ಅಂಬರೀಷ್.
ಈ ಹೆಸರಿನಲ್ಲೇ ಅದೆಷ್ಟು ಆಪ್ಯಾಯತೆ, ಅಭಿಮಾನ, ಕರುಣೆ, ಮಾನವೀಯತೆ, ಪ್ರೀತಿ ಇತ್ತಲ್ಲ. ಮತ್ತೆಮತ್ತೆ ನೆನಪಾಗುವ, ಕಾಡುವ, ಹೃದಯದಲ್ಲಿ ಕಾಪಿಟ್ಟುಕೊಳ್ಳೇಬೇಕಾದ ಸ್ಮೃತಿಗಳವು. ನನ್ನ ಪಾಲಿಗೆ ಅವೆಲ್ಲವೂ ಅಜರಾಮರ. ಕಾಯಕ್ಕೆ ಅಳಿವಿದೆ, ಕಾಯಕಕ್ಕಲ್ಲ. ಅಂಬಿ ಎಂಬ ಪ್ರೀತಿ ಗೌರಿಶಂಕರದಂತೆ ವಿರಾಜಮಾನವಾಗಿ ನಿಂತಿದೆ.
ಇವತ್ತು ಅಂಬಿಯವರ ಜನ್ಮದಿನ. ಅವರಿದ್ದಿದ್ದರೆ 68 ವರ್ಷದ ಸಂಭ್ರಮವಿರುತ್ತಿತ್ತು. ಕೋವಿಡ್ ನಡುವೆಯೂ ಅವರ ಮೇಲಿನ ಅಭಿಮಾನ ಪ್ರವಾಹದಂತೆ ಹರಿಯುತ್ತಿತ್ತು. ಅದಕ್ಕೆ ಆಕಾಶವೇ ಎಲ್ಲೆ. ಅಂಬಿ ಯಾವತ್ತೂ ನಮ್ಮಲ್ಲೇ.
ಚಾಮರಾಜಪೇಟೆ ಪಂಪ ಮಹಾಕವಿ ರಸ್ತೆಯಲ್ಲಿ ಬೃಹದಾಕಾರವಾಗಿ ತಲೆಎತ್ತಿರುವ ಕರ್ನಾಟಕ ಕಲಾವಿದರ ಸಂಘವು ಅಂಬಿಯವರ ಶ್ರಮದ ಫಲ. ವರನಟ ಡಾ. ರಾಜಕುಮಾರ್ ಅವರ ಕನಸನ್ನು ಅದೆಷ್ಟೋ ಅಡ್ಡಿಆತಂಕಗಳ ನಡುವೆ ನನಸು ಮಾಡಿ ತಮ್ಮನ್ನು ಸಲುಹಿದ ಚಿತ್ರರಂಗ, ಕನ್ನಡಿಗರಿಗಾಗಿ ಬಿಟ್ಟುಹೋಗಿದ್ದಾರೆ ಅಂಬಿ. ಆ ಜಾಗವನ್ನು ಕಲಾವಿದರಿಗೇ ಉಳಿಸಿ, ಧಕ್ಕಿಸಿಕೊಳ್ಳಲು ಅವರು ನಡೆಸಿದ ಹೋರಾಟ ಎಲ್ಲರಿಗೂ ಗೊತ್ತಿರುವ ಸಂಗತಿ. ಜಾಗ ಉಳಿದ ಮೇಲೆ ಕಟ್ಟಡ ನಿರ್ಮಿಸಲು ಅವರೆಷ್ಟೋ ಶ್ರಮಿಸಿದರಲ್ಲದೆ, ಅದೇ ಚಾಮರಾಜಪೇಟೆಯ ಕೆಸಿಸಿಎಫ್ ಕಾಂಪೊಂಡಿನ ಮುಂದಿನ ರಸ್ತೆಯಲ್ಲಿ ಕುರ್ಚಿ ಹಾಕಿಕೊಂಡು ಕೂರುತ್ತಿದ್ದ ಅಂಬಿಯವರ ಆ ದೃಶ್ಯಗಳು ನನ್ನಲ್ಲಿ ಅಚ್ಚಹಸಿರು. ಕನ್ನಡ ಚಿತ್ರರಂಗದ ಹಿರಿಯ ಸ್ಟಾರ್, ಅಭಿಮಾನಿಗಳ ಆರಾಧ್ಯದೈವ ಹೀಗೆ ಕಟ್ಟಡದ ಮೇಸ್ತ್ರಿಯಂತೆ ರಸ್ತೆಯ ನಡುವಿನಲ್ಲಿ ಬಿಸಿಲಿಗೆ ಮೈಯೊಡ್ಡಿ ನಿಂತು ಕೆಲಸ ಮಾಡಿಸುತ್ತಿದ್ದ ಪರಿ ನಿಜಕ್ಕೂ ವಿರಳಾತಿ ವಿರಳ. ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಇದೇ ಹೈ ಜೋಶ್ ಮತ್ತೂ ಅಂಬಿ ನಮ್ಮ ಜತೆಯಲ್ಲಿದ್ದಾರೆಂಬ ಹೆಮ್ಮೆ.
