–ಕವಿ
ಬೆಂಗಳೂರು: ಕೋವಿಡ್-19 ವಿಜೃಂಭಿಸುತ್ತಿದ್ದರೂ ಹಬ್ಬದ ಸಡಗರಕ್ಕೇನೂ ಕಮ್ಮಿ ಇಲ್ಲ. ಏಕೆಂದರೆ ಅದು ವರ ಮಹಾಲಕ್ಷ್ಮೀ ಹಬ್ಬ. ಕೊರೋನಾ ಇದ್ದರೇನಂತೆ, ಹೇಗಾದರೂ ಮಾಡಿ ನಮ್ಮ ಮನೆಗೆ ತಪ್ಪದೇ ಬಾ ತಾಯಿ ಎಂದು ಲಕ್ಷ್ಮೀಯ ಬೆನ್ಹತ್ತಿದ್ದಾರೆ. ಬರುವುದು ಬಿಡುವುದು ಅಮ್ಮನವರಿಗೆ ಬಿಟ್ಟ ವಿಚಾರ.
ಕೊರೋನಾ ಇದ್ದರೂ ಶ್ರಾವಣಕ್ಕೇನು ಎನ್ನುವಂತೆ ಜನ ಭರ್ಜರಿಯಾಗಿ ನಾಗರಪಂಚಮಿಯನ್ನು ಆಚರಿಸಿದ್ದರು ಮಹಿಳೆಯರು. ಈಗ ವರ ಮಹಾಲಕ್ಷ್ಮೀ ಹಬ್ಬವನ್ನು ಎಂದಿನ ನಂಬಿಕೆ, ಭಕ್ತಿಯಿಂದ ಮಹಿಳೆಯರು ಆಚರಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಗಲ್ಲಿಗಲ್ಲಿಯಲ್ಲೂ ವೈರಸ್ ಅಬ್ಬರಿಸುತ್ತಿದ್ದರೂ ಹಬ್ಬವಂತೂ ಸಾಂಗೋಪಾಂಗವಾಗಿ ಟೇಕಾಫ್ ಆಗಿದೆ. ಇನ್ನು ಮೈಸೂರು, ಕೋಲಾರ-ಚಿಕ್ಕಬಳ್ಳಾಪುರ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ರಾಯಚೂರು ಸೇರಿದಂತೆ ಬಯಲುಸೀಮೆ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಎಂಬ ಬೇಧವಿಲ್ಲದೆ ಎಲ್ಲೆಡೆಯೂ ನಾರಿಯರು ಮಹಾಲಕ್ಷ್ಮೀಯನ್ನು ಬರಮಾಡಿಕೊಳ್ಳುತ್ತಿದ್ದಾರೆ.
ವರ ಮಹಾಲಕ್ಷ್ಮೀ ಹಬ್ಬ ಶ್ರಾವಣ ಮಾಸದಲ್ಲಿ ಬರುವ ಎರಡನೇ ಬಹು ಮುಖ್ಯವಾದ ಹಬ್ಬ. ಶ್ರದ್ಧಾ ಭಕ್ತಿಯಿಂದ ವರ ಮಹಾಲಕ್ಷ್ಮೀ ಪೂಜೆ ಮಾಡಿ, ನೈವೇದ್ಯ ಸಮರ್ಪಿಸಿ, ಹೊಸ ಬಟ್ಟೆ ತೊಟ್ಟು, ಹತ್ತು ಹಲವು ಬಗೆಯ ತಿನಿಸುಗಳನ್ನು ತಯಾರಿಸಿ ಅವೆಲ್ಲವನ್ನೂ ಮಹಾಲಕ್ಷ್ಮೀ ಗೆ ನೈವೇಧ್ಯ ಮಾಡಿ ಆಮೇಲೆ ಮನೆಗೆ ಬಂಡ ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಟ್ಟು ಸತ್ಕರಿಸುವುದು ಸಂಪ್ರದಾಯ.
