ಹನ್ನೊಂದು ವರ್ಷಗಳ ಹಿಂದೆ, 2009ರ ಯಾವುದೋ ತಿಂಗಳು. ಆಗ ನಾನು ’ಈ ಸಂಜೆ’ಯಲ್ಲಿದ್ದೆ. ನಿತ್ಯವೂ ಬೆಂಗಳೂರಿನ ಕೆ.ಆರ್.ಪುರದಿಂದ ಮೆಜೆಸ್ಟಿಕ್ ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ.
ಬೆಳಗ್ಗೆ ಎಂಟೂವರೆ ಹೊತ್ತಿಗೆ ಕೆ.ಆರ್. ಪುರ ನಿಲ್ದಾಣದಲ್ಲಿ ರೈಲು ಹತ್ತಿದರೆ ಅರ್ಧ ಗಂಟೆಯಲ್ಲಿ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಇಳಿಯುವುದು, ಅಲ್ಲಿಂದ ಬ್ಯಾಕ್ ಗೇಟಿನ ಮೂಲಕ ಓಕಳೀಪುರಕ್ಕೆ ಬಂದು ಅಲ್ಲಿಂದ ಸುಜಾತಕ್ಕೆ ಬಸ್ ಹಿಡಿಯುವುದು, ಮತ್ತೂ ಲೇಟಾದರೆ ನನ್ನ ಸಹೋದ್ಯೋಗಿಗಳಾದ ಕುಣಿಗಲ್ ಬಾಬು ಅಥವಾ ರಮೇಶ ಪಾಳ್ಯರಿಗೋ ಕಾಲ್ ಮಾಡಿದರೆ, ಪಾಪ.., ಅವರಿಬ್ಬರಲ್ಲಿ ಯಾರಾದರೂ ಒಬ್ಬರು ಬಂದು ನನ್ನನ್ನು ಕಚೇರಿಗೆ ಮುಟ್ಟಿಸುತ್ತಿದ್ದರು. ಆ ಟೈಮಿಗೆ ಇಬ್ಬರೂ ಸಿಕ್ಕಿಲ್ಲವಾದರೆ ಸುಜಾತದಿಂದ ಡಾ.ರಾಜಕುಮಾರ್ ರಸ್ತೆಯಲ್ಲಿರುವ ’ಈ ಸಂಜೆ’ಗೆ ಒಳ್ಳೆಯ ವಾಕ್ ಆಗುತ್ತಿತ್ತು.
ಮತ್ತೆ ನನ್ನ ಕೆಲಸ ಸಂಜೆ ನಾಲ್ಕೂವರೆಗೆ ಮುಗಿಯುತ್ತಿತ್ತು. ಅಷ್ಟೊತ್ತಿಗೆ ’ಈ ಸಂಜೆ’ ಕಚೇರಿಯಿಂದ ರೈಲು ನಿಲ್ದಾಣ ಸೇರಲು ಅರ್ಧ ಗಂಟೆಯಾಗುತ್ತಿತ್ತು. ಆಗ ದಿನವೂ ನನ್ನ ಜತೆಗೆ ಅದೇ ’ಈ ಸಂಜೆ’ಯಲ್ಲಿ ಡಿಸೈನರ್ ಆಗಿದ್ದ ಪ್ರಕಾಶನೆಂಬ ಹುಡುಗನಿರುತ್ತಿದ್ದ. ಸುಮಾರು ಎರಡ್ಮೂರು ವರ್ಷ ನನ್ನ ಕಚೇರಿ ಪ್ರಯಾಣ ಹೀಗೆ ಸಾಗಿತ್ತು. ನಿರಂತರ ರೈಲು ಪ್ರಯಾಣ ನನಗೆ ಅನೇಕ ಪಾಠಗಳನ್ನು ಕಲಿಸಿತ್ತು ಮಾತ್ರವಲ್ಲ, ಜೀವನದ ಅನಿವಾರ್ಯಗಳನ್ನು ನಿಷ್ಠುರವಾಗಿ ಹೇಳಿಕೊಟ್ಟಿತ್ತು. ಆಗೆಲ್ಲ ಫ್ಲಾಟ್ ಫಾರಂಗಳ ಮೇಲೆ ನನಗೆ ಬಗೆಬಗೆಯ ಜನ ಪರಿಚಯವಾಗುತ್ತಿದ್ದರು.
