ಆವತ್ತು ಸೆಪ್ಟೆಂಬರ್ 2 (2009), ಬುಧವಾರ. ಮಧ್ಯಾಹ್ನ 2 ಗಂಟೆ ಹೊತ್ತಿಗೆಲ್ಲ ಡಾ. ವೈ.ಎಸ್. ರಾಜಶೇಖರ ರೆಡ್ಡಿ ಅವರ ಹೆಲಿಕಾಪ್ಟರ್ ಅಪಘಾತದ ಸುದ್ದಿ ನಮಗೆ ಬಂದಿತ್ತು. ಸುದ್ದಿವಾಹಿನಿಗಳಲ್ಲಿ ಅಂದು, ಅದು ಬಿಟ್ಟರೆ ಬೇರೆ ಏನೂ ಇರಲಿಲ್ಲ. ಬೆಳಗ್ಗೆ 8.30 ಗಂಟೆಗೆ ಹೈದರಾಬಾದಿನಿಂದ ಹೊರಟ ಹೆಲಿಕಾಪ್ಟರ್ 9.35ರ ಹೊತ್ತಿಗೆ ಸಂಪರ್ಕಕ್ಕೆ ಸಿಗದೆ ಕಣ್ಮರೆಯಾಗಿತ್ತು. ರೆಡಾರ್ ಸಂಪರ್ಕ ಕಳೆದುಕೊಂಡಿದ್ದ ಹೆಲಿಕಾಪ್ಟರ್ ಏನಾಗಿರಬಹುದು ಎಂಬುದು ಯಕ್ಷಪ್ರಶ್ನೆಯಾಗಿತ್ತು. ಅಪಘಾತವೋ, ಸುರಕ್ಷಿತ ಭೂಸ್ಪರ್ಶವೋ ಏನೆಂದೂ ಗೊತ್ತಾಗದ ಸ್ಥಿತಿ. ವಿಜಯಪುರದ ದೇವರ ನಿಂಬರಗಿ ಗ್ರಾಮದಲ್ಲಿ ಕೊಳವೆಬಾವಿಗೆ ಬಿದ್ದಿದ್ದ ಏಗವ್ವ ಎಂಬ ಪುಟ್ಟ ಬಾಲಕಿಯನ್ನು ಹಿಂದಿನ ದಿನದಿಂದ ರಕ್ಷಿಸಲು ಹೆಣಗಾಟ ನಡೆದಿತ್ತು. ಆಗಲೂ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಆ ಮಗುವಿಗಾಗಿ ಮಿಡಿದಿದ್ದರು. ತಮ್ಮ ಫುಲ್ ಫೋಕಸ್ ಆ ಕಡೆಗೇ ಮಾಡಿದ್ದ ಸುದ್ದಿವಾಹಿನಿಗಳು ಗಂಟೆ ಹನ್ನೊಂದು ದಾಟುವ ವೇಳೆಗೆ ಕಂಪ್ಲೀಟ್ ವೈಎಸ್ಸಾರ್ ಕಡೆಯತ್ತಲೇ ಕ್ಯಾಮೆರಾ ಇಟ್ಟವು. ಮುಖ್ಯವಾಗಿ ಹೈದರಾಬಾದ್ ಮೂಲದ ಟಿವಿ9 ಕನ್ನಡ ವಾಹಿನಿ ತಾಜಾ ಸುದ್ದಿ ಕೊಡುತ್ತಿತ್ತು. ಅವರು ಇದ್ದಾರಾ? ಇಲ್ಲವೇ ಬಚಾವಾಗಿದ್ದಾರಾ? ಬಚಾವಾಗಿದ್ದರೆ ಅವರಿಗೆ ಸಿಕ್ಕಾಪಟ್ಟೆ ಗಾಯಗಳಾಗಿರುತ್ತವೆ, ಲೈಫ್ ಚಾನ್ಸ್ ತೀರಾ ಕಡಿಮೆ.. ಹೀಗೆ ವಾಹಿನಿಗಳಲ್ಲಿ ನಡೆದಿದ್ದ ವಾದವಿವಾದಗಳು ರೇಜಿಗೆ ಹುಟ್ಟಿಸುವ ಹಾಗಿದ್ದವು. ಚಿತ್ತೂರು ಜಿಲ್ಲೆ ನಲ್ಲಮಲ್ಲ ಅರಣ್ಯದಲ್ಲಿ ವೈಎಸ್ ಅವರ ಹೆಲಿಕಾಪ್ಟರ್ ಕಣ್ಮರೆಯಾಗಿತ್ತು. ಪ್ರತಿಕೂಲಕರ ವಾತಾವರಣದಿಂದ ಅದು ಅಪಘಾತಕ್ಕೀಡಾಗಿರಬಹುದು, ಇಲ್ಲವೇ ಸುರಕ್ಷಿತವಾಗಿ ಲ್ಯಾಂಡ್ ಆಗಿರಬಹುದು. ಆದರೆ, ಆ ಸಾಧ್ಯತೆ ಕಡಿಮೆ ಎಂಬ ಚರ್ಚೆಗಳು ತಾರಕ್ಕೇರಿದ್ದವು.
