ಹೊಸ ಬಾಂಬ್ ಸ್ಫೋಟಿಸಿದ ವಕೀಲ ಬಿಜೆಪಿ ನಾಯಕ ದೇವರಾಜೇಗೌಡ
ಬೆಂಗಳೂರು: ಹಾಸನ ಪೆನ್ ಡ್ರೈವ್ ಪ್ರಕರಣ ಇದೀಗ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊರಳಿಗೆ ಸುತ್ತಿಕೊಳ್ಳುತ್ತಿರುವುದು ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿದ್ದು, ಡಿಕೆಶಿ ವಿರೋಧಿಗಳಿಗೆ ಇದೇ ಅಸ್ತ್ರವಾಗುವ ಎಲ್ಲಾ ಸಾಧ್ಯತೆಗಳಿವೆ.
ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ಅಶ್ಲೀಲ ವಿಡಿಯೋಗಳನ್ನು ತುಂಬಲಾಗಿದ್ದ ಪೆನ್ ಡ್ರೈವ್ ಗಳನ್ನು ಹಂಚಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೇ ತನಗೆ ಹೇಳಿದ್ದರು. ಹಾಗಂತ ಹೇಳಲು ನನಗೆ ಡಿ.ಕೆ.ಶಿವಕುಮಾರ್ ಅದಕ್ಕಾಗಿ ನನಗೆ 100 ಕೋಟಿ ರೂ. ಆಮಿಷ ಒಡ್ಡಿದ್ದರು ಎಂದು ಸದ್ಯಕ್ಕೆ ಎಸ್ ಐಟಿ ವಶದಲ್ಲಿರುವ ವಕೀಲ, ಬಿಜೆಪಿ ನಾಯಕ ದೇವರಾಜೇಗೌಡ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಹಾಸನದಲ್ಲಿ ನ್ಯಾಯಾಲಯಕ್ಕೆ ಹಾಜರಾದ ನಂತರ ಕೋರ್ಟ್ ಹೊರಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು ಡಿಕೆಶಿ ವಿರುದ್ಧ ಆರೋಪಗಳ ಸುರಿಮಳೆಗರಿದರು.
ಕಾರು ಚಾಲಕರಾಗಿದ್ದ ಕಾರ್ತಿಕ್ ಅವರಿಂದ ಪೆನ್ ಡ್ರೈವ್ ತರಿಸಿಕೊಂಡ ಶಿವಕುಮಾರ್ ಅವರು ರೆಡಿ ಮಾಡಿದರು. ಪೆನ್ ಡ್ರೈವ್ ವಿಚಾರವನ್ನು ಹ್ಯಾಂಡಲ್ ಮಾಡಲು ನಾಲ್ವರು ಸಚಿವರ ತಂಡ ರಚನೆ ಮಾಡಿದ್ದರು. ಈ ತಂಡದಲ್ಲಿ ಸಚಿವರಾದ ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ ಹಾಗೂ ಮತ್ತೊಬ್ಬ ಸಚಿವರಿದ್ದಾರೆ ಎಂದು ದೇವರಾಜೇಗೌಡ ಗಂಭೀರ ಆರೋಪ ಮಾಡಿದರು.
ಇದೊಂದು ದೊಡ್ಡ ಹಗರಣವಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಬಿಜೆಪಿಗೆ ಕೆಟ್ಟ ಹೆಸರು ತರುವುದು ಡಿಕೆಶಿ ದುರುದ್ದೇಶವಾಗಿದೆ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನಾಯಕತ್ವ ಹಾಳು ಮಾಡಲು ಅವರು ನನಗೆ ಈ ಆಫರ್ ನೀಡಿದ್ದರು ಎಂದು ನೇರವಾಗಿ ಆರೋಪಿಸಿದ್ದಾರೆ.
ಮಂಡ್ಯದ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರ ಮೂಲಕ ನನಗೆ ಹಣದ ಆಫರ್ ನೀಡಿದ್ದರು ಡಿಕೆಶಿ. ಚನ್ನರಾಯಪಟ್ಟಣದ ಗೋಪಾಲಸ್ವಾಮಿ ಅವರನ್ನು ಸಂಧಾನಕ್ಕೆ ಕಳುಹಿಸಿದ್ದರು ಎಂದು ಅವರು ಹೇಳಿದ್ದಾರೆ.
ಅಲ್ಲದೆ, ಬೆಂಗಳೂರಿನ ಬೌರಿಂಗ್ ಕ್ಲಬ್ ನ ಕೊಠಡಿ ಸಂಖ್ಯೆ 110ಕ್ಕೆ ಮುಂಗಡವಾಗಿ ಐದು ಕೋಟಿ ರೂ. ಕಳುಹಿಸಿದ್ದರು ಎಂದು ದೇವರಾಜೇಗೌಡ ಆರೋಪಿಸಿದ್ದಾರೆ.
ನನ್ನ ವಿರುದ್ಧ ದಾಖಲಿಸಿದ ಜಾತಿನಿಂದನೆ ಆರೋಪದ ಪ್ರಕರಣದಲ್ಲಿ ಅಗತ್ಯ ದಾಖಲೆಗಳು ಸಿಗಲಿಲ್ಲ. ರೇಪ್ ಆರೋಪದ ಪ್ರಕರಣದಲ್ಲೂ ದಾಖಲೆ ಸಿಕ್ಕಿಲ್ಲ. ನನ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೆ, ಪೆನ್ ಡ್ರೈವ್ ಸೀಜ್ ಮಾಡಿದ್ದಾರೆ.
ಆ ಪೆನ್ ಡ್ರೈವ್ ಚಾಲಕ ಕಾರ್ತಿಕ್ ಮನೆಯ ಸಿಸಿ ಟಿವಿಯ ಪುಟೇಜ್ ಗೆ ಸಂಬಂಧಿಸಿದ್ದಾಗಿದೆ. ಅದರಲ್ಲಿ ಕಾರ್ತಿಕ್ ಅವರ ಹೆಂಡತಿಯ ಕಿಡ್ನಾಪ್ ಗೆ ಸಂಬಂಧಿಸಿದ ಪೆನ್ ಡ್ರೈವ್ ಅದಾಗಿದ್ದು, ಅದನ್ನು ಪೊಲೀಸರು ಸೀಜ್ ಮಾಡಿದ್ದಾರೆ ಎಂದು ದೇವರಾಜೇಗೌಡ ತಿಳಿಸಿದ್ದಾರೆ.
ಮಾರ್ಮಿಕವಾಗಿ ಪೋಸ್ಟ್ ಹಾಕಿದ ಜೆಡಿಎಸ್
ದೇವರಾಜೇಗೌಡ ಹೊಸ ಬಾಂಬ್ ಸಿಡಿಸುತ್ತಿದ್ದಂತೆ ಜಾತ್ಯತೀತ ಜನತಾದಳ ಪಕ್ಷವು ತನ್ನ ಎಕ್ಸ್ ಖಾತೆಯಲ್ಲಿ ಮಾರ್ಮಿಕವಾಗಿ ಪೋಸ್ಟ್ ಮಾಡಿದೆ. ಕೊನೆಗೂ ಸಂಚು ಬಯಲಾಗಿದೆ ಎಂದಿರುವ ಪಕ್ಷವು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಪೆನ್ ಡ್ರೈವ್ ಗ್ಯಾಂಗ್ ಎಂದು ಮೂದಲಿಸಿದ್ದು, ಸಿಡಿಶಿವಕುಮಾರ್ ಎಂದು ಲೇವಡಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೆಟ್ಟ ಹೆಸರು ತರುವ ಸಂಚು ಸಾಕಾರಗೊಳಿಸಲು ಸಿಡಿ ಶಿವಕುಮಾರ್ ಸಾಹೇಬರು, ವಕೀಲ ದೇವರಾಜೇಗೌಡರಿಗೆ ಆಫರ್ ಮಾಡಿರುವುದು ಬರೋಬರಿ ನೂರು ಕೋಟಿ ಎಂದು ಹೇಳಿದೆ.
ಸಿಡಿಶಿವಕುಮಾರ್, ಪೆನ್ ಡ್ರೈವ್ ಗ್ಯಾಂಗ್ ಹಾಗೂ ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಂ (ಎಸ್ಐಟಿ) ಎಂದು ಜೆಡಿಎಸ್ ಆಪಾದಿಸಿದೆ.