ರಾಜಸ್ಥಾನದ ಶಿಲ್ಪಿ ಸತ್ಯನಾರಾಯಣ ಪಾಂಡೆ ಕೆತ್ತಿರುವ ಮೂರ್ತಿಯನ್ನೂ ವೀಕ್ಷಿಸಿ
ಬೆಂಗಳೂರು: ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠೆ ಮಾಡಲು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮೂವರು ಪ್ರಖ್ಯಾತ ಶಿಲ್ಪಿಗಳಿಂದ ಮೂರು ಬಾಲರಾಮ ಮೂರ್ತಿಗಳನ್ನು ಕೆತ್ತನೆ ಮಾಡಲು ಹೇಳಿತ್ತು.
ಅದರಂತೆ, ಮೂವರು ಶಿಲ್ಪಿಗಳು ತಮಗೆ ವಹಿಸಿದ ದೈವಕಾರ್ಯವನ್ನು ಶ್ರದ್ಧಾಭಕ್ತಿಯಿಂದ ಮಾಡಿ, ಬಾಲರಾಮ ಮೂರ್ತಿಗಳನ್ನು ಕೆತ್ತನೆ ಮಾಡಿ ಟ್ರಸ್ಟ್ʼಗೆ ಹಸ್ತಾಂತರ ಮಾಡಿದ್ದರು.
ಮೈಸೂರಿನ ಅರುಣ್ ಯೋಗಿರಾಜ್, ಕರ್ನಾಟಕದ ಇನ್ನೊಬ್ಬ ಖ್ಯಾತ ಶಿಲ್ಪಿ ಗಣೇಶ್ ಭಟ್ ಹಾಗೂ ರಾಜಸ್ಥಾನದ ಪ್ರಖ್ಯಾತ ಶಿಲ್ಪಿ ಸತ್ಯನಾರಾಯಣ ಪಾಂಡೆ ಆ ಮೂವರು ಶಿಲ್ಪಿಗಳು. ಈ ಮೂವರು ಶ್ರೇಷ್ಠ ಶಿಲ್ಪಿಗಳು ಕೆತ್ತನೆ ಮಾಡಿದ ಬಾಲರಾಮನ ಮೂರ್ತಿಗಳಲ್ಲಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿದ ಮೂರ್ತಿಯನ್ನು ಟ್ರಸ್ಟ್ ಸದಸ್ಯರು, ತಜ್ಞರು, ಶಿಲ್ಪಕಲಾ ನಿಪುಣರು, ಪುರಾಣ-ಧರ್ಮಗ್ರಂಥ ಶಾಸ್ತ್ರಜ್ಞರು ಆಯ್ಕೆ ಮಾಡಿದ್ದರು. ಆ ಮೂರ್ತಿಯ ಪ್ರಾಣ ಪ್ರತಿಷ್ಠೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆರೆವೇರಿಸಿದ್ದರು.
ಪ್ರಾಣ ಪ್ರತಿಷ್ಠೆ ನೆರವೇರಿದ ನಂತರ ರಾಜಸ್ಥಾನದ ಶಿಲ್ಪಿ ಸತ್ಯನಾರಾಯಣ ಪಾಂಡೆ ಅವರು ಕೆತ್ತನೆ ಮಾಡಿದ ಅಮೃತ ಶಿಲೆಯಲ್ಲಿ ಅರಳಿದ ಬಾಲಮೂರ್ತಿಯ ಚಿತ್ರ ಬಹಿರಂಗವಾಗಿತ್ತು.
