ಸಂಭ್ರಮ, ಸೋಂಕು & ಅಧಿಕಾರ
ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಜುಲೈ 26ಕ್ಕೆ ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದು, ಅದಕ್ಕಾಗಿ ರಾಜ್ಯಾದ್ಯಂತ ವರ್ಚ್ಯುವಲ್ ಕಾರ್ಯಕ್ರಮಗಳು ನಡೆದವು. 30 ಜಿಲ್ಲಾ ಕೇಂದ್ರಗಳಲ್ಲೂ ಆಯಾ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಮಾರಂಭಗಳು ನಡೆದರೆ, ಬೆಂಗಳೂರಿನಲ್ಲಿ ಮಾತ್ರ ಸ್ವತಃ ಯಡಿಯೂರಪ್ಪ ಅವರ ನೇತೃತ್ವದಲ್ಲೇ ಸಂಭ್ರಮ ಆಚರಿಸಲ್ಪಟ್ಟಿತು.
ಚಾಮರಾಜನಗರದಿಂದ ಬೀದರ್’ವರೆಗೆ ಹಾಗೂ ಕಾರವಾರದಿಂದ ಕೋಲಾರದವರೆಗೆ ಈ ಕಾರ್ಯಕ್ರಮಗಳನ್ನು ಬಿಜೆಪಿ ಪ್ಲಸ್ ಸರಕಾರ ಸೇರಿ ಬಹಳ ಅಚ್ಚುಕಟ್ಟಾಗಿ ಆಯೋಜಿಸಿದ್ದವು. ಇಡೀ 30 ಜಿಲ್ಲೆಗಳನ್ನು ಆನ್’ಲೈನ್ ಫ್ಲಾಟ್’ಪಾರ್ಮಿಗೆ ತಂದು ಎಲ್ಲಿಯೂ ಅಪಶೃತಿಯಾಗದಂತೆ ಕಾರ್ಯಕ್ರಮವನ್ನು ಉತ್ತಮವಾಗಿ ನಡೆಸಲಾಯಿತು. ಅರಮನೆ ಮೈದಾನ ಅಥವಾ ಇನ್ನಾವುದೇ ವೇದಿಕೆಯಲ್ಲಿ ಅದ್ಧೂರಿಯಾಗಿ ಸಾಧನಾ ಸಮಾವೇಶ ನಡೆಯಲಿಲ್ಲ ಎನ್ನುವುದನ್ನು ಬಿಟ್ಟರೆ, ಇಡೀ ಕಾರ್ಯಕ್ರಮದ ಮೂಲಕ ಜನರಿಗೆ ಏನು ದಾಟಿಸಬೇಕಾಗಿತ್ತೋ ಅದನ್ನು ಬಿಜೆಪಿ ಪರಿಣಾಮಕಾರಿಯಾಗಿ ದಾಟಿಸಿದೆ ಎಂದು ಹಿರಿಯ ಪತ್ರಕರ್ತರೊಬ್ಬರು ಹೇಳಿದರು.
ಇತ್ತ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದರೆ, ಮತ್ತೊಂದೆಡೆ ರಾಜ್ಯದಲ್ಲಿ ಕೋವಿಡ್-19 ಅಟ್ಟಹಾಸ ಮತ್ತೂ ತೀವ್ರವಾಗಿದೆ. ಸೋಮವಾರ 5,324 ಹೊಸ ಕೋವಿಡ್ ಸೋಂಕಿತರು ಪತ್ತೆ ಆಗಿದ್ದು, ಆ ಸಂಖ್ಯೆ 1,01,465 ಮುಟ್ಟಿದೆ.