ನಾನು ಆಗ ‘ಹೊಸದಿಗಂತ’ದಲ್ಲಿದ್ದೆ. ನಾನು ಸುದ್ದಿ ಸಂಪಾದಕನಾಗಿದ್ದರೆ ರವಿಪ್ರಕಾಶ್ ಅವರು ಕಾರ್ಯನಿರ್ವಾಹಕ ಸಂಪಾದಕರು. ದು.ಗು.ಲಕ್ಷ್ಮಣರು ನಮಗೆಲ್ಲ ಸಂಪಾದಕರಾಗಿದ್ದರು. ಸಾಧಾರಣ 6 ಗಂಟೆಗೆ ಆಗಬೇಕಿದ್ದ ನಮ್ಮ ಸಂಪಾದಕೀಯದ ಮೀಟಿಂಗ್ ಆವತ್ತು ಕೊಂಚ ತಡವಾಯಿತು. ವೈಎಸ್ ಅವರ ಸುದ್ದಿ ಏನಾಗುತ್ತದೋ ಎಂಬ ಆತಂಕ ಬೇರೆ. ನಮಗಾಗಲಿ, ಕನ್ನಡದ ಯಾವ ಮೀಡಿಯಾಗಾಗಲಿ ಸ್ಪಷ್ಟತೆ ಇರಲಿಲ್ಲ. ಆವರೆಗೆ ಅವರ ಹೆಲಿಕಾಪ್ಟರ್ ಪತ್ತೆ ಆಗಿರಲಿಲ್ಲ. ಹೈದರಾಬಾದಿನಲ್ಲಿ ಸಂಜೆ ಹೊತ್ತಿಗೆ ಪತ್ರಿಕಾಗೋಷ್ಠಿ ಕರೆದ ಕೆ.ರೋಶಯ್ಯ ಅವರು, (ಇವರು ವೈಎಸ್ ಸಂಪುಟದಲ್ಲಿ ಹಣಕಾಸು ಮಂತ್ರಿಯಾಗಿದ್ದರು. ಆಮೇಲೆ ಸಿಎಂ ಆದರು.) “ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಎಲ್ಲೋ ಕ್ಷೇಮವಾಗಿರಬಹುದು. ಈವರೆಗೂ ಅವರ ಜಾಡು ಗೊತ್ತಾಗಿಲ್ಲ. ಅರಣ್ಯಕ್ಕೆ ತೆರಳಿ ಶೋಧ ಮಾಡುವಂತೆ ಅಕ್ಕಪಕ್ಕದ ಗ್ರಾಮಗಳ ಜನರನ್ನು ಕೋರಲಾಗಿದೆ. ಸಿಎಂ ಅವರು ಸುರಕ್ಷಿತವಾಗಿ ಮರಳಿ ಬರುತ್ತಾರೆಂಬ ನಂಬಿಕೆ ನಮಗಿದೆ” ಎಂದು ಹೇಳಿದರು. ಅಷ್ಟೊತ್ತಿಗೆ ಬಹತೇಕರಿಗೆ ವೈಎಸ್ಸಾರ್ ಬದುಕುಳಿದಿರುವ ಬಗ್ಗೆ ಅನುಮಾನ ಉಂಟಾಗಿತ್ತು. ನ್ಯಾಷನಲ್ ಮೀಡಿಯಾವಂತೂ ನಾನಾ ರೀತಿಯ ವಿಶ್ಲೇಷಣೆಗಳನ್ನು ಮಾಡುತ್ತಿತ್ತು. ಅದೇ ಹೊತ್ತಿಗೆ ನಮ್ಮ ತಂದೆಯವರು ಕರೆ ಮಾಡಿ, “ಅಪ್ಪಯ್ಯ, ರಾಜಶೇಖರ ರೆಡ್ಡಿ ಹೆಲಿಕಾಪ್ಟರ್ ಆಕ್ಸಿಡೆಂಟ್ ಆಯಿತಂತೆ, ಹೌದಾ?” ಎಂದು ಕನ್ನಡದ ಬದಲು ತೆಲುಗಿನಲ್ಲೇ ಕೇಳಿದ್ದರು. ಅವರಿಗೆ ಕರ್ನೂಲು, ಅನಂತಪುರ, ಪುಲಿವೆಂದಲ (ಪುಲಿವೆಂದಲ, ವೈಎಸ್ಸಾರ್ ಅವರ ವಿಧಾನಸಭಾ ಕ್ಷೇತ್ರ) ಚೆನ್ನಾಗಿ ಗೊತ್ತು. ಅದರಲ್ಲೂ ವರ್ಷಕ್ಕ ಒಮ್ಮೆಯಾದರೂ ತಪ್ಪದೇ ಮಂತ್ರಾಲಯಕ್ಕೆ ಹೋಗುವ ಅವರು ಆ ಟೈಮಿನಲ್ಲಿ ಆಂಧ್ರದಲ್ಲೊಂದು ಸುತ್ತು ಹಾಕಿ ಬರುತ್ತಾರೆ.
