• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS NATION

ಚೀನಾ ಕಕ್ಕುತ್ತಿರುವ ವಿಷ; ಅದು ಐದು ಸಾವಿರ ವರ್ಷಗಳ ದ್ವೇಷ

P K Channakrishna by P K Channakrishna
September 10, 2020
in NATION, NEWS & VIEWS
Reading Time: 2 mins read
0
ಚೀನಾ ಕಕ್ಕುತ್ತಿರುವ ವಿಷ; ಅದು ಐದು ಸಾವಿರ ವರ್ಷಗಳ ದ್ವೇಷ
923
VIEWS
FacebookTwitterWhatsuplinkedinEmail

ಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ. ನರಿಬುದ್ಧಿಯ ಚೀನಾ ಭಾರತವನ್ನು ತಡೆಯಲು ಎಲ್ಲ ರೀತಿಯ ದಾರಿಗಳನ್ನು ಹುಡುಕುತ್ತಿದೆ. ಪಾಕಿಸ್ತಾನದ ನಂತರ ನೇಪಾಳ, ಬಳಿಕ ಬಾಂಗ್ಲಾ ದೇಶ; ಅದಕ್ಕೂ ಮೊದಲೇ ಶ್ರೀಲಂಕಾ.. ಹೀಗೆ ಏಷ್ಯಾ ಉಪಖಂಡದ ಸಣ್ಣಪುಟ್ಟ ದೇಶಗಳನ್ನು ತನ್ನ ಸಾಲದ ಖೆಡ್ಡಕ್ಕೆ ಕೆಡವಿಕೊಳ್ಳುತ್ತಿದೆ. ಇಷ್ಟಕ್ಕೂ ಭಾರತದ ಮೇಲೆ ಚೀನಾಕ್ಕೇಕೆ ಹೊಟ್ಟೆಕಿಚ್ಚು. ಇವೆರಡು ದೈತ್ಯ ದೇಶಗಳ ಮೇಲೆ ಅದೆಷ್ಟು ವರ್ಷದ ದ್ವೇಷವಿದೆ? ಮಹಾಬಲಿಪುರದವೆರೆಗೂ ಬಂದು ತಾನೊಬ್ಬ ಬಡಾ ಲೀಡರ್‌ ಎಂದು ಬುಡಬುಡಕಿ ಹೊಡೆದ ಕ್ಸಿ ಸರ್ವಾಧಿಕಾರ ಮನಃಸ್ಥಿತಿಯ ನಾಯಕನ ಅಸಲಿ ಲೆಕ್ಕವೇನು? ಇಲ್ಲಿದೆ ರೋಚಕ ಕಥನ, ಓದಿ…


ಪ್ರಧಾನಿ ನರೇಂದ್ರ ಮೋದಿ ಅವರು ಭಾರತ-ಚೀನಾ ಗಡಿಯಲ್ಲಿ ಸೈನಿಕರ ಸಂಘರ್ಷ ಉಂಟಾದ ಬಳಿಕ, ಆ ಗಡಿಯಲ್ಲಿ ಎರಡೂ ದೇಶಗಳ ಸೇನೆಯ ಹೆಚ್ಚಿನ ನಿಯೋಜನೆಯಿಂದ ಉಂಟಾಗಿರುವ ಉದ್ವಿಗ್ನತೆ ಮತ್ತೂ ಬಿಗಡಾಯಿಸುತ್ತಿರುವ ಬೆನ್ನಲ್ಲಿಯೇ ಲೇಹಿಗೆ ಭೇಟಿ ನೀಡಿದ್ದಾರೆ. ಈ ಭೇಟಿ ನಿಜಕ್ಕೂ ಆ ನೆರೆ ದೇಶದಲ್ಲಿತೀವ್ರ ಕಂಪನ ಉಂಟು ಮಾಡಿರುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಅದು ಹೊಸ ಲೆಕ್ಕಾಚಾರದಲ್ಲಿ ಮುಳುಗಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.

  • ಗಾಲ್ವಾನ್‌ ಕಣಿವೆಯ ದೃಶ್ಯ.

ಇನ್ನೊಂದೆಡೆ ಜಾಗತಿಕವಾಗಿ ಚೀನಾಕ್ಕೆ ರಾಜತಾಂತ್ರಿಕ ಬೆಂಬಲ ನಿರೀಕ್ಷಿತ ಪ್ರಮಾಣದಲ್ಲಿಇಲ್ಲ. ಅಮೆರಿಕ, ರಷ್ಯಾ, ಬ್ರಿಟನ್ ಹಾಗೂ ಯುರೋಪ್ ಒಕ್ಕೂಟದ ಬಹುತೇಕ ರಾಷ್ಟ್ರಗಳು, ಮಿಲಿಟರಿ ಶಕ್ತಿಯಲ್ಲಿ ತನ್ನದೇ ತಾಕತ್ತು ಹೊಂದಿರುವ ಇಸ್ರೇಲ್, ಮತ್ತೂ ದಕ್ಷಿಣ ಏಷ್ಯಾದ ಆಯಕಟ್ಟಿನ ಜಾಗದಲ್ಲಿರುವ ಜಪಾನ್, ದಕ್ಷಿಣ ಕೊರಿಯಾ, ವಿಯೆಟ್ನಾಂನಂಥ ದೇಶಗಳೆಲ್ಲವೂ ಭಾರತದ ಪರವೇ ಇವೆ. ಯಾಕೆಂದರೆ, ಚೀನಾ ಈ ಎಲ್ಲ ದೇಶಗಳ ಪಾಲಿಗೆ ವಿಲನ್ ಆಗಿಬಿಟ್ಟಿದೆ. ಇದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣಿಸುತ್ತಿರುವ ಸಂಗತಿ. ಅದೇ ಚೀನಾಕ್ಕೆ ಮೊದಲ ಮಿತ್ರರಾಷ್ಟ್ರವಾಗಿ ನಮ್ಮ ನೆರೆಯ ಪಾಕಿಸ್ತಾನ ಮಾತ್ರ ಕಾಣಿಸುತ್ತಿದೆ. ಜತೆಗೆ ಉತ್ತರ ಕೊರಿಯಾ. ಇವೆರಡೂ ದೇಶಗಳನ್ನು ಚೀನಾ ಸಾಕುನಾಯಿಗಳು ಎಂದು ಕೆಲವರು ಈಗ ಲೇವಡಿ ಮಾಡುತ್ತಿದ್ದಾರೆ. ಅದರ ಹೊರತಾಗಿಯೂ ಅಮೆರಿಕ ಶತ್ರು ರಾಷ್ಟ್ರ ಇರಾನ್ ಕೂಡ ಚೀನಾಕ್ಕೆ ಹತ್ತಿರವೇನೂ ಇಲ್ಲ. ಪಾಕಿಸ್ತಾನ ಎಲ್ಲಿದ್ದರೆ ಅಲ್ಲಿ ಆಘ್ಘಾನಿಸ್ತಾನ ಇರುವುದಿಲ್ಲ. ಉತ್ತರ ಕೊರಿಯಾ, ಚೀನಾ ಪರವೇ ಇದೆ. ಅದರಿಂದ ನಮಗೆ ಆಗುವ ಸಮಸ್ಯೆಯೇನೂ ಇಲ್ಲ. ಹಾಗಾದರೆ ಸಮಸ್ಯೆ ಇರುವುದು ಎಲ್ಲಿ? ಚೀನಾ ಎಲ್ಲೆಲ್ಲಿ ನಮಗೆ ಉಪಟಳ ಮಾಡುತ್ತಿದೆ? ಯಾಕೆ ಹೀಗೆ? ಇದರ ಹಿಂದಿರುವ ಸುದೀರ್ಘ ಇತಿಹಾಸವೇನು? ಆ ಬಗ್ಗೆಇಲ್ಲಿ ಚರ್ಚೆ ಮಾಡೋಣ.

