ಅರೆಸ್ಟ್ ಆದ 24 ಗಂಟೆಗಳಲ್ಲೇ ಜೈಲಿನಿಂದ ರಿಲೀಸ್; ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ ಪುಷ್ಪಾ – 2
ಹೈದರಾಬಾದ್: ಎಲ್ಲ ರೀತಿಯ ತನಿಖೆಗೆ ಸಹಕರಿಸುತ್ತೇನೆ ಎಂದು ಟಾಲಿವುಡ್ ನಟ ಅಲ್ಲು ಅರ್ಜುನ್ ಹೇಳಿದ್ದಾರೆ.
ಹೈದರಾಬಾದಿನ ಥಿಯೇಟರ್ ಒಂದರಲ್ಲಿ ಕಾಲ್ತುಳಿತದಲ್ಲಿ ಮಹಿಳೆ ಸಾವು ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿ 24 ಒಳಗಾಗಿಯೇ ಜೈಲಿನಿಂದ ಹೊರಬಂದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ನನ್ನ ಎಲ್ಲಾ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಮತ್ತೊಮ್ಮೆ ಮೃತರ ಕುಟುಂಬಕ್ಕೆ ನನ್ನ ಸಂತಾಪವನ್ನು ವ್ಯಕ್ತಪಡಿಸಲು ಇಚ್ಚಿಸುತ್ತೇನೆ. ಇದು ದುರದೃಷ್ಟಕರ ಘಟನೆ, ನಡೆದಿದ್ದಕ್ಕಾಗಿ ನಾವು ವಿಷಾದಿಸುತ್ತೇವೆ ಎಂದು ತಿಳಿಸಿದ್ದಾರೆ.
ನಾನು ಕಾನೂನು ಪಾಲಿಸುವ ನಾಗರಿಕನಾಗಿದ್ದು, ತನಿಖೆಗೆ ಎಲ್ಲ ರೀತಿಯಲ್ಲೂ ಸಹಕರಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಡಿಸೆಂಬರ್ 4ರಂದು ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಚಂಚಲಗೂಡ ಜೈಲಿನಲ್ಲಿ ಒಂದು ರಾತ್ರಿ ಕಳೆದರು.
ಶುಕ್ರವಾರ ತಡರಾತ್ರಿಯವರೆಗೂ ಜಾಮೀನು ಆದೇಶದ ಪ್ರತಿಯನ್ನು ಅಧಿಕಾರಿಗಳು ಸ್ವೀಕರಿಸದ ಕಾರಣ ತೆಲಂಗಾಣ ಹೈಕೋರ್ಟ್ ಜಾಮೀನು ಮಂಜೂರು ಮಾಡಿದರೂ ಅವರನ್ನು ಬಿಡುಗಡೆ ಮಾಡಲಾಗಿರಲಿಲ್ಲ.
ಅಲ್ಲು ಅರ್ಜುನ್ ಬಂಧನವಾದ ಕೆಲವೇ ಗಂಟೆಗಳಲ್ಲಿ ಸಂತ್ರಸ್ತೆಯ ಪತಿ ಪ್ರಕರಣವನ್ನು ಹಿಂಪಡೆಯಲು ಸಿದ್ಧ ಎಂದು ಹೇಳಿದ್ದರು. ನಾನು ಪ್ರಕರಣವನ್ನು ಹಿಂಪಡೆಯಲು ಸಿದ್ಧನಿದ್ದೇನೆ. ನನಗೆ ಬಂಧನದ ಬಗ್ಗೆ ತಿಳಿದಿರಲಿಲ್ಲ. ಅಲ್ಲು ಅರ್ಜುನ್ ಅವರಿಗೂ ನನ್ನ ಹೆಂಡತಿ ಸಾವನ್ನಪ್ಪಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದರು.
ಬ್ಲಾಕ್‌ಬಸ್ಟರ್ ‘ಪುಷ್ಪಾ 2: ದಿ ರೂಲ್’ ನ ಪ್ರಥಮ ಪ್ರದರ್ಶನ ವೀಕ್ಷಿಸಲು ಬಂದ ನೆಚ್ಚಿನ ನಟನನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಥಿಯೇಟರ್ ಮುಂದೆ ನೆರೆದಿದ್ದರು. ಈ ವೇಳೆ ನೂಕುನುಗ್ಗಲಿನಿಂದಾದ ಕಾಲ್ತುಳಿತಕ್ಕೆ 35 ವರ್ಷದ ಮಹಿಳೆ ಸಾವನ್ನಪ್ಪಿದ್ದರು. ಅವರ ಎಂಟು ವರ್ಷದ ಮಗ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆಯ ನಂತರ, ಮಹಿಳೆಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅಲ್ಲು ಅರ್ಜುನ್, ಅವರ ಭದ್ರತಾ ತಂಡ ಮತ್ತು ಥಿಯೇಟರ್ ಆಡಳಿತದ ವಿರುದ್ಧ ಚಿಕ್ಕಡಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.
ದಾಖಲೆ ಗಳಿಕೆ ಮಾಡಿದ ಪುಷ್ಪಾ 2
ಅಲ್ಲು ಅರ್ಜುನ್ ಮತ್ತು ರಷ್ಮಿಕಾ ಮಂದಣ್ಣ ನಟನೆಯ ಪುಷ್ಪಾ 2 ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಈ ವರೆಗೆ ಲಭ್ಯ ಮಾಹಿತಿಯ ಪ್ರಕಾರ ಕೇವಲ ಎಂಟು ದಿನಗಳಲ್ಲಿ ಈ ಚಿತ್ರವು ಸುಮಾರು ₹1,004 ರಿಂದ 1,067 ಕೋಟಿಗಳನ್ನು ಗಳಿಸಿದೆ.

