ಈ ನೆಪದಲ್ಲಿಯೇ ಅಂಬಿಯವರನ್ನು ಬಹು ಹತ್ತಿರದಿಂದ ಕಾಣುವ, ಪದೇಪದೆ ಮಾತಾಡಿಸುವ ಸೌಭಾಗ್ಯ ನನ್ನದಾಗಿತ್ತು. ಕಚೇರಿ ಸಮಯದಲ್ಲಿ ಮಟಮಟ ಮಧ್ಯಾಹ್ನದ ಹೊತ್ತಿನಲ್ಲೂ ಅವರು ಎದುರಾಗುತ್ತಿದ್ದರು. ‘ಸರ್, ಸ್ವಲ್ಪ ನೆರಳಿಗಾದರೂ ಹೋಗಿ’ ಅಂತ ನಾನಾಗಲಿ ಅಥವಾ ಶ್ರೀವತ್ಸ ಅವರಾಗಲಿ ಹೇಳಿದರೆ, ‘ರೀ.. ನನಗೇನ್ರಿ ಬಿಸಿಲು. ಏನ್ ನಾವೆಲ್ಲ ಎಸಿಯಲ್ಲಾ ಹುಟ್ಟಿದ್ದಿವಾ? ಬಿಡ್ರಿ’ ಎನ್ನುತ್ತಿದ್ದರು. ನಾವು ಅಲ್ಲಿಗೆ ಬಿಡದೇ, ‘ಬನ್ನಿ ಸರ್, ಊಟ ಮಾಡೋಣ’ ಎಂದರೆ ಅದಕ್ಕೊಂದು ಅವರದ್ದೇ ಸ್ಟೈಲಿನ ಗಟ್ಟಿಯಾದ ಸ್ಮೈಲ್ ಕೊಟ್ಟು ಕಳಿಸುತ್ತಿದ್ದರು. ಸದಾ ಅವರ ಪಕ್ಕದಲ್ಲೇ ಇರುತ್ತಿದ್ದ ದೊಡ್ಡಣ್ಣನವರಂತೂ, “ಇದಪ್ಪ ವರಸೆ, ಅವರನ್ನು ಮಾತ್ರ ಊಟಕ್ಕೆ ಕರೀತೀರಿ. ನನ್ನ ಕರೆಯಲ್ವ” ಎಂದು ನಮ್ಮಕಾಲೆಳೆಯುತ್ತಿದ್ದರು.
ಆವತ್ತು 2018 ಜುಲೈ 2. ಸಂಜೆ 5.45ರಿಂದ 6 ಗಂಟೆ ಸಮಯ. ಕಾರ್ಯಕ್ರಮವೊಂದಕ್ಕಾಗಿ ನಮಗೆ ಕಲಾವಿದರ ಸಂಘದ ಕಟ್ಟಡ ಬೇಕಿತ್ತು. ಅಂಬಿ ಕಲಾವಿದರ ಸಂಘದಲ್ಲಿದ್ದಾರೆಂದು ಗೊತ್ತಾಯಿತು. ನಾನು, ಹರೀಶ್ ಮನವಿ ಹೊತ್ತು ಅವರಲ್ಲಿಗೆ ಬಂದಾಗ ಆ ದೈತ್ಯ ಕಟ್ಟಡದ ಮುಂಭಾಗದ ಪೋರ್ಟಿಕೋದಲ್ಲಿ ಕುರ್ಚಿ ಮೇಲೆ ಕೂತಿದ್ದರು ರೆಬೆಲ್ ಸ್ಟಾರ್.
ಅವರನ್ನು ಭೇಟಿ ಮಾಡಿದ್ದು ಆವತ್ತೆ ಕೊನೆ. ನಮ್ಮಿಬ್ಬರ ಜತೆಗೆ ಆಮೇಲೆ ಶಿವಮೊಗ್ಗ ಪದ್ಮ ಕೂಡ ಸೇರಿಕೊಂಡರು. ಬಹುಹೊತ್ತು ನಮ್ಮ ಜತೆ ಮಾತಾಡಿದರು. ಮಾಧ್ಯಮಗಳ ಬಗ್ಗೆ ಮಾತಾಡಿದರು. ಪುತ್ರನ ಸಿನಿಮಾದ ಬಗ್ಗೆ ಹೇಳಿದರು. ’ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾ ಬಗ್ಗೆಯೂ ಜೋಶ್ ಆಗಿ ಮಾತನಾಡಿದರು. ಚಿತ್ರರಂಗದ ಸ್ಥಿತಿಗತಿ, ಕಲಾವಿದರ ಸಂಘವನ್ನು ಕಟ್ಟಿದ ಸಾಹಸಗಾಥೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಇನ್ನೇನು ಮಾತೆಲ್ಲ ಮುಗಿದು ಅವರು ಹೊರಡುವ ಹೊತ್ತಿನಲ್ಲಿ, “ಆಯ್ತು, ಕಾರ್ಯಕ್ರಮ ಮಾಡ್ಕಳಿ. ಆದರೆ ಬಿಲ್ಡಿಂಗ್ನ ನೀಟಾಗಿ ಇಟ್ಕೋಬೇಕು” ಎಂದೇಳಿ ನಮಗೆಲ್ಲ ಶೇಕ್ ಹ್ಯಾಂಡ್ ಕೊಟ್ಟು ಕಾರ್ ಹತ್ತಿದರು.
ನಮ್ಮ ಪಾಲಿಗೆ ಅದೇ ಕೊನೆ ಶೇಕ್ ಹ್ಯಾಂಡ್. ಮತ್ತೆ ಆ ಕಟ್ಟಡದ ಆಸುಪಾಸಿನಲ್ಲಿ ಅಂಬಿ ಎಂಬ ಆ ಮಹಾಕಾಯ ಕಾಣಲೇ ಇಲ್ಲ.
ಅಂಬಿ ಎಂದರೆ ಆನಂದ, ಅಂಬಿ ಎಂದರೆ ಆಶ್ಚರ್ಯ, ಅಂಬಿ ಎಂದರೆ ಸಂಭ್ರಮ. ಹೀಗಾಗಿ ಆ ಸಂಭ್ರಮ ನಿರಂತರ.