ವೈಎಸ್‌ವಿ ದತ್ತ ರಾಜಕಾಣಿಯಾಗಿ ಹೆಚ್ಚು ಜನರಿಗೆ ಗೊತ್ತು. ಅವರ ಸಹೃದಯತೆ ಅದಕ್ಕೂ ಹೆಚ್ಚು ಜನರಿಗೆ ಗೊತ್ತು. ಸರಳತೆ & ಸಜ್ಜನಿಕೆಯ ಮೂರ್ತರೂಪ ಅವರು. ದತ್ತರ ಮಾತೂ ತೂಕ, ವ್ಯಕ್ತಿತ್ವವೂ ಹಾಗೆಯೇ. ಅವರಿಗೊಂದಿಗೆ ನನ್ನದೊಂದು ಲಹರಿ ಇಲ್ಲಿದೆ.
YSV ಎಸ್‌ವಿ ದತ್ತ ಅವರು ಹೀಗೆ ಸುದ್ದಿಗೆ ಬಂದ ರೀತಿ, ಜಾಲತಾಣಗಳಲ್ಲಿ ಅವರ ಬಗ್ಗೆ ನಡೆಯುತ್ತಿರುವ ಚರ್ಚೆ ಅವರನ್ನು ಹತ್ತಿರದಿಂದ ಬಲ್ಲವರಿಗೆ, ಅವರ ಸರಳತೆ ಹಾಗೂ ವಿದ್ವತ್ತನ್ನು ಪ್ರತ್ಯಕ್ಷವಾಗಿ ಕಂಡಿರುವ ನನ್ನಂಥ ಅನೇಕರಿಗೆ ಆಘಾತ ಆಗುವುದು ಸಹಜ.
ನಾನು ಸುದ್ದಿಮನೆಗೆ ಹೆಜ್ಜೆ ಇಡುವುದಕ್ಕೂ ಮೊದಲಿನಿಂದ, ಸುಮಾರು 1995ರಿಂದ ಇರಬಹುದು. ತಪ್ಪಿಸದೇ ಓದುವ ಪತ್ರಿಕೆ ಪ್ರಜಾವಾಣಿ. ನಾನು ಮೊದಲ ಪಿಯುಸಿಗೆ ಹೊರಟ ದಿನದಿಂದಲೇ ’ಸುಧಾ’ ನನ್ನ ಪುಸ್ತಕ ಚೀಲದಲ್ಲಿ ಸೇರಿಕೊಂಡಿರುತ್ತಿತ್ತು. ಕ್ರಮೇಣ ಅದರ ಜತೆ ‘ಮಯೂರ’ವೂ ಸೇರಿಕೊಂಡಿತು. ಡಾ. ಯು.ಆರ್. ಅನಂತಮೂರ್ತಿ ಅವರಿಗೆ ‘ಜ್ಞಾನಪೀಠ’ ಬಂದಾಗ ಎಸ್.ಎಲ್. ಭೈರಪ್ಪನವರು ಏನೋ ಹೇಳಿಕೆ ಕೊಟ್ಟು ಟೀಕಿಸಿದ್ದರು.