ಇನ್ನು ಹೊಸದಿಗಂತ ಕಚೇರಿಯಲ್ಲಿ ನಾನು, ರವಿಪ್ರಕಾಶ್ ಚರ್ಚೆ ಮಾಡಿದೆವು, ಸುದ್ದಿಗೆ ಜಾಗ ಎಷ್ಟು ಎಂದು. ಕೆಲ ದಿನಗಳ ಹಿಂದೆ ಇದೇ ವೈಸ್ಸಾರ್ ವಿರುದ್ಧ ಮುಖಪುಟದಲ್ಲೇ ಸುದ್ದಿ ಮಾಡಿದ್ದೆವು ನಾವು. ಪವಿತ್ರ ತಿರುಮಲದ ಒಂದಿಷ್ಟು ಜಾಗವನ್ನು ಸ್ವತಃ ಕ್ರೈಸ್ತರಾದ ವೈಎಸ್ಸಾರ್ ಕೆಲ ಕ್ರೈಸ್ತ ಮಿಷನರಿಗಳಿಗೆ ಕೊಡಲು ಮುಂದಾಗಿದ್ದರು ಎಂಬುದು ಆ ಸುದ್ದಿ. ಆಗ್ಗೆ ಜಾಲತಾಣಗಳು ಇಲ್ಲದಿದ್ದರೂ ಲವ್ ಜಿಹಾದಿನಷ್ಟೇ ವೈರಲ್ ಆಗಿತ್ತು ಈ ಸುದ್ದಿ. ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರೇ ಸ್ವತಃ ತಿರುಮಲಕ್ಕೆ ತೆರಳಿ ಯಾವುದೇ ಕಾರಣಕ್ಕೂ ಒಂದು ಅಂಗುಳದಷ್ಟು ಭೂಮಿಯನ್ನೂ ಮಿಷನರಿಗಳಿಗೆ ಕೊಡಬಾರದು ಎಂದು ಒತ್ತಾಯ ಮಾಡಿ ಬಂದಿದ್ದರು. ಇದೆಲ್ಲವನ್ನೂ ಕಂಡಿದ್ದ ನನಗೆ ಹೊಸದಿಗಂತದಲ್ಲಿ ವೈಎಸ್ಸಾರ್ ಸುದ್ದಿಗೆಷ್ಟು ಮಹತ್ವ ಸಿಗಬಹುದು ಎಂದು ಒಳಲೆಕ್ಕ ಹಾಕತೊಡಗಿದ್ದೆ. ನಾನು ಆ ಬಗ್ಗೆ ನಕಾರಾತ್ಮಕವಾಗಿಯೇ ಇದ್ದೆ. ಆದರೆ, ರವಿಪ್ರಕಾಶ್ “ಮೊದಲ ಪುಟದಲ್ಲಿ ನಾಲ್ಕು ಕಾಲಂ ಲೀಡ್ ಮಾಡೋಣ” ಅಂದರು. ನನಗೆ ಅದು ಆಗುವುದೂ ಅನುಮಾನವೇ ಎಂಬಂತಿತ್ತು. ಕೊನೆಗೆ ದು.ಗು. ಲಕ್ಷ್ಮಣರನ್ನು ಒಂದು ಮಾತು ಕೇಳುವುದು ಅಂತಾಗಿ, ನಾನು ಅವರನ್ನು ಕೇಳಿದೆ. “ಸರ್, ವೈಎಸ್ಸಾರ್ ಸುದ್ದಿ ಎಷ್ಟು ಕವರ್ ಮಾಡಬಹುದು? ನಮ್ಮಲ್ಲಿ ಸ್ವಲ್ಪ ಜಾಸ್ತಿ ಸ್ಪೇಸ್ ಕೊಡಬಹುದೇ” ಎಂದು ಕೇಳಿದೆ. “ನೀವು ಎಷ್ಟು ಸ್ಪೇಸ್ ಕೊಡಬೇಕು ಎಂದುಕೊಂಡಿದ್ದೀರಿ”, ನನ್ನನ್ನೇ ಕೇಳಿದರು. “ಪೇಜ್ ಒಂದರಲ್ಲಿ ಲೀಡ್, ಇನ್ಸೈಡ್ ಅರ್ಧ ಪುಟ” ಎಂದೆ. ನನ್ನನ್ನೇ ದುರುಗುಟ್ಟಿದ ದು.