ಬಿಬಿಎಂಪಿ ಮಾತಿಗೆ ಕಿಮ್ಮತ್ತಿಲ್ಲ:
ಬೆಂಗಳೂರಿನಲ್ಲಿ ಕೋವಿಡ್ ಮಿತಿ ಮೀರಿದೆ. ಆದ್ದರಿಂದ ಅನಗತ್ಯವಾಗಿ ಹೊರಗೆ ಬರಬೇಡಿ. ಮನೆಯಲ್ಲಿ ಎಲ್ಲ ಹಬ್ಬ ಹರಿದಿನಗಳನ್ನು ಸರಳವಾಗಿ ಮಾಡಿಕೊಳ್ಳಿ. ಎಚ್ಚರ ತಪ್ಪಿದರೆ ಕಷ್ಟಕ್ಕೆ ಸಿಕ್ಕಿಕೊಳ್ಳುತ್ತೀರಿ ಎಂದು ಬಿಬಿಎಂಪಿ ಎಚ್ಚರಿಕೆ ಕೊಟ್ಟರೂ ಜನ ಲೆಕ್ಕ ಮಾಡಿಲ್ಲ. ಬುಧವಾರದಿಂದಲೇ ಮಾರುಕಟ್ಟೆಗಳಲ್ಲಿ ಜನರ ಸಂತೆ ಜೋರಿತ್ತು. ಗುರುವಾರವಂತೂ ಮಾರುಕಟ್ಟೆಗಳು ಅಕ್ಷಶಃ ಜಾತ್ರೆಗಳಾಗಿದ್ದವು. ದೈಹಿಕ ಅಂತರವಿಲ್ಲ, ಮಾಸ್ಕುಗಳಿಲ್ಲ. ಜೀವದ ನಿರ್ಲಕ್ಷ್ಯದ ಜತೆ ಜೀವನೋಪಾಯವೂ ಭರ್ಜರಿಯಾಗಿಯೇ ನಡೆದಿತ್ತು. ಇದರ ಎಫೆಕ್ಟ್’ಗೆ ಇನ್ನೊಂದು ವಾರ ಕಾಯಬೇಕು.
ಬೆಂಗಳೂರಿನ ಎಲ್ಲ ಮಾರುಕಟ್ಟೆಗಳು ಗಿಜಿಗುಡುತ್ತಿದ್ದವು. ನಗರದ ಉದ್ದಗಲಕ್ಕೂ ಇರುವ ಮೇಲ್ಸೇತುವೆಗಳ ಕೆಳಗೆ, ರಸ್ತೆಗಳ ಅಕ್ಕಪಕ್ಕ, ಅದರಲ್ಲೂ ಕೆ.ಆರ್. ಪುರವಂತೂ ಗುರುವಾರ ಇಡೀ ದಿನ ವ್ಯಾಪಾರದಿಂದ ಗಿಜಗಿಜ ಎನ್ನುತ್ತಿತ್ತು. ವ್ಯಾಪಾರಿಗಳು ಮತ್ತು ಖರೀದಿದಾರರು ಸೇರಿ ಹೆದ್ದಾರಿನ್ನೇ ಬ್ಲಾಕ್ ಮಾಡಿದ್ದರು. ಹೆಬ್ಬಾಳದ ಫ್ಲೈಓವರ್ ಬಳಿಯೂ ಇದೇ ದೃಶ್ಯವಿತ್ತು. ಯಲಹಂಕ, ಮಾರತಹಳ್ಳಿ, ಅಲಸೂರು ಸೇರಿ ಬಹತೇಕ ಎಲ್ಲ ಕಡೆ ಹೆಚ್ಚಾಗಿ ಹೂವು ಹಣ್ಣು ಖರೀದಿ ಜೋರಾಗಿತ್ತು.
ತ್ಯಾಜ್ಯದ್ದು ಸಮಸ್ಯೆ:
ಈಗಾಗಲೇ ಕೋವಿಡ್ ಬಂದು ತಲೆ ಚಚ್ಚಿಕೊಳ್ಳುತ್ತಿರುವ ಪಾಲಿಕೆಗೆ ಇನ್ನೊಂದು ಸವಾಲು ಇದೆ. ಶುಕ್ರವಾರ ಹಬ್ಬ ಮುಗಿದ ಮೇಲೆ ಮನೆಮನೆಗಳಲ್ಲಿ ಸಂಗ್ರಹವಾಗುವ ಹಸಿತ್ಯಾಜ್ಯ ಸಂಗ್ರಹಣೆ ದೊಡ್ಡ ಸವಾಲಾಗಲಿದೆ. ಜತೆಗೆ ಹಾದಿಬೀದಿಯಲ್ಲಿ, ಫುಟ್’ಪಾತ್’ಗಳ ಮೇಲೆ ಮಾರಾಟಗಾರರು ಬಿಟ್ಟು ಹೋಗುವ ಹಸಿಕಸವನ್ನು ಬಳಿದು ವಿಲೇವಾರಿ ಮಾಡುವುದು ಇನ್ನೊಂದು ಭಾರೀ ಕೆಲಸ. ಮಳೆಗಾಲವೂ ಇರುವುದರಿಂದ ಕಸ ಸಂಗ್ರಹ ತಡವಾದರೆ ಕೋವಿಡ್ ಜತೆಗೆ ಬೇರೆ ಬೇರೆ ಕಾಯಿಲೆಗಳು ಹರಡುವುದು ಖಚಿತ.