ಮುಂದಿನ ಅಕ್ಟೋಬರ್ ಹೊತ್ತಿಗೆ ಇದರ ಸ್ಥಿತಿ ಯಾವ ಮಟ್ಟಕ್ಕೆ ಹೋಗುತ್ತದೆ ಎಂಬ ಆತಂಕ ಇತ್ತ ಜನರನ್ನು, ಅತ್ತ ಸರಕಾರವನ್ನು ಕಾಡುತ್ತಿದೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಈ ನಡುವೆ ನಾನಾ ಅನುಮಾನ ಗಳನ್ನು ಎತ್ತಿ ಸಾಮಾಜಿಕ ಜಾಲ ತಾಣಗಳಲ್ಲಿ ಜನ ಎತ್ತುತ್ತಿರುವ ಪ್ರಶ್ನೆಗಳಿಗೆ ಯಾರು ಉತ್ತರ ನೀಡುವ ಗೋಜಿಗೇ ಹೋಗುತ್ತಿಲ್ಲ. ಕೋವಿಡ್ ಬಂದ ಮೇಲೆ ಸರಕಾರದಿಂದಲೇ ಹೊಟ್ಟೆ ಹೊರೆದು ಕೊಳ್ಳುತ್ತಿರುವ ಇವತ್ತಿನ ಮುಖ್ಯವಾಹಿನಿಯ ಮಾಧ್ಯಮಗಳು ಬರೆಯುತ್ತಿರುವ ಸುದ್ದಿಗಳನ್ನು ಜನ ನಂಬುತ್ತಿಲ್ಲ. ಆದರೆ ತಮ್ಮದೇ ಸೊಷಿಯಲ್ ಮಿಡಿಯಾದಲ್ಲಿ ಹಾಕುತ್ತಿರುವ ಸತ್ಯ ಸಂಗತಿಗಳನ್ನು ಸರಕಾರ ನೋಡುತ್ತಿಲ್ಲ. ಹೀಗಾಗಿ, ಜನ ಮತ್ತು ಸರಕಾರದ ನಡುವೆ ದೊಡ್ಡ ಗ್ಯಾಪ್ ಬಂದಿದೆ ಎಂಬುದು ಎದ್ದು ಕಾಣುತ್ತಿದೆ ಎಂದು ಆಡಳಿತ ಪಕ್ಷದ ಕೆಲ ನಾಯಕರೇ ಹೇಳುತ್ತಿರುವ ಮಾತು.
ಅಧಿಕಾರ ಹಂಚಿಕೆ:
ಒಂದೆಡೆ ಸರಕಾರದ ಒಂದು ವರ್ಷದ ಸಂಭ್ರಮ ಮುಗಿಯುತ್ತಿದ್ದಂತೆಯೇ ಸಂಜೆ ಹೊತ್ತಿಗೆ ನಿಗಮ-ಮಂಡಳಿಗಳ ನೇಮಕಾತಿ ಪಟ್ಟಿ ಹೊರಬಿದ್ದಿದೆ. ಒಟ್ಟು 24 ಶಾಸಕರಿಗೆ ನಿಗಮ ಭಾಗ್ಯ ನೀಡಲಾಗಿತ್ತು. ಆದರೆ ಒಳ ಬಂಡಾಯ, ಕೆಲ ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿ ನಾಲ್ವರು ಶಾಸಕರಿಂದ ನಿಗಮಗಳ ಅಧಿಕಾರವನ್ನು ವಾಪಸ್ ಪಡೆಯಲಾಯಿತು. ಹೀಗೆ ಮಧ್ಯಂತರದಲ್ಲಿ ಬಂದ ಅಧಿಕಾರದಿಂದ ವಂಚಿತರಾದ ಶಾಸಕರು ಅಷ್ಟೇನೂ ಜೋರು ಬಾಯಿಯವರಲ್ಲ, ಇಲ್ಲವೇ ಪಕ್ಷದ ವಿರುದ್ಧ ತೊಡೆ ತಟ್ಟಬಹುದಾದ ತಾಕತ್ತು ಇದ್ದವರಲ್ಲ. ಹೀಗಾಗಿ ಅವರಿಗೆ ಸುಮ್ಮನಿರುವುದು ಬಿಟ್ಟರೆ ಬೇರೆ ದಾರಿ ಇಲ್ಲ.
