ಹಿರಿಯ ಪತ್ರಕರ್ತ ಪಿ. ಸಾಯಿನಾಥ್ ಅವರ ಮೇರುಕೃತಿ ಬರ ಎಂದರೆ ಎಲ್ಲರಿಗೂ ಇಷ್ಟ ನಮ್ಮ ವ್ಯವಸ್ಥೆಗೆ ಹಿಡಿದ ಕನ್ನಡಿ. ಪ್ರತಿ ವರ್ಷದ ಬರ ರಾಜಕಾರಣಿಗಳಿಗೆ ಸುಗ್ಗಿ. ಈಗ ಪ್ರತಿ ಮಳೆಗಾಲದಲ್ಲೂ ತಪ್ಪದೇ ಅಪ್ಪಳಿಸುವ ನೆರೆಯೂ ಹಾಗೆಯೇ, ದುಡ್ಡು ಮಾಡಿಕೊಳ್ಳುವವರಿಗೆ ಬರದ ಜತೆಗೆ ನೆರೆಯೂ ಬಲು ಇಷ್ಟವಾಗುತ್ತಿದೆ. ಬಯಲು ಸೀಮೆಯ ಶಾಶ್ವತ ನೀರಾವರಿ ಹೋರಾಟಗಾರ ಆರ್.ಆಂಜನೇಯ ರೆಡ್ಡಿ ಈ ಬಗ್ಗೆ ಬರೆದಿದ್ದಾರೆ.
ಇಂಥ ಪ್ರಶ್ನೆ ಕೇಳಿಬರುತ್ತಿರುವುದು ನಾಚಿಕೆಗೇಡು. ಕರ್ನಾಟಕ ಮಾಹಿತಿ ತಂತ್ರಜ್ಞಾನದ ರಾಜಧಾನಿ, ಭಾರತದ ಬಾಹ್ಯಾಕಾಶದ ಏಣಿ, ಬೆಂಗಳೂರು ನಮ್ಮ ದೇಶದ ಜ್ಞಾನ ಕಣಜ, ಜಗತ್ತಿನ ಗಮನ ಸೆಳೆದಿರುವ ಪ್ರಗತಿಪರ ರಾಜ್ಯ.. ಇತ್ಯಾದಿ..
ಇದು ಹೇಳಿಕೊಳ್ಳಲಿಕ್ಕೆ ಮಾತ್ರ. ನೋಡಿಕೊಳ್ಳಲಿಕ್ಕೆ ಏನಿದೆ? ನೆರೆ ಪೀಡಿತ ಜಿಲ್ಲೆಗಳತ್ತ ಒಮ್ಮೆಇಣುಕಿದರೆ ಕರ್ನಾಟಕವೆಂಬ ರಾಜ್ಯ ಅಭಿವೃದ್ಧಿಯಲ್ಲಿ, ಕಾರ್ಯಕ್ಷಮತೆಯಲ್ಲಿ ಯಾವ ಸ್ಥಾನದಲ್ಲಿದೆ? ಎಂಬುದು ವೇದ್ಯವಾಗುತ್ತದೆ. ಸರಕಾರಕ್ಕೆ ಆತ್ಮಸಾಕ್ಷಿ ಇಲ್ಲದಿದ್ದರೆ, ಅಡಳಿತ ಯಂತ್ರಕ್ಕೆ ತುಕ್ಕು ಹಿಡಿದಿದ್ದರೆ ಇಂಥ ಹೃದಯ ವಿದ್ರಾವಕ ಘಟನೆಗಳು ನಡೆಯುತ್ತವೆ. ಮಾದರಿ ರಾಜ್ಯದಲ್ಲಿ ಮಾನ ಹೋಗುವ ದುರಂತಗಳು ಮುಂದುವರೆದಿವೆ.
