ಬಿಜೆಪಿ 5ನೇ ಪಟ್ಟಿ: ಉತ್ತರ ಕನ್ನಡದಲ್ಲಿ ಕಾಗೇರಿ ಅವರಿಗೆ ಮಣೆ; ಅನಂತ ಕುಮಾರ್ ಹೆಗಡೆ ಅವರಿಗೆ ಟಿಕೆಟ್ ಮಿಸ್
ನವದೆಹಲಿ: ಕರ್ನಾಟಕದಲ್ಲಿ ಜೆಡಿಎಸ್ ಜತೆ ಸೀಟು ಹಂಚಿಕೆ ಮಾಡಿಕೊಂಡ ನಂತರ ತನ್ನ ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಹೊರಬಿಟ್ಟಿರುವ ಬಿಜೆಪಿ ಕೆಲವರಿಗೆ ಶಾಕ್ ನೀಡಿದೆ.
ಟಿಕೆಟ್ ಪಡೆಯುವುದಕ್ಕೇ ಜಿದ್ದಾಜಿದ್ದಿನ ಕಣವಾಗಿದ್ದ ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಟಿಕೆಟ್ ದೊರೆತಿದ್ದು. ತಮ್ಮ ಪುತ್ರ ಅನೂಪ್ ವಿಶ್ವನಾಥ್ ಅವರಿಗೆ ಟಿಕೆಟ್ ಪಡೆಯಲು ಹರಸಾಹಸ ನಡೆಸಿದ್ದ ಯಲಹಂಕದ ಶಾಸಕ ಎಸ್.ಆರ್.ವಿಶ್ವನಾಥ್ ಅವರಿಗೆ ನಿರಾಶೆಯಾಗಿದೆ.
ಟಿಕೆಟ್ ವಿಷಯದಲ್ಲಿ ಬಿಜೆಪಿ ವರಿಷ್ಠರಿಗೆ ಚಿಕ್ಕಬಳ್ಳಾಪುರ ದೊಡ್ಡ ತಲೆ ನೋವಾಗಿತ್ತು. ಈ ಜಿದ್ದಿಗೆ ಇತಿಶ್ರೀ ಹಾಡಲು ಒಂದು ಹಂತದಲ್ಲಿ ಈ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೇ ಬಿಟ್ಟುಕೊಟ್ಟು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ವರಿಷ್ಠರು ಮುಂದಾಗಿದ್ದರು. ಆದರೆ, ಕುಮಾರಸ್ವಾಮಿ ಅವರು ಈ ಕ್ಷೇತ್ರದ ಬಗ್ಗೆ ಅಷ್ಟೇನೂ ಒಲವು ತೋರಲಿಲ್ಲ.
ಇದಾದ ಮೇಲೆ ಮಂಡ್ಯದಲ್ಲಿ ಟಿಕೆಟ್ ವಂಚಿತರಾದ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಒಂದು ಹಂತದಲ್ಲಿ ಚಿಕ್ಕಬಳ್ಳಾಪುರದಲ್ಲಿಯೇ ಅಭ್ಯರ್ಥಿಯನ್ನಾಗಿ ಮಾಡುವ ಪ್ರಯತ್ನ ಬಿಜೆಪಿಯಲ್ಲಿ ನಡೆದಿತ್ತು. ಅದೂ ಕೈಗೂಡದ ಹಿನ್ನೆಲೆಯಲ್ಲಿ ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಅವರ ಹೆಸರು ತೇಲಿ ಬಂದಿತ್ತು. ಅಂತಿಮವಾಗಿ ಸ್ಥಳೀಯರೇ ಆಗಿರುವ ಡಾ.ಸುಧಾಕರ್ ಅವರಿಗೆ ಟಿಕೆಟ್ ಸಿಕ್ಕಿದೆ.
ಈ ಬಗ್ಗೆ ನಿನ್ನೆಯೇ ಅಭ್ಯರ್ಥಿ ಯಾರೆಂದು ಸುಳಿವು ನೀಡಿದ್ದ ಸಿಕೆನ್ಯೂಸ್ ನೌ ಸ್ಥಳೀಯರಿಗೆ ಟಿಕೆಟ್ ಸಿಗುತ್ತದೆ ಎಂದು ವರದಿ ಮಾಡಿತ್ತು.
ಉತ್ತರ ಕನ್ನಡ ಜಿಲ್ಲೆಯ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಅವರಿಗೆ ಟಿಕೆಟ್ ಮಿಸ್ ಆಗಿದ್ದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಹಾಗೂ ರಾಷ್ಟ್ರೀಯವಾದಿ ಪತ್ರಕರ್ತರೊಬ್ಬರ ಹೆಸರು ಕೇಳಿ ಬಂದಿತ್ತು. ಅವರಿಬ್ಬರಿಗೂ ಟಿಕೆಟ್ ಮಿಸ್ ಆಗಿದೆ.
ಉಳಿದಂತೆ ಬೆಳಗಾವಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಕೊಡಲಾಗಿದೆ. ರಾಯಚೂರಿನಲ್ಲಿ ರಾಜಾ ಅಮರೇಶ್ವರ ನಾಯಕ್ ಅವರಿಗೆ ಟಿಕೆಟ್ ಸಿಕ್ಕಿದೆ. ಈ ಕ್ಷೇತ್ರದ ಟಿಕೆಟ್ ಗೆ ಭಾರೀ ಪ್ರಯತ್ನ ನಡೆಸಿದ್ದ ಬಿ.ವಿ.ನಾಯಕ್ ಅವರಿಗೆ ನಿರಾಶೆಯಾಗಿದೆ.