ಬೆಂಗಳೂರು: ಅಕ್ಟೋಬರ್ ತಿಂಗಳ ಹೊತ್ತಿಗೆ ಕೋವಿಡ್-19 ರಾಜಧಾನಿಯಲ್ಲಿ ಪರಾಕಾಷ್ಠೆಯ ಹಂತವನ್ನು ತಲುಪಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಎಚ್ಚರಿಕೆ ನೀಡಿರುವ ಬೆನ್ನಲ್ಲಿಯೇ ರಾಜ್ಯ ಸರಕಾರ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ಸಜ್ಜಾಗಿದೆ.
ಕೆಲ ದಿನಗಳ ಹಿಂದೆ ಇದ್ದಕ್ಕಿದ್ದ ಹಾಗೆ ಪ್ರಕರಣಗಳು ದಿಢೀರನೇ ಹೆಚ್ಚಾಗಿದ್ದ ಕಾರಣಕ್ಕೆ ಬೇಸ್ತು ಬಿದ್ದಿದ್ದ ಸರಕಾರ ಸಾರ್ವಜನಿಕರಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಸೋಂಕಿತರನ್ನು ಗುರುತಿಸಿ ಅವರನ್ನು ಸಕಾಲಕ್ಕೆ ಆಸ್ಪತ್ರೆಗೆ ಕರೆದೊಯ್ಯುವುದರಲ್ಲಿ ತೀವ್ರ ಗೊಂದಲ ಉಂಟಾಗಿತ್ತಲ್ಲದೆ, ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಾರದ ಕಾರಣಕ್ಕೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಬಿಬಿಎಂಪಿಯ ಈ ವಿಳಂಬತೆಯಿಂದ ಸರಕಾರದ ಮೇಲೆ ಮಾಧ್ಯಮಗಳು ಮುಗಿಬಿದ್ದಿದ್ದವು. ಅದರ ಬೆನ್ನಲ್ಲೇ ಮೈಕೊಡವಿಕೊಂಡು ಮೇಲಿದ್ದಿರುವ ಸರಕಾರ ಈಗ ಚುರುಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಇದರ ಭಾಗವಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಎಸ್) ದಲ್ಲಿ 10,100 ಹಾಸಿಗೆಗಳ ಬೃಹತ್ ಚಿಕಿತ್ಸಾ ಕೇಂದ್ರವೊಂದು ಸಿದ್ಧವಾಗಿದೆ. ಇದು ಜಗತ್ತಿನಲ್ಲಿಯೇ ಅತಿದೊಡ್ಡ ಕೋವಿಡ್ ಚಿಕಿತ್ಸಾ ಕೇಂದ್ರ. ಕೆಲದಿನಗಳ ಹಿಂದೆ ದೆಹಲಿಯ ಛತರ್ಪುರದ ರಾಧಾಸ್ವಾಮಿ ಸತ್ಸಂಗ್ ಬಿಯಾಸ್ ನಲ್ಲಿ10,000 ಹಾಸಿಗೆಗಳ ಸಾಮರ್ಥ್ಯದ ಆರೈಕೆ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಅದಕ್ಕಿಂತ ಬಿಐಇಎಸ್ ಚಿಕಿತ್ಸಾ ಕೇಂದ್ರವು 100 ಹಾಸಿಗೆಗಳನ್ನ ಹೆಚ್ಚು ಹೊಂದಿದೆ.
ಬಿಐಇಎಸ್ ಕೇಂದ್ರವು ಇನ್ನೊಂದು ವಾರದಲ್ಲಿ ಸೇವೆಗೆ ಮುಕ್ತವಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಇಲ್ಲಿ ಏಕಕಾಲಕ್ಕೆ 10,100 ಸೋಂಕಿತರಿಗೆ ಚಿಕಿತ್ಸೆ ನೀಡಬಹುದು. ಅದಕ್ಕಾಗಿ ನುರಿತ 2200 ಸಿಬ್ಬಂದಿ 24/7 ಕೆಲಸ ಮಾಡಲಿದ್ದಾರೆ.
ಯಾಕೆ ಇಷ್ಟು ಚಿಕಿತ್ಸಾ ಕೇಂದ್ರ?:
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಪ್ರಮಾಣ ನಾಗಾಲೋಟದಲ್ಲಿ ಏರುತ್ತಿದೆ. ಈಗಾಗಲೇ ವಿಕ್ಟೋರಿಯಾ, ಬೌರಿಂಗ್ ಸೇರಿದಂತೆ ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಭರ್ತಿಯಾಗಿವೆ. ಹೀಗಾಗಿ ಖಾಸಗಿ ಆಸ್ಪತ್ರೆಗಳ ಹಾಸಿಗೆಗಳನ್ನು ಪಡೆಯಲಾಯಿತು. ಜತೆಗೆ, ಲಭ್ಯವಿರುವ ಅಪಾರ್ಟುಮೆಂಟುಗಳ ಕ್ಲಬ್ ಹೌಸುಗಳು, ಖಾಸಗಿ ಕಟ್ಟಡಗಳಲ್ಲಿ ಹಾಸಿಗೆಯ ವ್ಯವಸ್ಥೆ ಮಾಡಲಾಗುತ್ತಿದೆ.