ಆ ಹೊತ್ತಿಗೇ ನಮ್ಮ ಕಾಲೇಜಿನ ಎದುರಿಗೇ ಇದ್ದ ಸಾರ್ವಜನಿಕ ಗ್ರಂಥಾಲಯದಲ್ಲಿ ಅನಂತಮೂರ್ತಿ ಅವರ ‘ಸಮಕ್ಷಮ’ ಎಂಬ ಕೃತಿಯಲ್ಲಿನ ಒಂದೆರಡು ಲೇಖನಗಳನ್ನು ಓದಿ ಅವರ ಪ್ರಭಾವಕ್ಕೆ ಸಿಲುಕಿ 25 ಪೈಸೆ ಅಂಚೆ ಕಾರ್ಡಿನಲ್ಲಿ ಭೈರಪ್ಪ ಅವರನ್ನು ಟೀಕಿಸಿ ‘ಸುಧಾ’ಗೆ ಒಂದು ಪತ್ರ ಬರೆದಿದ್ದೆ. ಅದು ಪ್ರಕಟವಾಗಿಬಿಟ್ಟಿತ್ತು. ಅದು ಪ್ರಕಟವಾಗಿದ್ದೇ ತಡ ಹಾಗೆ ಯಾರ‍್ಯಾರೋ ಬರೆಯುವ ಲೇಖನಗಳನ್ನು ಓದೋದು, ಅವಕ್ಕೆ ಪ್ರತಿಕ್ರಿಯೆ ಬರೆದು ಅವು ಪ್ರಕಟವಾದವೇ ಎಂದು ನೀರೀಕ್ಷೆ ಮಾಡುವುದು ಅಭ್ಯಾಸವಾಯಿತು ಎನ್ನುವುದಕ್ಕಿಂತ ಒಂದು ರೀತಿ ಚಟವಾಗಿಬಿಟ್ಟಿತು. ಕಂಡವರ ಬರಹಕ್ಕೆ ಪ್ರತಿಕ್ರಿಯೆ ಮಾಡುವುದಕ್ಕಿಂತ ನಾನೇ ಏಕೆ ಲೇಖನ ಬರೆಯಬಾರದು ಎಂದು ಒಮ್ಮೆಯೂ ಅನಿಸಿದ್ದಿಲ್ಲ. ಬಳಿಕ ನನ್ನ ಪುಸ್ತಕ ಚೀಲದೊಳಕ್ಕೆ ‘ಸುಧಾ’, ‘ಮಯೂರ’ ಜತೆಗೆ ‘ತರಂಗ’, ‘ತುಷಾರ’, ‘ಕರ್ಮವೀರ’, ‘ಕಸ್ತೂರಿ’ ಕೂಡ ಸೇರಿಬಿಟ್ಟವು. ಹೇಗೋ ಪ್ರಯತ್ನಪಟ್ಟು ಪಿಯುಸಿಯನ್ನು ಪಾಸು ಮಾಡಿಕೊಂಡು ಡಿಗ್ರಿಗೆ ಸೇರಿದ ಮೇಲೆ ಈ ಆ ಮ್ಯಾಗಝಿನ್ ಸಾಹಿತ್ಯವೇ ನನ್ನ ವಿದ್ಯಾಭ್ಯಾಸವನ್ನು ಆಪೋಷನ ತೆಗೆದುಕೊಳ್ಳುವ ಸ್ಥಿತಿ ಸೃಷ್ಟಿಯಾಗಿಬಿಟ್ಟಿತು. ಚುರುಕಾಗಿ ಓದುತ್ತಿದ್ದ ನಾನು ಪತ್ರಿಕೆಗಳ ಸಹವಾಸಕ್ಕೆ ಬಿದ್ದು ಕೊನೆಗೆ ಪತ್ರಿಕೋದ್ಯಮಕ್ಕೇ ಗಂಟುಬಿದ್ದೆ. ಇಲ್ಲವಾಗಿದ್ದರೆ ಇನ್ನೊಂದೊಳ್ಳೆ ಉದ್ಯೋಗಕ್ಕೆ ಹೋಗುತ್ತಿದ್ದೆನೋ ಏನೋ. ಇರಲಿ..
