ಬೆಂಗಳೂರು: ನಗರದ ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಮತ್ತು ಕಾವಲ್ ಭೈರಸಂದ್ರ ಪ್ರದೇಶಗಳು ಹೊತ್ತಿ ಉರಿದಿವೆ. ಅದರ ಎಫೆಕ್ಡ್ ಇಡೀ ನಗರದ ಮೇಲೆ ಬಿದ್ದಿದೆ. ಪದೇಪದೆ ಇಂಥ ಘಟನೆಗಳು ನಡೆಯುತ್ತಿದ್ದರೂ ಪಾತಕಿಗಳನ್ನು ