ಚಿತ್ರ ವಿಮರ್ಶೆ
2011ರಲ್ಲಿ ಸಿಲ್ಕ್’ಸ್ಮಿತಾ ಬಯೋಪಿಕ್ ‘ ಡರ್ಟಿ ಪಿಕ್ಚರ್’ ಸಿನಿಮಾದಲ್ಲಿ ನಟಿಸಿದಾಗಲೇ ವಿದ್ಯಾಬಾಲನ್ ಎಂಬ ನಟಿ ಇಡೀ ಭಾರತವನ್ನು ಶೇಕ್ ಮಾಡಿದ್ದರು. ಅದಾದ ಮೇಲೆ ಬಂದ ’ಕಹಾನಿ’ಯಲ್ಲಿ ಅವರ ಅಭಿನಯ ಮನೋಜ್ಞ. ಬಳಿಕ 2019ರಲ್ಲಿ ತೆಲುಗಿನಲ್ಲಿ ಎನ್’ಟಿಆರ್ ಬಯೋಪಿಕ್’ಗಳಾದ ’ಕಥಾನಾಯಕುಡು’ / ’ಮಹಾನಾಯಕುಡು’ ಚಿತ್ರಗಳಲ್ಲಿ ಅವರು, ಎನ್’ಟಿಆರ್ ಮೊದಲ ಪತ್ನಿ ಬಸವತಾರಕಂ ಪಾತ್ರದಲ್ಲಿ ಜೀವಿಸಿದ್ದರು. ಇದಾದ ಮೇಲೆ ಬಂದ ಚಿತ್ರವೇ ’ಮಿಷನ್ ಮಂಗಲ್’. ಈ ಚಿತ್ರದಲ್ಲಿ ಓರ್ವ ಗೃಹಿಣಿಯಾಗಿ, ಸದಾ ಸಿಡುಕುವ ಪತಿಯ ಪತ್ನಿಯಾಗಿ, ಮಾತು ಕೇಳದ ಮಗನ ತಾಯಿಯಾಗಿ ಮತ್ತು ಇಸ್ತ್ರೋ ವಿಜ್ಞಾನಿಯಾಗಿ ನಟಿಸಿ ಎಲ್ಲರನ್ನೂ ಮೆಚ್ಚಿಸಿದ್ದರು. ಅದರಲ್ಲಿ ಹೀರೋ ಅಕ್ಷಯ್ ಕುಮಾರ್ ಅವರನ್ನು ಸರಿಗಟ್ಟುವಂತೆ ನಟಿಸಿದ್ದರು. ಈಗ ’ಶಕುಂತಲಾ ದೇವಿ’. ಕೋವಿಡ್ ಕಾರಣಕ್ಕೆ ಒಟಿಟಿ ಫ್ಲಾಟ್’ಫಾರ್ಮನಲ್ಲಿ ರಿಲೀಸ್ ಆದರೂ ದೇಶವಷ್ಟೇ ಅಲ್ಲ, ಇಡೀ ಜಗತ್ತಿನಾದ್ಯಂತ ಸೌಂಡ್ ಮಾಡುತ್ತಿದೆ ಈ ಸಿನಿಮಾ.
ಏನೀದು ಸಿನಿಮಾ?
ಶಕುಂತಲಾ ದೇವಿ! ಈ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ಬೆಂಗಳೂರಿಗರಿಗಂತೂ ಅವರು ತಮ್ಮವರೇ. ಗಣಿತದ ವಿಸ್ಮಯ, ಮಾನವ ಕಂಪ್ಯೂಟರ್. ಲೆಕ್ಕಗಳ ಮೂಲಕವೇ ಇಡೀ ಜಗತ್ತನ್ನು ನಿಬ್ಬೆರಗು ಮಾಡಿದ ಅನನ್ಯ ಪ್ರತಿಭೆ. ಹುಟ್ಟಿದ್ದು ಬೆಂಗಳೂರು, ಅಂತಿಮ ಪಯಣ ಮುಗಿಸಿದ್ದೂ ಬೆಂಗಳೂರಿನಲ್ಲಿಯೇ.
ಗಣಿತದ ಜತೆ ಖಗೋಳ, ಜ್ಯೋತಿಷ್ಯದಿಂದ ಜಗತ್ತಿನ ಗಮನ ಸೆಳೆದಿದ್ದ ಅವರು ‘ಲೆಕ್ಕದ ರಾಣಿ’ ಎಂಬುದಾಗಿಯೂ ಖ್ಯಾತರು. ಮಾತ್ರವಲ್ಲ, ಜಗತ್ತಿನ ಅತ್ಯಂತ ವೇಗದ ಮಾನವ ಕಂಪ್ಯೂಟರ್ ಎಂಬ ಹೆಗ್ಗಳಿಕೆಯೂ ಇವರದಾಗಿತ್ತು. ಇವರು ಸಾಲ್ವ್ ಮಾಡದ ಲೆಕ್ಕವಿಲ್ಲ, ಯಾವ ಲೆಕ್ಕಕ್ಕೂ ಸೋತವರಲ್ಲ. ಗಿನ್ನೆಸ್ ದಾಖಲೆಯನ್ನೇರಿದ್ದರು. ಬದುಕಿನುದ್ದಕ್ಕೂ ಸದಾ ಸುದ್ದಿಯಲ್ಲಿದ್ದ ಅವರು, ಕೊನೆಗಾಲದಲ್ಲೂ ಗಣಿತೇತರ ಸುದ್ದಿಗಳಲ್ಲೇ ಮುಳುಗಿಬಿಟ್ಟಿದ್ದರು. ಅವರ ಇಳಿವಯಸ್ಸಿನಲ್ಲೂ ಇನ್ನಿಲ್ಲದ ಸುದ್ದಿಗಳು ಬಂದವು! ಅದು ನಿಜಕ್ಕೂ ವಿಪರ್ಯಾಸವೇ. ಇರಲಿ, ಈಗ ಅವರೊಂದು ಸಿನಿಮಾ ಆಗಿದ್ದಾರೆ. ಅವರ ಬದುಕು ಬೆಳ್ಳಿತೆರೆಯ ಮೇಲೆ ಬಂದಿದೆ.
ಹೇಗಿದೆ ಸಿನಿಮಾ?:
ಅಮೆಜಾನ್ ಪ್ರೈಮಿನಲ್ಲಿ ಸಿನಿಮಾ ರಿಲೀಸ್ ಆಗಿದೆ. ಕೋವಿಡ್ ಕಾರಣಕ್ಕೆ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸುಗಳು ಬಂದ್. ಹೀಗಾಗಿ ನಿರ್ಮಾಪಕರು ಒಟಿಟಿ ಮೂಲಕ ಬಿಡುಗಡೆ ಮಾಡಿದ್ದಾರೆ. ಕೆಲ ದಿನಗಳಿಂದಲೇ ಅಮೆಜಾನ್,ನಲ್ಲಿ ಬರುವ ನಿರೀಕ್ಷೆಇದ್ದಿದ್ದರಿಂದ ವರ ಮಹಾಲಕ್ಷ್ಮೀ ಹಬ್ಬದ ಸಂಭ್ರಮದ ನಡುವೆಯೇ ಮಕ್ಕಳ ಜತೆ ಕೂತು ನೋಡಿದ ಈ ಸಿನಿಮಾ ಇನ್ನಿಲ್ಲದ ಹಾಗೆ ಕಾಡಿದ್ದರಲ್ಲಿ ಎರಡು ಮಾತಿಲ್ಲ. ಬೆಂಗಳೂರು ಮತ್ತು ಬೆಂಗಳೂರಿನಲ್ಲೇ ಅವರು ಕಂಡ ಯಶಸ್ಸು, ಆ ಯಶಸ್ಸನ್ನು ನೋಡುತ್ತಲೇ ಉಬ್ಬಿಹೋಗುವ ನಮಗೆ, ಶಕುಂತಲಾ ದೇವಿಯವರ ತಮುಲಗಳು, ನೋವುಗಳು ಅವರ ಲೆಕ್ಕದಂತೆ ಅಂಕೆಗೆ ಸಿಗುವುದಿಲ್ಲ. ಬಹುವಾಗಿ ಯೋಚಿಸುವಂತೆ ಮಾಡುತ್ತವೆ. ಕಷ್ಟಗಳಿಂದಲೇ ಮೇಲೆ ಬರುವ ಅವರು, ಯಾವ ಗಾಡ್’ಫಾದರ್ ಇಲ್ಲದೇ ಶಿಖರ ಸಾಧನೆ ಮಾಡುವ ಕಥೆ ಕಣ್ಣಾಲಿಗಳನ್ನು ತೇವಗೊಳಿಸುತ್ತದೆ. ಅದಾದ ಮೇಲೆ ಪ್ರೀತಿ, ಪ್ರೇಮ, ನೋವು ಇತ್ಯಾದಿ ನಮ್ಮ ಮನಸ್ಸನ್ನು ಕಲಕುತ್ತವೆ.
ಆ ಲೆಕ್ಕದ ತಾಯಿ, ಅವರ ಮೇಲೆಯೇ ಕೇಸು ಹಾಕುವ ಮಗಳು ಅನುಪಮಾ ಬ್ಯಾನರ್ಜಿ (ಸನ್ಯಾ ಮಲ್ಹೋತ್ರ), ಆ ಕ್ಷಣದಲ್ಲಿ ಶಕುಂತಲಾ ದೇವಿ ಅವರಿಗೇ ಕೈಕೊಡುವ ಮಾನವ ಸಂಬಂಧಗಳ ಲೆಕ್ಕಗಳು ತೀವ್ರವಾಗಿ ಯೋಚನೆ ಮಾಡುವಂತೆ ಮಾಡುತ್ತವೆ. ನಿರ್ದೇಶಕಿ ಅನುಪಮಾ ಮೆನನ್ ಥೇಟ್ ಲೆಕ್ಕದಂತೆಯೇ ಸಿನಿಮಾದ ದೃಶ್ಯಗಳನ್ನು 1,2,3,4 ಹಾಗೂ +,- ನಂತೆ ಪೋಣಿಸಿಕೊಂಡು ಹೋಗಿದ್ದಾರೆ. ನಮ್ಮ ಸಮಾಜದಲ್ಲಿ ಬಹು ಅನನ್ಯ ಎಂದುಕೊಳ್ಳುವ ತಾಯಿ-ಮಗಳ ಬಾಂಧವ್ಯ ’ಶಕುಂತಲಾ ದೇವಿ’ ಸಿನಿಮಾದಲ್ಲಿ ’ಹೌದಾ! ಹೀಗಾ!!’ ಎಂದು ಕಣ್ಣಗಲಿಸುವಂತೆ ಮಾಡುತ್ತದೆ. ಇಡೀ ಸಿನಿಮಾ ನೋಡಿದ ಮೇಲೆ ಹೀಗೆ ಅನಿಸದೇ ಇರದು.
‘ಬದುಕಿನಲ್ಲಿ ಲೆಕ್ಕ ಮುಖ್ಯ, ಆದರೆ ಅದು ಯಾವಾಗಲೂ ಕೈ ಹಿಡಿಯುವುದಿಲ್ಲ..!!’
ಒಟ್ಟಾರೆಯಾಗಿ, ಇಡೀ ಸಿನಿಮಾ ಹತ್ತು ಹಲವು ಟ್ವಿಸ್ಟುಗಳಿಂದ ಥ್ರಿಲ್ಲರ್ ಕಥೆಯಂತೆ ಸಾಗುತ್ತದೆ. ತಂದೆ-ತಾಯಿ ಮೇಲೆ ಅವರಿಗಷ್ಟೇನು ಇರದ ಅನುಭೂತಿ, ಪ್ರೀತಿಯಲ್ಲಿ ತನ್ನನ್ನು ವಂಚಿಸುವ ವ್ಯಕ್ತಿಯೊಬ್ಬರಿಗೆ ಪಿಸ್ತೂಲಿನಿಂದ ಗುಂಡಿಕ್ಕುವುದು, ಅದಾದ ಮೇಲೆ ಬ್ರಿಟನ್’ಗೆ ಹೋಗಬೇಕಾಗಿ ಬಂದದ್ದು, ಅಲ್ಲಿ ಅವರು ಎದುರಿಸುವ ಸಮಸ್ಯೆಗಳು ಮತ್ತು ನಡೆಸುವ ಸಂಘರ್ಷಗಳು, ಅಂತಿಮವಾಗಿ ಮಗಳ ಜತೆಗೇ ಉಂಟಾಗುವ ಮನಸ್ತಾಪ… ಹೀಗೆ ಲೆಕ್ಕದಂತೆ ಶಕುಂತಲಾ ದೇವಿ ಅವರ ಕಷ್ಟಗಳೂ ಬೇಕಾದಷ್ಟಿವೆ. ಅವೆಲ್ಲವನ್ನೂ ಮನೋಜ್ಞವಾಗಿ, ನೈಜವಾಗಿ ಚಿತ್ರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಚಿತ್ರದ ಮೊದಲ ಭಾಗದಷ್ಟೇ ದ್ವಿತೀಯ ಭಾಗವೂ ಗಟ್ಟಿಯಾಗಿ ಪ್ರೇಕ್ಷಕರ ಮನಸ್ಸನ್ನು ಹಿಡಿದಿಡುತ್ತದೆ.