ನಿತ್ಯವೂ ಗೊತ್ತಿರುವವರು ಒಬ್ಬರಾದರೂ ಎದುರಾಗುವುದೂ ಅವರೊಂದಿಗೆ ಫ್ಲಾಟ್ ಫಾರಂನಲ್ಲಿದ್ದ ಟೀ ಸ್ಟಾಲಿನಲ್ಲಿ ಚಹಾ ಕುಡಿಯುವುದು ಇದ್ದೇ ಇತ್ತು. ಇನ್ನೂ 5.30 ಗಂಟೆಗೆ ಸರಿಯಾಗಿ ಹೊರಡುತ್ತಿದ್ದ ಜೋಲಾರಪೇಟೆ ಎಕ್ಸ್ ಪ್ರೆಸ್ ರೈಲು ಹತ್ತಿದರೆ ಅರ್ಧ ಗಂಟೆ ಹೊತ್ತಿಗೆ ಕೆ.ಆರ್.ಪುರದಲ್ಲಿ ಇಳಿಯುತ್ತಿದ್ದೆವು. ಆ ಪುಟ್ಟ ಜರ್ನಿಯ ವೇಳೆ ನನಗೆ ಆ ರೈಲಿನಲ್ಲಿ ಕಾಣುತ್ತಿದ್ದ ವೈವಿಧ್ಯಮಯ ಜಗತ್ತು ಸೋಜಿಗ ಎನಿಸುತ್ತಿತ್ತು.
ಹೀಗಿರಬೇಕಾದರೆ ಒಂದು ದಿನ ನಾನೂ, ಪ್ರಕಾಶ ಐದು ಗಂಟೆಗೂ ಮೊದಲೇ ಸಂಗೊಳ್ಳಿ ರಾಯಣ್ಣ ನಿಲ್ದಾಣಕ್ಕೆ ಬಂದಿದ್ದೆವು. ಬಂದು ಎಂದಿನಂತೆಯೇ ಚಹಾ ಹೀರತೊಡಗಿದೆವು. ನನಗೆ ಚಹಾ ಹುಚ್ಚು ಹೆಚ್ಚು. ಪ್ರಕಾಶ ನನ್ನ ಬಲವಂತಕ್ಕೆ ಕುಡಿಯುತ್ತಿದ್ದ. ಆವತ್ತು ಹಾಗೆಯೇ ಚಹಾ ಕುಡಿಯುತ್ತ ಬಂದುಹೋಗುತ್ತಿದ್ದ ರೈಲುಗಳನ್ನು ಇಣುಕುತ್ತ ನಿಂತಿದ್ದೆವು. ಆ ಕ್ಷಣದಲ್ಲಿ ಕೊಂಚ ದೂರದಿಂದ ಟಾಪ್ ಟೂ ಬಾಟಂ ಅಪ್ಪಟ ವೈಟ್ ಉಡುಪು ಧರಿಸಿದ್ದ ಆಕೃತಿಯೊಂದು ಕಾಣಿಸಿತು. ಕೈಯ್ಯಲ್ಲೊಂದು ಲೆದರ್ ಸೂಟುಕೇಸ್ ಹಿಡಿದು ಫ್ಲಾಟ್ ಫಾರಂ ಮೇಲೆ ನಮ್ಮ ಕಡೆಗೇ ನಡೆದು ಬರುತ್ತಿದ್ದದ್ದು ಕಂಡಿತು. ಹತ್ತಿರಕ್ಕೆ ಬರುತ್ತಿದ್ದಂತೆಯೇ ಅವರು ನಮ್ಮ ಅಡಗೂರು ವಿಶ್ವನಾಥ್ ಅಂತ ಗೊತ್ತಾಯಿತು. ’ಹೇ ಪ್ರಕಾಶ ಒಂದು ನಿಮಿಷ, ಇನ್ನೊಂದು ಒಳ್ಳೆಯ ಟೀ ಹೇಳು’ ಎಂದ್ಹೇಳಿ ಅವರಿಗೆ ಅಡ್ಡಹೋಗಿ, ನಮಸ್ಕರಿಸಿದ ಕೂಡಲೇ ಅವರೂ ನಿಂತರು. ಪರಿಚಯ ಮಾಡಿಕೊಂಡೆ.
ಅವರೂ ಥಟ್ಟನೆ ನಿಂತರು, ಅದು ಯಾವ ಬಿಗುಮಾನವೂ ಇಲ್ಲದೆ. ಅವರ ಜತೆ ನನಗೇನೂ ದೊಡ್ಡ ಪರಿಚಯವೇನೂ ಇರಲಿಲ್ಲ. 1999ರ ಅಂತ್ಯದಲ್ಲಿ ನಾಲ್ಕೈದು ತಿಂಗಳ ಮಟ್ಟಿಗೆ ಮೈಸೂರಿನಲ್ಲಿ ’ಸಂಯುಕ್ತ ಕರ್ನಾಟಕ’ ಪತ್ರಿಕೆಯ ವರದಿಗಾರನಾಗಿದ್ದೆ. ಆಗ ಅವರು ಎಸ್.ಎಂ.ಕೃಷ್ಣ ಅವರ ಕ್ಯಾಬಿನೆಟ್ಟಿನಲ್ಲಿ ಮಂತ್ರಿಯಾಗಿದ್ದರು. ಆಗ ’ಇಂಡಿಯನ್ ಎಕ್ಸ್ ಪ್ರೆಸ್’ ರಿಪೋರ್ಟರ್ ಆಗಿದ್ದ ಗೆಳೆಯ ಶಿವಕುಮಾರ್ ಒಮ್ಮೆ ವಿಶ್ವನಾಥ್ ಅವರನ್ನು ಪರಿಚಯ ಮಾಡಿಸಿದ್ದ. ಅದಾದ ಮೇಲೆ ಇನ್ನೊಮ್ಮೆ ಅದೇ ಮೈಸೂರಿನ ಯಾವುದೋ ಗೆಸ್ಟ್ ಹೌಸಿನಲ್ಲಿ ನಡೆದ ವಿಶ್ವನಾಥ್ ಪತ್ರಿಕಾಗೋಷ್ಠಿಗೆ ತನ್ನ ಸಮುರಾಯ್ ಬೈಕಿನ ಮೇಲೆ ದಿವಂಗತ ಗೆಳೆಯ ರಫಿಕ್ ಉಪ್ಪಿನಂಗಡಿ ಕರೆದುಕೊಂಡು ಹೋಗಿದ್ದ. ಆವತ್ತು ವಿಶ್ವನಾಥ್ ನನಗೆ ಇನ್ನಷ್ಟು ಪರಿಚಯವಾಗಿದ್ದರು. ಮತ್ತೆ ಇನ್ನೊಮ್ಮೆ ಆವತ್ತು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಶ್ರೀನಿವಾಸಾಚಾರಿ (ಇವರು ನಮ್ಮ ಕೋಲಾರ ಜಿಲ್ಲೆಯವರು. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ) ಅವರ ಕಚೇರಿಯಲ್ಲಿ ಸಿಕ್ಕಿ, ಡಿಸಿ ಸಾಹೇಬರು ನನ್ನನ್ನು ವಿಶ್ವನಾಥ್ ಅವರಿಗೆ ಪರಿಚಯಿಸಿ, ’ಈ ಹುಡುಗ ಚನ್ನಕೃಷ್ಣ ಅಂತ. ನಮ್ಮೂರ ಹುಡುಗ. ಇಲ್ಲಿ ಸಂಯುಕ್ತ ಕರ್ನಾಟಕ ಸ್ಟ್ಯಾಪ್ ಕರೆಸ್ಪಾಂಡೆಂಟ್’ ಎಂದು ಹೇಳಿದರು. ಆವತ್ತು ಕೊಟ್ಟ ಶೇಖ್ ಹ್ಯಾಂಡ್ ಹ್ಯಾಂಗೋವರಿನಲ್ಲೇ ಮತ್ತೊಮ್ಮೆ ಫ್ಲಾಟ್ ಪಾರಂ ಮೇಲೆ ವಿಶ್ವನಾಥ್ ಅವರಿಗೆ ಶೇಕ್ ಹ್ಯಾಂಡ್ ಮಾಡಿ, ’ಸರ್, ನಿಮ್ಮನ್ನು ಕೇಳದೆಯೇ ಟೀ ಹೇಳಿದ್ದೇನೆ, ಆಗಬಹುದಾ?’ ಎಂದೆ. ಅರೆಕ್ಷಣವೂ ಸಂಕೋಚಿಸದೆ, ’ಹೋ.. ವೈ ನಾಟ್’ ಎಂದ್ಹೇಳಿ ಅಂಗಡಿಯವನು ಪೇಪರ್ ಕಪ್ಪಿನಲ್ಲಿಯೇ ಕೊಟ್ಟ ಟೀ ಕುಡಿದರು. ಅವರು ನಿಂತ ಹತ್ತು ನಿಮಿಷಗಳಲ್ಲಿಯೇ ನನ್ನ ಮತ್ತು ಅವರ ಭೇಟಿಗಳ ಇತಿವೃತ್ತವನ್ನೆಲ್ಲ ವಿವರಿಸಿದಾಗ ಅವರಿಗೆ ಬಹಳ ಸಂತೋಷವೇ ಆಯಿತು.
