ಕ್ಷಮಿಸಿ! ಕಾಮ್ರೇಡ್ ಜಿ.ವಿ. ಶ್ರೀರಾಮ ರೆಡ್ಡಿ ಅವರನ್ನು ಪಕ್ಷ ಹೊರಹಾಕಿದೆ!!
ಈ ಲೇಖನವನ್ನು ನಾನು ಜುಲೈ 11ರಂದು ರಾತ್ರಿ ಬರೆದು ಗಂಟೆ 1.37ರ ಹೊತ್ತಿಗೆ ನನ್ನ ಫೇಸ್’ಬುಕ್ ಗೋಡೆಯಲ್ಲಿ ಪೋಸ್ಟ್ ಮಾಡಿದ್ದೆ. ಮಾಮೂಲಿಯಂತೆ ಆಮೇಲೂ ನನಗೆ ಬಹಳ ಹೊತ್ತು ನಿದ್ದೆಬರದೆ ಚಡಪಡಿಸಿದೆ. ಜಿವಿಎಸ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದ ದಿನಕೂಡ ಇಡೀ ರಾತ್ರಿ ನನ್ನ ಕಂಗಳಿಗೆ ನಿದ್ದೆ ಹತ್ತಲಿಲ್ಲ. ಆ ಲೇಖನವನ್ನು ಬರೆದು ಪೋಸ್ಟ್ ಮಾಡಿದ ದಿನವೂ ಹೀಗೆಯೇ ಆಗಿ ಐದು ಗಂಟೆ ಸುಮಾರಿಗೆ ನಿದ್ರಿಸಿದ್ದೆ. ನನಗೆ ನಿದ್ದೆ ಬರುವ ಮುನ್ನವೇ ನನ್ನ ವಾಟ್ಸಾಪಿಗೆ ನಾಲ್ಕೈದು ಮೇಸೇಜುಗಳು ಬಂದವು. ಆ ಲೇಖನಕ್ಕೆ ಬಂದ ಮೊದಲ ಪ್ರತಿಕ್ರಿಯೆ ಅದಾಗಿದ್ದವು. ಕೆಲ ಗೆಳೆಯರು ಅಷ್ಟೊತ್ತಿಗೆ ಎದ್ದು ನನ್ನ ಬರವಣಿಗೆ ಮೇಲೆ ಕಣ್ಣು ಹಾಯಿಸಿದ್ದರು.
ಬೆಳಗ್ಗೆ 8 ಗಂಟೆ ಹೊತ್ತಿಗೆ ನಿದ್ದೆಯಿಂದ ಏಳುತ್ತಿದ್ದಂತೆ ನನ್ನ ಚಿಕ್ಕ ಮಗಳು ಬಿನ, “ಡ್ಯಾಡ್, ನಿಮಗೆ ಯಾರೋ ತುಂಬಾ ಜನ ಕಾಲ್ ಮಾಡಿದ್ದಾರೆ” ಎಂದಳು. “ಹದಿನೆಂಟು ಮಿಸ್ಡ್ ಕಾಲುಗಳಿವೆ” ಎಂದು ನನ್ನ ಪತ್ನಿ ಇನ್ನೊಂದು ಸಾಲು ಸೇರಿಸಿದರು. ಇದರ ಜತೆಗ ಫೇಸ್’ಬುಕ್ ಮೆಸೇಂಜರಿನಲ್ಲಿ ನನ್ನ ಹಿರಿಯ ಸಹೋದ್ಯೋಗಿಯಾಗಿದ್ದ ಸನತ್ ಕುಮಾರ ಬೆಳಗಲಿ ಅವರು ಒಂದು ಸಂದೇಶ ಹಾಕಿದ್ದರು. ಅದು ಹೀಗಿತ್ತು. “ಜಿವಿಎಸ್ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ, ಶೇರ್ ಮಾಡಿಕೊಂಡಿರುವೆ. ಸಿಪಿಎಂ ಇಷ್ಟು ಅಧೋಗತಿಗೆ ಹೋಗುತ್ತದೆ ಅಂದುಕೊಂಡಿರಲಿಲ್ಲ.” ಅವರ ಈ ಸಂದೇಶದಲ್ಲೇ ಬಹಳ ಬೇಸರವಿತ್ತು.
ಬೆಳಗ್ಗೆ ಆರ್.ಟಿ. ವಿಠ್ಠಲಮೂರ್ತಿಯವರು ಕರೆ ಮಾಡಿ ಬಹಳ ಹೊತ್ತು ಲೇಖನದ ಬಗ್ಗೆ ಮಾತನಾಡಿದರಲ್ಲದೆ, ಸಿಪಿಎಂ ಹೋಗುತ್ತಿರುವ ದಿಕ್ಕನ ಬಗ್ಗೆಯೂ ಕಳವಳ ವ್ಯಕ್ತಪಡಿಸಿದರು. ಜಿವಿಎಸ್ ಅವರನ್ನು ಪಕ್ಷ ನಡೆಸಿಕೊಂಡ ರೀತಿ ಅವರಿಗೆ ಸರಿಕಾಣಲಿಲ್ಲ.
ಇದಾದ ಮೇಲೆ ನನಗೆ ಬಂದಿದ್ದ ಮಿಸ್ಡ್ ಕಾಲುಗಳ ಜಾಡು ಹಿಡಿದು ಎಲ್ಲರಿಗೂ ಒಂದು ಕಡೆಯಿಂದ ಕಾಲ್ ಮಾಡುತ್ತಾ ಬಂದೆ. ನನಗೆ ಕಾಲ್ ಮಾಡಿದ್ದವರೆಲ್ಲರೂ ಆ ಭಾಗದ ಸಾಮಾನ್ಯ ಕಾರ್ಯಕರ್ತರು, ಸಣ್ಣಪುಟ್ಟ ನಾಯಕರು, ಆ ಪಕ್ಷಕ್ಕೆ ಸಂಬಂಧಿಸಿದವರೇ ಅಲ್ಲದವರೂ ಇದ್ದರು. ಅವರೆಲ್ಲರಿಗೂ ಜಿವಿಎಸ್ ಇಷ್ಟದ ನಾಯಕ. ಕೆಲವರಿಗೆ ಪ್ರಾಮಾಣಿಕ ರಾಜಕಾರಣಿ, ಕೆಲವರ ಪಾಲಿಗೆ ರೆಡ್ ಲೆಜೆಂಡ್, ಇನ್ನು ಕೆಲವರಿಗೆ ನೇರ ಮಾತಿನ ನಿಷ್ಠುರ ರಾಜಕಾರಣಿ, ಮತ್ತೆ ಕೆಲವರಿಗೆ ತಮ್ಮ ಕ್ಷೇತ್ರದ ಅಭಿವೃದ್ಧಿಯನ್ನೇ ಉಸಿರಾಡಿದ್ದ ಹೆಮ್ಮೆಯ ಶಾಸಕ, ಉಳಿದಂತೆ ಅವರ ಬೆಂಬಲಿಗರಿಗೆ ಪ್ರಶ್ನಾತೀತ ನಾಯಕ.