ಭಾರತ -ಚೀನಾ ನಡುವೆ 3,488 ಕಿ.ಮೀ ಉದ್ದ ಗಡಿ ಇದೆ. ಕೆಲ ಭಾಗಗಳಲ್ಲಿ ಗಡಿ ಗುರುತಿಸುವಿಕೆ ಪೂರ್ಣವಾಗಿ ಆಗಿಲ್ಲ. ಈ ಗಡಿಯನ್ನು14 ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಲಡಾಖ್‌ನ ಅಕ್ಸೈಚಿನ್‌ ಪ್ರದೇಶದಲ್ಲಿ ಎರಡೂ ದೇಶಗಳ ನಡುವೆ ವಾಸ್ತವ ನಿಯಂತ್ರಣ ರೇಖೆ ಚಾಚಿಕೊಂಡಿದೆ. ಜತೆಗೆ 1962ರಲ್ಲಿ ಯುದ್ಧದಿಂದ ಅಕ್ರಮವಾಗಿ ನಿಯಂತ್ರಣಕ್ಕೆ ಪಡೆದ ಅರುಣಾಚಲ ಪ್ರದೇಶದ 90,000 ಚದರ ಕಿ.ಮೀ ಪ್ರದೇಶವೂ ತನಗೆ ಸೇರಿದ್ದು ಎಂದು ಚೀನಾ ಮೊಂಡು ವಾದ ಮಾಡುತ್ತಲೇ ಇದೆ. ಈ ಪ್ರದೇಶವನ್ನು ದಕ್ಷಿಣ ಟಿಬೆಟ್‌ ಎಂದು ಅದು ಹೇಳಿಕೊಳ್ಳುತ್ತಿದೆ. ಪೂರ್ವ-ಪಶ್ಚಿಮ ವಿಭಾಗಗಳಲ್ಲದೆ ಉತ್ತರಾಖಂಡದ ಮಧ್ಯ ವಿಭಾಗದಲ್ಲಿಯೂ ಗಡಿ ಬಿಕ್ಕಟ್ಟು ಇದೆ. ಇಲ್ಲಿ 10,000 ಚದರ ಕಿ.ಮೀ ಪ್ರದೇಶದ ಮೇಲೆ ಚೀನಾ ಹಕ್ಕು ಸಾಧಿಸುತ್ತಿದೆ. 1986ರ ನಂತರ ಗಡಿ ವಿವಾದ ಪರಿಹಾರಕ್ಕೆ ಹಲವು ಸುತ್ತು ಮಾತುಕತೆಗಳು ನಡೆದಿವೆ. ಆದರೆ ಯಾವುದೇ ಪರಿಹಾರ ಸಿಕ್ಕಿಲ್ಲ.

ಚೀನಾ ಹೆದರಿದ್ದು ಎಲ್ಲಿ?

1962ರ ಯುದ್ಧದಲ್ಲಿ ಭಾರತವನ್ನು ಸೋಲಿಸಿ ಅದೇ ಗುಂಗಿನಲ್ಲಿದ್ದ ಚೀನಾಕ್ಕೆ ಮೊದಲು ಚೇಳು ಕಚ್ಚಿದಂತೆ ಆಗಿದ್ದು 2005ರಲ್ಲಿ. ಆಗಲೇ ಭಾರತ-ಅಮೆರಿಕ ಅಣುಶಕ್ತಿ ಒಪ್ಪಂದವಾಗಿದ್ದು. ನಮ್ಮ ಅಂದಿನ ಪ್ರಧಾನಿ ಡಾ. ಮನಮೋಹನ ಸಿಂಗ್ ಮತ್ತುಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಯೂ ಬುಷ್ ಜಂಟಿ ಹೇಳಿಕೆಯನ್ನು ನೀಡಿ ಘೋಷಿಸಿದ್ದರು. ಇದರ ಪ್ರಕಾರ ಭಾರತವು ಸೇನೆ ಮತ್ತು ರಕ್ಷಣೆ ಉದ್ದೇಶಕ್ಕೆ ಬಳಸುವ ಅಣುಶಕ್ತಿ ಮೂಲಗಳನ್ನು ಮತ್ತು ನಾಗರೀಕ ಕಾರ್ಯಗಳಿಗೆ ಬಳಸುವ ಮೂಲಗಳನ್ನು ಪ್ರತ್ಯೇಕಿಸಲು ಒಪ್ಪಿಕೊಂಡಿತು. ಇದಕ್ಕೆ ಪ್ರತಿಯಾಗಿ ಆ ವರೆಗೂ ನಿರ್ಭಂದಿತವಾಗಿದ್ದಅಣುಶಕ್ತಿ ಪೂರೈಸುವ ಗುಂಪಿನಿಂದ ನಾಗರೀಕ ಉದ್ದೇಶಗಳಿಗೆ ವಾಣಿಜ್ಯವನ್ನು ಪುನಾ ಆರಂಭಿಸಲು ಅನುಮತಿ ದೊರೆಯಿತು. ಇದು ಭಾರತೀಯ ರಾಜತಾಂತ್ರಿಕತೆಗೆ ಸಿಕ್ಕಿದ ಬಹುದೊಡ್ಡ ಗೆಲವು ಎಂದು ನಿಸ್ಸಂಶವಾಗಿ ಹೇಳಬಹುದು. ಇಂಥ ಐತಿಹಾಸಿಕ ಸಂದರ್ಭದಲ್ಲಿ ನಮ್ಮ ದೇಶದ ಎಡಪಕ್ಷಗಳು ಇದೇ ಕಾಲಕ್ಕೆ ಸಂಭ್ರಮಿಸಿ ಸರಕಾರದಿಂದ ಹೊರನಡೆದು ತಮ್ಮ ಭವಿಷ್ಯಕ್ಕೆ ಬೆಂಕಿ ಇಟ್ಟುಕೊಂಡರೆ ಅತ್ತ ಚೀನಾ ಆವೊತ್ತಿನಿಂದಲೇ ಭಾರತದ ಕುರಿತ ತನ್ನ ಸ್ಟ್ರ್ಯಾಟಜಿಯನ್ನು ಬದಲಿಸಿತ್ತು.

ಈ ಒಪ್ಪಂದ ಆದ ಮೇಲೆ ಸಹಜವಾಗಿಯೇ ಭಾರತ ಪರಮಾಣು ಪೂರೈಕೆದಾರರ ಗುಂಪಿನ (ಎನ್‌ಎಸ್‌ಜಿ) ಸದಸ್ಯತ್ವಕ್ಕೆ ಹಕ್ಕು ಪ್ರತಿಪಾದಿಸಿತು. ಅದು ನ್ಯಾಯವೂ ಆಗಿತ್ತು. ಚೀನಾಗೆ ಉರಿ ಹತ್ತಿಕೊಂಡಿದ್ದೇ ಅಲ್ಲಿ. 48 ದೇಶಗಳ ಎನ್‌ಎಸ್‌ಜಿ ಗುಂಪಿನಲ್ಲಿ ಸದಸ್ಯತ್ವ ಹೊಂದಿರುವ ಚೀನಾ, ಭಾರತದ ಪ್ರವೇಶಕ್ಕೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿತು. ಈ ಮೂಲಕ ಪಾಕಿಸ್ತಾನಕ್ಕೆ ಸದಸ್ಯತ್ವ ಕೊಡಿಸುವ ದುಸ್ಸಾಹಸಕ್ಕೆ ಕೈಹಾಕಿತು. ಭಾರತ ಮತ್ತು ಚೀನಾದ ರಾಜತಾಂತ್ರಿಕತೆಯಲ್ಲಿ ದೊಡ್ಡಮಟ್ಟದ ಬಿಕ್ಕಟ್ಟು ಉಂಟಾಗಿದ್ದು ಅಲ್ಲಿಯೇ. ಆದರೆ ನಮ್ಮಲ್ಲಿ ರಾಜಕೀಯ ಪಕ್ಷಗಳಲ್ಲಿ ಈ ಬಗ್ಗೆ ಸ್ಪಷ್ಟತೆಯೇ ಇರಲಿಲ್ಲ. ಬದಲಿಗೆ ಕೆಲ ಪಕ್ಷಗಳ ಟೀಕೆಗಳಲ್ಲಿ ಚೀನಾದ ರಾಗವಿದ್ದಂತಿತ್ತು.