’ನಾನು ಮೈಸೂರಿನಿಂದ ಬಂದೆ. ಸ್ವಲ್ಪ ತಡವಾಯಿತು. ರೈಲನ್ನು ಔಟರಿಗೆ ಹಾಕಿದ್ದರು. ಒಂದು ಮೀಟಿಂಗ್ ಇದೆ. ಹೊರಡಬಹುದೇ’ ಎಂದು ಹೇಳಿ ಮುಂದಕ್ಕೆ ಹೆಜ್ಜೆ ಹಾಕಿದರು ವಿಶ್ವನಾಥ್. ಅವರು ಹಾಗೆ ಹೋಗುತ್ತಿದ್ದರೆ ಅವರಿಗೆ ಎದಿರಿನ ಫ್ಲಾಟ್ ಫಾರಂನಲ್ಲಿ ಜೋಲಾರಪೇಟೆ ಎಕ್ಸ್ ಪ್ರೆಸ್ ರೈಲು ನಮ್ಮ ಕಡೆಗೆ ಬರುತ್ತಿತ್ತು. ಸೀಟು ಹಿಡಿಯುವ ಧಾವಂತದಲ್ಲಿ ನನಗೆ ವಿಶ್ವನಾಥರು ಆ ಜನಜಂಗುಳಿಯಲ್ಲಿ ಮರೆಯಾಗಿದ್ದುಗೊತ್ತಾಗಲಿಲ್ಲ.
***
ಅರ್ಧ ಗಂಟೆ ರೈಲು ಜರ್ನಿಯಲ್ಲಿ ನನ್ನನ್ನು ವಿಶ್ವನಾಥರು ಆವರಿಸಿಕೊಂಡಿದ್ದರು. ಆಗ ಅವರು ಮೈಸೂರನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿದ್ದರು. ಎಂಪಿ ಎಂಬ ಅಹಮಿಕೆ ಅವರಲ್ಲಿ ಲವಲೇಶದಷ್ಟು ಕಾಣಲಿಲ್ಲ. ಸ್ಟಾರ್ ಹೊಟೇಲುಗಳಿಗೆ ರುಚಿಬಿದ್ದಿರುವ ಅದೆಷ್ಟೋ ನಾಯಕರನ್ನು ಕಂಡಿದ್ದ ನನಗೆ ಅಡಗೂರು ಬಹಳ ಅಪರೂಪ ಅನಿಸಿದರು. ಆ ಕ್ಷಣ ಅವರ ಜತೆ ಹೀರಿದ ಚಹಾ ಬಹು ರುಚಿ ಅನಿಸಿತು. ಅನೇಕ ಸಲ ಅವರ ಭಾಷಣಗಳನ್ನು, ಪತ್ರಿಕಾಗೋಷ್ಠಿಗಳನ್ನು ವರದಿ ಮಾಡಿದ್ದ ನನಗೆ ಅವರ ಪಾಂಡಿತ್ಯ, ವಿಷಯದ ಮೇಲಿನ ಕಮ್ಯಾಂಡಿಂಗ್ ಎಷ್ಟೆಂಬುದು ಗೊತ್ತಿತ್ತು. ಸದಾ ಪ್ರಗತಿಪರ ವಿಚಾರಧಾರೆಯ ಬಗ್ಗೆಯೇ ಮಾತನಾಡುತ್ತಿದ್ದ ಅವರು ಕ್ರಮೇಣವಾಗಿ ಹಾದಿ ತಪ್ಪಿದರೋ ಅಥವಾ ಅವರು ಹತ್ತಿದ ಪೊಲಿಟಿಕಲ್ ರೈಲು ಅನಿವಾರ್ಯತೆಗಳಿಂದ ಹಳಿತಪ್ಪಿತೋ ಎಂಬುದನ್ನು ನಾನು ಚರ್ಚೆ ಮಾಡಲು ಇಲ್ಲಿ ಹೋಗುವುದಿಲ್ಲ. ಆ ಫ್ಲಾಟ್ ಫಾರಂ ನೆನಪಷ್ಟೇ ರೀ ಕಾಲ್ ಆಗಿದೆ.
