ನಿಜಕ್ಕೂ ಇದೊಂದು ವಿಚಿತ್ರ. ಅಯೋಧ್ಯೆಯಲ್ಲಿ ರಾಮನಿಗೆ ಗುಡಿ ಕಟ್ಟಲು ಯತ್ನಿಸಿದಾಗ ಮುಸ್ಲೀಮರಿಗಿಂತ ಕೆಲ ಹಿಂದುಗಳೇ ಹೆಚ್ಚು ತಕರಾರು ತೆಗೆದರು. ಅದು ಹೆಸರಿನಲ್ಲಿ ರಾಮನನ್ನೇ ಇಟ್ಟುಕೊಂಡವರು!! ಏಕೆ ಹೀಗೆ? ಈ ವಿರೋಧಾಬಾಸವೇಕೆ? ಹಿರಿಯ ಪತ್ರಕರ್ತ ದು.ಗು. ಲಕ್ಷ್ಮಣ ಅವರು ಬಹು ಸೊಗಸಾಗಿ ಬರೆದಿದ್ದಾರೆ..
ಶ್ರೀರಾಮ ಮಂದಿರ ನಿರ್ಮಾಣಕ್ಕೆ ಬಂದೊದಗಿದ ಸಾವಿರಾರು ವಿಘ್ನಗಳೆಲ್ಲ ಪರಿಹಾರವಾಗಿ ಕೊನೆಗೂ ಅಯೋಧ್ಯೆಯ ಜನ್ಮಭೂಮಿಯಲ್ಲಿ ಶಿಲಾನ್ಯಾಸ ನೆರವೇರುವುದರೊಂದಿಗೆ ಇತಿಹಾಸದ ಪುನರ್ನಿರ್ಮಾಣಕ್ಕೆ ನಾಂದಿ ಹಾಡಲಾಗಿದೆ. ಕಳಂಕದ, ದಾಸ್ಯದ ಇತಿಹಾಸಕ್ಕೆ ಸಂಪೂರ್ಣ ಇತಿಶ್ರೀ ಹಾಡಲಾಗಿದೆ. ಆದರೆ ಇಷ್ಟೆಲ್ಲ ಆಗುವುದಕ್ಕೆ ಅದೆಷ್ಟು ದೀರ್ಘಕಾಲ ಆಂದೋಲನ, ಅಗಣಿತ ತ್ಯಾಗ, ಬಲಿದಾನ, ಅಪಾರ ಪ್ರಮಾಣದ ಬೆವರು, ನೆತ್ತರು ಕಣ್ಣೀರು ಹರಿದವು ಎಂಬುದನ್ನು ನೆನೆಸಿಕೊಂಡರೆ ದುಃಖ, ಸಂತಸ, ಉದ್ವೇಗ, ಕೋಪ ಎಲ್ಲವೂ ಮೈಮನಗಳಲ್ಲಿ ಉಕ್ಕಿ ಹರಿಯುತ್ತದೆ.
ಶ್ರೀರಾಮ ಮಂದಿರವನ್ನು ಕೆಡವಿ, ಅಲ್ಲಿ ಬಾಬ್ರಿ ಮಸೀದಿ ನಿರ್ಮಿಸಿದ್ದು ದೆಹಲಿಯನ್ನಾಳಿದ ಬಾಬರ್ ಆಗಿದ್ದರೂ, ಮತ್ತೆ ಶ್ರೀರಾಮ ಮಂದಿರ ಅಲ್ಲೇ ನಿರ್ಮಿಸದಂತೆ ಅಡ್ಡಿಯಾದವರು ಹಲವು ಹಿಂದುಗಳು ಎಂಬುದನ್ನು ಮರೆಯುವಂತಿಲ್ಲ. ವಾಸ್ತವವಾಗಿ ಹಿಂದುಗಳು ಮರ್ಯಾದಾ ಪುರುಷೋತ್ತಮನಿಗೆ ಜನ್ಮಸ್ಥಾನದಲ್ಲಿ ಮಂದಿರ ನಿರ್ಮಿಸಲು ಸಹರ್ಷದಿಂದ ಸಾಥ್ ನೀಡಬೇಕಾಗಿತ್ತು. ಆದರೆ ಹಿಂದು ಸಮಾಜಕ್ಕೆ ಸೇರಿದ ಕೆಲವು ವಿಘ್ನಸಂತೋಷಿಗಳು ಮಾಡಿದ್ದನ್ನು ನೆನೆದರೆ ನಖಶಿಖಾಂತ ಕೋಪ ಬರದೇ ಇರದು. 1976-77ರಲ್ಲಿ ಖ್ಯಾತ ಪುರಾತತ್ವಜ್ಞ ಬಿ.ಬಿ. ಲಾಲ್ ನೇತೃತ್ವದಲ್ಲಿ ಬಾಬ್ರಿ ಮಸೀದಿ ಕಟ್ಟಡವಿದ್ದ ಜಾಗದಲ್ಲಿ ನಡೆಸಲಾದ ಉತ್ಖನನದಲ್ಲಿ ದೇಗುಲವೊಂದರ 12 ಶಿಲಾ ಸ್ತಂಭಗಳು, ವಿಗ್ರಹಗಳು, ದೇಗುಲದ ಇನ್ನಿತರ ಭಾಗಗಳು ಪತ್ತೆಯಾಗಿದ್ದವೆಂದು ಆ ಉತ್ಖನನ ತಂಡದಲ್ಲಿದ್ದ ಕೆ.ಕೆ. ಮಹಮ್ಮದ್ ಎಂಬ ಪುರಾತತ್ವ ಇಲಾಖೆಯ ಅಧಿಕಾರಿಯೇ ಸ್ಪಷ್ಟಪಡಿಸಿದ್ದರು. ಸಾಕ್ಷ್ಯಾಧಾರಗಳಿಗೆ ಸಂಬಧಿಸಿದ ಪುರಾಣದ ಸಂಸ್ಕೃತ ಶ್ಲೋಕಗಳನ್ನೂ ಅವರು ಉಲ್ಲೇಖಿಸಿದ್ದು ಗಮನಾರ್ಹವಾಗಿತ್ತು. ಎರಡನೆಯ ಉತ್ಖನನ (2003)ದ ಸಂದರ್ಭದಲ್ಲೂ ಆ ತಂಡದಲ್ಲಿದ್ದ ಅರೇಬಿಕ್ ಮತ್ತು ಪರ್ಷಿಯನ್ ಶಾಸನತಜ್ಞ ಗುಲಾಂ ಸೈಯುದ್ದೀನ್ ಖ್ವಾಜಾ, ಆಗ್ರಾದ ಪುರಾತತ್ವ ಇಲಾಖೆಯ ಮುಖ್ಯಸ್ಥ ಅತಿಖುರ್ ರೆಹಮಾನ್ ಸಿದ್ದಿಕಿ, ಚಂಡೀಗಢ ಪುರಾತತ್ವ ಇಲಾಖೆಯ ಮುಖ್ಯಸ್ಥರಾಗಿದ್ದ ಝಲ್ಪಿಕರ್ ಆಲಿ, ಇನ್ನೋರ್ವ ಪುರಾತತ್ವ ತಜ್ಞ ಎ.ಎ. ಹಗ್ಮಿ ಮೊದಲಾದ ಮುಸ್ಲಿಂ ಸದಸ್ಯರೂ ಅನಂತರ ಸಲ್ಲಿಸಿದ ವರದಿಯ ಮುಖ್ಯಾಂಶವೇನೆಂದರೆ: ಮಸೀದಿಯ ಅಡಿಯಲ್ಲಿ ದೇವಸ್ಥಾನವೊಂದು ಇತ್ತು. ಅದರ ಅವಶೇಷಗಳು ಪತ್ತೆಯಾಗಿರುವುದೇ ಇದಕ್ಕೆ ಸಾಕ್ಷಿ ಎಂಬುದು. ಆದರೆ ರೋಮಿಲ್ಲಾ ಥಾಪರ್, ರಾಮಚಂದ್ರ ಗುಹಾ ಮತ್ತಿತರ ಎಡಪಂಥೀಯ ಸೋಕಾಲ್ಡ್ ಇತಿಹಾಸತಜ್ಞರು ಇದೆಲ್ಲ ಸುಳ್ಳಿನ ಕಂತೆ ಎಂದೇ ವಾದಿಸಿದರು. ಅವರ ಈ ವಿತಂಡವಾದಕ್ಕೆ ಆಧಾರಗಳು ಮಾತ್ರ ಇರಲಿಲ್ಲ!