ಇದಿಷ್ಟೇ ಅಲ್ಲ, ಕಥೆ ತುಂಬಾ ದೊಡ್ಡದಿದೆ

ಏನು ಈ ಕಥೆ? ನಾವು ಸ್ಪಲ್ಪ ಹಿಂದಕ್ಕೆ ಹೋಗೋಣ. ಎಲ್ಲರಿಗೂ ಗೊತ್ತಿರುವಂತೆ ಭಾರತ ಮತ್ತು ಚೀನಾ ದೇಶಗಳು ಸುಮಾರು 5 ಸಾವಿರಕ್ಕೂ ಹೆಚ್ಚು ವರ್ಷಗಳಷ್ಟು ಪ್ರಾಚೀನ ಇತಿಹಾಸವನ್ನು ಹೊಂದಿವೆ ಮತ್ತು ಆ ಇತಿಹಾಸದ ಅಡಿಪಾಯದ ಮೇಲೆಯೇ ಪ್ರಗತಿಯ ರೂಪುರೇಷೆಗಳನ್ನು ಬರೆದುಕೊಂಡಿವೆ. ಅನೇಕ ಇತಿಹಾಸಕಾರರು ಹೇಳುವಂತೆ, ಇಡೀ ಜಗತ್ತಿನಲ್ಲಿ ಇಷ್ಟು ಪ್ರಾಚೀನ ಇತಿಹಾಸವುಳ್ಳ ಬೇರೆ ದೇಶಗಳು ಇಲ್ಲವೇ ಇಲ್ಲ. ನಾಗರೀಕತೆ, ಸಂಶೋಧನೆ, ವಿಜ್ಞಾನ, ಅಭಿವೃದ್ಧಿ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಎರಡೂ ದೇಶಗಳಿಗೆ ಭಾರೀ ಪೈಪೋಟಿಯೇ ಇದೆ. ನಮ್ಮಲ್ಲಿ ಅತ್ಯಂತ ಶ್ರೇಷ್ಟವಾದ ಶಾಸ್ತ್ರೀಯ ಕಲೆಗಳು, ಲಲಿತ ಕಲೆಗಳು, ಸಾಹಿತ್ಯ, ಗಟ್ಟಿಯಾದ ತಾತ್ವಿಕ ಚಿಂತನೆಯ ನೆಲೆಗಟ್ಟು, ಗಣಿತದ ಬೆಳಕು, ಖಗೋಳ ವಿಜ್ಞಾನ ಮುಂತಾದ ವಿಷಯಗಳಲ್ಲಿ ಭಾರತ ತನ್ನದೇ ಆದ ಮಹತ್ವ ಹೊಂದಿದೆ. ಇನ್ನು ಚೀನಾಕ್ಕೆ ಬಂದರೆ, ವೈಜ್ಞಾನಿಕ ಸಂಶೋಧನೆಗಳಲ್ಲಿಅತ್ಯುತ್ತಮ ಸಾಧನೆಯನ್ನೇ ಮಾಡಿದೆ ಎನ್ನಬಹುದು. ಕಾಗದ, ಮುದ್ರಣ ಯಂತ್ರ, ಇಂಕ್, ಕಂಪಾಸ್.. ಹೀಗೆ ಅನೇಕ ಸಂಗತಿಗಳಿಗೆ ಆ ದೇಶ ಜನ್ಮ ನೀಡಿದೆ. ಕನ್ಫೂಷಿಯಸ್ ಅವರಂಥ ತಾತ್ವಿತ ಚಿಂತಕರು ಅಲ್ಲಿದ್ದರೆ, ಶಂಕರಾಚಾರ್ಯ, ರಾಮಾನುಜ, ಮಧ್ವರಂಥವರು ಮಾತ್ರವಲ್ಲದೆ ಬುದ್ಧ, ಮಹಾವೀರರಂಥ ಮಹಾನ್ ಚಿಂತಕರು ಹುಟ್ಟಿದ ನೆಲ ನಮ್ಮದು. ಹೀಗಾಗಿ ಎಲ್ಲ ಕೋನಗಳಲ್ಲಿಯೂ ಅದು ಭಾರತವನ್ನು ಸ್ಪಧಾತ್ಮಕವಾಗಿಯೇ ನೋಡುತ್ತಾ ಬಂದಿದೆ. ಆದರೆ ಈ ಸ್ಪರ್ಧೆ ಎನ್ನುವುದು ಕಣ್ಣಿಗೆ ರಾಚುವಂತೆ ಕಾಣುತ್ತಿರುವುದು ಒಂದು ದಶಕದಿಂದ ಈಚೆಗೆ.

ಗಾಲ್ವಾನ್ ಕಣಿವೆಯ ತಿಕ್ಕಾಟವನ್ನಿಟ್ಟುಕೊಂಡು ಭಾರತ- ಚೀನಾ ದೇಶಗಳನ್ನು ನೋಡಬಾರದು. 5,000 ವರ್ಷಗಳಷ್ಟು ಪುರಾತನವಾದ ಈ ದ್ವೇಷಕ್ಕೆ ಬೀಜಿಂಗ್ ತುಪ್ಪ ಸುರಿಯುತ್ತಿದ್ದರೆ, ಭಾರತ ಆ ಪರಂಪರೆಗೆ ಗೌರವ ಕೊಟ್ಟು ಸೆಣಸುತ್ತಿದೆ.

ಬೆಳವಣಿಗೆಯಲ್ಲಿ ಭಾರತಕ್ಕಿಂತ ವೇಗವಾಗಿದೆ!