ಚಿತ್ರದುರ್ಗ ಶಾಸಕ, ಹಿರಿಯ ರಾಜಕಾರಣಿ ತಿಪ್ಪಾರೆಡ್ಡಿಗೆ ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವನ್ನು ನೀಡಲಾಗಿತ್ತು. ಕಾಪು ಶಾಸಕ ಲಾಲಾಜಿ ಮೆಂಡನ್ ಅವರಿಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವನ್ನೂ, ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಕನಕಗಿರಿ ಶಾಸಕ ಬಸವರಾಜ ದಡೇಸೂರ್ ಅವರಿಗೆ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ ನೀಡಲಾಗಿತ್ತು. ನೇಮಕಾತಿ ಆದೇಶ ಹೊರ ಬೀಳುತ್ತಿದ್ದಂತೆ ಕುರ್ಚಿ ಏರಲು ಸಿದ್ಧರಾಗಿದ್ದ ಇವರೆಲ್ಲ ನಿರಾಶರಾಗಿ ಸುಮ್ಮನಾಗಿದ್ದಾರೆ, ಜತೆಗೆ ಮುಖ್ಯಮಂತ್ರಿ ಪಡಸಾಲೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಇದೆ ವೇಳೆ ತಮಗೆ ನೀಡಲಾಗಿದ್ದ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿ ಬೇಡ ಅಂದಿದ್ದಾರೆ. ಇನ್ನೊಂದು ದಿಕ್ಕಿನಲ್ಲಿ ತಿಪ್ಪಾರೆಡ್ಡಿ, ‘ನನಗೆ ನಿಗಮ ಮಂಡಳಿ ಅಧ್ಯಕ್ಷಗಿರಿ ಬೇಡ. ನನ್ನ ನಿರೀಕ್ಷೆ ಇದಾಗಿರಲಿಲ್ಲ. ಬೇರೆಯೇ ಇತ್ತು ಎಂದಿದ್ದಾರೆ.
ಇನ್ನೊಂದು ಮುಖ್ಯ ಅಂಶವನ್ನು ವಿಠ್ಠಲಮೂರ್ತಿ ಹಂಚಿಕೊಂಡಿದ್ದಾರೆ. ನಿಗಮ ಮಂಡಳಿಗಳಿಗೆ ನೇಮಕ ಮಾಡಿದ್ದು ಸಂಪುಟ ಪುನಾರಚನೆಗೆ ಬರೆದ ಮುನ್ನುಡಿ. ಪಕ್ಷದಲ್ಲಿ ಬಿಸಿ, ಅಸಮಾಧಾನ ಇದ್ದರೆ ಇಲ್ಲಿಯೇ ಗೊತ್ತಾಗುತ್ತದೆ. ಹೀಗೆ ನೋಡಿದರೆ ಯಡಿಯೂರಪ್ಪ ಸರಿಯಾದ ಸಮಯಕ್ಕೆ ಸರಿಯಾದ ದಾಳ ಉರುಳಿಸಿದ್ದಾರೆ. ಬಹಶಃ ಸಂಪುಟ ಸರ್ಜರಿ ಅವರಿಗೆ ಸುಲಭವಾಗಬಹುದು ಎನ್ನುತ್ತಾರೆ ಅವರು.
20 ಮಂದಿ ಭರ್ಜರಿ ಆಸಾಮಿಗಳೇ:
ಇದು ಹೀಗಿದ್ದರೆ, ಇಪ್ಪತ್ತು ಶಾಸಕರು ಭರ್ಜರಿಯಾಗಿ ನಿಗಮ ಮಂಡಳಿಗಳ ಪದಗ್ರಹಣ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಿಂದೆ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಹರತಾಳು ಹಾಲಪ್ಪ ಮತ್ತು ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಸಚಿವಗಿರಿ ಕ್ಲೈಮ್ ಮಾಡುತ್ತಿದ್ದ ’ಅತ್ಯಂತ’ ಹಿರಿಯ ಶಾಸಕ ಅರಗ ಜ್ಞಾನೇಂದ್ರ ಅವರಿಗೂ ನಿಗಮ ಸೌಭಾಗ್ಯ ಸಿಕ್ಕಿದೆ! ಅದರಲ್ಲೂ ಅರಗ ಅವರಿಗೆ ಕರ್ನಾಟಕ ಗೃಹ ಮಂಡಳಿ ಸಿಕ್ಕಿದೆ. ಇನ್ನು ಹರತಾಳುಗೆ ಭರ್ಜರಿಯಾದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (MSIL) ದಕ್ಕಿದೆ. ಜತೆಗೆ, ಆಯಕಟ್ಟಿನ ನಿಗಮವಾದ ರಾಜ್ಯ ರಸ್ತೆ ಸಾರಿಗೆ ನಿಗಮ ಬೆಂಗಳೂರು ವಿಭಾಗಕ್ಕೆ ಚಿತ್ರದುರ್ಗದ ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ಅವರನ್ನು ಕೂರಿಸಲಾಗಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು ಸಂಸ್ಥೆಗೆ ಯಾದಗಿರಿ ಶೋರಾಪುರ ಶಾಸಕ ನರಸಿಂಹ ನಾಯಕ್ (ರಾಜುಗೌಡ) ರನ್ನು ನೇಮಕ ಮಾಡಲಾಗಿದೆ.