ಒಂದೆಡೆ ಅತಿವೃಷ್ಠಿ, ಅದರಿಂದ ರಕ್ಕಸರೂಪಿ ಮಳೆ, ಅದರ ಜತೆಗೆ ನೋಡ ನೋಡುತ್ತಿದ್ದಂತೆಯೇ ನೆಲಮಟ್ಟಸ ಆಗುತ್ತಿರುವ ಗುಡ್ಡಗಳು, ಭೂ ಕುಸಿತದ ಅಟ್ಟಹಾಸ, ಅದರ ಕೆಳಗಿದ್ದ ಬದುಕು ಸಮಾಧಿಯಾಗುತ್ತಿರುವ ರೀತಿ, ಇದೆಲ್ಲಕ್ಕೂ ಮೀರಿ ಸರ್ವವನ್ನು ಸೆಳೆದುಕೊಂಡು ಹೋಗುತ್ತಿರುವ ನದಿ, ಹೊಳೆಗಳು. ರುದ್ರಾವತಾರ ತಾಳಿದ ಹಳ್ಳಕೊಳ್ಳಗಳು. ಕೊಡಗಿನ ಈ ದುಃಸ್ಥಿತಿಗೆ ಯಾರು ಕಾರಣ? ಯಾರನ್ನು ದೂರಬೇಕು.
ಸರಕಾರವಂತೂ, ಒಂದೇ ಮಾತು ಹೇಳಿ ಕೈತೊಳೆದುಕೊಳ್ಳುತ್ತಿದೆ. ಜಿಲ್ಲಾಡಳಿತ ಹೇಳಿದ ಮಾತನ್ನು ಜನ ಕೇಳುತ್ತಿಲ್ಲ, ಏನು ಮಾಡುವುದು ಎಂದು ಕೈಎತ್ತಿಬಿಟ್ಟಿದೆ. ಆದರೆ, ಕಣ್ಣ ಮುಂದೆ ಜನರು ಮಣ್ಣಿನಲ್ಲಿ ಹೂತು ಹೋಗುತ್ತಿದ್ದಾರೆ. ಮನೆಗಳ ಮೇಲೆ ಗುಡ್ಡಗಳು ಜಾರಿ ಬೀಳುತ್ತಿವೆ. ಉಕ್ಕಿ ಹರಿಯುತ್ತಿರುವ ಹಳ್ಳಕೊಳ್ಳಗಳಲ್ಲಿ ಸಾಕು ಪ್ರಾಣಿಗಳು, ಜಾನುವಾರುಗಳು ಕೊಚ್ಚಿಹೋಗುತ್ತಿವೆ.
ಏನಿದು ಅನ್ಯಾಯ?:
ಕರುಳು ಕಿತ್ತುಬರುವ ಹೃದಯವಿದ್ರಾವಕ ದೃಶ್ಯಗಳಿವು. ನಾವು ಕಂಡಂತೆ ಮಳೆ ಅಥವಾ ಪ್ರವಾಹಗಳು ಆಗಾಗ ಬರುವ ಸುನಾಮಿ ಅಥವಾ ಭೂಕಂಪದ ಹಾಗೆ ಕ್ಷಣಾರ್ಧದಲ್ಲಿ ಬಂದೆರುಗುವುದಿಲ್ಲ, ಆದರೂ ಆಧುನಿಕ ವಿಜ್ಞಾನ ತಂತ್ರಜ್ಞಾನ ಬಳಸಿಕೊಂಡು ಹಲವು ದೇಶಗಳ ವಿಜ್ಞಾನಿಗಳು ಸುನಾಮಿ ಮತ್ತು ಭೂಕಂಪದ ಮುನ್ಸೂಚನೆಯನ್ನೂ ಪತ್ತೆ ಹಚ್ಚಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಆಗಬಹುದಾದ ಅನಾಹುತದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ಕರ್ನಾಟಕಕ್ಕೆ ಇದೆಲ್ಲ ಏಕೆ ಸಾಧ್ಯವಾಗುತ್ತಿಲ್ಲ. ಮಂಗಳಯಾನ, ಚಂದ್ರಯಾನದ ಹೊತ್ತಿನಲ್ಲಿ ಪ್ರಕೃತಿಯ ದಿಕ್ಕನ್ನು ಗುರುತಿಸಲಾರದಷ್ಟು ಹಿಂದೆ ಬಿದ್ದಿದೆಯೇ ನಮ್ಮ ರಾಜ್ಯ? ಛೇ!
