- ಚಿತ್ರಕೃಪೆ: ಜಿ.ವಿ. ಶ್ರೀರಾಮ ರೆಡ್ಡಿ ಅವರ ಫೇಸ್ಬುಕ್ ಗೋಡೆ..
ಗುರುವಾರ (9 ಜುಲೈ 2020) ಸಂಜೆ 4.29ಕ್ಕೆ ನನ್ನ ತಮ್ಮ ನನಗೊಂದು ವಾಟ್ಸಾಪ್ ಮಾಡಿದ್ದ. ಅದೊಂದು ಪತ್ರಿಕಾ ಹೇಳಿಕೆ. ಅದರ ಮೇಲೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್’ವಾದಿ), ಚಿಕ್ಕಬಳ್ಳಾಪುರ ಸಮಿತಿ ಎಂದಿತ್ತು. ಎರಡು ಪುಟಗಳ ಪತ್ರಿಕಾ ಹೇಳಿಕೆಯನ್ನು ಆ ಪಾರ್ಟಿಯ ಜಿಲ್ಲಾ ಕಾರ್ಯದರ್ಶಿ ಜಯರಾಮ ರೆಡ್ಡಿ ಎಂಬುವವರು ರಿಲೀಸ್ ಮಾಡಿದ್ದರು.
ಆ ಹೇಳಿಕೆಯ ಸಾರಾಂಶ ಇಷ್ಟೇ. ಬಾಗೇಪಲ್ಲಿ ವಿಧಾನಸಭೆಯ ಮಾಜಿ ಶಾಸಕ ಹಾಗೂ ಅದೇ ಪಕ್ಷದ ಹಿರಿಯ ಮುಖಂಡ ಜಿ.ವಿ. ಶ್ರೀರಾಮ ರೆಡ್ಡಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಅದುವರೆಗೂ ನನಗೆ ಪಾರ್ಟಿಯಲ್ಲಿ ಅವರಿಗೂ ಮತ್ತು ಅವರಿಗೆ ಆಗದ ಗುಂಪಿನ ಮಧ್ಯೆ ತಿಕ್ಕಾಟ ನಡೆಯುತ್ತಿದೆ ಎಂದೂ, ಬಹುಶಃ ಅದು ಸರಿಹೋಗಬಹುದು ಅಥವಾ ಅವರನ್ನು ಪಾರ್ಟಿಯಿಂದಲೇ ಕಿತ್ತು ಹಾಕಬಹುದು ಎಂದು ಅವರಿವರು ಹೇಳುತ್ತಿದ್ದರು. ಅದು ನನ್ನ ಕಿವಿಗೂ ಬಿದ್ದಿತ್ತು. ಹೀಗೆ ನನ್ನ ಕಿವಿಗೆ ಬಿದ್ದ ವಿಷಯ ಅಂತಿಮವಾಗಿ ಜಿವಿಎಸ್ ಉಚ್ಚಾಟನೆಯೊಂದಿಗೆ ಇಡೀ ಎಪಿಸೋಡಿಗೆ ಎಂಡ್ ಕಾರ್ಡು ಬಿದ್ದಿದೆ.
ಅವರನ್ನು ಪಕ್ಷದಿಂದ ತೆಗೆದರೂ ಅಂದಾಕ್ಷಣ ನನಗಾದ ಆಶ್ಚರ್ಯ ಏನೂ ಇಲ್ಲ. ಹಿಂದೆ ಆಶಿಸ್ತಿನ ಕಾರಣಕ್ಕೆ ಹತ್ತು ವರ್ಷ ತ್ರಿಪುರದ ಮುಖ್ಯಮಂತ್ರಿಯಾಗಿದ್ದ, ಅರವತ್ತೂ ಚಿಲ್ಲರೆ ವರ್ಷ ಈಶಾನ್ಯ ಭಾರತದಲ್ಲಿ ಕೆಂಬಾವುಟವನ್ನು ಹೆಗಲ ಮೇಲೆ ಹೊತ್ತು ಅದಕ್ಕೊಂದು ಖದರ್ ತಂದಕೊಟ್ಟಿದ್ದ ನೃಪೇನ್ ಚಕ್ರವರ್ತಿ ಎಂಬ ದೊಡ್ಡ ಪ್ರಭಾವಳಿಯಿದ್ದ ನಾಯಕನನ್ನೇ 1995ರಲ್ಲಿ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ತಮ್ಮ ಸಹ ಕಾಮ್ರೇಡುಗಳಿಗೆ ಶಿಸ್ತಿನ ಪಾಠ ಮಾಡುವಾಗಲೆಲ್ಲ ಕಾಮ್ರೇಡ್ ಜಿವಿಎಸ್, ತಪ್ಪದೇ ನೃಪೇನ್ ಅವರ ಉದಾಹರಣೆ ಕೊಡದೇ ಇರುತ್ತಿರಲಿಲ್ಲ. ವಿಪರ್ಯಾಸವೆಂದರೆ ಇದೀಗ ಅವರೇ ನೃಪೇನ್ ಸ್ಥಿತಿಗೆ ಬಂದು ತಲುಪಿದ್ದಾರೆ!
ಪಕ್ಕದ ಕೇರಳಕ್ಕೆ ಬಂದರೆ, ಪಿಣರಾಯಿ ವಿಜಯನ್ ಅವರನ್ನು ಫ್ರಂಟ್ಲೈನಿಗೆ ತರಲು ಪ್ರಕಾಶ್ ಕಾರಟ್ ಅಂಡ್ ಗ್ಯಾಂಗ್ ಹಿರಿಯ ಕಾಮ್ರೇಡ್ ವಿ.ಎಸ್. ಅಚ್ಯುತಾನಂದನ್ ಅವರನ್ನು ಹೇಗೆ ನಡೆಸಿಕೊಂಡಿತು, ಈಗ ಪಕ್ಷದಲ್ಲಿ ಅವರ ಜಾಗ ಎಲ್ಲಿದೆ ಎಂಬುದು ಪಾಲಿಟ್ ಬ್ಯೂರೋ ಎಂಬ ’ಗರ್ಭಗುಡಿ’ಯಲ್ಲಿ ಕೂತಿರುವ ಎಲ್ಲ ಕಾಮ್ರೇಡುಗಳಿಂದ ಹಿಡಿದು, ಬಾವುಟ ಕಟ್ಟುವ ಕಟ್ಟಕಡೆಯ ಕಾರ್ಯಕರ್ತನ ತನಕ ಎಲ್ಲರಿಗೂ ಗೊತ್ತಿದೆ. ಇರಲಿ, ಇಲ್ಲಿ ನನ್ನ ಫೋಕಸ್ ಇರುವುದು ಕಾಮ್ರೇಡ್ ಜಿ.ವಿ. ಶ್ರೀರಾಮ ರೆಡ್ಡಿ ಅವರ ಮೇಲೆ ಮಾತ್ರ.