ಇವರೆಲ್ಲರನ್ನೂ ಮಾತನಾಡಲು ನಾನು ಜುಲೈ 12ರಂದು ಅರ್ಧ ದಿನವನ್ನೇ ಮೀಸಲಿಟ್ಟೆ. ಕೆಲವರಂತೂ ನನ್ನಲ್ಲಿ ಮುಕ್ತವಾಗಿ ಮಾತನಾಡಿದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ಸೀಮಿತವಾಗಿದ್ದ ಪವರ್ ಪಾಲಿಟಿಕ್ಸ್, ಮನಿ ಪಾಲಿಟಿಕ್ಸ್, ಅಧಿಕಾರದ ಹಪಾಹಪಿ, ಬೆಳೆಸಿದವರನ್ನೇ ಕ್ರೂರವಾಗಿ ತುಳಿಯುವ ಸೋಬೋಟೇಜ್ ರಾಜಕೀಯ ಕಾಮ್ರೇಡುಗಳಿಗೂ ಅಂಟಿಕೊಂಡಿದೆ. ಕೆಲ ಪಾರ್ಟಿಗಳಲ್ಲಿ ಸಭೆಗಳು ಅಂದರೆ, ನನ್ನನ್ನು ಮಂತ್ರಿ ಮಾಡಿಲ್ಲವೆಂದೋ ಅಥವಾ ನನ್ನನ್ನು ನಿಗಮ ಮಂಡಳಿ ಅಧ್ಯಕ್ಷನನ್ನಾಗಿ ಕೂರಿಸಿಲ್ಲ ಎಂದೋ ಇಲ್ಲವೇ ನೆಕ್ಸ್ಟ್ಎಲೆಕ್ಷನ್ನಿಗೆ ನನಗೇ ಟಿಕೆಟ್ ಕೊಡಿ, ನನಗೊಂದು ವೇಳೆ ಸಮಸ್ಯೆಯಾದರೆ ನನ್ನ ಹೆಂಡ್ತಿಗೇ ಟಿಕೆಟ್ ಕೊಡಿ ಎಂದು ಹೊಡೆದಾಡಿಕೊಂಡ ಅನೇಕ ಉಹಾಹರಣೆಗಳನ್ನು ನಾನು ಬಲ್ಲೆ. ಆದರೆ, ಜಿವಿಎಸ್ ಇದ್ದ ಪಾರ್ಟಿಯಲ್ಲಿ ಅಂತಹ ಹೀನ ಸ್ಥಿತಿ ಇರಲಿಲ್ಲ.
ಹಿಂದೆ ಕಾಮ್ರೇಡುಗಳ ಸಭೆ ಹೇಗಿರುತ್ತಿತ್ತು ಎಂದರೆ, “ಕಾಮ್ರೇಡ್ ಆ ಕಾಲೇಜಿನಲ್ಲಿ ಫೀಸು ಜಾಸ್ತಿ ಇದೆ, ಅಲ್ಲಿ ಹೋರಾಟಕ್ಕೆ ಪ್ಲ್ಯಾನ್ ಮಾಡುತ್ತಿದ್ದೇವೆ”, “ಬಸ್ ಪಾಸ್ ದರ ಜಾಸ್ತಿ ಮಾಡಿದ್ದಾರೆ, ಅದರ ವಿರುದ್ಧ ನಾಳೆ ಪ್ರತಿಭಟನೆ ಇದೆ”, “ರೈತರ ಜತೆ ಒಂದು ಕಾರ್ಯಕ್ರಮವಿದೆ”.. ಹೀಗೆ ಚರ್ಚೆ ನಡೆಯತ್ತಿತ್ತು. ಯಾವತ್ತೂ ಅಧಿಕಾರದ ಮಾತೇ ಇರುತ್ತಿರಲಿಲ್ಲ. ಯಾರಿಗೆ ಅಧಿಕಾರ ನೀಡಬೇಕು ಎಂಬುದನ್ನು ಅವರವರ ಅರ್ಹತೆ ಆಧಾರದ ಮೇಲೆ ಪಕ್ಷವೇ ನಿರ್ಧಾರ ಮಾಡುತ್ತಿತ್ತು. ಈಗಿನ ಹೊಸ ಜಮಾನದ ಮಾರ್ಕ್ಸ್’ವಾದಿ ಕಮ್ಯುನಿಸ್ಟ್ ಪಕ್ಷದಲ್ಲಿ ಅಂತಹ ವಾತಾವರಣವೇ ಇಲ್ಲ. ಎಲ್ಲವೂ ಪವರ್’ಮಯ, ಪಾಲಿಟಿಕ್ಸ್,ಮಯ. ಪ್ರಶ್ನೆ ಕೇಳಿದರೆ ಗೇಟ್’ಪಾಸ್. ಇವು ಅನೇಕರು ನನ್ನಲ್ಲಿ ಹೇಳಿಕೊಂಡ ಸತ್ಯ ಸಂಗತಿಗಳು.
