• About
  • Advertise
  • Careers
  • Contact
Thursday, May 15, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

P K Channakrishna by P K Channakrishna
January 31, 2021
in CKPLUS
Reading Time: 2 mins read
1
ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…
918
VIEWS
FacebookTwitterWhatsuplinkedinEmail

ಬೆಂಗಳೂರಿನ ಹೃದಯ ಮೆಜೆಸ್ಟಿಕ್‌ನಿಂದ ಸರಿಯಾಗಿ ನೂರಎರಡು ಕಿ.ಮೀ ದೂರದಲ್ಲಿರುವ ಬಾಗೇಪಲ್ಲಿ ಎಂಬ ನತದೃಷ್ಟ ಪಟ್ಟಣಕ್ಕೆ ‘ಭಾಗ್ಯನಗರ’ ಎಂಬ ಇನ್ನೊಂದು ಹೆಸರಿದೆ. ಹೆಸರಲ್ಲೇನಿದೆ ಭಾಗ್ಯ? ಇವತ್ತಿಗೂ ಭಾಗ್ಯವನ್ನೇ ಕಾಣದ ಇಲ್ಲಿನ ಜನರು ನೆಚ್ಚಿಕೊಂಡಿರುವುದು ಅನತಿದೂರದಲ್ಲಿ ಗಡಿದಂ ಶ್ರೀ ವೆಂಕಟೇಶ್ವರ ಸ್ವಾಮಿ ಅವರನ್ನು. ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಪರಗೋಡು-ಚಿತ್ರಾವತಿ ಅಣೆಕಟ್ಟೆ ದಾಟಿ ಎರಡುಮೂರು ನಿಮಿಷ ಕ್ರಮಿಸಿ ಬಸ್ಸಿನ ಕಿಟಕಿಯಿಂದ ಬಲಕ್ಕೆ ಇಣುಕಿದರೆ ದೂರದಲ್ಲಿ ಗಡಿದಂ ದೇಗುಲದ ರಾಜಗೋಪುರ ವಿರಾಜಮಾನವಾಗಿ ಕಾಣುತ್ತಿದೆ. ನೋಟವನ್ನು ಸ್ವಲ್ಪ ಮೊಟಕು ಮಾಡಿದರೆ ಕಲ್ಲುಬಂಡೆಗಳ ಬೆಟ್ಟದ ಮುನ್ನೆಲೆಯಲ್ಲಿ ಮರಗಳ ದೊಡ್ಡ ಗುಂಪು ಗೋಚರವಾಗುತ್ತದೆ. ಆ ಹಸಿರುರಾಶಿ ನಡುವೆ ವಿಶಾಲವಾಗಿ ಮೈಚಾಚಿಕೊಂಡಿದೆ ಬಾಗೇಪಲ್ಲಿ ನ್ಯಾಷನಲ್ ಕಾಲೇಜು.

ಹೀಗೆ ಹಸಿರು ಹೊದಿಕೆ ಹೊತ್ತು ನಿಂತಿರುವ ಕಾಲೇಜು ನನ್ನ ಪಾಲಿಗೆ ಅಕ್ಷರಶಃ ಅಕ್ಷರಕಾಶಿ. ಮೂರು ವರ್ಷ ನಾನೂ ಆ ಕಾಶಿಯಲ್ಲಿದ್ದೆ. ದೇವರನ್ನೇ ನಂಬದ ವಿಚಾರವಾದಿ ಪದ್ಮಭೂಷಣ ಡಾ. ಎಚ್.ನರಸಿಂಹಯ್ಯನವರು ಅದರ ನಿರ್ಮಾತೃ. ತಮ್ಮ ನರನಾಡಿಗಳಲ್ಲೂ ವಿಜ್ಞಾನವನ್ನೇ ತುಂಬಿಕೊಂಡಿದ್ದ, ವೈಚಾರಿಕತೆಯನ್ನೇ ಉಸಿರಾಡುತ್ತಿದ್ದ ಅವರು ದೇಗುಲವನ್ನು ಕಟ್ಟಿದಷ್ಟೇ ಪವಿತ್ರವಾಗಿ ಆ ಕಾಲೇಜನ್ನೂ ಕಟ್ಟಿಸಿದ್ದರು. ಬಡಮಕ್ಕಳು, ಅದರಲ್ಲೂ ರೈತಮಕ್ಕಳಿಗೇ ಒಳ್ಳೆಯ ಶಿಕ್ಷಣ ಸಿಗಲಿ ಎಂದು ಆಶಿಸಿ ಈ ಮಹತ್ಕಾರ್ಯವನ್ನು ಮಾಡಿದ್ದರು.