ನಮ್ಮ ರಾಜ್ಯದಲ್ಲಿ ಮಾತ್ರ ಮಳೆಯಾಗಿ, ಪ್ರವಾಹ ಬಂದು, ಜನಸಾಮಾನ್ಯರ ಬದುಕು ಮೂರಾಬಟ್ಟೆಯಾದ ನಂತರ, ಪ್ರಾಣಿಪಕ್ಷಿಗಳು ಸತ್ತ ನಂತರ, ದನ ಕರು ಕೊಚ್ಚಿಹೋದ ನಂತರದಲ್ಲಿ ಸಮೀಕ್ಷೆ, ಪರಿಹಾರ, ಪ್ಯಾಕೇಜ್ ಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಪ್ರಖ್ಯಾತ ಪತ್ರಕರ್ತರಾದ ಪಿ. ಸಾಯಿನಾಥ್ ಅವರು ಹೇಳಿರುವಂತೆ ’ಬರ ಎಂದರೆ ಎಲ್ಲರಿಗೂ ಇಷ್ಟ’ ಎಂಬಂತೆ ಇತ್ತೀಚೆಗೆ ’ನೆರೆ ಎಂದರೂ ಎಲ್ಲರಿಗೂ ಇಷ್ಟ’ ಎಂಬಂತಾಗಿದೆ. ನೆರೆ ಬರುವುದಕ್ಕೆ ಮೊದಲೇ ನಾಯಕರು ಮುನ್ನೆಚ್ಚರಿಕೆ ವಹಿಸುವುದಿಲ್ಲ, ಯಾಕೆ?
ವಿಕೋಪ ನಿರ್ವಹಣಾ ಸಂಸ್ಥೆಗಳು:
ಪ್ರತಿ ವರ್ಷವೂ ಪ್ರವಾಹಗಳು ಪುನರಾವರ್ತನೆಯಾಗುತ್ತಲೇ ಇರುತ್ತವೆ. ಆದರೆ ಸರಕಾರ ತನ್ನ ಪರಿಹಾರ ಕಾರ್ಯಗಳ ಜೊತೆ ಜೊತೆಗೆ ಮುಂದೆ ಸಂಭವಿಸಬಹುದಾದ ನಷ್ಟ, ಕಷ್ಟಗಳನ್ನು ತಪ್ಪಿಸಲು ಇಂದಿನ ಉಪಗ್ರಹ ಮತ್ತು ಡಾಪ್ಲರ್ ರಾಡಾರ್ ಗಳಿರುವ ಯುಗದಲ್ಲಿ ಬರಬಹುದಾದ ಮಳೆ ಮತ್ತು ಮಳೆ ಪ್ರಮಾಣವನ್ನು ಕರಾರುವಾಕ್ಕಾಗಿ ಅಂದಾಜಿಸಿ ಆಗಬಹುದಾದ ಬೆಳೆ ನಷ್ಟ , ಆಸ್ತಿ ನಷ್ಟ, ಪ್ರಾಣನಷ್ಠ, ಪ್ರಾಣಿ ಪಕ್ಷಿಗಳ ರಕ್ಷಣೆ, ದನಕರುಗಳ ರಕ್ಷಣೆ, ಅಶಕ್ತರ ರಕ್ಷಣೆ ಮತ್ತು ಅಪಾಯಕಾರಿ ಪ್ರದೇಶಗಳನ್ನು ಗುರುತಿಸಿ ಸುರಕ್ಷಿತವಾದ ಸ್ಥಳಗಳಿಗೆ ಸ್ಥಳಾಂತರ ಮುಂತಾದ ಮುಂಜಾಗ್ರತಾ ಕ್ರಮಗಳನ್ನು ವಹಿಸುವಲ್ಲಿ ಮಾರ್ಗದರ್ಶನ ಮಾಡಬೇಕಾಗಿತ್ತು. ಈ ನಿಟ್ಟಿನಲ್ಲಿ ಸರಕಾರಕ್ಕೆ ಮತ್ತು ಜನರಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಮಾಡಬೇಕಾಗಿದ್ದ ಸರಕಾರದ ಅಧೀನ ಪ್ರಮುಖ ಸಂಸ್ಥೆಗಳಾದ ರಾಜ್ಯ ಹವಾಮಾನ ಮುನ್ಸೂಚನಾ ಕೇಂದ್ರ, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮುಂತಾದ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತು ನಿವೃತ್ತಿಯಾಗಿರುವ ಪರಿಣಿತ ವಿಜ್ಞಾನಿಗಳನ್ನು ಕಡೆಗಣಿಸಲಾಗುತ್ತಿದೆ.