ಇದು ಅಚ್ಚರಿಯಾದರೂ ನಿಜ. ಭಾರತ 1991ರಲ್ಲಿಯೇ ಭಾರತ ಮುಕ್ತ ಆರ್ಥಿಕ ವ್ಯವಸ್ಥೆಗೆ ತೆರೆದುಕೊಂಡಿತು. ಆದರೆ, ಚೀನಾ ಈ ವ್ಯವಸ್ಥೆಗೆ ಒಡ್ಡಿಕೊಂಡಿದ್ದು 1978ರಲ್ಲಿಯೇ. ಅಂದರೆ 23 ವರ್ಷಗಳ ಹಿಂದೆಯೇ ಅದು ಮುಕ್ತ ಮಾರುಕಟ್ಟೆಯತ್ತ, ಆರ್ಥಿಕ ಸುಧಾರಣೆಗಳತ್ತ ಮುಖ ಮಾಡಿತ್ತು. ಆಗಿನ ಚೀನಾದ ಸುಪ್ರೀಂ (ಸರ್ವಾಧಿಕಾರದ ಲಕ್ಷಣಗಳಿರುವ) ಲೀಡರ್ ಆಗಿದ್ದ ಡೆಂಗ್ ಕ್ಸಿಯಾಂಗ್ ಪಿಂಗ್ ನೇತೃತ್ವದ ಕಮ್ಯುನಿಸ್ಟ್ ಆಡಳಿತ ಮೈಚಳಿ ಬಿಟ್ಟು ಆರ್ಥಿಕತೆಯ ಎಲ್ಲ ದಾರಿಗಳನ್ನು ಮುಕ್ತಗೊಳಿಸಿತು. ಅಲ್ಲಿಂದ ಚೀನಾ ಅದೆಷ್ಟು ವೇಗವಾಗಿ ರೀ ಟೇಕಾಫ್ ಆಯಿತೆಂದರೆ 2010ರ ಹೊತ್ತಿಗೆ ಜಗತ್ತಿನ 2ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದ್ದ ಜಪಾನನ್ನು ಹಿಂದಿಕ್ಕಿ ಮುಂದೆ ಸಾಗಿತು. ಹಾಗಿದ್ದರೆ 1978ರಲ್ಲಿ ಭಾರತ ಏನು ಮಾಡುತ್ತಿತ್ತು? ಅದೇ ಕ್ಷುಲ್ಲಕ ಪಾಲಿಟಿಕ್ಸಿನಲ್ಲಿ ನಿರತವಾಗಿತ್ತು, ಮತ್ತೂ ಪ್ರಬಲ ರಾಜಕೀಯ ನಾಯಕತ್ವದ ಕೊರತೆ ಎದುರಿಸುತ್ತಿತ್ತು. ಮೊರಾರ್ಜಿ ದೇಸಾಯಿ ನಮ್ಮ ಪ್ರಧಾನಿಯಾಗಿದ್ದರು, ತುರ್ತುಪರಿಸ್ಥಿತಿ ನಂತರದ ರಾಜಕೀಯ ತಿಕ್ಕಾಟದಲ್ಲಿ ನೆರೆ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರಿತುಕೊಳ್ಳಲು ಸಂಪೂರ್ಣವಾಗಿ ಅವರು ಸೋತರು ಎನ್ನಲೇಬೇಕು. ಅದಾದ ಮೇಲೆ ಬಂದ ಚರಣ್ ಸಿಂಗ್ ಸರಕಾರವು ರಾಜಕೀಯದ ಮೇಲೆ ದೃಷ್ಟಿ ಇಟ್ಟಿತ್ತೇ ಹೊರತು ಚೀನಾದತ್ತ ನೋಡಲಿಲ್ಲ. ಅಲ್ಲಿ ರಾಜಕೀಯ ಅಸ್ಥಿರತೆಯ ಪ್ರಶ್ನೆಯೇ ಇರಲಿಲ್ಲ. ಡೆಂಗ್ ಪಾಲಿಗೆ ಆ ಹೊತ್ತಿನ ಭಾರತೀಯ ನಾಯಕತ್ವ ಯಾವ ರೀತಿಯಲ್ಲೂ ಸಡ್ಡು ಹೊಡೆಯಲಿಲ್ಲ. ಇದು ಆರ್ಥಿಕವಾಗಿ ಚೀನಾ ಎದುರು ಭಾರತ ಎದುರಿಸಿದ ಮೊದಲ ಸೋಲು. ಆದರೆ 1991ರಲ್ಲಿ ಅಧಿಕಾರಕ್ಕೆ ಪಿ.ವಿ. ನರಸಿಂಹರಾವ್ ಬರುವ ಹೊತ್ತಿಗೆ ಭಾರತವೂ ಬಹುತೇಕ ದಿವಾಳಿಯೆದ್ದು ಹೋಗಿತ್ತು. ವಿದೇಶಿ ವಿನಿಮಯ ತೀರಿ ವಿದೇಶಿ ಬ್ಯಾಂಕುಗಳ ಸಾಲಕ್ಕೆ ಇಎಂಐ ಪಾವತಿ ಮಾಡಲಾಗದಷ್ಟು ಅಸಹಾಯಕ ಸ್ಥಿತಿ ತಲುಪಿತ್ತು. ವಿ.ಪಿ.ಸಿಂಗ್, ಚಂದ್ರಶೇಖರ್ ಸರಕಾರಗಳ ಅಸ್ಥಿರತೆಯಿಂದ ಆಡಳಿತಕ್ಕೆ, ದೇಶಕ್ಕೆ ಜಿಡ್ಡು ಹೊಡೆದಂತೆ ಆಗಿದ್ದರೆ, ಅತ್ತ ಚೀನಾದಲ್ಲಿ ಪ್ರಬಲ ನಾಯಕತ್ವವೇ ಇತ್ತು. ಡೆಂಗ್ ಮತ್ತವರ ನಂತರ ಬಂದ ಜಿಯಾಂಗ್ ಜೆಮಿನ್ ದೇಶದ ಸವೋಚ್ಛ ನಾಯಕನಾಗಿ ದೇಶವನ್ನು ಮುನ್ನಡೆಸಿದರು. ಹೀಗೆ 1977ರಿಂದ 1980, ಅದೇ 1980ರಿಂದ 1991ರವರೆಗೆ ಇಡೀ ಅರ್ಥ ವ್ಯವಸ್ಥೆ ಹಳ್ಳಹಿಡಿದು ಹೋಗಿತ್ತು. ಆಗ ಬಂದವರೆ ಪಿ.ವಿ. ನರಸಿಂಹ ರಾವ್ ಮತ್ತು ಅವರ ಜತೆಯಲ್ಲೇ ಡಾ. ಮನಮೋಹನ ಸಿಂಗ್. ಮುಕ್ತ ಆರ್ಥಿಕ ನೀತಿಯ ದಿಕ್ಕಿಗೆ ಅಷ್ಟೇ ಮುಕ್ತವಾಗಿ ತೆರೆದುಕೊಂಡ ದೇಶದಲ್ಲಿ ಲೈಸನ್ಸ್ ರಾಜ್ ವ್ಯವಸ್ಥೆ ಹೋಗಿ ಖಾಲಿಯಾಗಿದ್ದ ವಿದೇಶಿ ವಿನಿಮಯವು ಭರ್ತಿಯಾಗುತ್ತ ಬಂತು.

ಇದಾದ ಮೇಲಾದರೂ ಭಾರತ ಬುದ್ಧಿ ಕಲಿಯಿತಾ? ಇಲ್ಲ! ಪಿವಿ ಆದ ಮೇಲೆ ಭಾರತ ಮೂವರು ಪ್ರಧಾನಿಗಳನ್ನು ಕಂಡಿತು. ವಾಜಪೇಯಿ ಸರಕಾರ 13 ದಿನಕ್ಕೇ ಹೋದರೆ, ದೇವೇಗೌಡರ ಸರಕಾರ ಒಂದು ವರ್ಷವನ್ನೂ ಪೂರೈಸಲಿಲ್ಲ. ಅವರಾದ ನಂತರ ಬಂದ ಫಾರಿನ್ ಪಾಲಸಿ ಎಕ್ಸ್ ಫರ್ಟ್ ಐ.ಕೆ. ಗುಜ್ರಾಲ್ ಕೂಡ ಗೌಡರಿಗಿಂತ ಕೇವಲ 8 ದಿನವಷ್ಟೇ ಹೆಚ್ಚು ಆಡಳಿತ ನಡೆಸಿ ನಿರ್ಗಮಿಸಿದರು. ಈ ಮೂವರೂ ಪ್ರಧಾನಿಗಳ ಕಾಲದಲ್ಲಿ ಚೀನಾದಲ್ಲಿ ಒಬ್ಬರೇ ಇದ್ದರು. ಅದು ಚೀನಾ ಗೋಡೆಯಂತಹ ಜಿಯಾಂಗ್ ಜೆಮಿನ್.

ಹೀಗೆ ರಾಜಕೀಯ ಅಸ್ಥಿರತೆಯಿಂದ ಹಾಳುಬಿದ್ದ ಆರ್ಥಿಕತೆ ಮತ್ತೆ ಪ್ರಗತಿಯ ಕನಸು ಚಿಗುರುವಂತೆ ಮಾಡಿದವರು ಅಟಲ್ ಬಿಹಾರಿ ವಾಜಪೇಯಿ. 1998ರಲ್ಲಿ ಅಧಿಕಾರಕ್ಕೆ ಬಂದ ಅವರು ಅಲ್ಲಿಂದ ಆರೂ ಚಿಲ್ಲರೆ ವರ್ಷ ಕಾಂಗ್ರೆಸ್ಸೇತರ ಸ್ಥಿರ ಸರಕಾರ ನೀಡಿದ ಹೆಗ್ಗಳಿಕೆ ಅವರದ್ದು. ಇವರ ಕಾಲದಲ್ಲಿ ನಡೆದ 2ನೆ ಹಂತದ ಅಣ್ವಸ್ತ್ರ ಪರೀಕ್ಷೆ ಅತ್ತ ಚೀನಾವನ್ನುಇತ್ತ ಪಾಕಿಸ್ತಾನವನ್ನು ಮತ್ತಷ್ಟು ಹತ್ತಿರಕ್ಕೆ ತಂದಿತ್ತು. ಆದರೆ ವಾಜಪೇಯಿ ಸರಿಯಾದ ದಿಕ್ಕಿನಲ್ಲೆ ಹೆಜ್ಜೆ ಇಟ್ಟಿದ್ದರು. ವಿಪರ್ಯಾಸವೆಂದರೆ ಅವರದ್ದೂ ಸಮ್ಮಿಶ್ರ ಸರಕಾರವೇ, ಐವತ್ತಾರು ವೈರುಧ್ಯಗಳ ಮತ್ತು ಆಲೋಚನೆಗಳ 13 ಪಕ್ಷಗಳ ಒಕ್ಕೂಟವದು. ಡಿಎಂಕೆಯಂಥ ಪಕ್ಷ ಅವರ ಜತೆಯಲ್ಲೂ ಇತ್ತು. ಅವರು, ಪಿವಿ ಹಾಕಿದ್ದ ಅಡಿಪಾಯದ ಮೇಲೆಯೇ ಭಾರತವನ್ನು ಮತ್ತಷ್ಟು ಭದ್ರವಾಗಿ ನಿಲ್ಲಿಸಿದ್ದರು. ಅವರಾದ ಮೇಲೆ ಬಂದ ಡಾ. ಮನಮೋಹನ ಸಿಂಗ್ ಸರಕಾರ ಸ್ಥಿರ ಆಡಳಿತ ನೀಡಿತು ಮಾತ್ರವಲ್ಲ, ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿತು. ಭಾರತ- ಅಮೆರಿಕ ಅಣುಬಂಧವೂ ಸೇರಿ ಅನೇಕ ಮಹತ್ವದ ಹೆಜ್ಜೆಗಳು ಮೂಡಿದವು. ಆದರೆ, ಡಿಎಂಕೆ, ಆರ್ಜೆಡಿಯಂಥ ಪಕ್ಷಗಳು ಕೂಟದಲ್ಲಿ ರಾಜಿಗಳು ಜಾಸ್ತಿಯಾದವೇ ವಿನಾ ಚೀನಾದಂತೆ ಉತ್ಪಾದನಾ ದಿಕ್ಕಿನಲ್ಲಿ ಮುನ್ನಡೆಯಲಿಲ್ಲ. 2014ರಲ್ಲಿ ಮೋದಿ ಬಂದ ಮೇಲೆ ಭಾರತದಲ್ಲಿ ಅಂತಹ ಮುನ್ನಡೆಗೆ ವೇಗ ಬಂದಿತಾದರೂ ಅವರ 2ನೇ ಅವಧಿಯಲ್ಲಿ ಕೋವಿಡ್ ಅದಕ್ಕೆ ಬ್ರೇಕ್ ಹಾಕಿದೆ. ಆದರೆ ಅಸ್ಥಿರ ರಾಜಕೀಯದ ಕಾರಣಕ್ಕೆ ನಾವು ಚೀನಾದಿಂದ ಬಹಳ ಹಿಂದೆ ಬಿದ್ದೆವು ಎಂಬುದರಲ್ಲಿ ಸಂಶಯವೇ ಇಲ್ಲ.

ನಾವು ಹಿನ್ನಡೆ ಕಂಡ ಪರಿಸ್ಥಿತಿಯಲ್ಲೇ ಚೀನಾ ಶರವೇಗದಲ್ಲಿ ಬೆಳೆದಿದೆ. ಕಳೆದ 30 ವರ್ಷಗಳಲ್ಲಿ ಅದು ’ರಭಸ’ವಾಗಿ ಬೆಳೆದಿದೆ. ಜಗತ್ತೇ ಬೆರಗಾಗುವ ರೀತಿಯಲ್ಲಿ ಉತ್ಪಾದನಾ ಕ್ಷೇತ್ರದಲ್ಲಿ ಮುಂದಕ್ಕೆ ಹೋಗಿದೆ. ಅಮೆರಿಕವೂ ಸೇರಿ ಬೇರೆ ಯಾವ ದೇಶವು ಹೀಗೆ ವೇಗವಾಗಿ ಬೆಳೆಯಲಿಲ್ಲ. ಚೀನಾ ಮುಂದೆ ಜಪಾನ್ ಕೂಡ ಮಂಕಾಯಿತು ಎನ್ನಲೇಬೇಕು. ಉತ್ಪಾದನಾ ಲೆಕ್ಕವನ್ನು ಪರಗಣಿಸಿ ಲೆಕ್ಕ ಹಾಕಿದರೆ ಚೀನಾ ಯಾವತ್ತೋ ಅಮೆರಿಕವನ್ನು ಹಿಂದಿಕ್ಕಿದೆ. ಕಳೆದ ನಾಲ್ಕು ವರ್ಷಗಳಿಂದ ಅಮೆರಿಕ ಪ್ರಗತಿಯಲ್ಲಿ ಹಿನ್ನಡೆ ಕಂಡಿದೆ. ಡೊನಾಲ್ಟ್ ಟ್ರಂಪ್ ಆ ದೇಶದ ಪ್ರತಿಷ್ಠೆಗೆ ದೊಡ್ಡ ಪೆಟ್ಟುಕೊಟ್ಟ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಇದನ್ನು ಚೀನಾ ತನ್ನ ಅನುಕೂಲಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಂಡಿತು. ಈ ನಾಲ್ಕು ವರ್ಷಗಳಲ್ಲಿ ತನ್ನ ಉತ್ಪನ್ನಗಳು ಜಗತ್ತಿನ ಎಲ್ಲ ಮೂಲೆಗಳಲ್ಲೂ ಇರುವಂತೆ ಚೀನಾ ನೋಡಿಕೊಂಡಿತು. ಅಮೆರಿಕ ಇದನ್ನು ಅಲಕ್ಷಿಸಿತು. ದೂರದೃಷ್ಟಿ ಇಲ್ಲದ ಟ್ರಂಪ್ ಜಗತ್ತಿನ ಅನೇಕ ಸಕಾರಾತ್ಮಕ ಸಾಧ್ಯತೆಗಳನ್ನು ನೀರುಪಾಲು ಮಾಡಿದರು. ಇದೇ ವೇಳೆ ಜಗತ್ತಿನ ಇನ್ನೊಂದು ಶಕ್ತಿಯಾಗಿ ಹೊರಹೊಮ್ಮುತ್ತಿದ್ದ ಯುರೋಪಿಯನ್ ಒಕ್ಕೂಟದ ಗೋಡೆಗಳು ಶಿಥಿಲವಾಗುತ್ತಾ ಹೋಗುತ್ತಿವೆ. ಇಂಗ್ಲೆಂಡಿನಂಥ ದೇಶ ಆ ಒಕ್ಕೂಟದಿಂದ ಹೊರನಡೆಯಿತು. ಪರಿಣಾಮ ಯುರೋಗಿಂತ ಚೀನಾದ ಯೂಹಾನ್ ಬಲವಾಗುತ್ತಿದೆ. ಹೀಗೆ ಏಷ್ಯಾದಲ್ಲಿ ಅಗ್ರದೇಶವಾಗಿ ಹೊರಹೊಮ್ಮಿದ ಚೀನಾಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿರುವುದು ಭಾರತ ಮಾತ್ರ. ಒನ್ ಬೆಲ್ಟ್ ಒನ್ ರೋಡ್ ಮೂಲಕ ಅಮೆರಿಕವನ್ನು ತೆರೆಮರೆಗೆ ಸರಿಸಲು ಹೊರಟ ಆ ದೇಶಕ್ಕೆ ಭಾರತವನ್ನುರಾಜತಾಂತ್ರಿಕವಾಗಿ ಮಣಿಸಲು, ಒಂಟಿಯಾಗಿಸಲು ಸಾಧ್ಯವಾಗುತ್ತಿಲ್ಲ. ಅದರ ಯಾವ ಷಡ್ಯಂತ್ರಕ್ಕೂ ಭಾರತ ಬೀಳುತ್ತಿಲ್ಲ.

  • 2019ರ ಶಾಂಗೈ ಶೃಂಗಸಭೆಯಲ್ಲಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್.‌ ಈ ಚಿತ್ರದಲ್ಲಿ ಚೀನಾ ಅಧ್ಯಕ್ಷರ ಜತೆಗೆ, ಪ್ರಧಾನಿ ಮೋದಿ ಕೂಡ ಇದ್ದರು.
courtesy: Wikipedia

ಪಾಕಿಸ್ತಾನದ ಮೇಲೆ ಚೀನಿ ಪ್ರೀತಿ ಯಾಕೆ?