ಸರ್ವವೂ ತೆಲುಗುಮಯವೇ ಆಗಿದ್ದ ಬಾಗೇಪಲ್ಲಿಗೆ 1976ರಲ್ಲಿ ನ್ಯಾಷನಲ್ ಕಾಲೇಜು ಬಂದಿತು. ಎಚ್ಚೆನ್ ಎಂಬ ಶಿಕ್ಷಣಸಂತ ಅಲ್ಲಿಗೆ ಹೆಜ್ಜೆ ಇಟ್ಟಿದ್ದು ಆಗಲೇ. ಆ ಹೊತ್ತಿಗೆ ಕರ್ನಾಟಕದ ಶಿಕ್ಷಣ ವ್ಯವಸ್ಥೆ ದುಡ್ಡಿದ್ದವರ ಪಾಲಾಗುವ ಅನಿಷ್ಟ ಪರ್ವ ಆರಂಭವಾಗಿತ್ತು. ಬೆಂಗಳೂರಿನಲ್ಲಿ ಮಾತ್ರವಲ್ಲ, ರಾಜ್ಯವ್ಯಾಪಿ ಜಾತಿಗೊಂದು ಶಿಕ್ಷಣ ಸಂಸ್ಥೆ ತಲೆಎತ್ತುತ್ತಿದ್ದ, ಡೊನೇಷನ್ ಹಾವಳಿಗೆ ಗಟ್ಟಿ ತಳಪಾಯ ಹಾಕುತ್ತಿದ್ದ ವೇಳೆಯಲ್ಲೇ ಎಚ್ಚೆನ್ ಅವರು ಕನ್ನಡಕ್ಕೆ ಹತ್ತಿರವಿದ್ದರೂ ಅದರ ಸೊಗಡಿನಿಂದ ಬಹುದೂರವಿದ್ದ ಬಾಗೇಪಲ್ಲಿಯಲ್ಲಿ ಕಾಲೇಜಿಗೆ ಅಡಿಗಲ್ಲು ಹಾಕಿಬಿಟ್ಟರು. ಅವರ ನಿರ್ಧಾರ ಕೇಳಿ ಮೂಗುಮುರಿದವರೆಷ್ಟೋ ಜನ. ಬೆಂಗಳೂರಿನಲ್ಲಿ ಬಿಟ್ಟು ನಮ್ಮೂರಲ್ಲಿ ಈ ಮನುಷ್ಯ ಏಕೆ ಕಾಲೇಜು ಮಾಡುತ್ತಿದ್ದಾರೆಂದು ಸ್ಥಳೀಯರೂ ಚಕಿತರಾಗಿದ್ದುಂಟು.

ಆದರೆ, ಎಚ್ಚೆನ್ ಆಲೋಚನೆಯೇ ಬೇರೆಯಾಗಿತ್ತು. ಅನಕ್ಷರತೆ, ಬಡತನ, ಬರ ಮತ್ತು ತೆಲುಗನ್ನು ಮೈಮೇತ್ತಿದ್ದ ಆ ನೆಲಕ್ಕೆ ಈ ಕಾಲೇಜು ನಿಜಕ್ಕೂ ಒಂದು ಓಯಸಿಸ್. ’ಆ’ಭಾಗ್ಯನಗರದ ಆಸುಪಾಸಿನ ಹೆಣ್ಣುಮಕ್ಕಳಿಗೆ ನಿಜವಾಗಿಯೂ ಎಚ್ಚೆನ್ ಭಾಗ್ಯದ ಬಾಗಿಲನ್ನೇ ತೆರೆದರು. ಆಗ ಪಿಯುಸಿ ದಾಟಿ ಡಿಗ್ರಿ ಬೇಕಿದ್ದರೆ ೪೨ ಕಿ.ಮೀ ದೂರದ ಚಿಕ್ಕಬಳ್ಳಾಪುರ ಮುನಿಸಿಪಲ್ ಕಾಲೇಜಿಗೆ ಹೋಗಬೇಕಿತ್ತು. ಆಗ ಎಂತಹ ಸ್ಥಿತಿ ಇತ್ತೆಂದರೆ ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಬಾಗೇಪಲ್ಲಿ ಹೆದ್ದಾರಿ ಹೆಬ್ಬಾಗಿಲು ಟಿಬಿ ಕ್ರಾಸ್ ದಾಟಿಸುವುದು ಕೂಡ ಕಷ್ಟವಿದ್ದ ಕಾಲವದು. ಎಷ್ಟೋ ಪ್ರತಿಭಾವಂತ ಹೆಣ್ಣುಮಕ್ಕಳು ಹತ್ತಕ್ಕೆ ಇಲ್ಲವೇ ಪಿಯುಸಿ ಪಾಸಾದ ಕೂಡಲೇ ಹಸೆಮಣೆಗೆ ಸಿದ್ಧರಾಗಿಬಿಡುತ್ತಿದ್ದರು. “ನಮ್ಮ ಮಗಳದ್ದು ಪಿಯುಸಿ ಆಯಿತು, ಎಸ್ಸೆಸ್ಸೆಲ್ಸಿ ಪಾಸಾಯಿತು, ಇನ್ನೇನಿದ್ದರೂ ಈ ವರ್ಷ ಮದುವೆ ಮಾಡಿಬಿಡುತ್ತೇನೆ” ಎಂದು ಪೋಷಕರು ಹೇಳುತ್ತಿದ್ದ ಸ್ಥಿತಿ ಇತ್ತು. ಹುಡುಗರ ಕಥೆಯೂ ಹೆಚ್ಚೂಕಡಿಮೆ ಇದೇ. ನಮ್ಮ ಎಚ್ಚೆನ್ ಇದನ್ನು ಬದಲಾಯಿಸಿದರು. ಬಾಗೇಪಲ್ಲಿ ಎಂಬ ಗಡಿಪಟ್ಟಣಕ್ಕೆ ಬರಲು ಸರಸ್ವತಿಗೆ ಬಾಗಿಲು ತೆರೆದದ್ದು ಅವರೇ. ಸರ್ವಋತುವಿನಲ್ಲೂ ಒಣಗೇ ಇರುತ್ತಿದ್ದ ಚಿತ್ರಾವತಿ ನದಿ ದಂಡೆಯಲ್ಲಿ ಜ್ಞಾನಗಂಗೆಯನ್ನು ಹರಸಿದ ಭಗೀರಥರು ಎಚ್ಚೆನ್.

ನೆರೆಯ ಗೌರಿಬಿದನೂರನಲ್ಲೂ ಹೀಗೆ ಆಯಿತು. 1964ರಲ್ಲಿಯೇ ಅಲ್ಲೂ ಕಾಲೇಜು ಸ್ಥಾಪಿಸಿ ಉಳ್ಳವರ ಮನೆಗಳ ಕೂಲಿಗಳಾಗುತ್ತಿದ್ದ ಹುಡುಗರ ಕೈಗೆ ಪೆನ್ನು-ಪುಸ್ತಕ ಕೊಟ್ಟರು ಎಚ್ಚೆನ್. ಡಿಗ್ರಿಯ ಉತ್ಕಟತೆ ಇದ್ದರೂ ಗತ್ಯಂತರವಿಲ್ಲದೆ ಮದುವೆಗೆ ಕೊರಳೊಡ್ಡುತ್ತಿದ್ದ ಯುವತಿಯರು ಪುಸ್ತಕಗಳನ್ನಿಡಿದು ಕಾಲೇಜಿನತ್ತ ಸವಾರಿ ಮಾಡುವಂತೆ ಮಾಡಿದ್ದರು ಎಚ್ಚೆನ್. ಗ್ರಾಮೀಣ ವಿದ್ಯಾರ್ಥಿಗಳಿಗೆ, ಕನ್ನಡದ ವಾತಾವರಣವೇ ಇಲ್ಲದ ನೆಲದಲ್ಲಿ ಶಿಕ್ಷಣ ಕೈಂಕರ್ಯವನ್ನು ಶುರು ಮಾಡಿದ್ದರು ಅವರು. ಒಣಗಿ ಬೆಂಡಾಗಿ ಹೋಗಿದ್ದ ಪಿನಾಕಿನಿ ನದಿಯ ತಟದಲ್ಲಿ ಜ್ಞಾನವೃಕ್ಷಗಳು ಚಿಗುರೊಡೆತೊಡಗಿದ್ದು ಹೀಗೆ.

ಅವರೆಡೂ ಕಾಲೇಜುಗಳನ್ನೂ ಸ್ಥಾಪಿಸಿದಾಗ ಕೋಲಾರ ಜಿಲ್ಲೆಯೊಂದೇ ಇತ್ತು. ಆಗ ಗೌರಿಬಿದನೂರು, ಬಾಗೇಪಲ್ಲಿ ತಾಲ್ಲೂಕುಗಳು ಕರ್ನಾಟಕದಲ್ಲೇ ಅತ್ಯಂತ ಹಿಂದುಳಿದ ಪ್ರದೇಶಗಳೆಂಬ ಕುಖ್ಯಾತಿಗೆ ಒಳಗಾಗಿದ್ದವು. ಆದರೂ ಎಚ್ಚೆನ್ ಅವರು ಇವೆರಡೂ ಪ್ರದೇಶಗಳಿಗೆ ಜ್ಞಾನಗಂಗೆಯನ್ನು ಹರಿಸಿ ಶಿಕ್ಷಣದಲ್ಲಿ ಮರುಭೂಮಿಯಾಗಿದ್ದ ನೆಲದಲ್ಲಿ ಜ್ಞಾನದೀವಿಗೆಯನ್ನು ಬೆಳಗಿಸಿದ್ದರು. ಶಿಕ್ಷಣಾರ್ಥಿಯಾಗಿ ಹೊಸೂರಿನಿಂದ ಬೆಂಗಳೂರಿಗೆ 85 ಕಿ.ಮೀ ನಡೆದಿದ್ದ ಅವರು ಅದಕ್ಕೆ ಪ್ರತಿಯಾಗಿ ನಮ್ಮೆರಡು ತಾಲ್ಲೂಕುಗಳಿಗೆ ಎರಡು ಕಾಲೇಜುಗಳನ್ನು ಕೊಟ್ಟು ಅಜರಾಮರರಾದರು.
***


ಇನ್ನು ನಾನು. ಗುಡಿಬಂಡೆಯಲ್ಲಿ ಪಿಯುಸಿ ಮುಗಿಸಿ ಡಿಗ್ರಿಗೆ ಯಾವ ಕಾಲೇಜು ಸೇರಬೇಕೆಂಬ ಗೊಂದಲದಲ್ಲಿದ್ದೆ. ಚಿಕ್ಕಬಳ್ಳಾಪುರದ ಮುನಿಸಿಪಲ್ ಕಾಲೇಜಿಗೆ ಸೇರುವಂತೆ ಕೆಲ ಗೆಳೆಯರು ಸಲಹೆ ಮಾಡಿದ್ದರು. ಆ ವೇಳೆಗೆ ನಮ್ಮ ಗುಡಿಬಂಡೆಯಲ್ಲಿ ಎಚ್ಚೆನ್ ಹೆಸರು ಮಾರ್ದನಿಸುತ್ತಿತ್ತು. ನನ್ನ ಜತೆಯಲ್ಲೇ 10ನೇ ತರಗತಿ ಓದಿದ್ದ ಎಚ್. ನರಸಿಂಹಯ್ಯ ಎಂಬ ಹೆಸರಿನ ಗೆಳೆಯನ ಮೂಲಕ ಆ ಮಹನೀಯರ ಹೆಸರು ನನಗೆ ಗೊತ್ತಾಯಿತು.

ಹೀಗೆ ಬಾಗೇಪಲ್ಲಿ ನ್ಯಾಷನಲ್ ಕಾಲೇಜು ಸೇರಿದ ನನಗೆ ಅನೇಕ ಸಲ ಎಚ್ಚೆನ್ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. 1ನೇ ಪದವಿಯಲ್ಲಿದ್ದಾಗಲೇ ನನಗೆ ಅವರ ದರ್ಶನವಾಯಿತು. ಆಮೇಲೆ ವರ್ಷಕ್ಕೆರಡು, ಅಥವಾ ಮೂರು ಬಾರಿಯಾದರೂ ಅವರನ್ನು ನೋಡುವ ಭಾಗ್ಯವಿರುತ್ತಿತ್ತು. ಮುಖ್ಯವಾಗಿ ಎನ್ನೆಸ್ಸೆಸ್ ಕ್ಯಾಂಪಿನ ಸಮಾರೋಪಕ್ಕೆ ಅವರು ಬರುವುದು ತಪ್ಪುತ್ತಿರಲಿಲ್ಲ. ಇದಾದ ಮೇಲೆ ಬೆಂಗಳೂರಿಗೆ ಬಂದಾಗ ಬಸವನಗುಡಿಯ ನ್ಯಾಷನಲ್ ಕಾಲೇಜು ಹಾಸ್ಟೆಲಿನಲ್ಲಿ ಅವರನ್ನು ಭೇಟಿಯಾಗಿದ್ದೆ. ಒಂದು ದಿನ ಕಲ್ಲುಪ್ಪು ಬೆರೆಸಿದ್ದ ಬಿಸಿನೀರಿನಲ್ಲಿ ಕಾಲಿಟ್ಟುಕೊಂಡು ಚೇರಿನ ಮೇಲೆ ಕೂತಿದ್ದ ಅವರನ್ನು ನೋಡಿದಾಗ ಮಾತು ಹೊರಡದೇ ತಡವರಿಸಿದ್ದೆ. ‘ಕಾಲು ನೋವು ಕಣಪ್ಪಾ, ಉಪ್ಪುನೀರು ಬಿಸಿ ಒಳ್ಳೆಯದು’ ಎಂದು ಅವರೇ ಹೇಳಿದ್ದರು. ಅದಾದ ಮೇಲೆ ಬೆಂಗಳೂರಿಗೆ ಬಂದಾಗಲೆಲ್ಲ ನನ್ನ ಬಸವನಗುಡಿ ಯಾತ್ರೆ ತಪ್ಪುತ್ತಿರಲಿಲ್ಲ. ಆಗೆಲ್ಲ ಎಚ್ಚೆನ್ ಭೇಟಿ ಆಗದಿದ್ದರೆ ಬಸವನಗುಡಿ ಕಾಲೇಜನ್ನೇ ಕಣ್ತುಂಬಿಕೊಂಡು ಊರಿಗೆ ಮರಳುತ್ತಿದ್ದೆ.


