ಮಾಸ್ಕೋ/ಬೆಂಗಳೂರು: ಗಾಲ್ವಾನ್ ಕಣಿವೆ ಕಾರಣಕ್ಕೆ ಭಾರತ ಮತ್ತು ಚೀನಾ ನಡುವೆ ಗಡಿ ಬಿಕ್ಕಟ್ಟು ತಾರಕಕ್ಕೇರಿದೆ. ಇನ್ನು ಅಮೆರಿಕವಂತೂ ಚುನಾವಣೆ ಬೆಂಕಿಯಲ್ಲಿ ಬಿದ್ದು ಬೇಯುತ್ತಿದೆ. ಹೇಗಾದರೂ ಸರಿ, ಕೊರೋನಾ ವೈರಾಣು ಕೃಪೆಯಿಂದ ಪ್ರೆಸಿಡೆನ್ಸಿಯ 2ನೇ ಅವಧಿಗೂ ವೈಟ್’ಹೌಸಿನಲ್ಲಿಯೇ ಉಳಿದುಕೊಳ್ಳಲು ಡೊನಾಲ್ಡ್ ಟ್ರಂಪ್ ಇನ್ನಿಲ್ಲದ ಸರ್ಕಸ್ ನಡೆಸಿದ್ದಾರೆ. ಇನ್ನು ಯುರೋಪ್ ದೇಶಗಳಲ್ಲೂ ಇನ್ನೂ ಕೋವಿಡ್ ವಿರುದ್ಧ ನಿರ್ಣಾಯಕ ಸಾಧನೆ ಆಗಿಲ್ಲ. ಇದೆಲ್ಲದರ ನಡುವೆ ರಷ್ಯ ಪುಟಿದೆದ್ದು ಬೌಂಡರಿ ಬಾರಿಸಿದೆ. ಆ ದೇಶದ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ನಗೆ ಬೀರಿದ್ದಾರೆ.
ಕೋವಿಡ್-19 ವೈರಾಣುವಿಗೆ ರಷ್ಯ ಲಸಿಕೆ ಕಂಡುಹಿಡಿದಿದೆ ಎಂದು ವ್ಲಾದಿಮೀರ್ ಪುಟಿನ್ ಮಂಗಳವಾರ ಘೋಷಣೆ ಮಾಡಿದ್ದಾರೆ. ಅತ್ತ ಮಾಸ್ಕೋದಲ್ಲಿ ಈ ವಿಷಯವನ್ನು ಪ್ರಕಟಿಸುತ್ತಿದ್ದಂತೆ ಜಗತ್ತಿನೆಲ್ಲಡೆ ಹೊಸ ಭರವಸೆ ಬಂದಂತೆ ಸಂತಸ ಮನೆ ಮಾಡಿದೆ. ಈ ಲಸಿಕೆಯು ಅತ್ಯಂತ ಪರಿಣಾಮಕಾರಿಯಾಗಿ, ವೈರಾಣುವನ್ನು ಹತ್ತಿಕ್ಕುವಂತೆ ಕೆಲಸ ಮಾಡುತ್ತದೆ. ಇದು ರೋಗಿಯಲ್ಲಿ ಅತ್ಯಂತ ಬಲಿಷ್ಠವಾದ ರೋಗನಿರೋಧಕ ಶಕ್ತಿಯನ್ನು ಸೃಷ್ಟಿ ಮಾಡುತ್ತದೆ ಎಂದು ಅವರು ಪ್ರಕಟಿಸಿದ್ದಾರೆ.
ವಿಡಿಯೋ ಸಂವಾದದ ಮೂಲಕ ಮಾತನಾಡಿದ ಪುಟಿನ್ ಹೇಳಿದ್ದಿಷ್ಟು;
ಇಡೀ ಜಗತ್ತನ್ನು ಬಾಧಿಸುತ್ತಿರುವ ಕೋವಿಡ್-19 ವಿರುದ್ಧ “ಸುಸ್ಥಿರ ರೋಗ ನಿರೋಧಕ ಶಕ್ತಿ” ನೀಡುವ ಮೊದಲ ಲಸಿಕೆಯನ್ನು ರಷ್ಯ ಕಂಡು ಹಿಡಿದಿದೆ ಎಂದು ಪುಟಿನ್ ಹೇಳಿದ್ದಾರೆ. ಜಗತ್ತಿನಲ್ಲೇ ಮೊತ್ತಮೊದಲ ಬಾರಿಗೆ ಕೋವಿಡ್-19 ವಿರುದ್ಧ ಲಸಿಕೆಯನ್ನು ನೋಂದಾಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ವೈರಸ್ ನನ್ನ ಮಗಳಿಗೆ ನೀಡಲಾಗಿದೆ ಎಂಬ ಸಂಗತಿಯನ್ನೂ ಪುಟಿನ್ ಇದೇ ವೇಳೆಯಲ್ಲಿ ದೇಶದ ಗಮನಕ್ಕೆ ತಂದಿದ್ದಾರೆ.
ಮಾಸ್ಕೋದ ’ಗಮಲೇಯ ಇನ್ಸ್ಟಿಟ್ಯೂಟ್’ ಅಭಿವೃದ್ಧಿಪಡಿಸಿದ ಈ ಲಸಿಕೆ ಸುರಕ್ಷಿತ ಮತ್ತು ಅದನ್ನು ನನ್ನ ಮಕ್ಕಳಿಗೆ ಕೂಡ ನೀಡಲಾಗಿದೆ ಎಂದರಲ್ಲದೆ, ಲಸಿಕೆ ಸಾಕಷ್ಟು ಪರಿಣಾಮಕಾರಿಯಾಗಿದೆ, ಬಲವಾದ ರೋಗನಿರೋಧಕ ಶಕ್ತಿಯನ್ನು ರೂಪಿಸುತ್ತದೆ. ರಷ್ಯವನ್ನು ಆರೋಗ್ಯವಾಗಿಡುವುದಕ್ಕೆ ಇದು ಮಹತ್ವದ ಕೊಡುಗೆ ನೀಡುತ್ತದೆ ಎಂದು ನನಗೆ ಅನಿಸುತ್ತಿದೆ ಎಂಬುದಾಗಿಯೂ ಅವರು ಹೇಳಿಕೊಂಡಿದ್ದಾರೆ.
ಈ ಲಸಿಕೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ಮುಗಿದಿವೆ. ಆದಷ್ಟು ಬೇಗ ನಮ್ಮ ದೇಶವು ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಿದೆ ಎಂದು ಪುಟಿನ್ ತಿಳಿಸಿದ್ದಾರೆ. ಇದೇ ವಿಶ್ವ ಆರೋಗ್ಯ ಸಂಸ್ಥೆ ತಕ್ಷಣವೇ ಕಾರ್ಯಪ್ರವೃತ್ತವಾಗಿದ್ದು, ರಷ್ಯ ಸರಕಾರದ ಜತೆ ಮಾತುಕತೆಗೆ ಮುಂದಾಗಿದೆ.
Lead Photo by Karolina Grabowska from Pexels