***
ನನಗೂ ಮತ್ತು ಜಿವಿಎಸ್ ನಡುವೆ ಗಾಢ ಎನ್ನುವಷ್ಟು ಪರಿಚಯವಿದೆ. ನಾನು ಅವರನ್ನು ಮೊದಲು ನೋಡಿದ್ದು 1991ರಲ್ಲಿ, ಬಾಗೇಪಲ್ಲಿಯ ನ್ಯಾಷನಲ್ ಕಾಲೇಜಿಗೆ ಡಿಗ್ರಿಗಾಗಿ ಸೇರಿದಾಗ. ಆ ಕಾಲೇಜಿನಲ್ಲಿ ನನ್ನ ಸಹಪಾಠಿ ಆಗಿದ್ದವರು ಜಿ.ಎನ್. ಮದ್ದಿರೆಡ್ಡಿ ಎಂಬ ಸಪೂರ ಸಣಕಲು ಉದ್ದದ ಆಸಾಮಿ, ಆತನ ಜತೆ ಯಾವಾಗಲೂ ಒಟ್ಟಿಗೇ ಇರುತ್ತಿದ್ದ ಸದಾ ಬ್ಯಾಗಿಪ್ಯಾಂಟು ಅಷ್ಟೇ ಸೈಜಿನ ದೊಗಲೆ ಅಂಗಿ ತೊಟ್ಟು ಮಸ್ತ್ ಸ್ಮಾರ್ಟಾಗಿ ಕಾಜೇಜಿಗೆ ಬರುತ್ತಿದ್ದ ಸುಬ್ಬಿರೆಡ್ಡಿ. ಈ ಸುಬ್ಬಿರೆಡ್ಡಿ ನನಗಿಂತ ಒಂದು ವರ್ಷ ಸೀನಿಯರ್ ಅಂತ ಕಾಣತ್ತೆ, ಅಥವಾ ಎರಡು ವರ್ಷವೇನೋ, ಮರೆತಿದ್ದೇನೆ. ಇವರಿಬ್ಬರು ಸಿಪಿಎಂ ಅಡಿಯಲ್ಲಿದ್ದ ಭಾರತೀಯ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ನಲ್ಲಿ ಸಕ್ರಿಯರಾಗಿದ್ದವರು. ಅದೇ ನಮ್ಮ ಕಾಲೇಜಿನಲ್ಲಿ ಕಾಂಗ್ರೆಸ್ ಪಾರ್ಟಿಯ ಶಾಖೆಯಾಗಿದ್ದ ಎನ್.ಎಸ್.ಯು.ಐ ಕೂಡ ಚುರುಕಾಗಿತ್ತು. ಆ ಹೊತ್ತಿನಲ್ಲಿ ಇವೆರಡೂ ಸಂಘಟನೆಗಳಿಗೆ ಕಾರಿಡಾರಿನಲ್ಲಿ ಸುಮ್ಮನೆ ಕೆಮ್ಮಿದರೆ ಕೈಕೈ ಮಿಲಾಯಿಸುವಂಥ ಪರಿಸ್ಥಿತಿ ಇತ್ತು. ನಾನು ಮೊದಲ ದಿನ ಆ ಕಾಲೇಜಿಗೆ ಪ್ರವೇಶ ಕೋರಿ ಹೆಜ್ಜೆ ಇಟ್ಟಾಗ ಅಲ್ಲೊಂದು ರಿಸರ್ವ್ ಪೊಲೀಸ್ ತುಕಡಿಯ ವಾಹನವಿತ್ತು. ಕಾಲೇಜು ಕಾಂಪೋಂಡಿನಲ್ಲಿ ಒಂದು ಸುಟ್ಟ ಬೈಕೂ ಇತ್ತು. ಗಲಾಟೆ ಯಾವ ಪರಿ ನಡೆದಿರಬಹುದು ಎಂಬುದಕ್ಕೆ ಅದು ಸಾಕ್ಷಿ. ಆದರೆ, ಎಚ್ಚೆನ್ ಅವರ ಸ್ಫೂರ್ತಿಯೊಂದಿಗೆ ಕಾಲೇಜಿಗೆ ಸೇರಲು ಬಂದಿದ್ದ ನನಗೆ, ಅದ್ಯಾವ ದೃಶ್ಯವೂ ನನ್ನ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿಲ್ಲ. ಯಾಕೆಂದರೆ, ಅಲ್ಲಿ ಪ್ರೊ. ಎನ್. ನಂಜುಂಡಪ್ಪ ಎಂಬ ’ಸಿಂಗಂ’ ಸ್ಟೈಲಿನ ಪ್ರಿನ್ಸಿಪಾಲರಿದ್ದರು. ಮತ್ತೆ ಅಂತಹ ಪೊಲೀಸ್ ವಾಹನ ಕಾಲೇಜು ಕ್ಯಾಂಪಸ್ಸಿನೊಳಕ್ಕೆ ಬಂದಿದ್ದನ್ನು ಆ ಮೂರು ವರ್ಷಗಳಲ್ಲಿ ನಾನು ನೋಡಲಿಲ್ಲ.
***
ಆ ಟೈಮಿನಲ್ಲಿ ಹೊಸದಾಗಿ ಸೇರುತ್ತಿದ್ದ ಹುಡುಗ-ಹುಡುಗಿಯರಿಗೆ ಈ ಎರಡೂ ಸಂಘಟನೆಗಳ ಹುಡುಗರು ಗಾಳ ಹಾಕುತ್ತಿದ್ದರು. ಇಲ್ಲಿ ಗಾಳ ಎಂದರೆ ನಮ್ಮನ್ನು ಅವರವರ ಸಂಘಟನೆಗೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು ಎಂದರ್ಥ. ಈ ಎರಡೂ ಟೀಮುಗಳಲ್ಲಿ ಒಂದು ವ್ಯತ್ಯಾಸವಿತ್ತು. ಎಸ್.ಎಫ್.