***
ವಿಶ್ವನಾಥ್ ಅವರು ಕಾಂಗ್ರೆಸ್ಸಿನಿಂದ ಹೊರಬಂದು ಜೆಡಿಎಸ್ ಸೇರಿದ್ದು, ಅಲ್ಲಿ ಪಕ್ಷಾಧ್ಯಕ್ಷರಾಗಿ ಜತೆಗೆ ಹುಣಸೂರು ಶಾಸಕರಾಗಿ ಅಸೆಂಬ್ಲಿಗೆ ಬಂದು ’ಕೈ’ಕೊಟ್ಟವರ ಎದುರು ಮೀಸೆ ತಿರುವಿದ್ದು ಮಾಧ್ಯಮಗಳ ಪಾಲಿಗೆ ಭರ್ತಿ ಮಸಾಲೆಯೇ ಆಗಿತ್ತು. ಆಮೇಲೆ ಅವರು ಪಕ್ಷ ಬಿಟ್ಟಿದ್ದು, ರೆಸಾರ್ಟ್ ಮತ್ತು ಮುಂಬಯಿ ವಾಸ, ಕೊನೆಗೆ ಸುಪ್ರೀಂ ಕೋರ್ಟಿನಲ್ಲಿ ಗೆದ್ದು ಹುಣಸೂರಿನಲ್ಲಿ ಸೋತಿದ್ದು, ಅಲ್ಲಿಗೂ ಸುಮ್ಮನಾಗದೆ ತಮ್ಮ ಕಣ್ಮುಂದೆ ಬೆಳೆದ ಸಾ.ರಾ. ಮಹೇಶರಂಥವರ ಜತೆ ಮಾತಿನ ಕದನಕ್ಕೆ ಇಳಿದಿದ್ದು ಅನೇಕರಿಗೆ ರಸಗವಳವೇ ಆಗಿತ್ತು. ಚಾಮುಂಡಿ ಬೆಟ್ಟದ ಎಪಿಸೋಡು ಕೂಡ ಟಿಆರ್ಪಿಗೆ ಆಹಾರವಾಯಿತು. ಅಂತಿಮವಾಗಿ ಯಡಿಯೂರಪ್ಪ ಕ್ಯಾಬಿನೆಟ್ಟಿನಲ್ಲಿ ಉಪ ಮುಖ್ಯಮಂತ್ರಿ ಕನಸಿಗೆ ಬಿದ್ದು ಕೊನೆಪಕ್ಷ ಪರಿಷತ್ತಿಗೆ ಎಂಟ್ರಿಯಾಗಿ ಮಂತ್ರಿಯೂ ಆಗದ ಅವರ ಅಸಹಾಯಕತೆಗೆ ರಾಜಕೀಯದಲ್ಲಿ ಏನೆನ್ನುತ್ತಾರೋ ಗೊತ್ತಿಲ್ಲ..ಪೊಲಿಟಿಕಲ್ ಟ್ರ್ಯಾಜಡಿಯಾ..? ಅರ್ಥವಾಗುತ್ತಿಲ್ಲ.
***
’ರಾಜಕೀಯ’ ಎಂಬ ಪದದ ಬಗ್ಗೆ ತೆಲುಗಿನ ’ಪ್ರತಿಧ್ವನಿ’ ಎಂಬ ಸಿನಿಮಾದಲ್ಲಿ ಪರಚೂರಿ ಬ್ರದರ್ಸ್ ವಿಡಂಬನಾತ್ಮಕವಾಗಿ ಒಂದು ಡೈಲಾಗ್ ಬರೆದಿದ್ದರು. ಅದು ಹೀಗಿದೆ..,
’ರಾ ಅಂಟೆ ರಾಕ್ಷಸಂಗ, ಜ ಅಂಟೆ ಜನಾನ್ನಿ, ಕೀ ಅಂಟೆ ಕೀಡು ಚೇಸೆ, ಯ ಅಂಟೆ ಯಂತ್ರಮೇ ರಾಜಕೀಯಂ..’ ಇದನ್ನು ಕನ್ನಡಕ್ಕೆ ಡೈರೆಕ್ಟಾಗಿ ಅನುವಾದಿಸಿದರೆ, ’ರಾ ಅಂದರೆ ರಾಕ್ಷಸರಂತೆ, ಜ ಎಂದರೆ ಜನರಿಗೆ, ಕೀ ಅಂದರೆ ಕೇಡು (ಕೀ ಬದಲು ಕೇ ಬಳಸಿದ್ದೇನೆ) ಮಾಡುವ, ಯ ಎಂದರೆ ಯಂತ್ರವೇ ರಾಜಕೀಯ..’