ನಿರ್ದೇಶಕಿಯ ಜಾಣ್ಮೆ:
‘ಶಕುಂತಲಾ ದೇವಿ’ ಚಿತ್ರದ ನಿಜವಾದ ಶಕ್ತಿ ಕಥೆ ಮತ್ತು ನಿರ್ದೇಶನ. ನಮಗೆಲ್ಲ ಶಕುಂತಲಾ ದೇವಿ ಒಬ್ಬ ಗಣಿತ ತಜ್ಞೆಯಾಗಿ ಮಾತ್ರ ಗೊತ್ತು. ಆದರೆ ನಿರ್ದೇಶಕಿ ಅನು ಮೆನನ್ ಅವರು ಶಕುಂತಲಾ ದೇವಿ ಅವರ ಇನ್ನೊಂದು ಮುಖವನ್ನು ನಿರ್ದೇಶಕಿಯಾಗಿ ಅಲ್ಲದೆ ಓರ್ವ ಮಹಿಳೆಯಾಗಿ ಅತ್ಯಂತ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಅದೇನು ಎಂಬುದು ಸಿನಿಮಾದಲ್ಲಿ ಕಾಣುತ್ತದೆ. ಕಥೆಯ ಜತೆಗೆ ಚಿತ್ರಕಥೆಯನ್ನು ಬಹಳ ಟೈಟಾಗಿ ಮಾಡಿಕೊಂಡಿದ್ದಾರೆ ಅವರು. ಶಕುಂತಲಾ ದೇವಿ ಅವರ ಪ್ರತಿಹೆಜ್ಜೆಗಳನ್ನು ಅವಲೋಕಿಸಿದ್ದಾರೆ. ಅವರ ಪ್ರತಿಭೆಗೆ ಹ್ಯಾಟ್ಸಾಫ್ ಹೇಳಲೇಬೇಕು.
ವಿದ್ಯಾಬಾಲನ್ ನಟನೆ:
ಇಡೀ ಸಿನಿಮಾವನ್ನು ವಿದ್ಯಾಬಾಲನ್ ಆವರಿಸಿಕೊಂಡಿದ್ದಾರೆ ಎನ್ನುವುದರಲ್ಲಿ ಡೌಟೇ ಇಲ್ಲ. ಇಡೀ ಸಿನಿಮಾದ ಅಷ್ಟದಿಕ್ಕುಗಳಲ್ಲೂ ಅವರಿದ್ದಾರೆ ಮತ್ತೂ ಇಡೀ ಸಿನಿಮಾವೇ ಅವರನ್ನೇ ಸುತ್ತುತ್ತದೆ. ಶಕುಂತಲಾ ದೇವಿ ಪಾತ್ರದಲ್ಲಿ ಅವರು ಪರಕಾಯ ಪ್ರವೇಶ ಮಾಡಿದ್ದಾರೆ. ಹೆಜ್ಜೆಹೆಜ್ಜೆಗೂ, ದೃಶ್ಯದೃಶ್ಯಕ್ಕೂ ಅವರ ನಟನೆಯಲ್ಲಿ ವೇರಿಯೇಷನ್ಸ್ ಇವೆ. ಅಹಂಭಾವ, ಅಸಹ್ಯ, ನೋವು, ಸಹನೆ, ಸಿಡುಕು.., ಇಂಥ ಭಾವನೆಗಳನ್ನು ಅವರು ಲೀಲಾಜಾಲವಾಗಿ ತೋರಿಸಿದ್ದಾರೆ. ಜತೆಗೆ ಸಂಭಾಷಣೆ ಹೇಳುವ ಪರಿ, ಆಂಗೀಕತೆ, ಕಾಸ್ಟ್ಯೂಮ್ ಸೇರಿದಂತೆ ಎಲ್ಲ ಅಂಶಗಳಲ್ಲೂ ವಿದ್ಯಾ ವಿಜೃಂಭಿಸಿದ್ದಾರೆ. ಈ ಪಾತ್ರವನ್ನು ಅವರು ಬಿಟ್ಟರೇ ಇನ್ನೊಬ್ಬ ನಟಿ ಹೀಗೆ, ಇಷ್ಟು ಸಹಜವಾಗಿ ಮಾಡಲು ಸಾಧ್ಯವೇ ಎಂದೆನಿಸಿಬಿಡುತ್ತದೆ.
ಉಳಿದ ಪಾತ್ರಗಳು ಅಗತ್ಯಕ್ಕೆ ತಕ್ಕಂತೆ ಘನವಾಗಿವೆ. ಹಿನ್ನೆಲೆ ಸಂಗೀತ, ಕ್ಯಾಮೆರಾ ಕೆಲಸ ಎಲ್ಲವೂ ಅಚ್ಚುಕಟ್ಟು. ಮಿಸ್ ಮಾಡಿಕೊಳ್ಳಲೇಬಾರದ ಸಿನಿಮಾ ಇದು.