ಐ ಹುಡುಗರು ಥೇಟ್ ವಿದ್ಯಾರ್ಥಿಗಳಂತೆಯೇ ಮಾಮೂಲಿ ಪ್ಯಾಂಟು ಶರ್ಟು ಧರಿಸಿ ಬರುತ್ತಿದ್ದರು. ನಮ್ಮಂತೆಯೇ ಕೆಲವರ ಅಂಗಿ-ಪ್ಯಾಂಟಿಗೆ ಇಸ್ತ್ರಿಯೇ ಇರುತ್ತಿರಲಿಲ್ಲ. ಕಾಲಿಗಿರುತ್ತಿದ್ದ ಒಂದಿಂಚಿನ ಎತ್ತರದ ಅವಾಯಿ ಚಪ್ಪಲಿಗಳಲ್ಲಿ ಅರ್ಧ ಇಂಚು ಸವೆದು ಹೋಗಿರುತ್ತಿತ್ತು. ಮದ್ದಿರೆಡ್ಡಿ ಮತ್ತು ಸುಬ್ಬಿರೆಡ್ಡಿ ಇನ್ಷೆರ್ಟ್ ಮಾಡಿಕೊಂಡು ಬಂದರೂ ಅವರಿಗೂ ನಮಗೂ ಅಂತಹ ವ್ಯತ್ಯಾಸ ಕಾಣುತ್ತಿರಲಿಲ್ಲ. ಆದರೆ, ಎನ್.ಎಸ್.ಯು.ಐ ಹುಡುಗರ ಖದರೇ ಬೇರೆ. ಅವರು ಕಾಲೇಜಿಗೇ ವೃತ್ತಿಪರ ರಾಜಕಾರಣಿಗಳಂತೆಯೇ ಬರುತ್ತಿದ್ದರು. ವೈಟ್ ಅಂಡ್ ವೈಟ್ ಡ್ರೆಸ್, ಅದಕ್ಕೆ ಒಪ್ಪುವ ಕಪ್ಪು ಕನ್ನಡಕ, ಅದಕ್ಕೆ ಒಂದಿಷ್ಟೂ ತೆಗೆದುಹೋಗದ ಬಾಟಾ ಅಥವಾ ಲಿಬರ್ಟಿ ಚಪ್ಪಲಿ, ಇಲ್ಲವೇ ಶೂ ಹಾಕಿ ಬರುತ್ತಿದ್ದರು. ಹೀಗೆ ಅವರು ಮತ್ತು ನಮ್ಮ ನಡುವಿನ ’ಸಾಮಾಜಿಕ ಅಂತರ’ವು ಗಾವುದ ದೂರವಿತ್ತು. ಹೀಗಾಗಿ ಅವರನ್ನು ಸೇರಬೇಕೆಂಬ ಮನಸ್ಸು ಬರಲೇ ಇಲ್ಲ. ಮುಖ್ಯವಾಗಿ ಆ ವೈಟ್ ಅಂಡ್ ವೈಟ್ ಡ್ರೆಸ್ ನೋಡಿದರೆ ಐದು ವರ್ಷಕ್ಕೊಮ್ಮೆ ನಮ್ಮೂರಿಗೆ ವೋಟು ಬೇಡಲು ಬರುತ್ತಿದ್ದ ಪರಮ ಸುಳ್ಳುಕೋರರೇ ಕಣ್ಮುಂದೆ ಬರುತ್ತಿದ್ದರು. ಹೀಗಾಗಿ ನನಗೆ, ನನ್ನಂಥ ಸಮಾನ ಮನಸ್ಕರಿಗೆ ಹಿತವೆನಿಸಿದ್ದು ಅದೇ ಮದ್ದಿರೆಡ್ಡಿ ಮತ್ತು ಸುಬ್ಬಿರೆಡ್ಡಿ. ಅಂದರೆ, ಎಸ್.ಎಫ್.ಐ., ಅದು ಬಿಟ್ಟರೆ ಮತ್ತೊಂದು ಆಯ್ಕೆ ಇರಲಿಲ್ಲ. ಎಬಿವಿಪಿ ಆಗ ಬಾಗೇಪಲ್ಲಿಯ ಬಾರ್ಡರಿಗೂ ಬಂದಿರಲಿಲ್ಲ.
***
ಹೀಗೆ, ನನಗೆ ನೆನಪಿದ್ದಂತೆ 5 ಅಥವಾ 10 ರೂಪಾಯಿ ಚಂದಾ ಕೊಟ್ಟು ನಾನು ಎಸ್.ಎಫ್.ಐ ಸೇರಿಕೊಂಡೆ. ಆವತ್ತೊಂದು ದಿನ ಕಾರೀಡಾರಿನಲ್ಲಿ ಸಿಕ್ಕಿದ ಮದ್ದಿರೆಡ್ಡಿ, “ಕಾಮ್ರೇಡ್, ಕಾಲೇಜು ಆದ ಮೇಲೆ ಫ್ರೀ ಮಾಡ್ಕೋ. ಜಿವಿಎಸ್ ಅವರನ್ನು ನೋಡೋಕೆ ಹೋಗೋಣ” ಎಂದರು. ಅದುವರೆಗೂ ಚನ್ನಕೃಷ್ಣ ಅಂತ ಕರೆಯುತ್ತಿದ್ದ ಮನುಷ್ಯ, ಆವತ್ತು ಫಸ್ಟ್’ಟೈಮ್ ’ಕಾಮ್ರೇಡ್’ ಅಂತ ಕರೆದಿದ್ದ. ಆ ಕೂಗು ನನ್ನಲ್ಲಿ ಒಸಿ ಬಿಸಿ ಎಬ್ಬಿಸಿದ್ದು ಸುಳ್ಳಲ್ಲ. ಮಧ್ಯಾಹ್ನದ ನಂತರ ಕನ್ನಡ ಪ್ರಾಧ್ಯಾಪಕರಾಗಿದ್ದ ಬಿ.ಆರ್. ರಾಜು ಅವರ ’ಜೂಮ್ನಾಳ ದೂಳ್ಯಾನ ಪ್ರಸಂಗ’ದ ಒಂದು ಚಾಪ್ಟರ್ ಪಾಠ ಕೇಳಿಯಾದ ಮೇಲೆ ಅದೇ ಮದ್ದಿರೆಡ್ಡಿ ಜೊತೆಯಲ್ಲಿ ನೇರವಾಗಿ ಜ್ಯೂನಿಯರ್ ಕಾಲೇಜು ಸಮೀಪವಿದ್ದ ಜಿವಿಎಸ್ ಮನೆಗೆ ನಡೆದುಬಂದಿದ್ದೆ. ಆ ಬಿಸಿಲತಾಪದಲ್ಲಿ ನಡೆದಿದ್ದಕ್ಕೆ ಮದ್ದಿರೆಡ್ಡಿ ಏದುಸಿರು ಬಿಡುತ್ತಿದ್ದರೆ, ನಾನು ಮಾಮೂಲಿಯಾಗಿ ಬಂದು ನಿಂತಿದ್ದೆ. ಧಗೆಯಾಗುತ್ತಿತ್ತೇನೋ ಗೊತ್ತಾಗಲಿಲ್ಲ. ಏಕೆಂದರೆ ಮೊದಲೇ ನನ್ನೊಳಗಿನ ’ಕಾಮ್ರೇಡ್’ ಮೇಲೆದ್ದು ಕೂತುಬಿಟ್ಟಿದ್ದ. ಆ ಧಗೆ ಈ ಬಿಸಿಗೆ ಅದ್ಯಾವ ಮಹಾ!