***
ಇದಾದ ಮೇಲೆ ನನಗೆ ಜಿವಿಎಸ್ ಬಗ್ಗೆಯೇ ಯೋಚನೆ ಹೆಚ್ಚಿತು. ನನ್ನಲ್ಲಿ ಅವರ ನಂಬರ್ ಇರಲಿಲ್ಲ. ಅವರು ಕಾಲ್ ಮಾಡಬಹುದೆಂಬ ನಿರೀಕ್ಷೆ ಇತ್ತು. ಆದರೆ ಮಾಡಲಿಲ್ಲ. ಅವರು ಹಾಗೆ ಕಾಲ್ ಮಾಡುವ ಆಸಾಮಿಯಲ್ಲ. ನಾನು ಫೇಸ್’ಬುಕ್ ಮೇಲೆ ಬರೆದದ್ದೇನು ಮಹಾ..! ಹಿಂದೂ ಪತ್ರಿಕೆಯ ರಾಮಯ್ಯ ಅವರಂಥ ಹಿರಿಯ ಪತ್ರಕರ್ತರು ಜಿವಿಎಸ್ ಬಗ್ಗೆ ಬರೆದ ಸುದ್ದಿಗಳು ’ದಿ ಹಿಂದು’ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿದ್ದನ್ನು ನಾನು ಓದಿದ್ದೇನೆ. ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ ಸೇರಿದಂತೆ ಅವರು ಎಲ್ಲ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿದ್ದನ್ನು ನೋಡಿದ್ದೇನೆ. ಲಂಕೇಶ್ ಅವರೊಮ್ಮೆ ಬರೆದಿದ್ದರು.. “ಈ ಶ್ರೀರಾಮ ರೆಡ್ದಿಯಂಥ ವ್ಯಕ್ತಿ ದೊಡ್ಡ ಕುರ್ಚಿ ಮೇಲೆ ಕೂತರೆ ನಮ್ಮ ರಾಜ್ಯ ಉದ್ಧಾರವಾಗುತ್ತೆ” ಎಂದು. ಇಂಥ ಪೀಕಿನಲ್ಲಿದ್ದಾಗಲೇ ಜಿವಿಎಸ್ ಯಾವೊಬ್ಬ ಪತ್ರಕರ್ತನ ನಂಬರನ್ನೂ ಇಟ್ಟುಕೊಂಡವರಲ್ಲ. ಸುದ್ದಿ ಬರೆದಿದ್ದಕ್ಕೆ ಯಾರಿಗೂ ಫೋನ್ ಮಾಡಿ ಋಣ ಸಂದಾಯದ ಥ್ಯಾಂಕ್ಸ್ ಹೇಳಿದವರಲ್ಲ. ಹೀಗಾಗಿ ನನಗೆ ಫೋನ್ ಬರುತ್ತದಾ..?
ಹೀಗಾಗಿ, ಹಿಂದಿನ ಸೋಮವಾರ (ಜುಲೈ 13) ನಾನೇ ಅವರ ಮೊಬೈಲ್ ಸಂಖ್ಯೆಯನ್ನು ಕಲೆಕ್ಟ್ ಮಾಡಿ ಕರೆ ಮಾಡಿದೆ. ಅದೆಷ್ಟೋ ವರ್ಷಗಳ ನಂತರ ಅವರಿಗೆ ನಾನು ಕರೆ ಮಾಡಿದ್ದೆ. “ಯಾರಪ್ಪ” ಅಂದರು. “ಸರ್, ನಾನು.. ಚನ್ನಕೃಷ್ಣ”, “ಹೋ.. ಹೇಗಿದ್ದಿಯಪ್ಪ, ಎಷ್ಟು ವರ್ಷ ಆಯಿತು ನಿನ್ನ ನೋಡಿ”, “ಸರ್, ಹೇಗಿದ್ದೀರಿ?”, “ಹೇಗಿದ್ದೀನಿ ಅಂತ ಎಲ್ಲವನ್ನೂ ಕಣ್ಣಿಗೆ ಕಟ್ಟಿದಂತೆ ನೀನೆ ಬರೆದಿದ್ದಿಯಲ್ಲಪ್ಪ” ಎಂದರು.