ಈಚೆಗೆ ನಿಧನರಾದ ವಿಖ್ಯಾತ ನ್ಯಾಯವಾದಿ ರಾಮ್ ಜೇಠ್ಮಲಾನಿ ಸಮಾರಂಭವೊಂದರಲ್ಲಿ, “ಶ್ರೀರಾಮ ಒಬ್ಬ ಕೆಟ್ಟ ಗಂಡನಾಗಿದ್ದ” ಎಂದು ಅಪ್ಪಣೆ ಕೊಡಿಸಿದ್ದರು! ಸೀತೆಯನ್ನು ಕಾಡಿಗಟ್ಟಿದ ಶ್ರೀರಾಮ ಕೆಟ್ಟ ಗಂಡನಲ್ಲದೆ ಮತ್ತೇನು ಎಂಬುದು ಅವರ ವಾದ. ಅವರ ಈ ವಿಕೃತ ಹೇಳಿಕೆಯ ವಿರುದ್ಧ ದೇಶದಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶದ ಅಲೆಯೇ ಎದ್ದಿತ್ತು. ಅವರು ’ಝೂಟ್ ಮಲಾನಿ’ ಎಂದು ಟ್ವಿಟರ್ಗಳಲ್ಲಿ ಟೀಕೆ ಹರಿದಾಡಿತ್ತು. ಜೇಠ್ಮಲಾನಿಗೆ ಕೈತುಂಬ ಫೀಸು ಕೊಟ್ಟರೆ ಶ್ರೀರಾಮ ಒಳ್ಳೆಯ ಗಂಡ ಎಂಬ ಇನ್ನೊಂದು ವಾದವನ್ನೂ ಮಂಡಿಸಿಯಾರೆಂದು ಹಲವರು ಲೇವಡಿ ಮಾಡಿದ್ದರು. ತ್ರೇತಾಯುಗದಲ್ಲಿ ನಡೆದ ಆ ಘಟನೆಯನ್ನು ಅಂದಿನ ಸಾಮಾಜಿಕ ಸ್ಥಿತಿಗತಿ, ನ್ಯಾಯದಾನ ಪದ್ಧತಿ, ಕಾಲಮಾನ, ಸನ್ನಿವೇಶಗಳನ್ನು ವಿಶ್ಲೇಷಿಸಿ ಅದರ ಹಿನ್ನೆಲೆಯಲ್ಲಿ ಶ್ರೀರಾಮನ ಆ ನಿರ್ಧಾರವನ್ನು ಪರಿಭಾವಿಸಬೇಕೇ ಹೊರತು, ಅಗಸನ ಮಾತು ಕೇಳಿದಾಕ್ಷಣ ಸೀತೆಯನ್ನು ಕಾಡಿಗಟ್ಟಿದ ಶ್ರೀರಾಮ ಕೆಟ್ಟ ಗಂಡ ಎಂದು ವ್ಯಾಖ್ಯಾನಿಸಿಬಿಟ್ಟರೆ ಶ್ರೀರಾಮನ ಕಿಮ್ಮತ್ತೇನೂ ಕುಂದುವುದಿಲ್ಲ. ರಾಮನ ಹೆಸರನ್ನೇ ಇಟ್ಟುಕೊಂಡಿದ್ದ ಜೇಠ್ಮಲಾನಿಯ ಕಿಮ್ಮತ್ತು ಕಮರಿಹೋಗಿದ್ದಂತೂ ನಿಜ.