ಭಾರತ-ಪಾಕ್ ಯಾವತ್ತೂ ಒಂದಾಗುವ ದೇಶಗಳಲ್ಲ ಎಂಬುದು ಚೀನಾಕ್ಕೆ ಚೆನ್ನಾಗಿ ಗೊತ್ತು. ಶತ್ರುವಿನ ಶತ್ರು ಮಿತ್ರ ಎಂಬ ಪಾಲಸಿಯನ್ನುಇಲ್ಲಿ ಚೀನಾ ಪ್ಲೇ ಮಾಡಿದೆ. ಭಾರತವನ್ನು ಹಿಡಿದಿಡಬೇಕಾದರೆ ಅದಕ್ಕೆ ಪಾಕಿಸ್ತಾನ ಬೇಕೇಬೇಕು. ಈ ಮೂಲಕ ಭಾರತದ ಸುತ್ತಲೂ ಇರುವ ದೇಶಗಳನ್ನು ಅದು ಟಚ್ ಮಾಡುತ್ತಿದೆ. ನಮ್ಮ ದೇಶವನ್ನು ಯುದ್ಧಕ್ಕೆ ದೂಡುವುದೋ ಅಥವಾ ನೆರೆ ದೇಶಗಳ ಜತೆಗೆ ಸದಾ ಜಗಳಕ್ಕೆ ದೂಡಿ ಅಭಿವೃದ್ಧಿಯ ಕಡೆ ಗಮನ ಹರಿಸದಂತೆ ಮಾಡುವುದು ಬೀಜಿಂಗಿನ ಒಳಉದ್ದೇಶ.ನೇಪಾಳ ಪ್ರಹಸನ ಇದೇ ಕಾರಣಕ್ಕೆ ಆದದ್ದು. ಇದು ಭಾರತಕ್ಕೆ ಚೆನ್ನಾಗಿ ಅರ್ಥವಾಗಿದೆ. ಇನ್ನು ಭೌಗೋಳಿಕವಾಗಿ ನಮಗಿಂತ ಎರಡುಪಟ್ಟು ದೊಡ್ಡದಾದರೂ ಅನೇಕ ವಿಷಯಗಳಲ್ಲಿ ಭಾರತಕ್ಕಿರುವ ಅನುಕೂಲಗಳು ಚೀನಾಕ್ಕೆ ಇಲ್ಲ. ಸಮುದ್ರ ತೀರವೂ ಇದರಲ್ಲಿ ಪ್ರಮುಖ. ನಮಗೆ ಹೋಲಿಸಿದರೆ ಅದಕ್ಕೆ ದೊಡ್ಡ ತೀರವೇನೂ ಇಲ್ಲ. ಇರುವ ಸಮುದ್ರ ಭಾಗದಲ್ಲಿ ಅದು ಅನೇಕ ತೊಂದರೆಗಳನ್ನು ಎದುರಿಸುತ್ತಿದೆ, ಮೇಲಾಗಿ ದಕ್ಷಿಣ ಆಸಿಯಾ ಜಲಮಾರ್ಗವೂ ಹಿಂದೂ ಮಹಾಸಾಗರದಷ್ಟು ಮಹತ್ವದ್ದಲ್ಲ. ಹೀಗಾಗಿ ಹಿಂದೂ ಮಹಾಸಾಗರದ ಭಾಗವಾಗಿರುವ ಅರಬ್ಬಿ ಸಮುದ್ರಕ್ಕೆ ಎಂಟ್ರಿ ಕೊಡಲು ಚೀನಾ ಆರ್ಥಿಕವಾಗಿ, ಸೈನಿಕವಾಗಿ ಹಾಗೂ ವ್ಯೂಹಾತ್ಮಕವಾಗಿ ಹೆಜ್ಜೆಗಳನ್ನು ಇಡುತ್ತಿದೆ. ಅದಕ್ಕಾಗಿ ಪಾಕ್ ಬೆನ್ನು ಸವರುತ್ತಿದೆ.

ಇನ್ನು ಚೀನಾ 14 ದೇಶಗಳ ಜತೆ ಗಡಿ ಹೊಂದಿದೆ. ಅದರಲ್ಲಿ ಅದರ 10ಕ್ಕೂ ಹೆಚ್ಚು ದೇಶಗಳ ಜತೆ ಗಡಿ ಜಗಳ ಹೊಂದಿದೆ. ಇನ್ನು ದಕ್ಷಿಣ ಸಮುದ್ರದ ಭಾಗ ಬಿಟ್ಟರೆ ಉಳಿದೆಲ್ಲದಿಕ್ಕುಗಳು ಲ್ಯಾಂಡ್ ಲಾಕ್ಡ್. ಹೀಗಾಗಿ ಅರಬ್ಬಿ ಸಮುದ್ರಕ್ಕೆ ಬರುವುದು ಅದಕ್ಕೆ ಅಗತ್ಯವಿದೆ. ಜಗತ್ತಿನ ಅತಿದೊಡ್ಡ ಆಯಿಲ್ ಮತ್ತು ಟ್ರೇಡ್ ಲೈನ್ ಆಗಿರುವ ಹಿಂದೂ ಮಹಾಸಾಗರಕ್ಕೆ ಬರುವುದೂ ಅದರ ಭವಿಷ್ಯದ ಗುರಿ. ಈ ಉದ್ದೇಶಕ್ಕಾಗಿ ಚೀನಾವು ಪಾಕಿಸ್ತಾನವನ್ನು ಭಾರತದ ವಿರುದ್ಧ ಎತ್ತಿಕಟ್ಟುತ್ತ ಆರ್ಥಿಕವಾಗಿ, ಸೈನಿಕವಾಗಿ ನೆರವಾಗುತ್ತಿದೆ.

ಯಾಕೆಂದರೆ, ಆಫ್ಘಾನಿಸ್ತಾನ ಅಥವಾ ಇರಾನ್ ದೇಶಗಳು ಚೀನಾ ಬಲೆಗೆ ಬೀಳುವುದು ಅನುಮಾನ. ಆಘ್ಘಾನಿಸ್ತಾನದಲ್ಲಿ ರಷ್ಯ, ಬ್ರಿಟನ್ ಮತ್ತು ಅಮೆರಿಕಗಳು ಮಾಡಿದ್ದು ಏನೆಂಬುದನ್ನು ಇರಾನ್ ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಹೀಗಿರುವಾಗಲೇ ಚೀನಾ, ಪಾಕಿಸ್ತಾನದಲ್ಲಿ ಬಹಳಷ್ಟು ಹೂಡಿಕೆ ಮಾಡುತ್ತಿದೆ. ಭಾರತವು ಆ ದೇಶದ 59 ಆಪ್ ಗಳನ್ನು ನಿಷೇಧ ಮಾಡಿದ ಮೇಲೆ ಅಲ್ಲಿ ಈ ಹೂಡಿಕೆ ಪ್ರಮಾಣ ಮತ್ತೂ ಹೆಚ್ಚಬಹುದು. ಹೀಗೆ ಎಲ್ಲ ಅಂಶಗಳನ್ನು ಸಮರ್ಪಕವಾಗಿ ಗ್ರಹಿಸುತ್ತ ಚೀನಾದ ಆಡಳಿತ ಭಾರತದ ಸುತ್ತಲಿನ ರಾಷ್ಟ್ರಗಳನ್ನು ಚಿವುಟುತ್ತಾ ಒಂದು ಬಲೆಯನ್ನು ಹೆಣಿಯುತ್ತಿದೆ. ಭಾರತಕ್ಕೆ ಇದನ್ನು ರಾಜತಾಂತ್ರಿಕವಾಗಿ ಎದುರಿಸುವುದು ಬಿಟ್ಟರೆ ಬೇರೆ ದಾರಿ ಇಲ್ಲ. ಒಂದು ವೇಳೆ ಯುದ್ಧಕ್ಕೆ ನಿಂತರೆ ನಾವು ಬೀಜಿಂಗ್ ಬಲೆಗೆ ಬಿದ್ದಂತೆಯೇ ಸರಿ.