***
ಮೀಡಿಯಾಗೆ ಬಂದ ಮೇಲೆ ಅವರನ್ನು ನಿರಂತರವಾಗಿ ಭೇಟಿಯಾಗುವುದು, ಅವರ ಭಾಷಣಗಳನ್ನು ವರದಿ ಮಾಡುವುದು ಇತ್ತು. ಎಚ್.ಡಿ. ದೇವೇಗೌಡರ ಕ್ಯಾಬಿನೇಟ್‌ನಲ್ಲಿ ಸಚಿವರಾಗಿದ್ದ ಎಂ.ಪಿ. ಪ್ರಕಾಶ್ ಅವರನ್ನು ಒಮ್ಮೆ ಎಚ್ಚೆನ್ ಅವರು ಹೊಸೂರಿನ ಶಾಲೆಗೆ ಕರೆತಂದಿದ್ದರು. ನಾನು ಪತ್ರಕರ್ತನಾಗಿ ಅವರ ಭಾಷಣವನ್ನು ಮೊದಲು ವರದಿ ಮಾಡಿದ್ದು ಆವತ್ತೇ. ಚಿಕ್ಕಬಳ್ಳಾಪುರದ ವಾರ್ತಾಧಿಕಾರಿ ಸಿ.ಎಂ.ರಂಗಾರೆಡ್ಡಿ ಸಾರಥ್ಯದಲ್ಲಿ ಹೊಸೂರಿಗೆ ಚಿಕ್ಕಬಳ್ಳಾಪುರ ಪತ್ರಕರ್ತರ ಸವಾರಿ ಹೋಗಿತ್ತು. ಮಾಮೂಲಿಯಾಗಿ ಸಚಿವರು ಬಂದರೆ ಅವರ ಭಾಷಣವನ್ನೇ ಸುದ್ದಿ ಮಾಡುತ್ತಿದ್ದ ದಿನಗಳವು. ನನಗೂ ಅದೇ ಸರಿ ಅಂತ ನಂಬಿಕೆ ಇತ್ತು. ಆದರೆ, ಕಾರ್ಯಕ್ರಮ ಮುಗಿಸಿ ಚಿಕ್ಕಬಳ್ಳಾಪುರಕ್ಕೆ ವಾಪಸ್ ಬಂದು ಸುದ್ದಿ ಬರೆದು ಮುಗಿಸಿದ ಮೇಲೆ ಎಚ್ಚೆನ್ ಹೇಳಿದ್ದೇ ಇಂಟ್ರೋ ಆಗಿ ಎಂ.ಪಿ.ಪ್ರಕಾಶ್ ಸಬ್ ಹೆಡ್ಡಿಗೆ ಬಂದಿದ್ದರು.
***

ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಎಚ್ಚೆನ್ ಕೊಠಡಿ, ಅವರು ಬಳಸುತ್ತಿದ್ದ ವಾಟರ್ ಫಿಲ್ಟರ್. ಮೇಲಿನ ಚಿತ್ರದಲ್ಲಿ ಅವರ ಉಡುಪು ಮತ್ತು ಹಾಸಿಗೆ.
@ckphotographi

ಮತ್ತೊಂದು ಪ್ರಸಂಗ. ಆವತ್ತೊಂದು ದಿನ ನನಗೆ ಬೆಳಗ್ಗೆಯೇ ಮುಖ್ಯಮಂತ್ರಿ ನಿವಾಸಕ್ಕೆ ಅಸೈನ್‌ಮೆಂಟಿತ್ತು. ಸಂಯುಕ್ತ ಕರ್ನಾಟಕ ಪತ್ರಿಕೆಯ ಮುಖ್ಯ ವರದಿಗಾರ ಯಗಟಿ ಮೋಹನ್ ನನಗೆ ಮುಖ್ಯಮಂತ್ರಿಗಳ ಆಧಿಕೃತ ನಿವಾಸ ಮತ್ತು ಕಚೇರಿ ಅನುಗ್ರಹ, ಕೃಷ್ಣಾಕ್ಕೆ ಕಳಿಸಿದ್ದರು. ನಾನು ಬೆಳಗ್ಗೆ ಎಂಟೂವರೆಗೇ ಅನುಗ್ರಹದಲ್ಲಿದ್ದೆ. ಮುಖ್ಯಮಂತ್ರಿಗಳ ಫೋಟೊಗ್ರಾಫರ್ ನಟರಾಜ್ ಅವರು ದಡಬಡಾಂತ ಅನುಗ್ರಹದ ಗೇಟಿಗೆ ಓಡಿಬಂದರು. “ಯಾಕೆ? ಯಾರು ಬರ್ತಾರೆ ಸರ್” ಅಂತ ಕೇಳಿದೆ. ಯಾರೋ ಹಿರಿಯರು, ಗಾಂಧೀವಾದಿಗಳು ಬರ್ತಾರಂತೆ ಅಂದರು ಅವರು. ಕೆಲ ನಿಮಿಷದಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಅನುಗ್ರಹದ ಗೇಟಿಗೆ ಬಂದು ನಿಂತರು. ಅಂಬಾಸಿಡರ್ ಕಾರಿನಲ್ಲಿ ಬಂದು ಇಳಿದವರು ನಮ್ಮ ಎಚ್ಚೆನ್. ಬಾಗೇಪಲ್ಲಿ ನ್ಯಾಷನಲ್ ಕಾಲೇಜು ಕಾರ್ಯಕ್ರಮವೊಂದಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ಎಚ್ಚೆನ್ ಬಂದಿದ್ದರು. ಸುಮಾರು ಹತ್ತದಿನೈದು ನಿಮಿಷಗಳ ಮಾತುಕತೆಯ ನಂತರ ಕೃಷ್ಣ ಅವರು ಗೇಟಿನವರೆಗೂ ಬಂದು ಎಚ್ಚೆನ್ ಅವರನ್ನು ಬೀಳ್ಕೊಟ್ಟರು. ನಾನು ಅವರಿಗೆ ನಮಸ್ಕಾರ ಹಾಕಿ, “ಸರ್, ನನ್ನ ಹೆಸರು ಚನ್ನಕೃಷ್ಣ, ಬಾಗೇಪಲ್ಲಿ ನ್ಯಾಷನಲ್ ಕಾಲೇಜು ವಿದ್ಯಾರ್ಥಿ” ಎಂದೆ. ಅವರಿಗೆ ಬಹಳ ಸಂತೋಷವಾಯಿತು. ನನ್ನ ಬೆನ್ನುತಟ್ಟಿದರು. ಪಕ್ಕದಲ್ಲೇ ಇದ್ದ ಕೃಷ್ಣ ಅವರು ನನ್ನಡೆ ನೋಡಿ ನಗಬೀರಿದರು.