ನನಗೆ ಬಹಳ ನೋವಾಯಿತು. ನಾನು ಅವರ ಮೆಚ್ಚುಗೆಯನ್ನು ನಿರೀಕ್ಷಿಸಿ ಅವರಿಗೆ ಕರೆ ಮಾಡಿರಲಿಲ್ಲ. ಬದಲಿಗೆ ಅವರನ್ನು ಹತ್ತು ನಿಮಿಷ ಮಾತನಾಡಿಸುವುದಷ್ಟೇ ನನ್ನ ಉದ್ದೇಶವಾಗಿತ್ತು. ಸುಮಾರು ಹೊತ್ತು ಸಾಗಿದ ಮಾತುಕತೆಯಲ್ಲಿ, ಅವರು ಮೊದಲು ವಿಚಾರಿಸಿದ್ದು ನನ್ನ ಕ್ಷೇಮವನ್ನು ಮತ್ತು ನನ್ನ ವೃತ್ತಿಯ ಬಗ್ಗೆ. ಅವರಿಗೆ ಎಲ್ಲವನ್ನೂ ಹೇಳಿದೆ. ಬಹಳ ಹೊತ್ತು ಮಾತಿನ ಬಳಿಕ ಕೇಳಿದೆ..
“ಸರ್, ಏನಾಯಿತು. ಯಾಕೆ ಹೀಗಾಯಿತು?”
ಅವರು ಹೇಳಿದರು… “ಪಿತೂರಿ ಚನ್ನಕೃಷ್ಣ, ಎರಡು ವರ್ಷಗಳ ನಿರಂತರ ಪಿತೂರಿ.. ದೊಡ್ಡ ಪಿತೂರಿಯೇ ನಡೆಯಿತು. ಕಿರಾತಕವಾಗಿ ನನ್ನ ಬೆನ್ನಿಗೆ ಚೂರಿ ಹಾಕಿದರು” ಎಂದರು. ನನಗೆ ಅರ್ಥವಾಯಿತು. ಮತ್ತೂ ಮಾತನಾಡಲು ಕಷ್ಟವಾಯಿತು. ಅವರ ಗಂಭೀರ ಸ್ವರದ ಎದಿರು ನನ್ನ ಮೆದುವಾದ ಮಾತು ತಡವರಿಸಿತು. ಆದರೂ ಕೇಳಿದೆ..
“ಹಾಗಾದರೆ ಮುಂದೇನು ಮಾಡ್ತೀರಿ?”
“ಎಲ್ಲವೂ ಕ್ಲೋಸ್ ಚನ್ನಕೃಷ್ಣ. ಪಾರ್ಟಿ ಎಂಬುದು ನನ್ನ ಜೀವನದಲ್ಲಿ ಮುಗಿದ ಅಧ್ಯಾಯ, ಆದರೆ ಜೀವನದ ಕೊನೆ ಕ್ಷಣದವರೆಗೂ ಕಾಮ್ರೇಡ್ ಆಗಿಯೇ ಬದುಕುತ್ತೇನೆ. ಕಾಮ್ರೇಡ್ ಆಗಿಯೇ ಉಸಿರು ಬಿಡುತ್ತೇನೆ..”
“ಸರ್, ಮತ್ತೊಮ್ಮೆ ಮಾತನಾಡುತ್ತೇನೆ” ಎಂದು ಕರೆ ಕಟ್ ಮಾಡಿದೆ. ಆಮೇಲೆಯೂ ಯೋಚಿಸತೊಡಗಿದೆ. ’ಬೆನ್ನಿಗೆ ಚೂರಿ… ನಂಬಿದವರನ್ನು ಇರಿ…’ ಇದು ಎಲ್ಲ ಪಕ್ಷಗಳ ರಾಜಕೀಯ. ಈಗ ಎಡಪಕ್ಷಗಳ ಅಂಗಳದಲ್ಲೂ ಹುಚ್ಚೆದ್ದು ಕುಣಿಯುತ್ತಿದೆ.