ಇಂಥ ಮಾತುಗಳನ್ನು ತಮ್ಮದೇ ಶೈಲಿಯಲ್ಲಿ ಹೇಳುತ್ತಿದ್ದ, ದೇವರಾಜ ಅರಸು ಅವರ ಕನಸುಗಳನ್ನು ಬಿತ್ತುತ್ತಿದ್ದ ಅವರ ಮುಂದಿನ ಕಥೆಯೇನು? ಗೊತ್ತಿಲ್ಲ ನನಗೆ. ಆದರೆ, ಹಿರಿಯರಾದ ಆರ್.ಟಿ. ವಿಠ್ಠಲಮೂರ್ತಿ, ಜೇಸುನಾ ಮತ್ತು ವೈ.ಜಿ. ಅಶೋಕ್ ಕುಮಾರ್ ಮೂವರೂ ವಿಶ್ವನಾಥ್ ಬಗ್ಗೆ ಈಚೆಗೆ ಪೇಸ್ಬುಕ್ ಗೋಡೆ ಬರೆದಿದ್ದ ಲೇಖನಗಳನ್ನು ಓದಿದ ಮೇಲೆ ನನಗೆ ಇಷ್ಟು ಬರೆಯಬೇಕೆನಿಸಿತು.
***
ಕೊನೆಗೆ, ತುಸು ಬೇಸರವಿದೆ. ಆವರು ಫ್ಲಾಟ್ ಫಾರಂ ಮೆಲೆ ಸಿಕ್ಕಿದಾಗ ನನ್ಹತ್ರ ಒಂದು ಬೇಸಿಕ್ ಸೆಟ್ ಇತ್ತು. ಅದರಲ್ಲಿ ಫ್ರಂಟ್ ಕ್ಯಾಮೆರಾ ಅಥವಾ ಸೆಲ್ಫಿ ಕ್ಯಾಮೆರಾ ಫೆಸಿಲಿಟಿ ಇರಲಿಲ್ಲ. ಅದಾದ ಮೇಲೆ ’ಈ ಸಂಜೆ’ ಸಂಪಾದಕರಾದ ಟಿ. ವೆಂಕಟೇಶ್ ಅವರ ಎರಡನೇ ಪುತ್ರ ದಿವಾಕರ್ ಒಂದು ಒಳ್ಳೆಯ ನೋಕಿಯಾ ಮೊಬೈಲು ಕೊಟ್ಟಿದ್ದರು. ಅದಕ್ಕೆ ಬ್ಯಾಕ್ ಕ್ಯಾಮೆರಾ ಇತ್ತು. ಆ ದಿನಗಳಲ್ಲಿ ಅದೇ ಉತ್ತಮ ಮೊಬೈಲು. ಆ ಮೊಬೈಲು ಸಿಕ್ಕಿದ ಮೇಲೆ ಮತ್ತೆ ಹಾಗೆ ಫ್ಲಾಟ್ ಫಾರಂ ಮೇಲೆ ವಿಶ್ವನಾಥ್ ಸಿಗಲಿಲ್ಲ. ನಾನೂ 2009ರ ನಡುವಿನಲ್ಲಿ ’ಈ ಸಂಜೆ’ ಬಿಟ್ಟು ’ಹೊಸದಿಗಂತ’ಕ್ಕೆ ಬಂದಿದ್ದೆ. ರೈಲು ನಿಲ್ದಾಣದ ಸಂಪರ್ಕ ಕಡಿಮೆಯಾಯಿತು. ಕಾಲಚಕ್ರ ಉರುಳಿತು. ಆ ಕಾಲವನ್ನು ಹಿಡಿಯಲು ಸಾಧ್ಯವೇ? ಹಾಗೆಯೇ ವಿಶ್ವನಾಥ್ ಅವರನ್ನೂ..
- ***
- ವಿಶ್ವನಾಥ್ ಅವರ ಈ ಫೋಟೋ ಯಾರು ಕ್ಲಿಕ್ಕಿಸಿದ್ದು ಅಂತ ಗೊತ್ತಿಲ್ಲ. ಬಹಳ ದಿನದಿಂದ ನನ್ನ ಸಂಗ್ರಹದಲ್ಲಿತ್ತು. ಆ ಅಜ್ಞಾತ ಛಾಯಾಗ್ರಾಹಕನಿಗೆ ನನ್ನ ಕೃತಜ್ಞತೆಗಳು.