ರಾಮಸೇತು ವಿವಾದದ ಸಂದರ್ಭದಲ್ಲಿ ಆಗ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಎಂ.ಕರುಣಾನಿಧಿ, ರಾಮಸೇತುವನ್ನು ಶ್ರೀರಾಮನೇ ನಿರ್ಮಿಸಿದನೆಂಬುದಕ್ಕೆ ದಾಖಲೆಗಳಿವೆಯೇ? ಶ್ರೀರಾಮ ಯಾವ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪಾಸು ಮಾಡಿದ್ದು? ಎಂದೆಲ್ಲ ಬಾಲಿಶವಾಗಿ ಪ್ರಶ್ನಿಸಿ ಹಲವರ ವಿರೋಧಕ್ಕೆ ಗುರಿಯಾಗಿದ್ದರು. ಶ್ರೀರಾಮನನ್ನು ಅರ್ಥೈಯಿಸಿಕೊಳ್ಳುವ ಕರುಣಾನಿಧಿಯವರ ಬೌದ್ಧಿಕ ಮಟ್ಟ ಅದಕ್ಕಿಂತ ಮೇಲೇರಿರಲಿಲ್ಲ.
ದ್ರಾವಿಡ ಚಳವಳಿಯ ನೇತಾರ ಇ.ವಿ. ರಾಮಸ್ವಾಮಿ ನಾಯ್ಕರ್, ಶ್ರೀರಾಮನನ್ನು ವಿರೋಧಿಸಿದ ಪರಿ ಅತ್ಯಂತ ಕೀಳುಮಟ್ಟದ್ದು. ಸೇಲಂನಲ್ಲಿ ಶ್ರೀರಾಮ, ಸೀತೆಯರ ಭಾವಚಿತ್ರಗಳಿಗೆ ಚಪ್ಪಲಿಹಾರ ಹಾಕಿ ಮೆರವಣಿಗೆ ನಡೆಸಿ ವಿಕೃತಿ ಮೆರೆದಿದ್ದರು. ವಿಚಾರವಾದಿಯಾಗಿದ್ದ ಅವರು ಕೊನೆಗಾಲದಲ್ಲಿ ಪಡಬಾರದ ದೈಹಿಕ ಯಾತನೆಗೊಳಗಾಗಿದ್ದರು. ಪೋಲಂಕಿ ರಾಮಮೂರ್ತಿ ಎಂಬ ನಮ್ಮ ಕನ್ನಡದ ಸಾಹಿತಿ ಸೀತಾಯಣ ಎಂಬ ಕೃತಿಯಲ್ಲಿ ಸೀತೆಯನ್ನು ವೇಶ್ಯೆ ಎಂದು ಹೀಗಳೆದಿದ್ದರು. ರಾವಣನ ಅರಮನೆಯಲ್ಲಿದ್ದ ಸೀತೆಯನ್ನು ಪರಿಶುದ್ಧಳೆಂದು ಹೇಗೆ ನಂಬಲು ಸಾಧ್ಯ? ಎಂದು ವ್ಯಂಗ್ಯವಾಡಿದ್ದರು. ಕೊನೆಗವರು ತಮ್ಮ ಹೊಸ ಮನೆಗೆ ಅಡಿಪಾಯ ತೋಡುವ ಸಂದರ್ಭದಲ್ಲಿ, ಧರೆ ಕುಸಿದು ಧರಾಶಾಹಿಯಾಗಿ ಅಸುನೀಗಿದ್ದರು. ರಾಮಸ್ವಾಮಿ ನಾಯ್ಕರ್ ಶ್ರೀರಾಮನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದರಿಂದ, ಪೋಲಂಕಿ ಸೀತೆಯನ್ನು ವೇಶ್ಯೆ ಎಂದು ಜರಿದಿದ್ದರಿಂದ ಜನಕೋಟಿಯಲ್ಲಿದ್ದ ಶ್ರದ್ಧೆ, ಗೌರವಗಳೇನೂ ಕುಸಿಯಲಿಲ್ಲ. ಇನ್ನಷ್ಟು ಹೆಚ್ಚಾಗಿದ್ದು ನಿಜ!