ಇನ್ನೊಂದೆಡೆ ಕ್ಸಿ ಸಾಯುವ ತನಕ ಅಧಿಕಾರದಲ್ಲಿರುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅಧ್ಯಕ್ಷಗಿರಿ ಜತೆಗೆ ಅಧಿನಾಯಕನ (ಇರಾನಿನಲ್ಲಿ ಸುಪ್ರೀಂ ಲೀಡರ್ ಇರುವ ಹಾಗೆ) ಕುರ್ಚಿಯಲ್ಲೂ ಅವರೇ ಕೂತಿದ್ದಾರೆ. ಹಿಂದೆ ಜಿಯಾಂಗ್ ಜೆಮಿನ್ ತಮ್ಮ ನಂತರದ ನಾಯಕತ್ವಕ್ಕೆ ಅಧಿಕಾರವನ್ನು ಸುಲಭವಾಗಿ ಹಸ್ತಾಂತರಿಸಿದ್ದರು, ಹೂ ಜಿಂಟಾವೋ ಕೂಡ 2013ರಲ್ಲಿ ಕ್ಸಿ ಕೈಗೆ ದೇಶವನ್ನು ಕೊಟ್ಟಿದ್ದರು. ಈಗ ನೋಡಿದರೆ, ಕ್ಸಿ ತಾವು ಬದುಕಿರುವಂತೆಯೇ ಬೇರೆ ಯಾರಿಗೂ ಅಧಿಕಾರ ನೀಡುವ ಹಾಗಿಲ್ಲ. 2018ರಲ್ಲೇ ಅಧ್ಯಕ್ಷ ಪದವಿಗಿದ್ದ ಎರಡು ಅವಧಿಗಳ ಮಿತಿಯನ್ನು ಅವರು ರದ್ದಾಗುವಂತೆ ನೋಡಿಕೊಂಡರು. ಅತ್ತ ಜನರಲ್ಲಿ, ಇತ್ತ ಕಮ್ಯುನಿಸ್ಟ್ ಪಕ್ಷದಲ್ಲಿ ಒಳಬೇಗುದಿ ಹೆಚ್ಚಲು ಇದು ಕಾರಣವಾಗಿದೆ. ಎಷ್ಟೇ ಅಭಿವೃದ್ಧಿ ಹೊಂದುತ್ತಿದ್ದರು ವ್ಯಕ್ತಿ ಸ್ವಾತಂತ್ರ್ಯ ಹಾಗೂ ರಾಜಕೀಯ ಬದಲಾವಣೆ ಇಲ್ಲದಿದ್ದರೆ ಚೀನಾ ಇನ್ನೊಂದು ಉತ್ತರ ಕೊರಿಯಾವೋ ಜಿಂಬಾಬ್ವೆ ಆಗಿಬಿಟ್ಟರೇನು ಗತಿ ಎಂಬ ಆತಂಕವೂ ಹೆಚ್ಚುತ್ತಿದೆ. ಪಕ್ಕದ ರಷ್ಯದಲ್ಲೂ ಪುಟಿನ್ 2032ರವರೆಗೆ ಅಂದರೆ, ಇನ್ನೂ 16 ವರ್ಷಗಳ ತನಕ ತಾವೇ ಕುರ್ಚಿಯಲ್ಲಿ ಕೂರುವ ಹಾಗೆ ಮಾಡಿಕೊಂಡಿದ್ದಾರೆ. ಇಂತಹ ಪರಿಣಾಮಗಳ ಬಿಸಿ ನೆರೆ ದೇಶಗಳಿಗೂ ತಟ್ಟುತ್ತಿದೆ. ಅಕ್ಕಪಕ್ಕ ದೇಶಗಳ ಮೇಲೆ ಯುದ್ಧೋತ್ಸಾಹ ತೋರಿಸಿ ಜನರ ಪಾಲಿಗೆ ತಮ್ಮ ನಾಯಕತ್ವದ ಅನಿವಾರ್ಯತೆ ಸೃಷ್ಟಿಸುವ ಹೀನ ರಾಜಕೀಯವದು.

  • ಝೀರೋ ಸಿನಿಮಾ

ಅರ್ಥ ವ್ಯವಸ್ಥೆಗೆ ಗಡಿ ಕಟ್ಟುವುದು ಕಷ್ಟ

ಸಿಕೆನ್ಯೂಸ್ ನೌ ಜತೆ ಮಾತನಾಡಿದ ಹಿರಿಯ ಪತ್ರಕರ್ತ ಹಾಗೂ ವಿಶ್ಲೇಷಕ ಬಿ.ವಿ. ಶಿವಶಂಕರ್ ಅವರು ಇಡೀ ಬಿಕ್ಕಟ್ಟನ್ನು ಅವಲೋಕಿಸಿದ್ದು ಹೀಗೆ..

“ಚೀನಾ ವರಸೆ ಯಾರಿಗೂ ಅಚ್ಚರಿ ಉಂಟು ಮಾಡಿಲ್ಲ. ಅದರ ಈ ನಡೆಯ ಹಿಂದೆ ಬಹಳ ಹೋಮ್ ವರ್ಕ್ ಇರಬೇಕು. ಹಾಗೆ ನೋಡಿದರೆ ಎರಡೂ ದೇಶಗಳು ಆರ್ಥಿಕ, ವಾಣಿಜ್ಯ ಕ್ಷೇತ್ರಗಳಲ್ಲಿ ಪರಸ್ಪರ ಹೊಂದಾಣಿಕೆಯ ತಂತ್ರ ಅನುಸರಿಸುತ್ತಿದ್ದವು. ಚೀನಾಕ್ಕೆ ಭಾರತದ ಮಾರುಕಟ್ಟೆ ಬೇಕು. ಅದೇ ರೀತಿ ಭಾರತಕ್ಕೆ ಚೀನಾದ ಮನರಂಜನಾ ಕ್ಷೇತ್ರದ ಅಗತ್ಯವಿದೆ. ಬಾಹುಬಲಿ, ಪಿಕೆ, ದಂಗಲ್ ದಂಥ ಚಿತ್ರಗಳು ಚೀನಾ ಬಾಕ್ಸಾಫೀಸನ್ನುಕೊಳ್ಳೆ ಹೊಡೆದಿದ್ದವು. ನಮ್ಮಲ್ಲಿ ಪ್ಲಾಫ್ ಆಗಿದ್ದ ಶಾರುಖ್ ಖಾನ್ ನಟನೆಯ ಝೀರೋ ಸಿನಿಮಾ ನೆರೆ ದೇಶದಲ್ಲಿ 500 ಕೋಟಿ ರೂ. ಗಳಿಸಿತ್ತು. ಭಾರತೀಯ ಚಿತ್ರರಂಗದ ಪಾಲಿಗೆ ಚೀನಾ ದೊಡ್ಡ ಮಾರುಕಟ್ಟೆ. ಮುಂದಿನ ಐದು ವರ್ಷಗಳಲ್ಲಿ ಇದು ನಿರ್ಣಾಯಕ ಹಂತಕ್ಕೆ ಹೋಗುವುದಿತ್ತು. ಈ ಮೊದಲು ರಜನೀಕಾಂತ್ ಸಿನಿಮಾಗಳು ಜಪಾನಿನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದವು. ಅದಕ್ಕೂ ಹಿಂದೆ ರಷ್ಯದಲ್ಲಿ ರಾಜಕಪೂರ್ ಅವರ ಆವಾರ ಸಿನಿಮಾ ಭಾರೀ ಸದ್ದು ಮಾಡಿತ್ತು. ಈ ಹಿನ್ನಲೆಯಲ್ಲಿ ನೋಡಿದರೆ ಇವತ್ತು ವ್ಯಾಪಾರ-ವಾಣಿಜ್ಯ ಎಂಬುದು ಗಡಿ ಮೀರಿ ಬೆಳೆದಿದೆ. ಚೀನಾಗೆ ಇದು ಚೆನ್ನಾಗಿ ಗೊತ್ತ, ಭಾರತಕ್ಕೂ ತಿಳಿದಿದೆ” ಎಂದು ಅವರು ವಿಶ್ಲೇಷಿಸುತ್ತಾರೆ.