ಇನ್ನೊಬ್ಬ ಹಿರಿಯ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಗೂ ನಿಗಮ ಧಕ್ಕಿದೆಯಾದರೂ ಅದನ್ನು ಅವರು ’ಗೌರವಾನ್ವಿತ’ವಾಗಿ ನಿರಾಕರಿಸಿದ್ದಾರೆ. ಸರಕಾರದ ಕಾರು, ನಿಗಮ ಕಟ್ಟಿಕೊಂಡು ಏನು ಮಾಡಲಿ ಎಂದು ಅವರು ಪಕ್ಷದ ನಾಯಕರಿಗೆ ಪ್ರಶ್ನೆ ಹಾಕಿದ್ದಾರೆ.
ಜನರು ತೀವ್ರ ಸಂಕಷ್ಟದಲ್ಲಿ ಇರಬೇಕಾದರೆ ಶಾಸಕರಿಗೆ ಶ್ರಾವಣದ ಗಿಫ್ಟ್ ಕೊಟ್ಟಿರುವ ಬಗ್ಗೆ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿನ್ನೆಯಷ್ಟೇ ಕೊರೋನಾ ಹಗರಣದ ಬಗ್ಗೆ ಬಿಜೆಪಿ, ಕಾಂಗ್ರೆಸ್’ಗೆ ಪಂಚ ಪ್ರಶ್ನೆಗಳನ್ನು ಕೇಳಿದ್ದ ಅವರು, ನಿಗಮ-ಮಂಡಳಿ ಪಟ್ಟಿ ಹೊರಬೀಳುತ್ತಿದ್ದಂತೆಯೇ ’ಸಂಕಷ್ಟ ಕಾಲದಲ್ಲಿ ಶಾಸಕರಿಗೆ ನಿಗಮಗಳ ಭಾಗ್ಯ ಕೊಟ್ಟಿದ್ದು ಎಷ್ಟು ಸರಿ?’ ಎಂದು ಪ್ರಶ್ನಿಸಿದ್ದಾರೆ.
ಸರಣಿ ಟ್ವೀಟುಗಳನ್ನು ಮಾಡಿರುವ ಅವರು, ರಾಜ್ಯದ ಜನರು ಕೊರೊನಾ ಸಂಕಷ್ಟದಿಂದ ತೀವ್ರ ಕಷ್ಟಕ್ಕೆ ಸಿಲುಕಿದ್ದರೆ, ಮುಖ್ಯಮಂತ್ರಿಗಳು ನೋಡಿದರೆ ನಿಗಮ- ಮಂಡಳಿ ಅಧ್ಯಕ್ಷರನ್ನು ನೇಮಕ ಮಾಡುವ ಮೂಲಕ ಅಧಿಕಾರ ಉಳಿಸಿಕೊಳ್ಳುವ ಹೋರಾಟವನ್ನು ಮುಂದುವರಿಸಿದ್ದಾರೆ ಎಂದು ಕುಮಾರಸ್ವಾಮಿ ಟ್ವೀಟ್ ಪ್ರಹಾರ ನಡೆಸಿದ್ದಾರೆ.
‘ಕೊರೊನಾ ಸಂಕಷ್ಟ ಸಮಯದಲ್ಲಿ ಬದುಕಿಗಾಗಿ ಜನತೆ ಹೋರಾಟ ಮಾಡುತ್ತಿದ್ದರೆ, ವರ್ಷಾಚರಣೆಯ ಸಂಭ್ರಮದಲ್ಲೂ ಕುರ್ಚಿ ಉಳಿಸಿಕೊಳ್ಳುವ ಕಸರತ್ತಿನಲ್ಲಿ ತನ್ಮಯವಾಗಿರುವ ಬಿಜೆಪಿ ಸರ್ಕಾರ 24 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಉಡುಗೊರೆ ನೀಡುವ ಮೂಲಕ ಜನತೆಯ ಆಶೋತ್ತರಗಳಿಗೆ ಕೊಳ್ಳಿ ಇಟ್ಟಿದೆ. ಸರ್ಕಾರ ಮಾತ್ರವಲ್ಲ, ಜನತೆಯು ಕೂಡ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವಾಗ ಬೊಕ್ಕಸ ಹಾಗೂ ಜನಸಾಮಾನ್ಯನ ಮೇಲೆ ಹೊರೆ ಹೇರುವ ಮೂಲಕ ‘ಶಾಸಕರಿಗೆ ಉಡುಗೊರೆ, ಜನತೆಗೆ ಬರೆ’ ಎಳೆಯುವ ರಾಜ್ಯ ಬಿಜೆಪಿ ಸರ್ಕಾರದ ನಿರ್ಲಜ್ಜ ನಡವಳಿಕೆಯನ್ನು ಖಂಡಿಸುತ್ತೇನೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಚನದ ಮೂಲಕ ಕುಟುಕಿದ ಮಾಜಿ ಸಿಎಂ:
‘ಹಗಲನಿರುಳು ಮಾಡಿ, ಇರುಳ ಹಗಲ ಮಾಡಿ
ಆಚಾರವ ಅನಾಚಾರವ ಮಾಡಿ
ಅನಾಚಾರವ ಆಚಾರವ ಮಾಡಿ
ಭಕ್ತನ ಭವಿಯ ಮಾಡಿ, ಭವಿಯ ಭಕ್ತನ ಮಾಡಿ
ನುಡಿವವರ ಮಾತ ಕೇಳಲಾಗದು ಗುಹೇಶ್ವರಾ’
ಎಂಬ ವಚನ ಮೂಲಕ ಅವರು ಸರಕಾರಕ್ಕೆ ಟಾಂಗ್ ನೀಡಿದ್ದಾರೆ.
ಇಷ್ಟಕ್ಕೂ ಬಿಎಸ್’ವೈ ಮಾಡಿದ್ದು ಸರಿಯಾ?:
ಈ ಬಗ್ಗೆ ಹಿರಿಯ ಪತ್ರಕರ್ತ ಆರ್.ಟಿ. ವಿಠ್ಠಲಮೂರ್ತಿ ಅವರು ಹೇಳಿದ್ದು ಹೀಗೆ..,
“ಯಡಿಯೂರಪ್ಪ ಅವರ ಸುತ್ತ ಇದೀಗ ಕಂಪ್ಲೀಟ್ ಆಗಿ ಅಧಿಕಾರದ ಆಕಾಂಕ್ಷಿಗಳೇ ತುಂಬಿ ಹೋಗಿದ್ದಾರೆ. ಸರಕಾರಕ್ಕೆ ಇನ್ನೂ 2 ವರ್ಷ ಎಂಟು ತಿಂಗಳ ಅವಧಿ. ಈ ಕಾಲದಲ್ಲಿ ಒಂದಿಷ್ಟು ಅಧಿಕಾರವನ್ನು ಅನುಭವಿಸಲೇಬೇಕು ಎಂದು ಹಪಾಹಪಸುತ್ತಿರುವ ಜನ ಒಂದಷ್ಟು ಇದ್ದಾರೆ. ಹೀಗಾಗಿ ಯಡಿಯೂರಪ್ಪ ಈ ನೇಮಕಾತಿ ಮಾಡಿದ್ದಾರೆ. ಇಷ್ಟಕ್ಕೂ ಬಹಳ ದಿನ ಶಾಸಕರಿಗೆ, ಕಾರ್ಯಕರ್ತರಿಗೆ ಅಧಿಕಾರ ಹಂಚಿಕೆ ಮಾಡದೇ ಇರಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಪಕ್ಷ ಬೆಳೆಯಲ್ಲ. ಅಧಿಕಾರಕ್ಕಾಗಿ ಪಕ್ಷಕ್ಕೆ ಬಂದವರಿಗೆ ಅಧಿಕಾರ ಎನ್ನುವುದು ಸಿಗದೇ ಹೋದಾಗ ಬೇರೆ ಕಡೆಗೆ ಮುಲಾಜಿಲ್ಲದೆ ಹೋಗುತ್ತಾರೆ. ಅವರಿಗೆ ಪಕ್ಷ, ಸಿದ್ದಾಂತ ಅಂತ ಯಾವ ಕಮಿಟ್’ಮೆಂಟೂ ಇರುವುದಿಲ್ಲ. ಹೀಗಾಗಿ ಮುಖ್ಯಮಂತ್ರಿಗಳಿಗೆ ಬೇರೆ ಆಯ್ಕೆ ಇರಲಿಲ್ಲ” ಎಂದು ಅವರು ವಿಶ್ಲೇಷಿಸುತ್ತಾರೆ.