ಬರಗೂರು ರಾಮಚಂದ್ರಪ್ಪ, ರಾಮಚಂದ್ರ ಗುಹಾ, ಪುರುಷೋತ್ತಮ ಬಿಳಿಮಲೆಯಂತಹ ಜನ ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ವ್ಯಕ್ತಪಡಿಸಿದ್ದ ವಿರೋಧವೇನೂ ಕಡಿಮೆಯದಾಗಿರಲಿಲ್ಲ. ತಮಾಷೆಯೆಂದರೆ ಹೀಗೆ ಶ್ರೀರಾಮನನ್ನು ಪದೇ ಪದೇ ಕಟಕಟೆಗೆ ತಂದು ನಿಲ್ಲಿಸಿ, ಆತನ ಬಗ್ಗೆ ಇಲ್ಲಸಲ್ಲದ ವಿವಾದ ಹುಟ್ಟಿಹಾಕಿದವರಲ್ಲಿ ಬಹುತೇಕ ಮಂದಿ ಶ್ರೀರಾಮನ ಹೆಸರನ್ನೇ ಇಟ್ಟುಕೊಂಡಿರುವುದು ವಿಸ್ಮಯವೇ ಸರಿ. ಶ್ರೀರಾಮನಿಗೆ ಚಪ್ಪಲಿ ಹಾರ ತೊಡಿಸಿದ ಪೆರಿಯಾರ್ ರಾಮಸ್ವಾಮಿ, ಸೀತಾಯಣ ಕೃತಿ ರಚಿಸಿದ ಪೋಲಂಕಿ ರಾಮಮೂರ್ತಿ, ಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ಬರಗೂರು ರಾಮಚಂದ್ರಪ್ಪ, ರಾಮಚಂದ್ರ ಗುಹಾ, ಪುರುಷೋತ್ತಮ ಬಿಳಿಮಲೆ ಮೊದಲಾದ ಮಹನೀಯರೆಲ್ಲರೂ ರಾಮನಾಮಾಂಕಿತರೇ. ಶ್ರೀರಾಮ ಒಬ್ಬ ಕೆಟ್ಟ ಗಂಡ ಎಂದು ದೂಷಿಸಿದ ರಾಂಜೇಠ್ಮಲಾನಿ ಕೂಡ ರಾಮನಾಮಾಂಕಿತರೇ!
ಒಬ್ಬ ಮಹಾ ಪುರುಷನ ಸಮಗ್ರ ಬದುಕನ್ನು ಅಲೌಕಿಕ ನೆಲೆಯಲ್ಲಿ ನಿಂತು ಪರಿವೀಕ್ಷಿಸದಿದ್ದಾಗ ಕಂಡುಬರುವ ವಿಕೃತ ಚಿತ್ರಣಗಳು ಇದಕ್ಕಿಂತ ಭಿನ್ನವಾಗಿರಲು ಹೇಗೆ ಸಾಧ್ಯ? ಎಲ್ಲವನ್ನೂ ಲೌಕಿಕ ನೆಲೆಗಟ್ಟಲ್ಲೇ ನೋಡುವವರಿಗೆ, ಪ್ರತಿಯೊಂದನ್ನೂ ಕುತರ್ಕ ರೀತ್ಯಾ ಪರಿಭಾವಿಸುವವರಿಗೆ ನಮ್ಮೆಲ್ಲರ ಮಹಾಪುರುಷರ ಬದುಕಿನ ಆದರ್ಶಗಳು, ಪ್ರತಿಪಾದಿಸಿದ ಜೀವನ ಮೌಲ್ಯಗಳು ಖಂಡಿತ ಅರ್ಥವಾಗದು. ಕರುಣಾನಿಧಿ, ಪೆರಿಯಾರ್, ಪೋಲಂಕಿ, ಬರಗೂರು, ಜೇಠ್ಮಲಾನಿ ಮುಂತಾದ ಕ್ರಿಮಿಕೀಟಗಳು ಶ್ರೀರಾಮನನ್ನು ತುಚ್ಛವಾಗಿ ಕಂಡಿದ್ದಕ್ಕೆ ಇದೇ ಹಿನ್ನೆಲೆ.