***
ನನಗೆ ಆವತ್ತಿನ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ. ಒಂದು ಸಣ್ಣರೂಮಿನಲ್ಲಿ ಸುತ್ತಲೂ ತುಂಬಿದ್ದ ಪುಸ್ತಕಗಳ ನಡುವೆ ವೈರುಚೇರಿನ ಮೇಲೆ ಕೂತು ಯುವ ಕಾಮ್ರೇಡುಗಳ ಜತೆ ಅವರು ಮಾತಿನಲ್ಲಿದ್ದರು. ಆ ಮಾತಿಗೆ ನಾವೂ ಸೇರಿಕೊಂಡೆವು. ಅಲ್ಲಿ ಕೂರಲು ಜಾಗವಿರಲಿಲ್ಲ. ಸರಿಸುಮಾರು ಮುಕ್ಕಾಲು ಗಂಟೆ ಅವರ ಮಾತು ನಿರರ್ಗಳವಾಗಿ ಸಾಗಿತ್ತು. ಅವರ ತೆಲುಗು ಮಿಶ್ರಿತ ಸೊಗಸಾದ ಗಡಿ ಕನ್ನಡ ನನ್ನನ್ನು ಸೂಜಿಗಲ್ಲಿನಂತೆ ಸೆಳೆದಿತ್ತು. ನನ್ನದೂ ತೆಲುಗನ್ನಡವೇ ಆಗಿದ್ದರೂ ಅವರಷ್ಟು ಕ್ಲಾಸಿಕ್ ಆಗಿ ಮಾತನಾಡುವುದು ನನಗೆ ಗೊತ್ತಿರಲಿಲ್ಲ. ಎಷ್ಟೇ ಆಗಲಿ, ಆವೊತ್ತಿಗೆ ಅವರು ದೊಡ್ಡ ಸ್ಕಾಲರ್, ನಾನು ಸ್ಟೂಡೆಂಟ್. ಅದುವರೆಗೂ ನನಗೆ ಕಾರ್ಲ್ ಮಾರ್ಕ್ಸ್, ಏಂಜೆಲ್ಸ್, ಲೆನಿನ್ ಗೊತ್ತೇ ಇರಲಿಲ್ಲ. ಆವತ್ತು ಆ ಮೂವರು ತ್ರಿಮೂರ್ತಿಗಳು ನನಗೆ ಜಿವಿಎಸ್’ರಲ್ಲೇ ಕಂಡರು. ಮುಕ್ಕಾಲು ಗಂಟೆ ಅವರು ಹೇಳಿದ್ದ ಪ್ರತಿಮಾತು ನನ್ನ ಮೇಲೆ ಗಾಢ ಪ್ರಭಾವ ಬೀರಿತ್ತಲ್ಲದೆ, ನನ್ನ ಕಾಮ್ರೇಡ್’ಗಿರಿಗೆ ಇನ್ನೊಂದು ಆಯಾಮ ಸಿಕ್ಕಿತ್ತು. ಅಂದಿನಿಂದ ಅವರೊಂದಿಗೆ ನಿರಂತರ ಭೇಟಿ, ಮಾತುಕತೆ, ಪುಸ್ತಕ, ವಿಚಾರ ಹೀಗೆ ನಡೆಯಿತು. ಆ ಮೂರು ವರ್ಷ ಮುಗಿಯುವಷ್ಟರಲ್ಲಿ ನನ್ನ ಕಾಮ್ರೇಡ್’ಗಿರಿ ಬಾಗೇಪಲ್ಲಿಯಿಂದ ಕೋಲಾರದವರೆಗೂ ಸಾಗಿತ್ತು. 1994ರ ಏಪ್ರಿಲ್ ಹೊತ್ತಿಗೆ ನಾನು ’ಸಂಚಿಕೆ’ ಎಂಬ ಪತ್ರಿಕೆಗೆ ಸೇರಿಕೊಂಡಿದ್ದೆ. ಅದೇ ವರ್ಷ ನವೆಂಬರ್’ನಲ್ಲಿಅಸೆಂಬ್ಲಿ ಎಲೆಕ್ಷನ್ ನಡೆದು ಜಿವಿಎಸ್ ಅವರು ಬಾಗೇಪಲ್ಲಿ ಕ್ಷೇತ್ರದಿಂದ ಕಾಂಗ್ರೆಸ್ಸಿನ ಪಿ.ಎನ್. ಪದ್ಮನಾಭ ರಾವ್ ವಿರುದ್ಧ 6,446 ಮತಗಳ ಅಂತರದಿಂದ ಗೆದ್ದು ಬಂದಿದ್ದರು.
***
ಹೀಗೆ ಗೆದ್ದುಬಂದ ಮೊದಲ ವಾರದಲ್ಲೇ ಜಿವಿಎಸ್ ಕೋಲಾರಕ್ಕೆ ಬಂದು ಐಬಿಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು. ನನಗೆ ಅದು ಅವರನ್ನು ಎದುರಿಸಿದ ಮೊದಲ ಪತ್ರಿಕಾಗೋಷ್ಠಿ. ಪ್ರಜಾವಾಣಿಯಿಂದ ಜೆ.ಎನ್. ಪ್ರಸನ್ನಕುಮಾರ್, ಸಂಯುಕ್ತ ಕರ್ನಾಟಕದಿಂದ ಬಿ.ವಿ.ಗೋಪಿನಾಥ್, ಹೊನ್ನುಡಿಯಿಂದ ಪ್ರಭಾಕರ್, ಕನ್ನಡಪ್ರಭದಿಂದ ಚಂದ್ರಶೇಖರ್ ಹೀಗೆ ಬಹಳ ಹಿರಿಯರೇ ಇದ್ದರು. ಆದರೆ, ಅವತ್ತು ಜಿವಿಎಸ್ ಅವರನ್ನು ಬೌಲ್ಡ್ ಮಾಡಲೆತ್ನಿಸಿದವರು ಪ್ರಸನ್ನಕುಮಾರ್ ಮಾತ್ರ. ಅವರು ನಿಜಕ್ಕೂ ನಮ್ಮಂಥ ಉದಯೋನ್ಮುಖ ಪತ್ರಕರ್ತರಿಗೆ ಐಕಾನ್ ಆಗಿದ್ದರು ಆಗ. ಅವರು ಎಸೆದ ಪ್ರಶ್ನೆಗಳ ರೂಪದ ಎಲ್ಲ ಬಾಲುಗಳನ್ನು ಜಿವಿಎಸ್ ನೇರ ಬೌಂಡರಿಗೆ ಅಟ್ಟಿದ್ದರು. ನನ್ನೊಳಗಿನ ಜರ್ನಲಿಸ್ಟ್ ಮೊದಲು ಎದ್ದುಕೂತಿದ್ದು ಆಗಲೇ. ಅಲ್ಲಿಂದ ಅವರು ಕೋಲಾರಕ್ಕೆ ಬಂದರೆ ನಾನು ಅವರನ್ನು ಮೀಟ್ ಆಗುವುದು, ಸಾಧ್ಯವಾದಷ್ಟುಅವರ ಜತೆಯಲ್ಲೇ ಇರುವುದು ಮಾಮೂಲಿಯಾಯಿತು. ಕೆಲ ಸಮಯದಲ್ಲೇ ನಾನು ’ಸಂಚಿಕೆ’ಯಿಂದ ’ಕೋಲಾರ ಪತ್ರಿಕೆ’ಗೆ ಜಂಪ್ ಮಾಡಿದ್ದೆ. ನನ್ನ ಪತ್ರಿಕೋದ್ಯಮದ ಮೊದಲ ಬೇಲಿ ಜಿಗಿತ ಅದೇ. ಅಲ್ಲಿ ಸ್ವಲ್ಪದಿನ ಕೆಲಸ ಮಾಡಿದ ಮೇಲೆ ’ಸಂಯುಕ್ತ ಕರ್ನಾಟಕ’ದಲ್ಲಿ ಕೆಲಸ ಸಿಕ್ಕಿತು. ಒಂದು ದಿನ ಹೈಜೋಷ್’ನಿಂದ ಶಾಸಕರ ಭವನದಲ್ಲಿದ್ದ ಜಿವಿಎಸ್ ಅವರಲ್ಲಿಗೆ ಹೋಗಿ, “ನೋಡಿ, ನಿಮ್ಮ ಜತೆಯೇ ನಾನೂ ಬೆಂಗಳೂರಿಗೆ ಬಂದೆ” ಎಂದೆ. ಅವರು ನನ್ನನ್ನೊಮ್ಮೆ ದೀರ್ಘದಿಟ್ಟಿಸಿ “ಆಹ್ಞಾ” ಎಂದರು. ಅವರು ಯಾಕೆ ಹಾಗೆಂದರು ಅಂತ ನನಗೆ ಅರ್ಥವಾಯಿತು. ’ಸಂಯುಕ್ತ ಕರ್ನಾಟಕ’ ಮತ್ತು ಕೆ.ಶಾಮರಾಯರ ಬಗ್ಗೆ ಆಗಲೇ ಅವರಿಗೆ ಗೊತ್ತಿತ್ತು. ಅಷ್ಟೊತ್ತಿಗೆ ಸುಮಾರು ಕಾಮ್ರೇಡುಗಳು ’ಸಂಕ’ಕ್ಕೆ ಸೇರಿ ಹೊರಬಿದ್ದಿದ್ದರು. ಅಲ್ಲಿ ಕೆಲಸಕ್ಕೆ ಸೇರಿದಷ್ಟೇ ಫಾಸ್ಟಾಗಿ ಟರ್ಮಿನೇಟ್ ಕೂಡ ಆಗುತ್ತಿತ್ತು. “ಅಲ್ಲಪ್ಪ, ಪಾರ್ಟಿಯಲ್ಲಿ ಕೆಲಸ ಮಾಡು, ಮುಂದೆ ನೋಡೋಣ” ಎಂದರು ಜಿವಿಎಸ್. ಅವರ ಮಾತು ನಾನು ಕೇಳಲಿಲ್ಲ. ಜರ್ನಲಿಸಂ ಎಂಬ ಬಿಸಿಲುಗುದರೆಯ ಮೇಲೆ ನಾನಾವಾಗೇ ಹತ್ತಿಕೂತುಬಿಟ್ಟಿದ್ದೆ. ಇಳಿಯಲು ತಯಾರಿರಲಿಲ್ಲ.