ಇನ್ನು ‘ಪ್ರಜಾವಾಣಿ’ಯಲ್ಲಿ ಆಗಿರುವ ಪ್ರಮಾದದ ವಿಷಯಕ್ಕೆ ಬರುತ್ತೇನೆ. ಇದು ಖಂಡಿತವಾಗಿಯೂ ಕಣ್ತಪ್ಪಿನಿಂದ ಆಗಿರುವ ತಪ್ಪು. ಸುದ್ದಿ ಬರೆದ ಹಂತಕ್ಕಿಂತ ಪುಟ ಕಟ್ಟುವ ಹೊತ್ತಿನಲ್ಲಿ ಆಗಿರಬಹುದಾದ ತಪ್ಪಿದು ಅನಿಸುತ್ತಿದೆ. ಆ ಸಮಯದಲ್ಲೇ ಇಂಥ ಎಡವಟ್ಟುಗಳು ಹೆಚ್ಚು ನುಸಳುತ್ತವೆ. ‘ಪ್ರಜಾವಾಣಿ’ ಸಾಕ್ಷಿಯಾಗಿ ಈ ಮಾತನ್ನು ಹೇಳಬಲ್ಲೆ. ನಮ್ಮ ಕನ್ನಡವನ್ನು ಪ್ರಾಮಾಣಿಕವಾಗಿ ಉಸಿರಾಡುತ್ತಿರುವ ಪತ್ರಿಕೆ ಇದು. ಇವತ್ತಿಗೂ ಕನ್ನಡವನ್ನು ಮಾರಾಟದ ಸರಕನ್ನಾಗಿಸಿಕೊಳ್ಳದ, ಹಬ್ಬಗಳ ಹೆಸರಿನಲ್ಲಿ ಕನ್ನಡವನ್ನು ಲೂಟಿ ಹೊಡೆಯದ ಪತ್ರಿಕೆ ಇದು. ಕಳೆದ ಎರಡೂವರೆ ದಶಕದಿಂದ ಆ ಪತ್ರಿಕೆಯ ಓದುಗನಾಗಿ, ಒಬ್ಬ ಪತ್ರಕರ್ತನಾಗಿಯೂ ಹೇಳುತ್ತಿದ್ದೇನೆ. ಇಂಥ ತಪ್ಪುಗಳು ಹೇಗಾಗುತ್ತವೆ ಎಂಬ ಅರಿವೂ ನನಗಿದೆ. ತೀರಾ ಇತ್ತಿಚೆಗೆ ಇನ್ನೊಂದು ದೊಡ್ಡ ಪತ್ರಿಕೆಯಲ್ಲಿ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರ ಹೇಳಿಕೆ ಎಂದು ತಪ್ಪಾಗಿ ಗ್ರಹಿಸಿ, “ನನ್ನನ್ನು ಕೇಳದೆ ಬಿಬಿಎಂಪಿ ಅಧಿಕಾರಿಗಳು & ಪೊಲೀಸರು ಪಾದರಾಯನಪುರಕ್ಕೆ ಹೋಗಿದ್ಯಾಕೆ?” ಎಂದು ಪ್ರಕಟಿಸಲಾಗಿತ್ತು. ಜತೆಗೆ ಡಿಸಿಎಂ ಫೋಟೋವನ್ನು ಕೂಡ ಪ್ರಕಟಿಸಿ ಅವಾಂತರ ಮಾಡಲಾಗಿತ್ತು. ನಿಜಕ್ಕಾದರೆ ಆ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್. ಡಿಸಿಎಂ ಅಲ್ಲ.
