ನವದೆಹಲಿ: ನಿಕಟಪೂರ್ವ ರಾಷ್ಟ್ರಪತಿ, ಭಾರತರತ್ನ ಪ್ರಣಬ್ ಮುಖರ್ಜಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ವರದಿಗಳು ಬರುತ್ತಿವೆ. ಸದ್ಯಕ್ಕೆ ಅವರು ಕೃತಕ ಉಸಿರಾಟದ ವ್ಯವಸ್ಥೆಯೊಂದಿಗೆ ದಿಲ್ಲಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಕಾರಣಕ್ಕೆ ಸೋಮವಾರ ಮುಖರ್ಜಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಅವರಿಗೆ ಸೋಮವಾರವೇ ಮಿದುಳು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೆ, 24 ಗಂಟೆ ಕಳೆದ ಬಳಿಕವೂ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿಲ್ಲ.
ಪ್ರಸ್ತುತ ಅವರನ್ನು ಈಗ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ (ವೆಂಟಿಲೇಟರ್) ಇಡಲಾಗಿದ್ದು, ತಜ್ಞ ವೈದ್ಯರ ತಂಡವೊಂದು ದಿನದ 24 ಗಂಟೆಯೂ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ ಎಂದು ಸೇನಾ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈಗ ಪ್ರಣಬ್ ಅವರಿಗೆ 84 ವರ್ಷ. ಅವರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಅನಾರೋಗ್ಯ ಉಂಟಾಗಿತ್ತು. ಇದರಿಂದಾಗಿ ವೈದ್ಯರು, ತುರ್ತಾಗಿ ಅವರಿಗೆ ಮಿದುಳು ಶಸ್ತ್ರ ಚಿಕಿತ್ಸೆ ಮಾಡುವ ಮೊದಲು ಕೋವಿಡ್-19 ಪರೀಕ್ಷೆ ನಡೆಸಿದ್ದರು. ಈ ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್ ಬಂದಿತ್ತು. ಅದಾದ ಬಳಿಕ ಅವರಿಗೆ ಮಿದುಳಿನ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.
ಮಂಗಳವಾರವೂ ಪ್ರಣಬ್ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ ಎಂದು ಹಲವಾರು ಸುದ್ದಿಮೂಲಗಳು ಹಾಗೂ ಸುದ್ದಿ ವಾಹಿನಿಗಳು ವರದಿ ಮಾಡಿವೆ. ಇನ್ನೊಂದೆಡೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಖರ್ಜಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಮತ್ತೊಂದೆಡೆ, ಪಶ್ಚಿಮ ಬಂಗಾಳದಲ್ಲಿ ಮುಖರ್ಜಿ ಅವರ ಚೇತರಿಕೆಗೆ ಪ್ರಾರ್ಥಿಸಿ ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಕೋವಿಡ್ ಪಾಸಿಟೀವ್ ಬಂದಿರುವ ಬಗ್ಗೆ ಅವರು ಟ್ವೀಟ್ ಕೂಡ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅನೇಕ ಅಭಿಮಾನಿಗಳು, ’ಗೆಟ್ ವೆಲ್ ಸೂನ್ ಸರ್’ ಎಂದು ಹಾರೈಸಿದ್ದಾರೆ. ಸಿಕೆನ್ಯೂಸ್ ನೌ ಕೂಡ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತದೆ.
ರಾಷ್ಟ್ರಪತಿ ಮತ್ತು ಸಿಟಿಜನ್:
ಪ್ರಣಬ್ ಮುಖರ್ಜಿ ಅವರು ಭಾರತ ಕಂಡ ಅತ್ಯಂತ ಪ್ರಬುದ್ಧ ರಾಷ್ಟ್ರಪತಿಗಳಲ್ಲಿ ಒಬ್ಬರು. ತಮ್ಮಆರು ದಶಕಗಳ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಪಕ್ಷದ ಬಹುಮುಖ್ಯ ನಾಯಕರಾಗಿ, ಕೇಂದ್ರದಲ್ಲಿ ಹಲವಾರು ಜವಾಬ್ದಾರಿಗಳನ್ನು ಸಮರ್ಥವಾಗಿ ವಿಭಾಯಿಸಿದ ಮೇಧಾವಿಯಾಗಿ ಅವರು ಹೆಸರಾಗಿದ್ದಾರೆ. ಜತೆಗೆ, ರಾಷ್ಟ್ರಪತಿ ಪದವಿಗೇ ಒಂದು ’ಎತ್ತರ’ವನ್ನು ತಂದುಕೊಟ್ಟ ಹಿರಿಮೆ ಅವರಿಗೇ ಸಲ್ಲುತ್ತದೆ. 2012ರಿಂದ 2017ರವರೆಗೆ ರಾಷ್ಟ್ರಪತಿಯಾಗಿದ್ದ ಪ್ರಣಬ್ ಅವರು ಅತ್ಯಂತ ಸೂಕ್ಷ್ಮಮತಿ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ಶಿರಸಾ ವಹಿಸಿ ಪಾಲಿಸಿದವರು.
ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಆ ಪಕ್ಷಕ್ಕೆ ಬಹುಮುಖ್ಯ ಟ್ರಬಲ್ ಶೂಟರ್ ಆಗಿದ್ದರು. ಪಕ್ಷದಲ್ಲಿದ್ದಾಗ ಆ ಚೌಕಟ್ಟಿನಲ್ಲಿಯೇ ಅಪರಿಮಿತ ನಿಷ್ಠೆಯೊಂದಿಗೆ ಕೆಲಸ ಮಾಡಿದವರು. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರೊಂದಿಗೆ ಕೆಲಸ ಮಾಡಿದ ಅವರು, ನಿರ್ವಹಿಸಿದ ಎಲ್ಲ ಕೆಲಸಗಳಲ್ಲೂ ತಮ್ಮತನವನ್ನು ಮೂಡಿಸುತ್ತಿದ್ದರು.
ರಾಷ್ಟ್ರಪತಿ ಭವನದಿಂದ ತಮ್ಮ ಸೇವಾವಧಿಯ ಕೊನೆಯ ದಿನವನ್ನು ಮುಗಿಸಿದ ಮೇಲೆ, Thank you for your affection & support ; tomorrow when I engage with you it will not be as President but as a citizen #PresidentMukherjee ಎಂದು ಟ್ವೀಟ್ ಮಾಡಿದ್ದರು ಪ್ರಣಬ್ ಅವರು. ಇಷ್ಟು ಸರಳತೆಯ ವ್ಯಕ್ತಿಯೊಬ್ಬರು ನಮ್ಮ ಜತೆಯಲ್ಲೇ ಇನ್ನಷ್ಟು ಕಾಲ ಇರಬೇಕು.
Lead Photo Courtesy: @President Mukherjee