ಎಚ್ಚೆನ್ ಎಂದರೆ ಅಷ್ಟು ಎತ್ತರ. ಅವರ ಸರಳತೆ, ಪ್ರಾಮಾಣಿಕತೆ, ಪ್ರಖರ ವಿಚಾರ, ನಂಬಿದ ಗಾಂಧೀವಾದ.. ಎಲ್ಲವನ್ನೂ ತಮ್ಮ ಕೊನೆಕ್ಷಣದವರೆಗೂ ಜೀವಿಸಿ ಬಿಟ್ಟುಹೋಗಿದ್ದಾರೆ. ಕಾಲೇಜಿನಲ್ಲಿದ್ದಷ್ಟೂ ದಿನ ಪಾಠ ಮಾಡದಿದ್ದರೂ ನಮಗೆ ಅವರು ಗುರುವೇ ಆಗಿದ್ದರು. ನಮಗೆ ಬೋಧಿಸುತ್ತಿದ್ದ ಎನ್ನೆನ್, ಎಚ್ಚಾರ್ಕೆ, ನಿಂಗಪ್ಪ, ರಾಜು, ಎಲ್ಲಾರ‍್ಕೆ, ಆರ‍್ಟಿವಿ ಹಾಗೂ ಪಾಠ ಮಾಡದಿದ್ದರೂ ಜೀವನದ ಪಾಠ ಹೇಳಿಕೊಟ್ಟ ಡಿಎಸ್, ಬಿಪಿವಿ, ಕೆಟಿವಿ ಅವರೆಲ್ಲರಲ್ಲೂ ನಾನು ಕಂಡಿದ್ದು ಎಚ್ಚೆನ್ ಎಂಬ ಸ್ಫೂರ್ತಿಯ ಸೆಲೆಯನ್ನೆ.

ಜೂನ್ 6ರಂದು ಎಚ್ಚೆನ್ ಅವರ ಜನ್ಮಶಮಾನೋತ್ಸವವಿತ್ತು. ಆವತ್ತೇ ನನಗೆ ಇದೆಲ್ಲವನ್ನು ಬರೆಯಲಾಗದ್ದಕ್ಕೆ ವಿಷಾದವಿದೆ. ಕೆಲ ತಿಂಗಳ ಹಿಂದೆ ನನ್ನ ಹಿರಿಯ ಮಗಳ ಜತೆ ಬಸವನಗುಡಿ ಕಾಲೇಜಿಗೆ ಹೋಗಿದ್ದೆ. ನನ್ನ ಎಕಾಮಿಕ್ಸ್ ಗುರುವರ್ಯರಾದ ಎಚ್ಚಾರ‍್ಕೆ ಡಿಗ್ರಿ ಕಾಲೇಜಿನ ಪ್ರಾಂಶುಪಾಲರ ಕುರ್ಚಿಯಲ್ಲಿದ್ದರು. ನನ್ನ ಕಂಗಳು ತುಂಬಿಬಂದಿದ್ದವು. ಗುರುವಲ್ಲದ ಗೆಳೆಯ ಪ್ರಕಾಶ್, ಬಾಗೇಪಲ್ಲಿಯಿಂದ ಬಸವನಗುಡಿಗೆ ಶಿಫ್ಟ್ ಆಗಿದ್ದರು. ಎಚ್ಚೆನ್ ಕೋಣೆಯನ್ನು ತೋರಿಸಿದರು. ಅಲ್ಲಿ ನಿಲ್ಲಿಸಿ ನಮ್ಮಿಬ್ಬರ ಫೋಟೋ ತೆಗೆದರು. ಎಚ್ಚೆನ್ ಮಲಗಿದ್ದ ಕಾಟ್, ಹಾಸಿಗೆ, ದಿಂಬು, ಮಿಕ್ಸಿ, ನೀರಿನ ಫಿಲ್ಟರ್, ಗ್ಲಾಸು ಜತೆಗೆ ಅವರು ಧರಿಸಿದ್ದ ಉಡುಪುಗಳು ಅಲ್ಲೇ ಇವೆ. ಜೋಪಾನವಾಗಿ… ಜತೆಗೆ ಅವರು ಬಿಟ್ಟುಹೋಗಿರುವ ಸ್ಮೃತಿಗಳು ಮತ್ತು ಮೌಲ್ಯಗಳು..
***


ಗಾಂಧೀಜಿ ಅವರ ಬಗ್ಗೆ ಅಲ್ಬರ್ಟ್ ಐನ್‌ಸ್ಟಿನ್ ಹೀಗೆ ಹೇಳಿದ್ದರು..


