆದೇಶ
ಬೆಂಗಳೂರು: ಕೃಷ್ಣರಾಜ ಸಾಗರ ಸುತ್ತಮುತ್ತ 20 ಕಿ.ಮೀ ವ್ಯಾಪ್ತಿಯಲ್ಲಿ ಕಲ್ಲು ಕ್ವಾರಿ ಸೇರಿ ಎಲ್ಲಾ ರೀತಿಯ ಗಣಿಗಾರಿಕೆ ನಿಷೇಧಿಸಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಕೆಆರ್‌ಎಸ್ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಬಾರದು, ಕೆಆರ್‌ಎಸ್ ಜಲಾಶಯಕ್ಕೆ ಹಾನಿ ಮಾಡುವುದನ್ನು ತಡೆಗಟ್ಟಬೇಕಿದೆ ಎಂದು ನ್ಯಾಯಾಲಯ ಹೇಳಿದೆ.
ಕೆಆರ್‌ಎಸ್ ಸುರಕ್ಷತೆಯೇ ನಮಗೆ ಮುಖ್ಯ ಎಂದು ಹೈಕೋರ್ಟ್ ಮುಖ್ಯ ನಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾ.ಕೃಷ್ಣ ಎಸ್. ದೀಕ್ಷಿತ್ ಅವರ ವಿಭಾಗಿಯ ಪೀಠ ಹೇಳಿದೆ.
ಕೃಷ್ಣರಾಜಸಾಗರ ಅಣೆಕಟ್ಟು ಈಗಾಗಲೇ ಸಂಕಷ್ಟದಲ್ಲಿದೆ, ಅಣೆಕಟ್ಟೆಯ ಬಳಿ ಗಣಿಗಾರಿಕೆ ನಡೆಸಿದರೆ ಗಂಭೀರ ಪರಿಣಾಮ ಎದುರಾಗುವ ಸಾಧ್ಯತೆ ಇದೆ, ಅಣೆಕಟ್ಟೆಗೆ ಐತಿಹಾಸಿಕ ಮೌಲ್ಯವಿದೆ, ಮೈಸೂರು ಮಹಾರಾಜರು ಮತ್ತು ಸರ್.ಎಂ.ವಿಶ್ವೇಶ್ವರಯ್ಯ ಅವರ ಕೊಡುಗೆ ಬಹಳಷ್ಟಿದೆ
ಹೈಕೋರ್ಟ್
ಭೂಪರಿವರ್ತನೆಗೂ ಮುನ್ನ ಪರೀಕ್ಷಾರ್ಥ ಸ್ಫೋಟ ನಡೆಸಿ ಹಾನಿ ಸಾಧ್ಯತೆ ಪರಿಗಣಿಸಿ ಅನುಮತಿಯ ಷರತ್ತು ಹಾಕಿದ್ದ ಜಿಲ್ಲಾಧಿಕಾರಿ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿ ಕೋರ್ಟ್ ಈ ಆದೇಶ ಪ್ರಕಟಿಸಿದೆ.
ಸರ್ಕಾರದ ನಿರ್ದೇಶನದಂತೆ ವೈಜ್ಞಾನಿಕ ಸಮೀಕ್ಷೆಗೆ ಆದೇಶಿಸಲಾಗಿದ್ದು, ಅಲ್ಲಿಯವರೆಗೆ ಗಣಿಗಾರಿಕೆಗೆ ಅನುಮತಿ ನೀಡುವಂತಿಲ್ಲ.
ಗಣಿಗಾರಿಕೆಗೆ ಆದೇಶ ನೀಡಿದರೆ ಕೆಆರ್‌ಎಸ್ ಜಲಾಶಯಕ್ಕೆ ಭಾರೀ ಹಾನಿಯಾಗಲಿದೆ. ಡ್ಯಾಂ ನಿರ್ಮಾಣಕ್ಕೆ ಜನರು ರಕ್ತ, ಬೆವರು ಹರಿಸಿದ್ದಾರೆ, ಸರ್.ಎಂ. ವಿಶ್ವೇಶ್ವರಯ್ಯ ಕುರಿತ ತೀ.ತಾ.ಶರ್ಮ ಅವರ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವಿದೆ, ಕೆಆರ್‌ಎಸ್‌ಗೆ ಧಕ್ಕೆಯಾಗುವ ಯಾವುದೇ ಚಟುವಟಿಕೆಗಳಿಗೆ ಅವಕಾಶವಿಲ್ಲ.
ಮೂರು ರಾಜ್ಯಗಳು ಕಾವೇರಿ ನೀರಿಗಾಗಿ ಹೋರಾಡುತ್ತಿವೆ, ಆದರೆ ಕೆಆರ್‌ಎಸ್ ಅಣೆಕಟ್ಟೆ ಸಂರಕ್ಷಣೆಗೆ ಪ್ರಯತ್ನಿಸುತ್ತಿಲ್ಲ, ಅಣೆಕಟ್ಟೆಗೆ ತೊಂದರೆಯಾದರೆ ಆಗುವ ಅನಾಹುತಗಳ ಅರಿವಿದೆಯೇ, ಅಣೆಕಟ್ಟೆಗೆ ತೊಂದರೆಯಾದರೆ ಗಂಭೀರ ಆಪತ್ತು ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಕೆಆರ್‌ಎಸ್ ಅಣೆಕಟ್ಟೆ ಬಳಿ ಗಣಿಗಾರಿಕೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.