ಈಗಲೂ ಶರದ್ ಪವಾರ್, ದಿಗ್ವಿಜಯ ಸಿಂಗ್ ಮೊದಲಾದ ಪರಮ ಹಿಂದುಗಳೆನಿಸಿ ಕೊಂಡವರು ಮಂದಿರ ನಿರ್ಮಾಣಕ್ಕೆ ವಿರೋಧಪಡಿಸುತ್ತಲೇ ಇದ್ದಾರೆ. ಆ.5ರ ಶಿಲಾನ್ಯಾಸದ ಮುಹೂರ್ತವೇ ಸರಿ ಇರಲಿಲ್ಲವೆಂದು ಪ್ರಖ್ಯಾತ ಜ್ಯೋತಿಷಿಯೂ ಆಗಿರುವ ದಿಗ್ವಿಜಯ ಸಿಂಗ್ ಹೇಳಿದ್ದರೆ, ಧನುರ್ಧಾರಿ ಶ್ರೀರಾಮನ ಭಾವಚಿತ್ರವನ್ನು ಭಿತ್ತಿಫಲಕಗಳಲ್ಲಿ ಪ್ರದರ್ಶಿಸುವುದರ ಬದಲು ಪಟ್ಟಾಭಿಷಿಕ್ತ ಶ್ರೀರಾಮ ಸೀತೆಯರ ಭಾವಚಿತ್ರ ಪ್ರದರ್ಶಿಸಬೇಕು ಎಂದು ವೀರಪ್ಪ ಮೊಯ್ಲಿ ದಿವ್ಯ ಸಲಹೆ ನೀಡಿದ್ದಾರೆ! ಧನುರ್ಧಾರಿ ಶ್ರೀರಾಮನನ್ನು ಕಂಡರೆ ಮೊಯ್ಲಿಯವರಿಗೆ ಏಕೆ ಭಯವೋ, ರಾಮಾಯಣ ಆಧಾರಿತ ಕೃತಿಯನ್ನು ಅವರು ಹೇಗೆ ರಚಿಸಿದರೋ ಶ್ರೀರಾಮನಿಗೂ ಗೊತ್ತಿರಲಿಕ್ಕಿಲ್ಲ!