ಜಾಗತಕವಾಗಿ ನಡೆಯುತ್ತಿರುವ ರಾಜಕೀಯ ಪಲ್ಲಟಗಳು ಹೊಸ ಹೊಸ ಬಿಕ್ಕಟ್ಟುಗಳನ್ನು ಸೃಷ್ಟಿ ಮಾಡುತ್ತಿವೆ. ಆ ಬಗ್ಗೆ ಎಂದು ಹಿರಿಯ ಪತ್ರಕರ್ತ ಕೆ.ಕರಿಸ್ವಾಮಿ ಹೀಗೆನ್ನುತ್ತಾರೆ. “”ಚೀನಾ ಕಡೆಯಿಂದ ಆಗುತ್ತಿರುವ ಸಮಸ್ಯೆ ಇದು. ಸಾಯುವವರೆಗೂ ಆಳಬೇಕು ಎಂಬ ಹಪಾಹಪಿ ಶುರುವಾಗಿದೆ. ಪುಟಿನ್ ಮತ್ತು ಕ್ಸಿ ಆ ದಿಕ್ಕಿನಲ್ಲಿದ್ದಾರೆ. ಈ ರೋಗ ಜಗತ್ತಿಗೇ ವ್ಯಾಪಿಸುತ್ತಿದೆ. ಹೀಗಾಗಿ ಚೀನಾ ನಾಯಕತ್ವವು ಭಾರತದ ಮೇಲೆ ಮುಗಿಬೀಳುತ್ತಿದೆ. ಅಲ್ಲಿನ ಕಮ್ಯುನಿಸ್ಟ್ ಪಕ್ಷದೊಳಗೆ ಉಂಟಾಗಿರುವ ತಿಕ್ಕಾಟವನ್ನು ಚೀನಿಯರಿಂದ ಮರೆಮಾಚಲು ಯತ್ನಿಸಲಾಗುತ್ತಿದೆ. ಇದನ್ನು ಭಾರತ ಬಹಳ ಎಚ್ಚರಿಕೆಯಿಂದ ಗಮನಿಸಬೇಕು ಮತ್ತು ಎದುರಿಸಬೇಕು” ಎನ್ನುತ್ತಾರೆ ಅವರು.

ಪ್ರಜಾಪ್ರಭುತ್ವಕ್ಕೆ ತೆರೆದುಕೊಂಡು ಜನರಿಗೆ ಮುಕ್ತತೆಯನ್ನು ಕೊಟ್ಟಿರುವ ಭಾರತಕ್ಕೆ ಈಗ ಇರುವಂತಹ ರಾಜಕೀಯ ಸ್ಥಿರತೆಯ ಅಗತ್ಯವಿದೆ. ಬಲಶಾಲಿ ನಾಯಕತ್ವವೂ ಬೇಕಿದೆ. ಮೋದಿ ಅವರಲ್ಲಿ ಅದೆಲ್ಲ ಇದೆ. ಅವರ ನಂತರವೂ ಅಂತಹ ನಾಯಕತ್ವ ಬೇಕಿದೆ. ಅದಕ್ಕೆ ಸಿದ್ಧತೆ ಅನಿವಾರ್ಯ.

ಕೆಲ ದಿನಗಳ ಹಿಂದೆ ನನ್ನ ಹಿರಿಯ ಗೆಳೆಯರೊಬ್ಬರು ಹೇಳುತ್ತಿದ್ದರು. “ಕೊರೋನವನ್ನು ಜಗತ್ತಿನ ಅತಿದೊಡ್ಡ ಪೀಡೆ ಎಂದು ರಾಜಕೀಯ ನಾಯಕರು ಬಿಂಬಿಸುತ್ತಿದ್ದಾರೆ. ಆ ವೈರಸ್ ಬೆಂಕಿಯಲ್ಲಿ ತಮ್ಮ ಬೇಳೆಯನ್ನೂ ಬೇಯಿಸಿಕೊಳ್ಳುತ್ತಿದ್ದಾರೆ. ಆದರೆ, ನಮ್ಮ ದೇಶದಲ್ಲಿ ಕೊರೋನಗಿಂದ ದೊಡ್ಡ ಪೀಡೆ ಎಂದರೆ ಕರಪ್ಷನ್, ಅದಕ್ಕಿಂತ ಇನ್ನೂ ದೊಡ್ಡ ಪೀಡೆಯೆಂದರೆ ಅನಕ್ಷರತೆ!!

ಅವರ ಮಾತುಗಳಲ್ಲಿ ಸತ್ಯವಿದೆ. ಚೀನಾದಂಥ ಕುತ್ಸಿತ ದೇಶಗಳನ್ನು ಎದುರಿಸಬೇಕಾದರೆ ನಾವು ಇನ್ನೂ ಬದಲಾಗಬೇಕು. ಆರ್ಥಿಕ ಸುಧಾರಣೆಗಳ ರೀತಿಯಲ್ಲೇ ರಾಜಕೀಯ ಸುಧಾರಣೆಗಳು ಜರೂರಾಗಿ ಆಗಬೇಕು. ಮನೆಗೊಂದು ಪಾರ್ಟಿ, ರಾಜ್ಯದಲ್ಲಿ ಹತ್ತು ಪಾರ್ಟಿಗಳೆಂಬ ಚಿತ್ರಣ ಬದಲಾಗಲೇ ಬೇಕು. ನಾಯಕರು ಪಕ್ಷಗಳ ಪಡಸಾಲೆಗಳ ಬದಲಿಗೆ ಜನರ ನಡುವಿನಿಂದ ಬರಬೇಕು. ಅಪ್ಪ, ಮಗ, ಮೊಮ್ಮಗ, ಮರಿ ಮೊಮ್ಮಕ್ಕಳು ನಾಯಕರ ಅವತಾರವೆತ್ತುವ ಫ್ಯಾಮಿಲಿ ಪಾಲಿಟಿಕ್ಸಿಗೆ ಇತಿಶ್ರೀ ಹಾಡುವ ಅಗತ್ಯ ಎಷ್ಟಾದರೂ ಇದೆ.

ಭಾರತ, 1962 ಭಾರತವಲ್ಲ ಎಂಬುದು ಎಷ್ಟು ಸತ್ಯವೋ ಚೀನಾ ಕೂಡ 1962ರ ಚೀನಾ ಅಲ್ಲ ಎಂಬುದನ್ನು ಮರೆಯಬಾರದು. ಆ ಬಗ್ಗೆ ಯೋಚಿಸಿ ನಿರ್ಧರಿಸಲು ಇದು ಸಕಾಲ. ಯೋಚಿಸೋಣ.

ಈ ಲೇಖನವನ್ನೂ ಓದಬಹುದು..

ಟಿಕ್‌ಟಾಕ್ ಜನನ ಸೆ. 2007; ನಿಧನ 29ನೇ ಜೂ.2020, ಸತ್ತ ಸ್ಥಳ: ಭಾರತ
Tags: galwan valleyindia-chinamodi
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಟಿಕ್‌ಟಾಕ್  ಜನನ ಸೆ. 2007; ನಿಧನ 29ನೇ ಜೂ.2020, ಸತ್ತ ಸ್ಥಳ: ಭಾರತ

ಟಿಕ್‌ಟಾಕ್ ಜನನ ಸೆ. 2007; ನಿಧನ 29ನೇ ಜೂ.2020, ಸತ್ತ ಸ್ಥಳ: ಭಾರತ

Leave a Reply Cancel reply

Your email address will not be published. Required fields are marked *

Recommended

ನಂದಿಬೆಟ್ಟಕ್ಕೆ ರೋಪ್ ವೇ; ಜುಲೈ 23ಕ್ಕೆ ಸಚಿವ ಸಿ.ಪಿ.ಯೋಗೇಶ್ವರ ಸ್ಥಳ ಪರಿಶೀಲನೆ

ನಂದಿಬೆಟ್ಟಕ್ಕೆ ರೋಪ್ ವೇ; ಜುಲೈ 23ಕ್ಕೆ ಸಚಿವ ಸಿ.ಪಿ.ಯೋಗೇಶ್ವರ ಸ್ಥಳ ಪರಿಶೀಲನೆ

4 years ago
ಕಂಟೈನರ್’ನಲ್ಲಿ ಕೋವಿಡ್ ಐಸಿಯು! ಇದು ಮೊಬೈಲ್ ಕ್ಯಾಂಟೀನ್ ಥರ !!

ಕಂಟೈನರ್’ನಲ್ಲಿ ಕೋವಿಡ್ ಐಸಿಯು! ಇದು ಮೊಬೈಲ್ ಕ್ಯಾಂಟೀನ್ ಥರ !!

5 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