“ರಕ್ತ ಮಾಂಸಗಳಿಂದ ಕೂಡಿದ ಇಂಥ ಒಬ್ಬ ವ್ಯಕ್ತಿಯೊಬ್ಬರು ಈ ಭೂಮಿಯ ಮೇಲೆ ನೆಡೆದಾಡಿದ್ದರೆಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹುದು”.

ಎಚ್ಚೆನ್ ಅವರಿಗೂ ಅನ್ವಯಿಸಿ ಹೀಗೆ ಹೇಳಬಹುದು…

“ಸಮಾಜದ ಕಟ್ಟಕಡೆಯ ಮಗುವಿಗೂ ಶಿಕ್ಷಣ ಸಿಗಬೇಕು. ಡೊನೇಷನ್ ಇಲ್ಲದ ವ್ಯವಸ್ಥೆ ಬರಬೇಕು ಎಂದು ಕನಸು ಕಂಡಿದ್ದ, ಅದಕ್ಕಾಗಿ ಜೀವಿತಾವಧಿಯುದ್ದಕ್ಕೂ ಹೋರಾಡಿದ್ದ ವ್ಯಕ್ತಿಯೊಬ್ಬರು ಕ್ಯಾಪಿಟೇಷನ್ ಶಿಕ್ಷಣ ವ್ಯವಸ್ಥೆಯನ್ನೇ ಮೈವೆತ್ತ ಕರ್ನಾಟಕದಂಥ ರಾಜ್ಯದಲ್ಲಿ ಅವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು..”
ಎಚ್ಚೆನ್ ಅವರ ಜತೆ ಬಾಗೇಪಲ್ಲಿ ನ್ಯಾಷನಲ್ ಕಾಲೇಜಿನ ಕಾರಿಡಾರಿನಲ್ಲಿ. (ಸುಲಭದ ಗುರುತಿಗೆ ಕೈಯ್ಯಲ್ಲಿ ಬ್ಯಾಗು ಹಿಡಿದಿರುವವನೇ ನಾನು), ಜತೆಯಲ್ಲಿ ನನ್ನ ಪ್ರಿನ್ಸಿಪಾಲರು ಎನ್ನೆನ್ (ಎನ್.ನಂಜುಂಡಪ್ಪ) ಮತ್ತು ನನ್ನ ಸಹಪಾಠಿಗಳು.
  • ಈ ಲೇಖನದಲ್ಲಿ ಬಳಸಲಾಗಿರುವ ಎಚ್ಚೆನ್‌ ಅವರ ಲೀಡ್ ಫೋಟೋವನ್ನು ತೆಗೆದವರು ಯಾರೋ ಗೊತ್ತಿಲ್ಲ. ಅವರಿಗೆ ಕೃತಜ್ಞತಾಪೂರ್ವಕವಾಗಿ ಬಳಸಿಕೊಳ್ಳಲಾಗಿದೆ.

Tags: Bengaluruhnkarnatakanational college
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ನೀಲಂ ಸಂಜೀವ ರೆಡ್ಡಿ ಅವರನ್ನು ಸೋಲಿಸಿ ವಿ.ವಿ.ಗಿರಿ ಅವರನ್ನು ಗೆಲ್ಲಿಸಿದ ಆತ್ಮಸಾಕ್ಷಿ ಮತ