***
’ಸಂಕ’ದಲ್ಲಿ ನನ್ನ ಮೊದಲ ತಿಂಗಳ ಸಂಬಳ 1,500 ರೂಪಾಯಿ ಮಾತ್ರ. ಅದು ನನಗೆ ದೊಡ್ಡ ಮೊತ್ತವೇ ಆದರೂ ಅದರಲ್ಲಿ ನನ್ನ ತಂಗಿಗಾಗಿ ಸ್ವಲ್ಪ ಉಳಿಸಬೇಕಿತ್ತು, ಹೀಗಾಗಿ ಶಾಸಕರ ಭವನದ ಜಿವಿಎಸ್ ರೂಮೇ ಕೆಲ ದಿನಗಳ ಮಟ್ಟಿಗೆ ಆಶ್ರಯ ನೀಡಿತ್ತು. ಅದಾಗಲೇ ವಿಧಾನಸಭೆ ಅಧಿವೇಶನ ಶುರುವಾಗಿತ್ತು. ನಮ್ಮ ಅವಿಭಜಿತ ಕೋಲಾರ ಜಿಲ್ಲೆಯಿಂದ ಆ ಅಸೆಂಬ್ಲಿಗೆ ಘಟಾನುಘಟಿಗಳಾದ ಸಿ. ಭೈರೇಗೌಡರು, ರಮೇಶ್ ಕುಮಾರ್ ಅವರೂ ಆಯ್ಕೆಯಾಗಿ ಬಂದಿದ್ದರು. ಅದರಲ್ಲೂ ನಮ್ಮ ಶ್ರೀನಿವಾಸಪುರದ ’ಸ್ವಾಮಿಗಳು’ ಸ್ಪೀಕರ್ ಆಗಿದ್ದರು. ನಾನು ಆಗ ನೋಡಿದ್ದು ನಿಜವಾದ ಜಿವಿಎಸ್ ಅವರನ್ನು ಮತ್ತು ಅವರ ಜ್ಞಾನದ ಕಣಜವನ್ನೂ, ಜತೆಗೆ ಅವರ ಪ್ರಖರ ಮಾತಿನ ವಿರಾಟ್ ದರ್ಶನವನ್ನು. ’ಸಂಕ’ದಲ್ಲಿ ನಾನಿನ್ನೂ ಅಸೆಂಬ್ಲಿ ಮೆಟ್ಟಿಲು ಹತ್ತಿರಲಿಲ್ಲ. ಹೊಸಬನಾದ್ದರಿಂದ ಮೊದಲು ಜನರಲ್ ಡೆಸ್ಕಿಗೆ ಹಾಕಲಾಗಿತ್ತು. ಸಂಜೆ ಹೊತ್ತಿಗೆ, “ಸರಕಾರದ ವಿರುದ್ಧ ಶ್ರೀರಾಮ ರೆಡ್ಡಿ ವಾಗ್ದಾಳಿ”, “ಸಚಿವದ್ವಯರಿಗೆ ಬೆವರಿಳಿಸಿದ ಶಾಸಕ”, ಅದ್ಭುತ ವಾಗ್ಝರಿಯಿಂದ ಮಿಂಚಿದ ರೆಡ್ಡಿ” ಹೀಗೆ ಬಗೆಬಗೆಯ ಹೆಡ್ಲೈನುಗಳ ಸುದ್ದಿಗಳು ಬರತೊಡಗೊಗಿದವು. ನನಗೋ ಕೂದಲು, ಕಿವಿಗಳೆರಡೂ ಒಮ್ಮಲೆ ನಿಮಿರಿಬಿಡುತ್ತಿದ್ದವು. ನನಗೆ ವಿಧಾನಸಭೆ ವರದಿಗಾರಿಕೆ ಮಾಡಬೇಕು ಎಂದು ಹುಚ್ಚು ಹತ್ತಿಕೊಂಡಿದ್ದು ಆಗಲೇ. ಆದರೆ ಅವಕಾಶ ಕಡಿಮೆ ಇತ್ತು. ಸೀನಿಯರುಗಳೇ ಅಸೆಂಬ್ಲಿಗೆ ಹೋಗಬೇಕು ಎಂಬುದು ಶಾಮರಾಯರ ಉದ್ದೇಶವಾಗಿತ್ತು. ನನಗೆ ಆ ಅವಕಾಶವೇ ಇರಲಿಲ್ಲ. ಕೊನೆಗೆ ಇದೇ ಜಿವಿಎಸ್ ಅವರಿಂದ ಪಾಸ್ ಪಡೆದು ಮೇಲಿನ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತು ಕಲಾಪ ನೋಡತೊಡಗಿದೆ. ನಮ್ಮಕ್ಷೇತ್ರ, ಅಂದರೆ ಬಾಗೇಪಲ್ಲಿ ಎಂಬ ಗಡಿನಾಡು, ಅಸೆಂಬ್ಲಿಯ ವಿರೋಧ ಪಕ್ಷದ ಮೊದಲ ಸಾಲಿನಲ್ಲಿ ಝೇಂಕರಿಸಿದ್ದನ್ನು ಮೊದಲ ಬಾರಿಗೆ ನಾನಾಗ ನೋಡಿ ಪುಳಕಿತನಾಗಿದ್ದೆ. ಜಿವಿಎಸ್ ಮಾತಿಗೆ ನಿಂತರೆ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ, ಡಿಸಿಎಂ ಜೆ.ಎಚ್. ಪಟೇಲರು ಆದಿಯಾಗಿ ಇನ್ನೂರಿಪ್ಪತ್ತನಾಲ್ಕೂ ಶಾಸಕರೂ ವಿದ್ಯಾರ್ಥಿಗಳು ಪಾಠ ಕೇಳುವಂತೆ ಆಲಿಸುತ್ತಿದ್ದರು. ಸೂಜಿ ಬಿದ್ದರೂ ಕೇಳುವಷ್ಟು ನಿಶ್ಯಬ್ದವಾಗಿರುತ್ತಿತ್ತು ಸದನ.
***
ಇಂಥ ಜಿವಿಎಸ್, ತಾವೇ ಕಟ್ಟಿಬೆಳೆಸಿದ ಪಕ್ಷದಿಂದಲೇ ಹೊರಹಾಕಲ್ಪಟ್ಟ ಸುದ್ದಿಯನ್ನು ಈ ಲೇಖನ ಬರೆಯುವುದಕ್ಕೆ ಹತ್ತು ನಿಮಿಷಗಳ ಮುನ್ನ, ಹಿರಿಯ ಗೆಳೆಯರು, ಪತ್ರಕರ್ತರೂ ಆದ ಆರ್.ಟಿ. ವಿಠ್ಠಲಮೂರ್ತಿ ಅವರ ಗಮನಕ್ಕೆ ತಂದೆ. ಜಿವಿಎಸ್ ಕುರಿತ ಅವರ ನೆನಪುಗಳು ನನ್ನನ್ನು ಮತ್ತಷ್ಟು ಬೆರಗಾಗುವಂತೆ ಮಾಡಿದವು. ಅವರ ಮಾತುಗಳನ್ನೇ ಇಲ್ಲಿ ದಾಖಲಿಸುತ್ತೇನೆ.
“ಚನ್ನಣ್ಣ, ಜಿ.ವಿ. ಶ್ರೀರಾಮ ರೆಡ್ಡಿ ಅವರ ಭಾಷಣ ಇರುತ್ತದೆ ಅಂದರೆ ನಾನು ಕಲಾಪವನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಅವರ ಮಾತುಗಳು ನಮಗೂ ಹೊಸ ಹೊಸ ಸಂಗತಿಗಳ ಕಲಿಕೆ ಆಗಿರುತ್ತಿತ್ತು. ಅವರು ಕಮ್ಯುನಿಸ್ಟ್ ವಿಚಾರಧಾರೆಯವರಾದ್ದರಿಂದ ಯಾವಾಗಲೂ ಕಾರ್ಮಿಕರು, ರೈತರು, ಕೂಲಿಕಾರ್ಮಿಕರ ಬಗ್ಗೆ ಅತಿಹೆಚ್ಚು ಗಮನ ಸೆಳೆಯುತ್ತಿದ್ದರು ಅವರು. ಆಗೊಮ್ಮೆ ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ಘರ್ಷಣೆಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಬ್ಬನ್ ಪಾರ್ಕಿನಲ್ಲಿ ಶಾಸಕರ ಭವನದ ಕಟ್ಟಡ ಕಟ್ಟಬೇಕೂಂತ ಶಾಸಕಾಂಗ ಪ್ರಯತ್ನಿಸಿತು. ಆಗ (1994ರಲ್ಲಿ) ಇರುವ ಶಾಸಕರ ಭವನ ಸಾಕಾಗಲ್ಲ, ಅದನ್ನು ವಿಸ್ತರಿಸಬೇಕು ಎಂಬುದು ಅದರ ಉದ್ದೇಶವಾಗಿತ್ತು. ಆ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಸಲ್ಡಾನಾ ಅವರು ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರಲ್ಲದೆ, ಕಬ್ಬನ್ ಪಾರ್ಕಿನಲ್ಲಿ ಯಾವುದೇ ಬಿಲ್ಡಿಂಗ್ ಕಟ್ಟುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಮಹತ್ವದ ತೀರ್ಪು ನೀಡಿದ್ದರು. ಇದು ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ದೊಡ್ಡ ತಿಕ್ಕಾಟಕ್ಕೆ ಕಾರಣವಾಯಿತು. ಆಗ ಸದನದಲ್ಲಿ ನ್ಯಾಯಾಂಗದ ಬಗ್ಗೆ ಭಾರೀ ಚರ್ಚೆ ನಡೆದಿದ್ದು ಆಗಲೇ. ಮುಖ್ಯವಾಗಿ ಜಿ.ವಿ. ಶ್ರೀರಾಮ ರೆಡ್ಡಿ, ನಂಜೇಗೌಡರು, ಜಯಪ್ರಕಾಶ್ ಹೆಗಡೆ, ಜೆ.ಸಿ. ಮಾಧುಸ್ವಾಮಿ, ವಾಟಾಳ್ ನಾಗರಾಜ್ ಇವರೆಲ್ಲರಿದ್ದ ಒಂದು ಪ್ರಖರ ಮಾತಿನ ಗುಚ್ಛವೇ ಸದನದಲ್ಲಿತ್ತು. ಆಗ ನನಗೆ ಚೆನ್ನಾಗಿ ನೆನಪಿದೆ, ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ ಎಂಬುದು ಹೇಗೆ ’ಸುಪ್ರೀಂ’ ಎಂಬ ಬಗ್ಗೆ ಸದನದಲ್ಲಿ ರೆಡ್ಡಿ ಅವರು ಅತ್ಯದ್ಭುತವಾಗಿ ಮಾತನಾಡಿದ್ದರು. ಸಂಸತ್ತಿನಂತೆ ವಿಧಾನಸಭೆಯೂ ನಮ್ಮ ರಾಜ್ಯದಲ್ಲಿ ’ಸುಪ್ರೀಂ ಬಾಡಿ’ ಎಂದು ಅವರು ಪ್ರತಿಪಾದಿಸಿದ್ದರು. ಆಗ ನಿಮ್ಮದೇ ಜಿಲ್ಲೆಯ ರಮೇಶ್ ಕುಮಾರ್ ಅವರೇ ಸ್ಪೀಕರ್. ಇದೆಲ್ಲವೂ ಕಡತದಲ್ಲಿದೆ. ಈಗಲೂ ಅಧ್ಯಯನ ಮಾಡಬಹದು. ಹೀಗೆ ಪ್ರತಿ ವಿಷಯದ ಮೇಲೂ ಜಿವಿಎಸ್ ಅವರಿಗೆ ಗಟ್ಟಿಯಾದ ಕಮ್ಯಾಂಡಿಂಗ್ ಇತ್ತು. ಅತ್ಯಂತ ಪ್ರಭಾವಶಾಲಿಯಾಗಿ ತಮ್ಮ ವಾದ ಮಂಡಿಸುತ್ತಿದ್ದರು. ಬಹಳಷ್ಟು ಜನ ನಾಯಕರು ಚೆನ್ನಾಗಿ ಮಾತನಾಡುತ್ತಾರೆ. ನಮ್ಮ ನಡುವೆ ಉತ್ತಮ ವಾಗ್ಮಿಗಳೂ ಇದ್ದಾರೆ. ಆದರೆ ಕೆಲವರು ಸನ್ನಿವೇಶಕ್ಕೆ ತಕ್ಕಂತೆ ಆಗಾಗ ವಿಷಯಾಂತರ ಮಾಡಿ ಅಥವಾ ತೇಲಿಸಿ ಮಾತಾನಾಡುತ್ತಾರೆ. ಆದರೆ, ಶ್ರೀರಾಮ ರೆಡ್ಡಿ ಹಾಗಲ್ಲ, ವಿಷಯ ಮಂಡನೆ ಹೊರತುಪಡಿಸಿದರೆ ಬೇರೆ ಯಾವುದೂ ಅವರ ಮಾತಿನಲ್ಲಿ ಇರುತ್ತಿರಲಿಲ್ಲ. ಅವರ ಭಾಷಣದಲ್ಲಿ ಲಘುಹಾಸ್ಯ, ಚಟಾಕಿ, ಅಪಹಾಸ್ಯ, ಇನ್ನೊಬ್ಬರನ್ನು ಹಿಯ್ಯಾಳಿಸುವುದು.. ಇಂಥ ಯಾವ ಅಂಶಗಳನ್ನು ಕಾಣಲು ಸಾಧ್ಯವಿರಲಿಲ್ಲ. ಜತೆಗೆ ಅವರ ಮಾತಿನ ವೈಖರಿ, ಭಾಷೆಯ ಸೊಗಡು, ವಿಷಯದ ಗಾಢತೆ.., ಅವರಾದ ಮೇಲೆಯೇ ಉಳಿದವರು. ಅದರಲ್ಲೂ ಕೂಲಿ ಕಾರ್ಮಿಕರ ಬಗ್ಗೆ ಬಹಳ ಅನುಕಂಪ ಇತ್ತು ಅವರಿಗೆ. ಬಂಡವಾಳಶಾಹಿ ಪದ್ಧತಿಯಲ್ಲಿ ಹೇಗೆ ಅವರನ್ನು ಶೋಷಿಸಲಾಗುತ್ತಿದೆ ಎಂದು ಅವರು ಕಣ್ಣಿಗೆ ಕಟ್ಟಿದಂತೆ ಹೇಳುತ್ತಿದ್ದರು. 1989ರಿಂದ ನೋಡ್ತಾ ಇದ್ದೇನೆ, ಆ ರೀತಿಯ ಪ್ರಖರ ವ್ಯಕ್ತಿಯನ್ನು ಮತ್ತೆ ನೋಡಲಿಲ್ಲ. ಆಗ ಆಡಳಿತ ಪಕ್ಷವೂ ಬಲವಾಗಿತ್ತು. ಅದೇ ರೀತಿ ವಿರೋಧ ಪಕ್ಷವೂ ಪವರ್ ಫುಲ್ ಆಗಿತ್ತು. ಆ ಸಾಲಿನಲ್ಲಿ ರೆಡ್ಡಿ ಅವರು ಖಂಡಿತಾ ಪ್ರಮುಖರು. ಅವರ ಜತೆಗೆ ನಂಜೇಗೌಡರು, ಜಯಪ್ರಕಾಶ್ ಹೆಗಡೆ, ಜೆ.ಸಿ. ಮಾಧುಸ್ವಾಮಿ, ವಾಟಾಳ್ ನಾಗರಾಜ್ ಅವರೆಲ್ಲರೂ ಇದ್ದ ಕಾಂಬಿನೇಷನ್ ಮತ್ತೆ ಸದನದಲ್ಲಿ ಕಾಣಲೇ ಇಲ್ಲ. ನಾನು ಕಂಡಹಾಗೆ, ಆ ಅಸೆಂಬ್ಲಿ ಬಹಳ ಅದ್ಭುತವಾಗಿತ್ತು. ಆಗ ಮುಖ್ಯಮಂತ್ರಿಗಳಾಗಿದ್ದ ದೇವೇಗೌಡರು, ಜೆ.ಎಚ್. ಪಟೇಲರು ಪ್ರತಿಪಕ್ಷದ ನಾಯಕರಿಗೆ ಬಹಳ ಮಹತ್ವ, ಗೌರವ ನೀಡುತ್ತಿದ್ದರು. ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಅತ್ಯುತ್ತಮ ಚರ್ಚೆ ನಡೆದಿದ್ದು ಕೂಡ ಆಗಲೇ. ಅದರಲ್ಲೂ ಶ್ರೀರಾಮ ರೆಡ್ಡಿ ಈ ರಾಜ್ಯ ಕಂಡ ಅತ್ಯುತ್ತಮ ಸಂಸದೀಯಪಟುಗಳಲ್ಲಿ ಒಬ್ಬರು. ಇದರಲ್ಲಿ ಡೌಟೇ ಇಲ್ಲ ಚನ್ನಣ್ಣ. ಅವರು ಎಷ್ಟು ಓದಿಕೊಂಡು ಬರ್ತಿದ್ರು ಅಂದ್ರೆ, ನೋಡಿ ನಮಗೆಲ್ಲ ಬೆರಗಾಗ್ತಿತ್ತು. ಬಂಡವಾಳಶಾಹಿ ವ್ಯವಸ್ಥೆ ಇಡೀ ಸಮಾಜವನ್ನು ಹೇಗೆ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುತ್ತೆ ಅನ್ನೋದನ್ನುಅವರು ಅದ್ಭುತವಾಗಿ ವಿವರಿಸುತ್ತಿದ್ದರು. ಜತೆಗೆ, ಅದರಿಂದ ಸಮಾಜವನ್ನು ಹೇಗೆ ವಿಮುಕ್ತಿಗೊಳಿಸಬೇಕು ಅಂತಲೂ ಸಲಹೆ ನೀಡುತ್ತಿದ್ದರು. ಅವರಿಂದ ಪತ್ರಕರ್ತರಾದ ನಮಗೆ ತುಂಬಾ ತಿಳಿದುಕೊಳ್ಳುವುದು ಇತ್ತು. ವೈಯಕ್ತಿಕವಾಗಿ ನನ್ನ ಮೇಲೆ ಅವರ ಪ್ರಭಾವ ತುಂಬಾ ಇದೆ. ಕಮ್ಯುನಿಸ್ಟ್ ಹಿನ್ನೆಲೆ ಮತ್ತು ಅವರ ಆಳವಾದ ಅಧ್ಯಯನ ನನ್ನನ್ನು ಬಹಳ ಸೆಳೆದಿತ್ತು. ಇನ್ನೊಂದು ಅಂಶವೆಂದರೆ, ಗೌಡರು, ಪಟೇಲರು ಶ್ರೀರಾಮ ರೆಡ್ಡಿ ಸಲಹೆ ಪಡೆಯುತ್ತಿದ್ದರು. ಪಟೇಲರಂತೂ ರೆಡ್ಡಿ ಅವರನ್ನು ಕೇಳದೆ ಯಾವ ನಿರ್ಧಾರವನ್ನೂ ಕೈಗೊಳ್ಳುತ್ತಿರಲಿಲ್ಲ. ಇಂತಹ ವ್ಯಕ್ತಿ ನಮ್ಮ ಸಂಸದೀಯ ವ್ಯವಸ್ಥೆಯಲ್ಲಿ ವಿರಳಾತಿ ವಿರಳ. ಬಡವರ ಪರವಾದ ಅವರ ಹೋರಾಟವನ್ನುಇತಿಹಾಸದಲ್ಲಿ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ..”