ಇದೀಗ ಗಣೇಶ್ ಭಟ್ ಅವರು ಕೆತ್ತನೆ ಮಾಡಿದ್ದ ಮತ್ತೊಂದು ಬಾಲಮೂರ್ತಿಯ ಚಿತ್ರವೂ ಹೊರಗೆ ಬಂದಿದೆ. ಭಕ್ತರು ಅಯೋಧ್ಯೆಯ ರಾಮಮಂದಿರದಲ್ಲಿರವ ಬಾಲಮೂರ್ತಿಯನ್ನು ಭಕ್ತಿಯಿಂದ ಕಣ್ತುಂಬಿಕೊಳ್ಳುತ್ತಿರುವುದರ ಜತೆಯಲ್ಲಿಯೇ ಉಳಿದ ಶಿಲ್ಪಿಗಳಿಬ್ಬರ ಮೂರ್ತಿಗಳನ್ನೂ ಕಂಡು ಸಂತಸ ಪಡುತ್ತಿದ್ದಾರೆ.
ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾದ ಬಾಲರಾಮ ದೇವರು ಇವರೇ..
ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ನಂತರ ರಾಜಸ್ಥಾನದ ಶಿಲ್ಪಿ ಸತ್ಯನಾರಾಯಣ ಪಾಂಡೆ ಕೆತ್ತಿರುವ ಮೂರ್ತಿಯ ಫೋಟೋವನ್ನು ನಿನ್ನೆ ಬಹಿರಂಗಪಡಿಸಲಾಗಿತ್ತು. ಇದೀಗ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಇಡಗುಂಜಿಯ ಶಿಲ್ಪಿ ಗಣೇಶ್ ಭಟ್ ಅವರು ಕೆತ್ತಿರುವ ರಾಮ ಲಲ್ಲಾ ಮೂರನೇ ಮೂರ್ತಿಯ ಫೋಟೋವನ್ನು ಇದೀಗ ಬಹಿರಂಗಪಡಿಸಲಾಗಿದೆ.
ಗಣೇಶ್ ಭಟ್ ಕೆತ್ತಿರುವ ಬಾಲರಾಮ ಮೂರ್ತಿ
ಸತ್ಯನಾರಾಯಣ ಪಾಂಡೆ ಕೆತ್ತಿರುವ ಬಾಲರಾಮ ಮೂರ್ತಿ
ಮೂರು ಮೂರ್ತಿಗಳಲ್ಲಿ ಯಾವ ಮೂರ್ತಿಯನ್ನು ಆಯ್ಕೆ ಮಾಡಬೇಕು ಎನ್ನುವ ಪ್ರಶ್ನೆ ಬಂದಾಗ, 14 ತೀರ್ಪುಗಾರರಲ್ಲಿ 11 ತೀರ್ಪುಗಾರರು ಅರುಣ್ ಯೋಗಿರಾಜ್ ಅವರ ಬಾಲರಾಮ ಮೂರ್ತಿಯನ್ನು ಅಯ್ಕೆ ಮಾಡಿದ್ದಾರೆ. ಅರುಣ್ ಅವರು ಮತ್ತು ಗಣೇಶ್ ಅವರು ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ಬಳಿ ಸಿಕಿರುವ ಕೃಷ್ಣಶಿಲೆಯನ್ನೇ ಬಳಸಿದ್ದಾರೆ. ರಾಜಸ್ಥಾನದ ಶಿಲ್ಪಿ ಸತ್ಯನಾರಾಯಣ ಪಾಂಡೆ ಅವರು ಅಮೃತಶಿಲೆಯನ್ನು ಬಳಕೆ ಮಾಡಿದ್ದಾರೆ.
ಮಾಜಿ ಸಚಿವ ಡಾ.ಕೆ.ಸುಧಾಕರ್ ಅಭಿನಂದನೆ
ಕರ್ನಾಟಕದ ಇಬ್ಬರು ಶಿಲ್ಪಿಗಳಾದ ಅರುಣ್ ಯೋಗಿರಾಜ್ ಮತ್ತು ಗಣೇಶ್ ಭಟ್ ಅವರನ್ನು ಮಾಜಿ ಸಚಿವ ಡಾ.ಕೆ.ಸುಧಾಕರ್ ಅಭಿನಂದಿಸಿದ್ದಾರೆ.