ಗು. ಅವರು, “ಅವರು ಸಿಟ್ಟಿಂಗ್ ಸಿಎಂ ಚನ್ನಕೃಷ್ಣ. ಈ ರೀತಿಯ ಘಟನೆ ಇದೇ ಮೊದಲು ಸಂಭವಿಸಿದೆ. ಸುದ್ದಿ ದೊಡ್ಡದು. ತಿರುಮಲದ ಕಾರಣಕ್ಕೆ ನಾವು ಅವರನ್ನು ಟೀಕಿಸಿದ್ದೆವು, ಸರಿ. ಅದು ನಮ್ಮ ಸಿದ್ದಾಂತ. ಇದು ಸುದ್ದಿ. ಎಲ್ಲ ಓದುಗರಿಗೂ ಸೇರುವಂಥದ್ದು, ಜಾಸ್ತಿ ಜಾಗ ಕೊಡಿ” ಎಂದುಬಿಟ್ಟರು.
ನನಗೆ ಅವರ ಮಾತುಗಳನ್ನು ಅರಗಿಸಿಕೊಳ್ಳಲು ಕೊಂಚ ಸಮಯವೇ ಬೇಕಾಯಿತು. ಸುದ್ದಿ ಕುರಿತ ಅವರ ನಿಲುವು ನನಗೆ ಅಚ್ಚರಿ ತಂದಿತ್ತು. ಅದಾದ ಮೇಲೆ ಮಂಗಳೂರಿನ ನಮ್ಮ ಹಿರಿಯ ಸಹೋದ್ಯೋಗಿಗಳಾಗಿದ್ದ ಪ್ರಕಾಶ್ ಇಳಂತಿಲ, ದಿನಕರ ಇಂದಾಜೆ ಅವರದ್ದೂ ಇದೇ ಅಭಿಪ್ರಾಯವಾಗಿತ್ತು. ನನಗೋ ಈ ಅಚ್ಚರಿಯನ್ನು ಅರಗಿಸಿಕೊಳ್ಳಲು ಮತ್ತೂ ಸಮಯ ಹಿಡಿಯಿತು. ಕಾರಣ ಇಷ್ಟೇ, ಸಂಘ ಪರಿವಾರದ ಪತ್ರಿಕೆಯಾದ ಹೊಸದಿಗಂತದಲ್ಲಿ ವೈಎಸ್ಸಾರ್ ಸುದ್ದಿಗೆ ಅಷ್ಟೊಂದು ಜಾಗ ಸಿಗಲಾರದು ಎಂಬುದು ನನ್ನ ಪೂರ್ವಗ್ರಹವಾಗಿತ್ತು. ಅದು ಆ ಕ್ಷಣಕ್ಕೇ ಸುಳ್ಳಾಯಿತು. “ಎಲ್ಲ ನಿಮ್ಮ ವಿವೇಚನೆಗೆ ಬಿಟ್ಟದ್ದು. ಸುದ್ದಿಗೆ ಎಷ್ಟು ಬೇಕೋ ಅಷ್ಟೂ ಜಾಗ ಕೊಡಿ. ನನ್ನ ವಿಚಾರದಲ್ಲಿ ಹೇಳುವುದಾದರೆ ಎರಡು ಪುಟ ಮಾಡಿ” ಎಂದರು ಸಿಇಓ ಪಿ.ಎಸ್. ಪ್ರಕಾಶ್ ಅವರು. ಆದರೆ ನಮ್ಮ ಜತೆ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಸೋಮಶೇಖರ್ ಮಾತ್ರ ಒಬ್ಬರೇ ಬಂದು, “ನ್ಯೂಸ್ ಪ್ರಿಂಟ್ ಕಾಸ್ಟ್ ಜಾಸ್ತಿ ಇದೆ. ಸ್ವಲ್ಪ ನೋಡಿಕೊಂಡು ಮಾಡಿ” ಎಂದು ನನ್ನ ಕಿವಿಯಲ್ಲಿ ಉಸುರಿದ್ದರು. ಅವರ ಮಾತೂ ಸತ್ಯವಿತ್ತು. ಆಗ್ಗೆಯೇ ಮುದ್ರಣದ ಕಾಗದದ ಮೇಲೆ ’ಡಾಲರ್ ಗಿರಿ’ ಜೋರಾಗಿ ನಡೆಯುತ್ತಿತ್ತು.
