15 ಜಿಲ್ಲೆಗಳ 345 ಉಪಕೇಂದ್ರಗಳಲ್ಲಿ ಪರೀಕ್ಷೆ; ಎಲ್ಲೆಡೆ ಹದ್ದಿನ ಕಣ್ಣು, ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಪೊಲೀಸರ ಸರ್ಪಗಾವಲಿನಲ್ಲಿ ನಡೆಯಿತು.
ಗೆಜೆಟೆಡ್ ಪ್ರೊಬೇಷನರ್ಸ್ 319 ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿ ನಡೆಸುತ್ತಿರುವ ಪೂರ್ವಭಾವಿ ಪರೀಕ್ಷೆ ರಾಜ್ಯದ 15 ಜಿಲ್ಲೆಗಳ 345 ಉಪಕೇಂದ್ರಗಳಲ್ಲಿ ನಡೆಯುತ್ತಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಒಟ್ಟು 1.47 ಲಕ್ಷ ಉದ್ಯೋಗ ಆಕಾಂಕ್ಷಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ.
ಬೆಳಗ್ಗೆ 10 ರಿಂದ 12 ಗಂಟೆವರೆಗೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ 4ರವರೆಗೆ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಎರಡು ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಬೇಕಿದೆ.
ಪ್ರಶ್ನೆ ಪತ್ರಿಕೆಗಳನ್ನು ಆಯಾ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಖಜಾನೆಗಳಲ್ಲಿ ಭದ್ರವಾಗಿ ಇರಿಸಿ, ಅಲ್ಲಿಂದ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ತರಲಾಗಿದೆ. ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ ಮೊದಲ ಪ್ರಶ್ನೆ ಪತ್ರಿಕೆಯ ಪರೀಕ್ಷೆ ಮುಕ್ತಾಯಗೊಂಡಿತ್ತು.
ಉಳಿದಂತೆ ಮಧ್ಯಾಹ್ನ 2ರಿಂದ 4 ಗಂಟೆಯವರೆಗೆ ನಡೆಯುವ ಪ್ರಶ್ನೆ ಪತ್ರಿಕೆಗೆ ಅಭ್ಯರ್ಥಿಗಳು ಉತ್ತರ ಬರೆಯಬೇಕಾಗಿದೆ.
ಇವರಿಗೆ ಸಾಕಷ್ಟು ಟೀಕೆ ಟಿಪ್ಪಣಿಗಳನ್ನು ಎದುರಿಸಿದ ನಂತರವೂ ಪರೀಕ್ಷಾರ್ಥಿಗಳಿಗೆ ವಿವಿಧ ನಿರ್ಬಂಧಗಳನ್ನು ವಿಧಿಸಲಾಗಿದೆ. ಪುರುಷ ಅಭ್ಯರ್ಥಿಗಳು ಸೊಂಟಕ್ಕೆ ಧರಿಸುವ ಉಡುದಾರ, ಜನಿವಾರಗಳನ್ನು ಧರಿಸಿ ಬರಬಹುದು. ಮಹಿಳಾ ಅಭ್ಯರ್ಥಿಗಳು ಕಿವಿಯೋಲೆ ಒಂದನ್ನು ಬಿಟ್ಟು ಕೈ ಬಳೆ, ಮಾಂಗಲ್ಯ ಸರ ಉಂಗುರ ಕಾಲ್ಗೆಜ್ಜೆ ಹಣೆಗೆ ಕುಂಕುಮ ಧರಿಸಲು ಅವಕಾಶವಿದೆ.
ಆದರೆ, ಧಾರ್ಮಿಕ ನಂಬಿಕೆಗಳನ್ನು ಸೂಚಿಸುವ ಶಿವದಾರ, ರುದ್ರಾಕ್ಷಿ, ಶಿವಲಿಂಗ, ಉಂಗುರ ಮತ್ತು ತಾಯಿತಗಳನ್ನು ಧರಿಸುವುದಿಲ್ಲ ಎಂದು ಕಟ್ಟು ನೀಟಾಗಿ ಆದೇಶ ಹೊರಡಿಸಲಾಗಿದೆ. ಪರೀಕ್ಷೆ ಕೇಂದ್ರಗಳ ಬಳಿ ಅಭ್ಯರ್ಥಿಗಳು ಇಂತಹ ವಸ್ತುಗಳನ್ನು ಬಿಚ್ಚಿಟ್ಟು ಪರೀಕ್ಷಾ ಕೇಂದ್ರಗಳನ್ನು ಪ್ರವೇಶ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು.