ಸರಿ, ಇಷ್ಟುದ್ದದ ಪೀಠಕೆಯಾದ ಮೇಲೆ ದತ್ತ ಅವರ ವಿಷಯಕ್ಕೆ ಬರುತ್ತೇನೆ. ಅತ್ಯಂತ ಒಳ್ಳೆಯ ಸುದ್ದಿಯಾದ ಆ ವರದಿಯಲ್ಲಿನ ಫೋಟೊ ಕ್ಯಾಪ್ಷನ್‌ನಲ್ಲಿ ಆಗಿರುವ ಪ್ರಮಾದ, ದತ್ತ ಅವರ ಮೇಲಿದ್ದ ದೃಷ್ಟಿ ಕಳೆಯುವಂತಾಯಿತೇನೋ. ಬಹುಶಃ ದತ್ತ ಈ ಮಾತು ಒಪ್ಪಲಿಕ್ಕಿಲ್ಲವೇನೋ. ಹೇಳಿಕೇಳಿ ನಾನು ಹಳ್ಳಿಯಿಂದ ಬಂದವನು. ಭಾವನೆಗಳು, ನಂಬಿಕೆಗಳು ಕೊಂಚ ಜಾಸ್ತಿ. ಇಲ್ಲೂ ಹಾಗೆ ಇರಬಹುದೇನೋ. ನಿದ್ದೆಯಲ್ಲಿ ಕೆಟ್ಟಕನಸು ಬಿದ್ದರೆ, ನನ್ನ ಪತ್ನಿಗೋ ಅಥವಾ ತಾಯಿಗೋ ಹೇಳಿದಾಗ, “ಅಯ್ಯೋ ಬಿಡು, ನಿನಗಾಗಿದ್ದ ಕೆಟ್ಟದೃಷ್ಟಿ ಹೋಯಿತು” ಎನ್ನುತ್ತಿದ್ದರು. ಇನ್ನೊಮ್ಮೆ ನಾನೇ ಸತ್ತುಹೋದ ಹಾಗೆ ಕನಸು ನನಗೇ ಬಿದ್ದಿತ್ತು. ಮತ್ತೊಮ್ಮೆ ನಾಗರಹಾವು ಕಚ್ಚಿ ಸತ್ತುಹೋದ ಹಾಗೆ ಕನಸಾಗಿತ್ತು. ನನಗಾಗಿದ್ದ ಗಾಬರಿ ಅಷ್ಟಿಷ್ಟಲ್ಲ. ಆದರೆ ನನ್ನ ಪತ್ನಿಗಾಗಲಿ, ತಾಯಿಗಾಗಲಿ ಅಚ್ಚರಿ ಆಗಲಿಲ್ಲ. “ಬಿಡಿ, ಇವತ್ತಿಂದ ನಿಮಗೆ ನೂರು ವರ್ಷ ಆಯುಶು” ಎಂದು ಹೇಳಿ ಕಿರುನಗೆ ಬೀರಿದ್ದಳು ಹೆಂಡತಿ. ನಾನು ನೂರುವರ್ಷ ಬದುಕುವೆನೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಹೆಂಡತಿಗೆ ಮಾತ್ರ ನೂರು ಕಾಲ ಬದುಕುವೆ ಎಂಬ ನಂಬಿಕೆ ಇದೆ. ನಮ್ಮ ದತ್ತಣ್ಣ ಕೂಡ ಹಾಗೆಯೇ ನೂರುಕಾಲ ಬಾಳಿ ಬದುಕಲಿ.
ಇದೇ ಹೊತ್ತಿನಲ್ಲಿ ನನಗೆ ದತ್ತ ಅವರ ಕುರಿತಾದ ಒಂದು ಚಿಕ್ಕ ನೆನಪಿದೆ. ಹಂಚಿಕೊಳ್ಳಬೇಕು ಎಂಬ ಉತ್ಕಟ ಇಚ್ಛೆಯೊಂದಿಗೆ ಬರೆಯುತ್ತಿದ್ದೇನೆ. ‘ಈ ಸಂಜೆ’ ಪತ್ರಿಕೆಯಲ್ಲಿ ನಾನು ಸುದ್ದಿ ಸಂಪಾದಕನಾಗಿದ್ದೆ. ಅವರ ಅಕ್ಕನವರಾದ ಶೈಲಜಾ ಅವರು ನನ್ನ ಜತೆ ಡೆಸ್ಕಿನಲ್ಲಿ ಕೆಲಸ ಮಾಡುತ್ತಿದ್ದರು. ದತ್ತ ಅವರು ಗಣಿತ, ವಿಜ್ಞಾನದಲ್ಲಿ ಎಷ್ಟು ಪಂಡಿತರೋ ಶೈಲಜಾ ಅವರೂ ಕನ್ನಡದಲ್ಲಿ ಅಷ್ಟೇ ಪರಿಣಿತರು. ನಾನೂ ಸೇರಿ ಅಲ್ಲಿನ ಪ್ರತಿ ವರದಿಗಾರ ಬರೆಯುತ್ತಿದ್ದ ಸುದ್ದಿಗಳೆಲ್ಲವೂ ಅವರನ್ನು ದಾಟಿಯೇ ಹೋಗುತ್ತಿದ್ದವು. ಹೀಗಿರಬೇಕಾದರೆ ಒಂದು ದಿನ ಶೈಲಜಾ ಅವರು ನನ್ನ ಬಳಿ ಬಂದು “ನಾಳೆ ಒಂದು ರಜೆ ಬೇಕಿತ್ತು ಸರ್” ಎಂದರು. ನಾನು ಯಾವುದೋ ಕಾರಣಕ್ಕೆ “ನಾಳೆ ಬದಲು ನಾಡಿದ್ದು ತೆಗೆದುಕೊಳ್ಳಿ” ಎಂದೆ. ಅವರು ಮರುಮಾತಾಡದೆ ಹೋಗಿಬಿಟ್ಟರು. ಮರುದಿನ, 9ಕ್ಕೆ ಶುರುವಾಗುವ ಆಫೀಸಿಗೆ ಮನೆಯಲ್ಲಿ ನಾನು 7ಕ್ಕೆ ರೆಡಿಯಾಗುತ್ತಿದ್ದೆ. ಆಗಿನ್ನು ಬೇಸಿಕ್ ಸೆಟ್‌ಗಳ ಕಾಲ. ಒಂದು ಕರೆ ಬಂದು ಕಟ್ ಆಗಿತ್ತು. ಅದರ ಹಿಂದೆಯೇ ಒಂದು ಮೆಸೇಜ್ ಕೂಡ. “ಸರ್ ನಮಸ್ಕಾರ. ನಾನು ವೈಎಸ್‌ವಿ ದತ್ತ” ಎಂದಿತ್ತು. ಆಗ್ಗೆ ಅವರು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರ ಬಳಗದಲ್ಲಿದ್ದರು. ಗೌಡರ ಕುರಿತ ನಮ್ಮ ಸುದ್ದಿಮೂಲ ಅವರೇ. ‘ಸುದ್ದಿಸ್ವಾರ್ಥ’ದೊಂದಿಗೆ ಅವರಿಗೆ ರಿಟನ್ ಕಾಲ್ ಮಾಡಿದೆ. ಒಂದೇ ರಿಂಗ್‌ಗೆ ಕರೆ ಸ್ವೀಕರಿಸಿ, “ನಮಸ್ಕಾರ ಸರ್. ನಿಮ್ಮಿಂದ ಒಂದು ಸಹಾಯ ಆಗಬೇಕಿತ್ತು” ಎಂದರು. ನನಗೆ ಅಚ್ಚರಿ, ಅವರಿಗೆ ನಾನು ಮಾಡುವ ಸಹಾಯವಾದರೂ ಏನು? ಅವರೇ ಕೇಳಿದರು. “ಸರ್, ನಮ್ಮಕ್ಕ ಶೈಲಜಾ ಅವರಿಗೆ ಇವತ್ತೊಂದು ರಜೆ ಕೊಡಲು ಸಾಧ್ಯವೇ? ಮನೆಯಲ್ಲಿ ಒಂದು ಪೂಜೆ ಇಟ್ಟುಕೊಂಡಿದ್ದೇವೆ. ದಯವಿಟ್ಟು..” ಎಂದರು.
ಈ ಕರೆ ನಾನು, ದತ್ತ ಅವರನ್ನು ಹಚ್ಚಿಕೊಳ್ಳಲು ಕಾರಣವಾಯಿತು. ಗೌಡರ ಒಂದು ಪತ್ರಿಕಾ ಹೇಳಿಕೆ ರಿಲೀಸ್ ಮಾಡುವಾಗಲೂ ಅಷ್ಟೇ. “ಗೌಡರದೊಂದು ಪತ್ರಿಕಾ ಹೇಳಿಕೆ ಇದೆ. ಪ್ರಕಟಿಸಲು ಸಾದ್ಯವೇ? ದಯವಿಟ್ಟು ಒಮ್ಮೆ ಗಮನಿಸಿ” ಎನ್ನುತ್ತಿದ್ದರು. ಹೇಳಿಕೇಳಿ ನಮ್ಮ ಸಂಪಾದಕರಾದ ಶ್ರೀ ಟಿ. ವೆಂಕಟೇಶ್ ಅವರಿಗೆ ದೇವೇಗೌಡರು ಬಹು ಅಚ್ಚುಮೆಚ್ಚು. ಅವರನ್ನು ಅಪ್ಪ ಎಂದೇ ಕರೆಯುತ್ತಿದ್ದರು. ಕುಮಾರಸ್ವಾಮಿಯೂ ಸೇರಿದಂತೆ ಇಡೀ ಜೆಡಿಎಸ್ ನಾಯಕರಿಗೆ ಪ್ರೀತಿಯ ವೆಂಕಟೇಶಣ್ಣ. ಸ್ವತಃ ದತ್ತ ಅವರಿಗೂ ಸುಪರಿಚಿತರು. ಆದರೂ ದತ್ತ ಸುದ್ದಿಮನೆಯ ಶಿಷ್ಟಾಚಾರವನ್ನು ಬಿಟ್ಟು ಹೋಗುತ್ತಿಲಿಲ್ಲ. ಆ ಸುದ್ದಿಮನೆಯ ಸುದ್ದಿ ಸಂಪಾದಕನಾಗಿದ್ದ ನನಗೇ ಕೇಳುತ್ತಿದ್ದರು. ಅದೆಷ್ಟೋ ನಾಯಕರು ಸುದ್ದಿಗಾಗಿ ವೆಂಕಟೇಶಣ್ಣ ಅವರಿಗೆ ಗಂಟುಬಿದ್ದರೆ, ಅವರೋ “ನಮ್ಮ ಚನ್ನಕೃಷ್ಣ ಇದಾರೆ. ಅವರನ್ನು ಭೇಟಿಯಾಗಿ” ಎಂದು ನನ್ನಲ್ಲಿಗೆ ಸಾಗಹಾಕುತ್ತಿದ್ದರು.
ಹೀಗೆ ಒಮ್ಮೆ ನಾನು ಯಾವುದೋ ಕೆಲಸಕ್ಕೆ ದತ್ತ ಅವರ ಮನೆಗೆ ಹೋಗಬೇಕಾಯಿತು. ಜತೆಯಲ್ಲಿ ನನ್ನ ಸಹೋದ್ಯೋಗಿ ಕುಣಿಗಲ್ ಬಾಬು ಇದ್ದರು. ನಾವಿಬ್ಬರು ಅವರ ಮನೆ ಗೇಟು ದಾಟಿ ಒಳಗೋಗಿ ನೋಡಿದರೆ ಸುತ್ತಲು ಪುಸ್ತಕ ಹರಡಿಕೊಂಡು ನೆಲದ ಮೇಲೆ ಕೂತು ಆ ದಿನದ ಸುದ್ದಿಪತ್ರಿಕೆಗಳನ್ನು ಓದುತ್ತಿದ್ದರು ದತ್ತ. ನನಗೆ ಆಗ ಆಗಿದ್ದು ಶಾಕೋ, ಅಚ್ಚರಿಯೋ, ಬೆರಗೋ ಖಂಡಿತಾ ಗೊತ್ತಾಗಲಿಲ್ಲ. ದತ್ತ ತಮ್ಮ ಎಂದಿನ ಶೈಲಿಯಲ್ಲಿ “ಬನ್ನಿ ಸರ್” ಅಂದರೆ, ನಮ್ಮ ಬಾಬುಗೆ “ಬನ್ನಿ ಬಾಬಣ್ಣ” ಎಂದರು. ಅದಾದ ಮೇಲೆ ಅನೇಕ ಸಲ ನಾವಿಬ್ಬರೂ ಭೇಟಿಯಾಗಿದ್ದೇವೆ, ಮಾತನಾಡಿದ್ದೇವೆ. ಅವರು ಹಾಗೆಯೇ ಇದ್ದರು. ಮೇಲ್ಮನೆ ಸದಸ್ಯರಾದರೂ, ಶಾಸಕರಾದರೂ ಅಷ್ಟೇ. ಅವರು ಬದಲಾಗಲಿಲ್ಲ.
ಕೆಲವರು ಹಾಗೆಯೇ. ಸರಳತೆ, ಸಜ್ಜನಿಕೆ ಅವರಿಗೆ ತೋರಿಕೆಯಲ್ಲ. ಸರಳತೆ ಮತ್ತು ಸಜ್ಜನಿಕೆ ಎಂದರೆ ಅವರೇ.
ದತ್ತ ಅವರು ಇನ್ನೂ ನೂರು ಕಾಲ ಬಾಳಲಿ.