ಅಷ್ಟೇ, ಬಳಿಕ ಹತ್ತೇ ನಿಮಿಷದ ಮೀಟಿಂಗ್. ಅದಾದ ಮೇಲೆ ರವಿಪ್ರಕಾಶ್, ಚನ್ನೇಗೌಡ (ಈಗಿನ ವಿಜಯವಾಣಿ ಸಂಪಾದಕರು), ಶಾಂತಾರಾಮ್, ರಾಜೇಂದ್ರ, ಮಂಜು, ಬಾಲು ಹೀಗೆ ಎಲ್ಲರೂ ವೈಎಸ್ ಸುದ್ದಿಗಳತ್ತ ಹೊರಳಿದರು. ನಾನು ಪೇಜ್ ಪ್ಲಾನ್ ಕಡೆ ದೃಷ್ಟಿ ಇಟ್ಟೆ. ಆವತ್ತಿನ ಸುದ್ದಿಗಳೊಂದಿಗೆ ಪತ್ರಿಕೆ ಮುದ್ರಣಕ್ಕೆ ಹೋಯಿತು. ತಡರಾತ್ರಿ ನಾನು ಎಡಿಷನ್ ಮುಗಿಸಿಕೊಂಡು ಆಟೋದಲ್ಲಿ ಮನೆಗೆ ಹೊರಟಾಗ ನಿತ್ಯವೂ ನನ್ನನ್ನು ಡ್ರಾಪ್ ಮಾಡುತ್ತಿದ್ದ ಆಟೋ ಚಾಲಕ, “ಸರ್, ಆ ವೈಎಸ್ಸಾರ್ ಉಳಿದಿರಲ್ಲ, ಬೇಕಾದ್ರೆ ನೋಡಿ. ತಿರುಪತಿ ತಿಮ್ಮಪ್ಪನ ಜಾಗವನ್ನು ಕ್ರೈಸ್ತರಿಗೆ ಕೊಟ್ಟರೆ ದೇವರು ಮೆಚ್ಚಾನ..” ಅಂತ ಮಾತು ಶುರುವಿಟ್ಟುಕೊಂಡರು. ನನಗೆ ಕಾಡುತ್ತಿದ್ದದು ದು.ಗು. ಲಕ್ಷ್ಮಣರು ಮಾತ್ರ, ಮತ್ತು ಅವರ ಮಾತುಗಳು. ಕಟ್ಟಾ ಸ್ವಯಂ ಸೇವಕರು ಅವರು. ಆದರೆ ಸುದ್ದಿಯ ಬಗ್ಗೆ ವಿಶಾಲ ನಿಲವು ಹೊಂದಿದ್ದವರು. ಬಹುಶಃ ಆ ರಾತ್ರಿ ಎರಡು ಗಂಟೆ ಸಮಯವದು. ನಾನು ಕೆ.ಆರ್.ಪುರಕ್ಕೆ ಮೊದಲು ಬರುವ ಟಿನ್ ಫ್ಯಾಕ್ಟರಿ ನಂತರದ ಕೆ.ಆರ್. ಪುರ ರೈಲು ನಿಲ್ದಾಣದ ತೂಗು ಸೇತುವೆಯ ಮೇಲಿದ್ದೆ. ನಮ್ಮ ಆಟೋ ಅದರ ಮೇಲೆ ಹೋಗುತ್ತಿತ್ತು. ನಿರ್ಜನ ವಾತಾವರಣ, ಅಕ್ಕಪಕ್ಕ ವಾಹನಗಳಿಲ್ಲ. ಆಟೋದಿಂದ ಒಮ್ಮೆ ಇಣುಕಿದೆ, ಆ ತೂಗು ಸೇತುವೆ ಸಾಲು ದೀಪಗಳ ಬೆಳಕಿನ ನಡುವೆ ವಿರಾಜಮಾನವಾಗಿ ಕಾಣುತ್ತಿತ್ತು. ಆದರೆ, ದು.ಗು. ಅವರು ನನಗೆ ಆ ಕ್ಷಣದಲ್ಲಿ ಆ ಸೇತುವೆಗಿಂತ ಎತ್ತರದಲ್ಲಿದ್ದ ಹಾಗೆ ಕಾಣಿಸಿತು.