ಪುರುಷರಿಗೆ ಶೂ, ಹೆಚ್ಚು ಜೇಬುಗಳಿರುವ ಜೀನ್ಸ್ ಪ್ಯಾಂಟ್, ಕ್ಯಾಪ್ ಹಾಗೂ ಕಿವಿ, ಮುಖ, ತಲೆ ಮುಚ್ಚುವಂತಹ ಉಡುಪುಗಳನ್ನು ನಿಷೇಧಿಸಲಾಗಿತ್ತು. ಹಾಗೆಯೇ ಪರ್ಸ್, ಬ್ಯಾಗ್, ಮೊಬೈಲ್, ಯಿಯರ್ ಫೋನ್, ಪೆನ್ ಡ್ರೈವ್, ಸ್ಮಾರ್ಟ್ ವಾಚ್, ಎಲೆಕ್ಟ್ರಾನಿಕ್ ಪೆನ್ ಇತ್ಯಾದಿಗಳನ್ನು ಕೂಡ ನಿಷೇಧ ಮಾಡಲಾಗಿತ್ತು.
ಮುಖ್ಯಮಂತ್ರಿ ಸಭೆ ನಡೆಸಿದ್ದರು
ಪರೀಕ್ಷೆ ಪಾರದರ್ಶಕವಾಗಿ ಹಾಗೂ ಯಾವುದೇ ರೀತಿಯ ಅಕ್ರಮಗಳಿಗೆ ಅವಕಾಶ ಆಗದಂತೆ ಕಟ್ಟುನಿಟ್ಟಾಗಿ ನಡೆಸಬೇಕು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದರು. ಈ ಸಂಬಂಧ ಅವರು ಬೆಂಗಳೂರಿನಲ್ಲಿ ಎರಡು ದಿನಗಳ ಹಿಂದೆ ಮಹತ್ವದ ಸಭೆಯನ್ನು ನಡೆಸಿದ್ದರು.
ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಮೂಲಕ ನಿರಂತರ ನಿಗಾ ವಹಿಸಬೇಕು, ಪೊಲೀಸ್ ನೇಮಕಾತಿ ಪರೀಕ್ಷೆ ಮಾದರಿಯಲ್ಲಿ ಸೂಕ್ತ ಭದ್ರತೆ ವ್ಯವಸ್ಥೆ ಕೈಗೊಳ್ಳಬೇಕು, ಪರೀಕ್ಷಾ ಕೇಂದ್ರದ ಆವರಣದಲ್ಲಿ ಯಾವುದೇ ಅನಧಿಕೃತ ವ್ಯಕ್ತಿಯ ಪ್ರವೇಶಕ್ಕೆ ಅವಕಾಶ ಇರಬಾರದು, ಪ್ರವೇಶಕ್ಕೆ ಅನುಮತಿ ಇರುವ ವ್ಯಕ್ತಿಯೂ ಭದ್ರತಾ ತಪಾಸಣೆಗೆ ಒಳಪಡಬೇಕು, ಮಾರ್ಗಸೂಚಿ ಅನ್ವಯ ಅನುಮತಿಸಿದ ವಸ್ತುಗಳನ್ನು ಮಾತ್ರ ತರಬಹುದಾಗಿದೆ ಯಮ್ಮ ನಿಯಮಗಳನ್ನು ಬಿಗಿಯಾಗಿ ಅನುಷ್ಠಾನ ಮಾಡಲಾಗಿದೆ.
ಅಧಿಕಾರಿಗಳೇ ಹೊಣೆಗಾರರು
ಯಾವುದೇ ಕಾರಣಕ್ಕೂ ಅಭ್ಯರ್ಥಿಗಳು ಮೊಬೈಲ್‌ನೊಂದಿಗೆ ಪರೀಕ್ಷಾ ಕೇಂದ್ರ ಪ್ರವೇಶಿಸುವಂತಿಲ್ಲ, ಹಾಗೊಂದು ವೇಳೆ ಪ್ರವೇಶಿಸಿದರೆ, ಹಿರಿಯ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸರ್ಕಾರ ಈಗಾಗಲೇ ಎಚ್ಚರಿಕೆ ನೀಡಿದ್ದರಿಂದ ಅಧಿಕಾರಿಗಳು ಕೂಡ ಈ ನಿಟ್ಟಿನಲ್ಲಿ ಬಿಗಿ ಕ್ರಮಗಳನ್ನು ಕೈಗೊಂಡಿದ್ದು ಕಂಡುಬಂದಿತು.
ಇದೇ ಮೊದಲ ಬಾರಿಗೆ ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಇಬ್ಬರು ಮೇಲ್ವಿಚಾರಕರ ನಿಯೋಜನೆ ಮಾಡಲಾಗಿತ್ತು, ಅವರಲ್ಲಿ ಒಬ್ಬರು ಕಡ್ಡಾಯವಾಗಿ ಸರ್ಕಾರಿ ಕಾಲೇಜು ಸಿಬ್ಬಂದಿ ಆಗಿರಬೇಕು, ಖಾಸಗಿ ಅನುದಾನಿತ ಕಾಲೇಜುಗಳಲ್ಲಿನ ಕೇಂದ್ರದಲ್ಲಿ ಪರೀಕ್ಷಾ ಅವ್ಯವಹಾರಕ್ಕೆ ಅವಕಾಶ ನೀಡುವುದು ಕಂಡು ಬಂದರೆ, ಅಂತಹ ಖಾಸಗಿ ಕಾಲೇಜುಗಳ ಪರವಾನಗಿ ರದ್ದುಪಡಿಸಲಾಗುವುದು, ಪರೀಕ್ಷಾ ಅಕ್ರಮಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮೊದಲೇ ಸರಕಾರ ಎಚ್ಚರಿಕೆ ನೀಡಿತ್ತು.
ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ
ಪರೀಕ್ಷೆ ಕುರಿತು ಸುಳ್ಳು ಸುದ್ದಿ ಹರಡಲು ಅವಕಾಶ ನೀಡಬಾರದು, ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸ್ ಇಲಾಖೆ ನಿಗಾ ವಹಿಸಬೇಕು, ಪರೀಕ್ಷೆ ಕುರಿತು ಯಾವುದೇ ವದಂತಿ ಹಬ್ಬಿದರೆ ಕೂಡಲೇ ಅಧಿಕಾರಿಗಳ ಗಮನಕ್ಕೆ ತರಬೇಕು, ಈ ಕುರಿತು ಸಂಬಂಧಪಟ್ಟ ಅಧಿಕಾರಿ ಸ್ಪಷ್ಟೀಕರಣ ನೀಡುವರು ಎಂದು ಸರ್ಕಾರ ಈ ಹಿಂದೆಯೇ ತಿಳಿಸಿತ್ತು. ಅದರಂತೆಯೇ ಸೈಬರ್ ಪೋಲೀಸರು ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ಇರಿಸಿದ್ದರು.
ಈ ಬಾರಿ ಪರೀಕ್ಷೆ ಹೇಗಿತ್ತು?
ಐದು ಆಯ್ಕೆಗಳ ಒಎಂಆರ್ ಪದ್ಧತಿ: ಉತ್ತರ ಗೊತ್ತಿಲ್ಲದಿದ್ದರೆ 5ನೇ ಆಯ್ಕೆಯನ್ನು ಕಡ್ಡಾಯವಾಗಿ ಗುರುತು ಮಾಡಬೇಕು, ಯಾವುದೇ ಪ್ರಶ್ನೆಗೆ ಉತ್ತರ ಖಾಲಿ ಬಿಡುವಂತಿಲ್ಲ.
ತ್ರಿಪತಿಗಳ ಪರೀಕ್ಷೆ: ಮೂರು ಪ್ರತಿಗಳಲ್ಲಿ ಒಂದು ಅಭ್ಯರ್ಥಿಗೆ, ಒಂದು ಕೆಪಿಎಸ್‌ಸಿ ಮೌಲ್ಯಮಾಪನಕ್ಕೆ ಮತ್ತು ಮೂರನೆ ಪ್ರತಿಯನ್ನು ಜಿಲ್ಲಾಧಿಕಾರಿ ಅಥವಾ ಕೆಪಿಎಸ್‌ಸಿ ಸ್ಟ್ರಾಂಗ್ ರೂಮ್‌ನಲ್ಲಿ ಸುರಕ್ಷಿತವಾಗಿಡುವ ಮೂಲಕ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು.
ಸಿಸಿಟಿವಿ ಮತ್ತು ಜಾಮರ್ ಅಳವಡಿಕೆ: ಎಲ್ಲಾ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಮತ್ತು ಮೊಬೈಲ್ ಜಾಮರ್‌ಗಳನ್ನು ಅಳವಡಿಸಲಾಗುತ್ತಿದ್ದು, ಜಾಮರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳೇ ದೃಢೀಕರಿಸಲು ಸೂಚಿಸಲಾಗಿದೆ.
ಇಬ್ಬರು ಮೇಲ್ವಿಚಾರಕರು: ಪರೀಕ್ಷಾರ್ಥಿಗಳ ಗುರುತಿನ ಚೀಟಿ ಪರಿಶೀಲನೆ, ತಪಾಸಣೆ ಮತ್ತು ಕೊಠಡಿಯ ಹಿಂಭಾಗದಿಂದ ನಿಗಾ ವಹಿಸಲು ಇಬ್ಬರು ಮೇಲ್ವಿಚಾರಕರ ನೇಮಕ ಮಾಡಲಾಗಿತ್ತು.
ಪರೀಕ್ಷಾ ದಿನದಂದೇ ಒಎಂಆರ್ ಶೀಟ್ ಅಪ್ಲೋಡ್: ಪಾರದರ್ಶಕತೆ ಉದ್ದೇಶದಿಂದ ಪರೀಕ್ಷಾ ದಿನದಂದೇ ಎಲ್ಲಾ ಸ್ಕ್ಯಾನ್ ಮಾಡಿದ ಒಎಂಆರ್ ಪ್ರತಿಗಳನ್ನು ಕೆಪಿಎಸ್‌ಸಿ ಜಾಲತಾಣದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅಪ್ಲೋಡ್ ಮಾಡಲಾಗುವುದು, 12 ಜಿಲ್ಲೆಗಳಲ್ಲಿ ಒಎಂಆರ್ ಹಾಳೆ ಸ್ಕ್ಯಾನ್‌ಗೆ ವ್ಯವಸ್ಥೆ ಮಾಡಲಾಗಿದೆ.

