ಶುಭ ಕೋರಿ ಚುಚ್ಚಿದ ಸಿದ್ದು:
ವಿಧಾನಸೌಧ ಬ್ಯಾಂಕ್ವೆಟ್ ಹಾಲಿನಲ್ಲಿ ಯಡಿಯೂರಪ್ಪ ಮತ್ತವರ ಸಂಗಡಿಗರು ಸಂಭ್ರಮದಲ್ಲಿದ್ದರೆ, ಇತ್ತ ಪ್ರತಿಪಕ್ಷ ನಾಯಕರ ಸಿದ್ದರಾಮಯ್ಯ ಅವರು ಮಾಡಿರುವ ಟ್ವೀಟ್ ಎಲ್ಲರ ಗಮನ ಸೆಳೆದಿದೆ.
“ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದ
ಯಡಿಯೂರಪ್ಪ ಅವರಿಗೆ ಅಭಿನಂದನೆಗಳು. ಮುಖ್ಯಮಂತ್ರಿ ಆಗುವ ಗುರಿ ತಲುಪಿ ವರ್ಷ ಕಳೆದ ಸಂಭ್ರಮದಲ್ಲಿರುವ ನೀವು ತುಸು ಬಿಡುವು ಮಾಡಿಕೊಂಡು ಈ ಗುರಿ ಮುಟ್ಟಲು ಬಳಸಿದ ದಾರಿಯ ಬಗ್ಗೆ ನಿಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಿ. ನಿಮ್ಮ ಸಾಧನೆಯ ಬಗ್ಗೆ ಮುಂದೆ ಮಾತನಾಡೋಣ..”
ಈ ಟ್ವೀಟಿಗೆ ಕೆಲ ಕಾಂಗ್ರೆಸ್ಸಿಗರು, ಬೆಂಬಲಿಗರು ಪ್ರತಿಕ್ರಿಯೆ ಹಾಕಿದ್ದಾರಾದರೂ, ಬಿಜೆಪಿ ಕಡೆಯಿಂದ ಯಾರೊಬ್ಬರೂ ರಿಯಾಕ್ಟ್ ಮಾಡಿಲ್ಲ.
ರಾಜ್ಯದಲ್ಲಿ ರಾಜಸ್ತಾನ ಪಾಲಿಟಿಕ್ಸ್:
ಈ ಎಲ್ಲ ಬೆಳವಣಿಗೆಗಳ ನಡುವೆ ಬೆಂಗಳೂರಿಗೆ ರಾಜಸ್ತಾನ ರಾಜಕೀಯ ಎಂಟ್ರಿ ಕೊಟ್ಟಿದೆ. ಅಲ್ಲಿನ ಅಶೋಕ್ ಗೆಹ್ಲೋಟ್ ಅವರ ಸರಕಾರವನ್ನು ತೆಗೆಯಲು ಬಿಜೆಪಿ ಷಡ್ಯಂತ್ರ ಹೂಡಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕದಲ್ಲಿ ಮಾಡಿದಂತೆ ಆಪರೇಷನ್ ಕಮಲ ಮಾಡಿ ಬಿಜೆಪಿ ಸರಕಾರವನ್ನು ತರಲು ಪ್ರಯತ್ನ ಮಾಡಲಾಗುತ್ತಿದೆ. ಅದಕ್ಕೆ ಆ ರಾಜ್ಯದ ರಾಜ್ಯಪಾಲರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ದೂರಿದ್ದಾರೆ.