ನೀಲಂ ಸಂಜೀವ ರೆಡ್ಡಿ ಅವರನ್ನು ಸೋಲಿಸಿ ವಿ.ವಿ.ಗಿರಿ ಅವರನ್ನು ಗೆಲ್ಲಿಸಿದ ಆತ್ಮಸಾಕ್ಷಿ ಮತ

by cknewsnow desk
February 28, 2024
0

ಆತ್ಮಸಾಕ್ಷಿ @ ಅಡ್ಡಮತದ ಜನಕ ಕಾಂಗ್ರೆಸ್!; ಈ ಅಡ್ಡ ಕಸುಬಿಗೆ ಇದೆ 55 ವರ್ಷಗಳ ಇತಿಹಾಸ

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

by cknewsnow desk
December 28, 2023
0

ನಿಜದ ಜಾಡು ಹಿಡಿದು ಹೊರಟ ನಿಡುಮಾಮಿಡಿ ಶ್ರೀಗಳ ಹೋರಾಟಕ್ಕೆ 33 ವರ್ಷ

ಹಾವುಗಳ ಆಪ್ತರಕ್ಷಕ

ಹಾವುಗಳ ಆಪ್ತರಕ್ಷಕ

by cknewsnow desk
December 10, 2023
0

ಇಲ್ಲೊಬ್ಬರಿದ್ದಾರೆ ಉರಗ ಪ್ರೇಮಿ ಉಪ ವಲಯ ಅರಣ್ಯಾಧಿಕಾರಿ

ಗನ್‌ಮ್ಯಾನ್‌ನಿಂದ ಶೂ ಹಾಕಿಸಿಕೊಂಡ ಸಚಿವ ಹೆಚ್‌.ಸಿ.ಮಹಾದೇವಪ್ಪ ಮೇಲೆ ಯತ್ನಾಳ್‌ ಪ್ರಹಾರ

ಗನ್‌ಮ್ಯಾನ್‌ನಿಂದ ಶೂ ಹಾಕಿಸಿಕೊಂಡ ಸಚಿವ ಹೆಚ್‌.ಸಿ.ಮಹಾದೇವಪ್ಪ ಮೇಲೆ ಯತ್ನಾಳ್‌ ಪ್ರಹಾರ

by cknewsnow desk
November 9, 2023
0

ಸಚಿವರ ನಡೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ; ಆರೋಗ್ಯ ಸರಿ ಇಲ್ಲದಿದ್ದರೆ ವಿಶ್ರಾಂತಿ ಪಡೆಯಿರಿ ಎಂದ ಯತ್ನಾಳ್

ಸಿದ್ದರಾಮಯ್ಯ ಕೊಟ್ಟ ಪಂಚ್’ಗೆ ಡಿಕೆಶಿ ಬಣ ವಿಲವಿಲ

ಸಿದ್ದರಾಮಯ್ಯ ಕೊಟ್ಟ ಪಂಚ್’ಗೆ ಡಿಕೆಶಿ ಬಣ ವಿಲವಿಲ

by P K Channakrishna
November 2, 2023
0

ಸದ್ಯಕ್ಕೆ ನಾನೇ ಸಿಎಂ, ಐದು ವರ್ಷ ಸಿಎಂ ಆಗಿ ನಾನೇ ಮುಂದುವರಿಯುತ್ತೇನೆ ಎಂದ ಸಿದ್ದು; ಹೈಕಮಾಂಡ್ ಎಚ್ಚರಿಕೆಗೆ ಸ್ವತಃ ಮುಖ್ಯಮಂತ್ರಿಯಿಂದಲೇ ಎಳ್ಳುನೀರು

ಭಾರತೀಯ ಸಂಸ್ಕೃತಿ ಅಧ್ಯಯನ ಸಮಿತಿ ತುಂಬಾ ಉತ್ತರ ಭಾರತೀಯರು!! ದಕ್ಷಿಣ ಭಾರತಕ್ಕೆ ಅನ್ಯಾಯವಾಗಿದೆ ಎಂದ ಎಚ್‌ಡಿಕೆ

ಹೆಸರಿಗೆ ಐವತ್ತು; ಕನ್ನಡಕ್ಕೆ ಹೆಚ್ಚುತ್ತಿದೆ ಆಪತ್ತು

by cknewsnow desk
November 1, 2023
0

ಸಂಕೋಲೆ, ಸಮಸ್ಯೆಗಳಲ್ಲಿ ಕರ್ನಾಟಕ; ಸ್ವಂತ ನೆಲದಲ್ಲಿಯೇ ಪರಕೀಯ ಭಾವ; ನವೆಂಬರ್ ನಾಯಕರ ಅಪದ್ಧತೆ

Next Post
ಚಿರಸ್ಮರಣೀಯ ಚಿರಂಜೀವಿ

ಚಿರಸ್ಮರಣೀಯ ಚಿರಂಜೀವಿ

Comments 1

  1. C R Prakash Gowda says:
    5 years ago

    Superb sir

    Reply

Leave a Reply Cancel reply

Your email address will not be published. Required fields are marked *

Recommended

ವಿಮೆ ಕಂಪನಿಗಳನ್ನು ವಿನಾಕಾರಣ ಉದ್ಧಾರ ಮಾಡುತ್ತಿದ್ದೇವೆ ಎಂದು ಕಿಡಿಕಿಡಿಯಾದ ಸಚಿವರು; ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಟ್ಟಿದ ಪ್ರೀಮಿಯಂ ₹40 ಲಕ್ಷ, ಸಿಕ್ಕಿದ ವಿಮೆ ₹19 ಲಕ್ಷ!

ವಿಮೆ ಕಂಪನಿಗಳನ್ನು ವಿನಾಕಾರಣ ಉದ್ಧಾರ ಮಾಡುತ್ತಿದ್ದೇವೆ ಎಂದು ಕಿಡಿಕಿಡಿಯಾದ ಸಚಿವರು; ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಟ್ಟಿದ ಪ್ರೀಮಿಯಂ ₹40 ಲಕ್ಷ, ಸಿಕ್ಕಿದ ವಿಮೆ ₹19 ಲಕ್ಷ!

4 years ago
ಕರ್ನಾಟಕದೊಳಗೆ ಆಂಧ್ರ ರಾಜಕೀಯ; ಚಕ್ರ ತಿರುಗಿಸುತ್ತಿದೆ ತೆಲುಗು ವೋಟ್‌ ಬ್ಯಾಂಕ್‌ !

ಅಕ್ಟೋಬರ್‌ ಅ.25ರಿಂದ 1 ರಿಂದ 5ನೇ ತರಗತಿ ಮಕ್ಕಳಿಗೆ ಶಾಲೆ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