ನೈಸರ್ಗಿಕ ವಿಕೋಪ ಸಂದರ್ಭಗಳಲ್ಲಿ ಜನರನ್ನು ರಕ್ಷಿಸಬೇಕಾದ ಹೊಣೆ ಇರುವ ಈ ಸಂಸ್ಥೆಗಳೆಲ್ಲವೂ ಕೊಡಗು ಪ್ರವಾಹಕ್ಕೆ ಸಂಬಂಧಿಸಿ ಸಂಪೂರ್ಣವಾಗಿ ವಿಫಲವಾಗಿವೆ. ಇಷ್ಟಕ್ಕೂ ಇವೆಲ್ಲ ಸಂಸ್ಥೆಗಳಲ್ಲಿ ಆಯಕಟ್ಟಿನ ಜಾಗದಲ್ಲಿ ಕೂತಿರುವ ಉನ್ನತ ಅಧಿಕಾರಿಗಳ ಯಾಗ್ಯತೆಯನ್ನು ಒಮ್ಮೆ ಓರೆಗೆ ಹಚ್ಚಬೇಕಿದೆ. ನಿಜಕ್ಕೂ ಅಲ್ಲಿ ತಜ್ಞರೇ ಇದ್ದಾರಾ ಅಥವಾ ಕೆಲ ಕೆಲಸಗಳ್ಳರಿಗೆ ಅವೆಲ್ಲ ಗಂಜೀ ಕೇಂದ್ರಗಳಾಗಿವೆಯಾ ಎಂಬುದನ್ನು ಪತ್ತೆ ಹಚ್ಚಬೇಕಿದೆ.
ಇಷ್ಟೇ ಅಲ್ಲ, ಖಾಸಗಿ ತಜ್ಞರೊಬ್ಬರು ಎರಡು ತಿಂಗಳ ಹಿಂದೆಯೇ ಕೊಡಗಿನಲ್ಲಿ ಈ ವರ್ಷವೂ ಪ್ರವಾಹ ಮತ್ತು ಭೂ ಕುಸಿತದ ಅಪಾಯವಿದೆ ಎಂದು ಎಚ್ಚರಿಸಿದ್ದರಂತೆ. ಆದರೆ ಅವರು ಕೊಟ್ಟ ವರದಿ ಎಲ್ಲಿ ಹೋಯಿತು? ಯಾವ ಕಸದ ಬುಟ್ಟಿ ಸೇರಿತು? ಪತ್ತೆ ಮಾಡಬೇಕಿದೆ ಮತ್ತೂ ಅದಕ್ಕೆ ಹೊಣೆಗಾರರಾದವರನ್ನು ಶಿಕ್ಷೆಗೆ ಗುರಿಪಡಿಸಬೇಕಿದೆ.
ಲೆಕ್ಕ ಎಲ್ಲಿ?:
ಈಗ ಕೊಡಗು ಮಾತ್ರವಲ್ಲ, ನೆರೆ ಪೀಡಿತ ಜಿಲ್ಲೆಗಳು ಮೊದಲಿನಂತೆ ಉಳಿದಿಲ್ಲ. ಕಳೆದ ವರ್ಷ ಉತ್ತರ ಕರ್ನಾಟಕದಲ್ಲಿ ನೆರೆ ಬಂದು ಸಂತ್ರಸ್ಥರಾದ ಜನರಿಗೆ ಈ ತನಕ ಮನೆ ಆಗಿಲ್ಲ. ನಡುಗಡ್ಡೆಗಳಾಗಿದ್ದ 22 ಜಿಲ್ಲೆಗಳಲ್ಲಿ ಜನರ ಬದುಕು ಹೇಗಿದೆ?ಮತ್ತೊಂದು ಪ್ರವಾಹದ ಬೀತಿಯಲ್ಲಿರುವ ಅವರಿಗೆ ಕೊಟ್ಟ 10,000 ರೂ. ಪರಿಹಾರ 10 ತಿಂಗಳ ಜೀವನಕ್ಕೆ ಆದೀತೆ? ಮನೆ ಕಳೆದುಕೊಂಡ ನತದೃಷ್ಟರೆಲ್ಲರಿಗೂ ತಲಾ 5 ಲಕ್ಷ ರೂ. ಪರಿಹಾರ ಪೂರ್ಣವಾಗಿ ಸಿಕ್ಕಿದೆಯೇ? ಈ ವರೆಗೂ ಆ ಭಾಗದಲ್ಲಿ ಆಗಿರುವ ಬದುಕು ಕಟ್ಟುವ ಕೆಲಸಗಳು ಎಷ್ಟು? ಇದಕ್ಕೆಲ್ಲ ಲೆಕ್ಕ ಎಲ್ಲಿದೆ? ರಾಜ್ಯ ಎಷ್ಟು ಖರ್ಚು ಮಾಡಿತು? ಕೇಂದ್ರವೆಷ್ಟು ಕೊಟ್ಟಿತು? ಇದರ ಪಾನ್’ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರಗಳು ಎಲ್ಲಿ ಸಿಗುತ್ತವೆ? ಯಾರು ಕೊಡುತ್ತಾರೆ? ಸರಕಾರ ಉತ್ತರ ನೀಡಬೇಕಿದೆ.
ಆ ಲೆಕ್ಕದ ಜತೆಗೆ, ನೆರೆ ಬಂದಾಗ ಆ ಜಾಗಗಳಲ್ಲಿ ವೈಮಾಣಿಕ ಸಮೀಕ್ಷೆಯೋ ಅಥವಾ ಅತ್ತಿತ್ತ ಓಡಾಡಿ ನಾಲ್ಕು ಕಾಸನ್ನು ಪರಿಹಾರವಾಗಿ ಕೊಟ್ಟರೆ ಅದು ಖಂಡಿತಾ ವಿಪತ್ತು ನಿರ್ವಹಣೆಯಲ್ಲ. ಈಗಲಾದರೂ ಈ ನಿಟ್ಟಿನಲ್ಲಿ ಆಳುವ ಜನರು ಆತ್ಮಾವಲೋಕನ ಮಾಡಿಕೊಳ್ಳಲಿ.
ಆಪತ್ಕಾಲದಲ್ಲಿ ಈಗಾಗಲೇ ವಿಪತ್ತು ನಿರ್ವಹಣೆಯಲ್ಲಿ ಕೆಲಸ ಮಾಡಿರುವ ಹಿರಿಯರ ಅನುಭವಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಸರಕಾರಗಳು ಎಡವುತ್ತಿವೆ. ಮುಂದೆಯೂ ಇದೇ ಕಷ್ಟ-ನಷ್ಟಗಳು ಪುನರಾವರ್ತನೆಯಾಗುವುದರಲ್ಲಿ ಯಾವ ಸಂದೇಹವೂ ಇಲ್ಲಾ, ಹಾಗಾಗಿ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ಮೇಲೆ ಪಟ್ಟಿ ಮಾಡಿದ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಮತ್ತು ಸಲ್ಲಿಸಿಸುತ್ತಿರುವ ಪರಿಣಿತ ಮತ್ತು ಪ್ರಾಮಾಣಿಕ ವಿಜ್ಞಾನಿಗಳ ವಿಶೇಷ ಕಾರ್ಯಪಡೆಯನ್ನು ರಚನೆ ಮಾಡಿದರೆ ಉತ್ತಮ. ಸದಾ ಚಂಡಮಾರುತಗಳಿಂದ ತತ್ತರಿಸುವ ಆಂದ್ರ ಪ್ರದೇಶದಿಂದ ಕರ್ನಾಟಕ ಕಲಿಯಬೇಕಾದ್ದು ಸಾಕಷ್ಟಿದೆ.