ವಿಠ್ಠಲಮೂರ್ತಿ ಅವರು ಇಷ್ಟು ಹೇಳಿಮುಗಿಸುವ ಹೊತ್ತಿಗೆ ನನ್ನ ಮನಸ್ಸು ಬಹಳ ಭಾರವೇ ಆಗಿತ್ತು. ಪಕ್ಷ, ಸಂಘಟನೆಯಿಂದ ನಾನು ಸಂಬಂಧ ಕಡಿದುಕೊಂಡಿದ್ದರೂ ಕೆಲವರ ಜತೆ ವ್ಯಕ್ತಿಗತ ಸ್ನೇಹ ಇದ್ದೇ ಇತ್ತು. ಆದರೆ ಜಿವಿಎಸ್ ಅವರನ್ನು ಮುಖತಃ ನೋಡಿ ಅನೇಕ ವರ್ಷಗಳೇ ಕಳೆದಿವೆ. ಕಳೆದ ಎರಡು ದಿನಗಳಿಂದ ಜಿವಿಎಸ್ ಅವರ ಬಗ್ಗೆ ಹತ್ತಾರು ಜನರ ಬಳಿ ಮಾತನಾಡಿದೆ. ಅವರೆಲ್ಲರಿಗೂ ನೋವಿತ್ತು, ಆದರೆ ಉಚ್ಚಾಟನೆ ಕಾರಣಗಳು ಒಬ್ಬೊಬ್ಬರಲ್ಲಿಯೂ ಬೇರೆ ಬೇರೆಯೇ ಇದ್ದವು.
***
ನಾನು 1991ರಲ್ಲಿ ಬಾಗೇಪಲ್ಲಿಗೆ ಕಾಲಿಟ್ಟಾಗ 30 ಅಡಿ ಅಗಲದ ಮುಖ್ಯರಸ್ತೆ ಇತ್ತು. ಫುಟ್’ಪಾತ್ ಇರಲಿಲ್ಲ. ಈಗ ರಸ್ತೆ ಅಗಲವಾಗಿದೆ, ಪಟ್ಟಣ ಸುಂದರವಾಗಿದೆ. ಕುಡಿಯುವ ನೀರಿಗಾಗಿ ಬಿಳ್ಳೂರು ಬಳಿ ವಂಡಮಾನ್ ಯೋಜನೆ ಬಂದಿದೆ, ಅದೂ ಈಗ ಪೂರ್ಣವಾಗಿರಬೇಕು. ಬಾಗೇಪಲ್ಲಿಗೆ ಬಸ್ ಡಿಪೋ ಜತೆಗೆ ಹೊಸ ಬಸ್ ನಿಲ್ದಾಣಗಳೂ ಬಂದಿವೆ. ಹಾಗೆಯೇ ಇವೆರಡೂ ಪಟ್ಟಣಗಳಿಗೆ ಸರಕಾರಿ ಡಿಗ್ರಿ ಕಾಲೇಜುಗಳೂ ಬಂದಿವೆ, ಮತ್ತೂ ಎರಡೂ ಕಡೆ ಜ್ಯೂನಿಯರ್ ಕಾಲೇಜುಗಳನ್ನು ಪ್ರತ್ಯೇಕಿಸಿ ಬಾಲಕಿಯರಿಗೂ ಬೇರೆ ಕಾಲೇಜು ಸಿಕ್ಕಿದೆ. ಪಾಲಿಟೆಕ್ನಿಕ್’ ಕೂಡ ಬಂದಿದೆ. ಸರ್ವಋತುವಿನಲ್ಲೂ ನೀರು ತುಂಬಿರುವ ಹಂಪಸಂದ್ರ ಕರೆ ಅಭಿವೃದ್ಧಿಯಾಗಿದೆ. ಪಾಳುಬಿದ್ದ ಕೊಂಪೆಯಾಗಿದ್ದ ಐತಿಹಾಸಿಕ ಗುಮ್ಮನಾಯಕನ ಪಾಳ್ಯಕ್ಕೆ ಕಾಯಕಲ್ಪವೂ ಆಗಿದೆ, ಮುಂದೆ ಎಲೆಕ್ಷನ್ ಇದೆ ಎಂಬುದು ಗೊತ್ತಿದ್ದರೂ ಸೋಲಿನ ಭಯವಿಲ್ಲದೆ ಪಟ್ಟಣದ ಮುಖ್ಯರಸ್ತೆ ಅಗಲೀಕರಣಕ್ಕೆ ಕೈ ಹಾಕಿದ್ದು, ಆ ರಸ್ತೆಗೊಂದು ಸೊಗಸು ತಂದಿದ್ದೂ ಆಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಡಾ. ಜಿ. ಪರಮೇಶ್ವರ್ ಅವರ ಅತಿಬುದ್ಧಿವಂತಿಕೆಯಿಂದ ತುಮಕೂರು ಪಾಲಾಗಲಿದ್ದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಹಾಗೂ ನೆಲಮಂಗಲ, ದೊಡ್ಡಬಳ್ಳಾಪುರದ ಸುಮಾರು 47 ಕಾಲೇಜುಗಳು ಈಗ ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲೇ ಉಳಿದಿವೆ.
ಚಿತ್ರಾವತಿ ಫೈಲು ಇಟ್ಟುಕೊಂಡು ಜೆ.ಎಚ್. ಪಟೇಲರ ಕ್ಯಾಬಿನ್ನಿಗೆ ಹಾಕಿದ ಸುತ್ತುಗಳೆಷ್ಟು? ವಿಧಾಸಸೌಧದ 3ನೇ ಮಹಡಿಯಲ್ಲಿ ಸಿಎಂ ಮತ್ತು ನೀರಾವರಿ ಸಚಿವರೊಂದಿಗೆ ನಡೆಸಿದ ಚರ್ಚೆಗಳೆಷ್ಟು? ಎನ್ನುವುದಕ್ಕೆ ನಾನು ನೇರ ಸಾಕ್ಷಿ. ಆ ಉದ್ದದ ಕಾರಿಡಾರಿನಲ್ಲಿ ಕಂಕುಳಲ್ಲಿ ಫೈಲುಗಳನ್ನಿಟ್ಟುಕೊಂಡು ಓಡುತ್ತಿದ್ದ ಜಿವಿಎಸ್ ಜಾಗದಲ್ಲಿ ನಾನು ಮತ್ತೊಬ್ಬರನ್ನು ನೋಡಲೇ ಇಲ್ಲ. ಕೆಳ ಮಹಡಿಯಲ್ಲಿ ಲಿಫ್ಟಿಗೆ ಕಾಯದೇ ಮೆಟ್ಟಿಲಿಡಿದು 3ನೇ ಮಹಡಿಯ ಸಿಎಂ ಕಚೇರಿವರೆಗೂ ಒಂದೇ ವೇಗದಲ್ಲಿ ನಡೆಯುತ್ತಿದ್ದ ಅವರನ್ನು ಮರೆಯಲು ಸಾಧ್ಯವೇ?.
***
ಯೆಸ್. ಜಿವಿಎಸ್ ಒಬ್ಬರೇ ಒಬ್ಬರು. ಪಕ್ಷ ಅವರನ್ನು ಕೈಬಿಟ್ಟಿದೆ. ಕ್ಷೇತ್ರದ ಜನರ ಕಥೆ ಗೊತ್ತಿಲ್ಲ. ಸ್ವಭಾವತಃ ಆ ವ್ಯಕ್ತಿಯನ್ನು ಕೆಲಸದಿಂದ ಅಳೆಯಬೇಕು. ವರ್ತಮಾನದ ರಾಜಕಾರಣದಲ್ಲಿ ಕೆಲಸಗಾರನನ್ನೇ ಹುಡುಕಿಕೊಳ್ಳಬೇಕು. ಆ ಹಂಬಲದೊಂದಿಗೆ ಈ ಲೇಖನವನ್ನು ಮುಗಿಸುತ್ತಿದ್ದೇನೆ.
ನಮಸ್ಕಾರ.
***
Comments 1