ಸದ್ಯಕ್ಕೆ ಬೆಂಗಳೂರಿನಲ್ಲಿ ನಾಲ್ಕು ಕೋವಿಡ್ ಕೇರ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಆ ಪೈಕಿ ಜಿಕೆವಿಕೆಯಲ್ಲಿ 770, ಹಜ್ ಭವನದಲ್ಲಿ432, ರವಿಶಂಕರ್ ಗುರೂಜಿ ಆಶ್ರಮದಲ್ಲಿ 176, ಆಯುವೇದ ಆಸ್ಪತ್ರೆಯಲ್ಲಿ 64 ಬೆಡ್ ಗಳು ಸಿದ್ಧ ಇವೆ. ಜಿಕೆವಿಕೆ ಕ್ಯಾಂಪಸ್ಸಿನಲ್ಲಿರುವ ತೋಟಗಾರಿಕೆ ವಿಭಾಗದಲ್ಲಿ 450 ಬೆಡ್ ಗಳ ವ್ಯವಸ್ಥೆ ಮಾಡಲಾಗುವುದು. ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ 250 ಬೆಡ್ ಗಳು ಈಗಾಗಲೇ ರೆಡಿ ಇವೆ, ಜತೆಗೆ ಬೆಂಗಳೂರು ವಿವಿಯ ಬಾಲಕಿಯರ ಹಾಸ್ಟೆಲ್ಲಿನಲ್ಲಿ 200 ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ. ಇವುಗಳ ಜತೆಗೆ ಪ್ರತಿ ಕೋವಿಡ್ ಕೇಂದ್ರದಲ್ಲಿಯೂ ಕೊನೆಪಕ್ಷ 10 ಐಸಿಯುಗಳನ್ನಾದರೂ ಮಾಡಲೇಬೇಕು ಎಂಬುದು ಸರಕಾರದ ಇರಾದೆಯಾಗಿದೆ. ಇಷ್ಟಾದರೂ ಹಾಸಿಗೆಗಳ ಕೊರತೆ ಉಂಟಾಗಬಹುದು ಎಂಬ ಆತಂಕದಿಂದ ಬಿಐಇಎಸ್ ಕೇಂದ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾಸಿಗೆಗಳ ವ್ಯವಸ್ಥೆ ಮಾಡುತ್ತಿದೆ.
ಏನೆಲ್ಲ ಇಲ್ಲಿ ಇರುತ್ತದೆ?:
ಪ್ರತಿ 100 ಜನ ಸೋಂಕಿತರಿಗೊಬ್ಬರು ವೈದ್ಯರು, ಇಬ್ಬರು ನರ್ಸುಗಳು, ಒಬ್ಬ ಸಹಾಯಕ, ಒಬ್ಬ ಸ್ವಚ್ಚತಾ ಸಿಬ್ಬಂದಿ ಹಾಗೂ ಇಬ್ಬರು ಮರ್ಷಲ್’ಗಳು ಸೇರಿ ಒಟ್ಟು 2200 ಸಿಬ್ಬಂದಿ ಇಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಗಮನಿಸಬೇಕಾದ ಸಂಗತಿ ಎಂದರೆ, ಇಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದ ಹಾಗೂ ಕಡಿಮೆ ಸೋಂಕಿನ ಲಕ್ಷಣಗಳು ಉಳ್ಳ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇಲ್ಲಿ ವೈದ್ಯಕೀಯ ಚಿಕಿತ್ಸೆ ಜತೆಗೆ ಐಸಿಯು ಸೌಲಭ್ಯ, ಐಸಿಯು ಚಿಕಿತ್ಸೆ, ಈಸಿಜಿ ಮತ್ತು ಆಮ್ಲಜನಕ ವ್ಯವಸ್ಥೆಯೂ ಇರುತ್ತದೆ.
ಮುಖ್ಯವಾಗಿ ಸ್ವಚ್ಚ ತೆಗೆ ಉತ್ತಮ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನವೂ ಬಟ್ಟೆ ತೊಳೆಯುವ ವ್ಯವಸ್ಥೆ ಇದೆ. ತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ವ್ಯವಸ್ಥೆ ಇದೆ. ರೋಗಿಗಳ ಮನರಂಜನೆಗೆ ಟಿ.ವಿ.ಯನ್ನು ಕೂಡ ಹಾಕಿಸಲಾಗಿದೆ. ಅಷ್ಟೇ ಅಲ್ಲದೆ, ರೋಗಿಗಳು ರೋಬೋಟ್ ತಂತ್ರಜ್ಞಾನದ ಮೂಲಕ ವಿಡಿಯೋ ಮೂಲಕ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಚಿಕಿತ್ಸೆ ಪಡೆಯಬಹುದು.
ಉಸ್ತುವಾರಿ ಬಗ್ಗೆ ಕಟ್ಟೆಚ್ಚರ:
ಒಂದು ಕ್ಷಣವೂ ಸರಕಾರ ಮೈಮೆರಯುತ್ತಿಲ್ಲ. ರೋಗಿಗಳಿಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗಿದೆ. ದಿನದ 24 ಗಂಟೆಯೂ ಅವರ ಮೇಲೆ ನಿಗಾ ಇಡಲಾಗುವುದು. ಬೆಂಗಳೂರಿನಲ್ಲಿ ಸೋಂಕಿತರು ಹೆಚ್ಚುತ್ತಲೇ ಇರುವುದರಿಂದ ಹಾಸಿಗೆಗಳ ಸಾಮರ್ಥ್ಯವನ್ನು 30 ಸಾವಿರಕ್ಕೇರಿಸಲು ನಿರ್ಧರಿಸಲಾಗಿದೆ ಎಂದು ಬೆಂಗಳೂರು ಕೋವಿಡ್ ಕೇರ್ ಕೇಂದ್ರಗಳ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ,ಎನ್. ಅಶ್ವತ್ಥನಾರಾಯಣ ಅವರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತ ತಿಳಿಸಿದ್ದಾರೆ.