ಎಚ್ಚರಿಸಿದ್ದರೂ ಅಲಕ್ಷ್ಯ:
ಸರಕಾರಕ್ಕೆ ಇಂಥ ಪ್ರಕೃತಿ ವಿಕೋಪಗಳ ಬಗ್ಗೆ ಅನೇಕ ಬಾರಿ ಎಚ್ಚರಿಸಲಾಗಿದ್ದರೂ ದಪ್ಪ ಚರ್ಮದ ಆಡಳಿತಗಾರರಿಗೆ ಸಮಸ್ಯೆಯ ತೀವ್ರತೆ ಅರ್ಥವಾಗುತ್ತಿಲ್ಲ. 20 ವರ್ಷಗಳ ಹಿಂದೆಯೇ ಪರಿಸರ ತಜ್ಞ ಹಾಗೂ ಸರಕಾರಕ್ಕೂ ಪರಿಸರ ಸಲಹೆಗಾರರಾಗಿದ್ದ ಅ.ನ. ಯಲ್ಲಪ್ಪ ರೆಡ್ಡಿ ಅವರು, ಕೊಡಗು ಮತ್ತಿತರೆ ನೆರೆಪೀಡಿತ ಜಿಲ್ಲೆಗಳಲ್ಲಿ ಭವಿಷ್ಯದಲ್ಲಿ ಆಗಬಹುದಾದದ ಅನಾಹುತಗಳ ಬಗ್ಗೆ ಎಚ್ಚರಿಕೆ ನೀಡಿದ್ದರು. ಆ ಬಗ್ಗೆ ಮಹತ್ವದ ವರದಿಯನ್ನೂ ನೀಡಿದ್ದರು. ಆದರೆ ಅವರ ವರದಿಯನ್ನು ಸರಕಾರ ಪರಿಗಣಿಸಿದೆಯೇ? ಇಲ್ಲ ಎನ್ನುವುದಕ್ಕೆ ಇವತ್ತಿನ ಕೊಡಗಿನ ದುಸ್ಥಿತಿಯೇ ಜ್ವಲಂತ ಸಾಕ್ಷಿಯಾಗಿದೆ.
ಅಭಿವೃದ್ಧಿ ಎಂಬುದು ಸಹಜ ಪ್ರಕ್ರಿಯೆಯಂತೆ ನಡೆಯಬೇಕು. ಅದು ಪರಿಸರದ ಸಮಾಧಿ ಮೇಲೆ ಆಗಬಾರದು. ಆದರೆ ಈಗ ಏನಾಗಿದೆ? ಅಭಿವೃದ್ಧಿ ಹೆಸರಿನಲ್ಲಿ ಬೆಟ್ಟಗಳನ್ನು ನುಂಗಲಾಗುತ್ತಿದೆ. ನದಿ ಪಾತ್ರಗಳನ್ನು ಹಾಳು ಮಾಡಿ ಜಲಮೂಲಗಳನ್ನು ನಿರ್ನಾಮ ಮಾಡಲಾಗುತ್ತಿದೆ. ಹಳ್ಳ-ಕೊಳ್ಳ, ಕೆರೆ ಕಟ್ಟೆಗಳನ್ನು ಗುಳುಂ ಮಾಡಲಾಗುತ್ತಿದೆ. ನಿರಂತರವಾಗಿ ಪರಿಸರದ ಮೇಲೆ ಎಗ್ಗಿಲ್ಲದೇ ದಾಳಿ ನಡೆಯುತ್ತಿದೆ. ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ನೋಡಿ, ಹಿಂದೆ ಎಗ್ಗಿಲ್ಲದೆ ಮರಳು ದಂಧೆ ನಡೆಯಿತು. ಈಗ ಬೆಟ್ಟಗುಡ್ಡಗಳನ್ನೇ ಅಡ್ಡಡ್ಡ ನುಂಗಲಾಗುತ್ತಿದೆ. ಎಲ್ಲರಿಗೂ ಗೊತ್ತಿರಬಹುದು, ಚಿಕ್ಕಬಳ್ಳಾಪುರ ಜಿಲ್ಲೆಯ ಪೇರೇಸಂದ್ರಕ್ಕೆ ಹತ್ತಿರವಿರುವ ಹಿರೇನಾಗವೇಲಿ ಗ್ರಾಮಕ್ಕೆ ಕಳಸದಂತಿದ್ದ ಸುಂದರವಾದ ಬೆಟ್ಟವನ್ನು ಈಗ ನೆಲಸಮ ಮಾಡಲಾಗಿದೆ. ಅಲ್ಲಿದ್ದ ಅರಣ್ಯ ನಾಶವಾಗಿದೆ. ಆ ಪ್ರದೇಶದಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದ ಜಿಂಕೆಗಳು, ನವಿಲುಗಳು ಸೇರಿದಂತೆ ಅನೇಕ ವನ್ಯಜೀವಿಗಳ ಸಂತತಿಯೇ ನಾಶವಾಗಿದೆ. ಜತೆಗೆ, ಜಲಮೂಲಗಳು ಮಲೀನವಾಗಿ ಜನ ವಿಷಕಾರಿ ನೀರನ್ನು ಕುಡಿಯುತ್ತಿದ್ದಾರೆ. ಇದಕ್ಕೆ ಏನೆಂದು ಹೇಳುವುದು?