ನಮ್ಮ ಕರ್ನಾಟಕದ ಎಚ್.ಡಿ.ಕೋಟೆಯಲ್ಲಿ ಸಿಕ್ಕ ಶಿಲೆಗೆ ಅಯೋಧ್ಯೆಯ ಬಾಲರಾಮನ ಸುಂದರ ರೂಪ ಕೊಟ್ಟ ತಮ್ಮ ಅನನ್ಯ ಕಲೆ, ಪ್ರತಿಭೆ, ಪರಿಶ್ರಮ, ಶ್ರದ್ಧೆಯನ್ನ ಇಡೀ ದೇಶವೇ ಮೆಚ್ಚಿಕೊಂಡಿದೆ ಅರುಣ್ ಅವರೆ. ಅಂದು ಕರ್ನಾಟಕದಲ್ಲಿ ಹುಟ್ಟಿದ ಹನುಮ ರಾಮನ ಸೇವೆ ಮಾಡಿ ಭಗವಂತನ ಪರಮ ಭಕ್ತ ಎನಿಸಿಕೊಂಡ. ಇಂದು ನೀವು 7 ತಿಂಗಳುಗಳ ಕಾಲ ಸಂಪೂರ್ಣವಾಗಿ ರಾಮನ ಮಹತ್ವದ ಸೇವೆಗೆ ಅರ್ಪಿಸಿಕೊಂಡು ಕರ್ನಾಟಕಕ್ಕೆ ಮತ್ತೊಮ್ಮೆ ಹೆಮ್ಮೆ ತಂದಿದ್ದೀರಿ. ತಮಗೂ, ತಮ್ಮ ಕುಟುಂಬಕ್ಕೂ ಆ ಪ್ರಭು ಶ್ರೀರಾಮ ಒಳ್ಳೆಯದು ಮಾಡಲಿ ಎಂದು ಸುಧಾಕರ್ ಅವರು ಅರುಣ್ ಯೋಗಿರಾಜ್ ಅವರಿಗೆ ಹಾರೈಸಿದ್ದಾರೆ.
ಅಯೋಧ್ಯೆಯ ನೂತನ ರಾಮ ಮಂದಿರಕ್ಕೆ ಬಾಲರಾಮನ ಮೂರ್ತಿ ಕೆತ್ತಲು ನಿಯೋಜಿತರಾಗಿದ್ದ ಮೂವರು ಶಿಲ್ಪಿಗಳಲ್ಲಿ ಮೈಸೂರಿನ ಅರುಣ್ ಯೋಗಿರಾಜ್ ಅವರ ಜೊತೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಇಡಗುಂಜಿ ಮೂಲದ ಶ್ರೀ ಗಣೇಶ್ ಭಟ್ ಅವರು ಮತ್ತೊಬ್ಬ ಕನ್ನಡಿಗರಾಗಿದ್ದರು ಎಂದು ಕರ್ನಾಟಕಕ್ಕೆ ಹೆಮ್ಮೆಯ ವಿಷಯ. ತಮ್ಮ ಶಿಲ್ಪಕಲಾ ಕೌಶಲ್ಯದಿಂದ ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿರುವ ಶ್ರೀ ಗಣೇಶ್ ಭಟ್ಟರು ಬಿಡದಿಯ ಕರಕುಶಲ ತರಬೇತಿ ಕೇಂದ್ರದಲ್ಲಿ ಶಿಲ್ಪಕಲಾ ಶಿಕ್ಷಕರಾಗಿ 600ಕ್ಕೂ ಹೆಚ್ಚು ಯುವ ಕಲಾವಿದರನ್ನು ತಯಾರು ಮಾಡಿದ್ದಾರೆ ಎಂದು ಸುಧಾಕರ್ ಅವರು ಗಣೇಶ್ ಭಟ್ ಕುರಿತಾಗಿ ಹೇಳಿದ್ದಾರೆ.
photos courtesy: Shri Ram Janmbhoomi Teerth Kshetra & Shri Arun Yogiraj, Shri Ganesh Bhat, Shri Satyanarayan Pandey