ಆದರೆ ಭಾರತ ಕಂಡ ಸುಪ್ರಸಿದ್ಧ ಸಮಾಜವಾದಿ ನಾಯಕ ಡಾ. ರಾಮಮನೋಹರ ಲೋಹಿಯಾ ಅವರು ಶ್ರೀರಾಮನ ಬಗ್ಗೆ ಹೇಳಿರುವುದೇ ಬೇರೆ. ಬಹುಶಃ ಹಿಂದು ಮುಖಂಡರೂ ಅವರಷ್ಟು ಇಂತಹ ಉತ್ಕೃಷ್ಟ ಹೇಳಿಕೆ ನೀಡಿರಲಿಕ್ಕಿಲ್ಲ. ಲೋಹಿಯಾ ಹೇಳಿದ್ದು: “ರಾಮ-ಕೃಷ್ಣ-ಶಿವ ನಮ್ಮ ಆದರ್ಶ ಪುರುಷರು. ರಾಮನು ಉತ್ತರ-ದಕ್ಷಿಣವನ್ನು ಜೋಡಿಸಿದ್ದರೆ, ಕೃಷ್ಣನು ಪೂರ್ವ-ಪಶ್ಚಿಮವನ್ನು ಬೆಸೆದ. ತಮ್ಮ ಜೀವನದ ಆದರ್ಶದ ದೃಷ್ಟಿಯಿಂದ ಜನರೆಲ್ಲ ರಾಮ, ಕೃಷ್ಣ, ಶಿವ ಇವರ ಕಡೆಗೇ ನೋಡುತ್ತಾರೆ. ರಾಮನು ಜೀವನ ಮೌಲ್ಯಗಳ ಪರಮ ಆದರ್ಶ. ಕೃಷ್ಣನು ಶ್ರೇಷ್ಠತಮ ಜೀವನದ ಸಿದ್ದಿಯ ಸಂಕೇತ. ಶಿವನು ಅದ್ಭುತ ವ್ಯಕ್ತಿತ್ವದ ಸಮಗ್ರ ರೂಪ. ಹೇ ಭಾರತಮಾತೆ, ನಮಗೆ ಶಿವನ ಬುದ್ಧಿ ನೀಡು. ಕೃಷ್ಣನ ಹೃದಯ ನೀಡು. ರಾಮನ ಕ್ರತುಶಕ್ತಿ, ವಚನಪಾಲನೆಯ ದಿಟ್ಟ ಗುಣ ಹಾಗೂ ಸಹನಾಶಕ್ತಿಯನ್ನು ನೀಡು”.. ಇಂತಹ ಮನೋಜ್ಞವಾದ ಹೇಳಿಕೆ ನೀಡಿದ ಲೋಹಿಯಾ ಕೂಡ ರಾಮನಾಮಾಂಕಿತರೇ! ಆದರೆ ಶ್ರೀರಾಮನನ್ನು ಪರಿಭಾವಿಸಿದ ಅವರ ದೃಷ್ಟಿ ಮಾತ್ರ ಅದ್ಭುತ, ಉಳಿದವರಿಗೆ ಮಾದರಿ.
ಶ್ರೀರಾಮ, ಶ್ರೀರಾಮ ಜನ್ಮಭೂಮಿ ಕುರಿತು ನಡೆದಷ್ಟು ಅಪಪ್ರಚಾರಗಳು, ಕುತ್ಸಿತ ಟೀಕೆಗಳು ಬಹುಶಃ ಇನ್ಯಾರ ಬಗ್ಗೆಯೂ ನಡೆದಿರಲಿಕ್ಕಿಲ್ಲ. ತ್ರೇತಾಯುಗದಲ್ಲಷ್ಟೇ ಅಲ್ಲ, ಈಗಿನ ಈ ಕಲಿಯುಗದಲ್ಲೂ ಪ್ರಭು ಶ್ರೀರಾಮನ ಕುರಿತು ವಿವಾದಗಳು ಏಳುತ್ತಲೇ ಇವೆ. ಅಂತಹ ವಿವಾದಗಳು ಶ್ರೀರಾಮ ಜನಿಸಿದ ಪುಣ್ಯ ಭೂಮಿ ಭಾರತದಲ್ಲೇ ಉದ್ಭವಿಸುತ್ತಿರುವುದು ಮಾತ್ರ ವಿಪರ್ಯಾಸ!
ಅದೆಷ್ಟೇ ವಿವಾದಗಳೇಳಲಿ, ಶ್ರೀರಾಮನ ಮಹಿಮೆ ಮಾತ್ರ ಅಲೆಅಲೆಯಾಗಿ ಮನೆಮನೆಯಲ್ಲಿ ಮನಮನದಲ್ಲಿ ಪಸರಿಸುತ್ತಲೇ ಇದೆ. ಅದನ್ನು ಯಾರು ತಡೆಯಲಾರರು. ಅದೇ ಶ್ರೀರಾಮ ಮಹಿಮೆಗಿರುವ ತಾಕತ್ತು!
****
ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ‘ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ‘ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.