ಇನ್ನು ಕೊಡಗಿನ ಬಗ್ಗೆ ಹೇಳುವುದಾದರೆ ಕಳೆದ ವರ್ಷವೇ ಆ ಜಿಲ್ಲೆ ಮಾರಣಾಂತಕ ಭೂ ಕುಸಿತಕ್ಕೆ ತುತ್ತಾಗಿತ್ತು. ಆಗ ಸರಕಾರವೂ ಸೇರಿದಂತೆ ಎಲ್ಲರೂ ಬೊಬ್ಬೆ ಹೊಡೆದರು. save kodagu, pray for kodagu ಎಂಬೆಲ್ಲ ಘೋಷಣೆಗಳ ಹೆಸರಿನಲ್ಲಿ ಸಿಕ್ಕಾಪಟ್ಟೆ ಹಣವೂ ಸಂಗ್ರಹವಾಯಿತು. ಆ ಮೊತ್ತ ಎಲ್ಲಿ ಹೋಯಿತೋ ಗೊತ್ತಿಲ್ಲ. ಮತ್ತೆ ಈ ವರ್ಷ ನೆರೆ ಬಂದಿದೆ. ಭೂ ಕುಸಿತವೂ ಉಂಟಾಗಿದೆ. ಮತ್ತದೇ ಹೈ ಡ್ರಾಮಾ ಶುರುವಾಗಿದೆ. ಜನರು ಮಾತ್ರ ನರಳುತ್ತಿದ್ದಾರೆ. ನೆರೆಯನ್ನು ಇಷ್ಟಪಡುವ ಮಂದಿಗೆ ಸಂತ್ರಸ್ತರ ಅಳಲು ಕೇಳುತ್ತಿಲ್ಲ. ಅವರ ಆರ್ತನಾದವೂ ನೆರೆಯಲ್ಲಿ ಕೊಚ್ಚಿಹೋಗುತ್ತಿದೆ. ನಿರೀಕ್ಷೆಯಂತೆ ಸರಕಾರ ಮತ್ತು ಪ್ರತಿಪಕ್ಷದ ನಡುವೆ ಕಿತ್ತಾಟವೂ ಜೋರಾಗಿದೆ.
ಕೊನೆ ಮಾತು:
ನೆರೆ ಪೀಡಿತ ಕೊಡಗು ಜಿಲ್ಲೆಗೆ ಬೆಂಗಳೂರು ಮೂಲದ ಸಚಿವರೊಬ್ಬರ ಉಸ್ತುವಾರಿ! ಆ ಜಿಲ್ಲೆಗೊಬ್ಬ ಸಚಿವರ ದಿಕ್ಕಿಲ್ಲ!!
ಆರ್. ಆಂಜನೇಯ ರೆಡ್ಡಿ ಮೂಲತಃ ಚಿಕ್ಕಬಳ್ಳಾಪುರದವರು. ವೃತ್ತಿಯಲ್ಲಿ ಪ್ರಗತಿಪರ ರೈತರು, ಸಾವಯವ ಕೃಷಿಯಲ್ಲಿ ನಿಪುಣರು. ನೀರಾವರಿ ವಿಷಯಗಳ ಬಗ್ಗೆ ಆಳವಾದ ಜ್ಞಾನವುಳ್ಳವರು. ಬಯಲು ಸೀಮೆ ಶಾಶ್ವತ ಹೋರಾಟ ಸಮಿತಿ ಅಧ್ಯಕ್ಷರು ಕೂಡ.
Kodagu Photos Courtesy: @Dr Pushpa Amarnath