***
ಮರುದಿನ, ಅಂದರೆ ಗುರುವಾರ. ಸೆಪ್ಟೆಂಬರ್ 3. ನಾನು ಬೆಳಗ್ಗೆ ಹತ್ತಕ್ಕೆಲ್ಲ ಕಚೇರಿಯಲ್ಲಿದ್ದೆ. ಅಷ್ಟೊತ್ತಿಗೆ ವೈಎಸ್ಸಾರ್ ಇಲ್ಲವೆಂಬ ಸುದ್ದಿ ಬಂದಿತ್ತು. ಹಿಂದಿನ ರಾತ್ರಿಯೆಲ್ಲ ಹಳ್ಳಿ ಜನ, ಪೊಲೀಸರು ನಲ್ಲಮಲ್ಲ ಕಾಡಿನ ಬಹುತೇಕ ಪ್ರದೇಶಗಳನ್ನು ತಡಕಾಡಿದ್ದರು. ಬೆಳಗ್ಗೆ ಹೊತ್ತಿಗೆ ಅವರ ಹೆಲಿಕಾಪ್ಟರ್ ಅದೇ ಅರಣ್ಯದ ರುದ್ರಕೋಟ ಎಂಬ ಪ್ರದೇಶದಲ್ಲಿ ಪತ್ತೆಯಾಗಿತ್ತು. ಅವರ ಸಾವಿನ ಸುದ್ದಿ ಇಡೀ ದೇಶಾದ್ಯಂತ ವ್ಯಾಪಿಸಿಬಿಟ್ಟಿತ್ತು. ಆಂಧ್ರ ಪ್ರದೇಶ (ಇನ್ನೂ ತೆಲಂಗಾಣ ಬಂದಿರಲಿಲ್ಲ) ಜನರಂತೂ ಸಾಗರೋಪಾದಿಯಲ್ಲಿ ಹೊರಬಂದು ರೋಧಿಸತೊಡಗಿದ್ದರು. ಅವರ ಸಾವಿನ ಸುದ್ದಿ, ಆ ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳನ್ನು ಹಾಗೂ ವೈಎಸ್ಸಾರ್ ಕುರಿತ ಪುಟಗಳನ್ನು ಮಾಡುವುದು ನಮ್ಮ ಉದ್ದೇಶವಾಗಿತ್ತು. ಮತ್ತೆ ನಾನಾಗಲಿ, ರವಿಪ್ರಕಾಶ್ ಆಗಲಿ ದು.ಗು. ಲಕ್ಷ್ಮಣರನ್ನಾಗಲಿ ಅಥವಾ ಪ್ರಕಾಶರನ್ನಾಗಲಿ ಕೇಳಲಿಲ್ಲ. ಜಾಗದ ಬಗ್ಗೆ ನಾವೇ ನಿರ್ಧರಿಸಿದೆವು. “ನಿಂಗೆ ರಾಜಶೇಖರ ರೆಡ್ಡಿ ಬಗ್ಗೆ ಚೆನ್ನಾಗಿ ಗೊತ್ತಲ್ಲ. ಒಂದು ವ್ಯಕ್ತಿಚಿತ್ರ ಬರಿ” ಅಂದರು ರವಿಪ್ರಕಾಶ್. ಅರ್ಧ ಗಂಟೆಯಲ್ಲಿ ನನ್ನ ಕಾಪಿ ಸಿದ್ಧವಾಯಿತು. ಅದನ್ನು ಓದಿದ ರವಿಪ್ರಕಾಶ್, “ಬಹಳ ಆಪ್ತವಾಗಿ ಬರೆದಿದ್ದಿಯಾ. ಸೆಂಟರ್ ಸ್ಪ್ರೆಡ್ಡಿನಲ್ಲಿ ಆಂಕರ್ ಮಾಡು” ಎಂದರು. ಆವತ್ತಿನ ಸಂಚಿಕೆಯಲ್ಲಿಯೇ ನಾನು ಬರೆದ “ನಿಜವಾದ ಮಣ್ಣಿನ ಮಗ, ನೈಜ ನೇಗಿಲಯೋಗಿ, ರೈತ ಪಕ್ಷಪಾತಿ” ಹೆಡ್ಡಿಂಗಿನ ಲೇಖನ ಪ್ರಕಟವಾಯಿತು. ಅವರನ್ನು ಕೆಪಿಸಿಸಿ ಕಚೇರಿಯಲ್ಲಿ ಎರಡು ಸಲ ಭೇಟಿಯಾಗಿದ್ದ ನನಗೆ ಅವರಿಲ್ಲ ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಾಗದ ಸ್ಥಿತಿ. ತುಂಬಾ ನೋವಾಗಿತ್ತು.
***
ಆ ಸಾವು ನನ್ನನ್ನು ತುಂಬಾ ರಿಯಲೈಸ್ ಮಾಡಿತ್ತು. ಸಂಘ ಪರಿವಾರದ ಬಗ್ಗೆ ನನಗಿದ್ದ ಜಿಗುಟತನ ಆವತ್ತೇ ಕೊನೆಯಾಗಿತ್ತು. ಸಂಘ ಹಿಡಿಸಲಿ, ಬಿಡಲಿ ಗೆಳೆತನಕ್ಕೇನು ಕೊರತೆ.. ಅರ್ಥವಾಗಿತ್ತು ನನಗೆ. ಜತೆಗೆ ಅಲ್ಲಿ ಇವತ್ತಿಗೂ ಕಡಿದುಕೊಳ್ಳಲಾಗದ ಗೆಳೆಯರು, ಹಿತೈಷಿಗಳೂ ಅನೇಕರಿದ್ದಾರೆ. ಹಾಗೆಯೇ ಮಂಗಳೂರು ಬಹಳ ಹಿತವೆನಿಸುತ್ತದೆ.
***
2020, ಬುಧವಾರ, ಜುಲೈ 9, ವೈಎಸ್ಸಾರ್ ಜನ್ಮದಿನವಿತ್ತು. ಆ ದಿನವನ್ನು ಆಂಧ್ರ ಪ್ರದೇಶದಲ್ಲಿ ರೈತ ದಿನವೆಂದು ಘೋಷಿಸಲಾಗಿದೆ. ವ್ಯವಸಾಯಕ್ಕೆ ಅಗ್ರಪೀಠ ಹಾಕಿದ್ದ ಅಗ್ರನಾಯಕ ಅವರು. ’ಜಲಯಜ್ಞಂ’ ಮೂಲಕ ರಾಜ್ಯದ ಉದ್ದಗಲಕ್ಕೂ ನೀರರಿಸಿದ ಆಧುನಿಕ ಭಗೀರಥ ಕೂಡ. ಅವರಿಗೆ ರೈತದಿನದ ಮೂಲಕ ನಿಜಗೌರವ ಸಲ್ಲಿಸಲಾಗಿದೆ. ಇದನ್ನುಅವರ ಮಗ ವೈ.ಎಸ್. ಜಗನ್ಮೋಹನ ರೆಡ್ಡಿ ಮಾಡಿದ್ದು ಅಂತಲ್ಲ, ಸಿಎಂ ಕುರ್ಚಿಯಲ್ಲಿ ಯಾರೇ ಕೂತಿದ್ದರೂ ತೆಲುಗರ ಪಾಲಿಗೆ ಇದು ಆಗಲೇಬೇಕಿದ್ದ ಕಾರ್ಯವಾಗಿತ್ತು. ಈಗ ನೆರವೇರಿದೆ.
***
ಇದು ರಾಜಕೀಯ ಬೆರೆಸುವ ಸಂಗತಿಯಲ್ಲ. ಖಂಡಿತ.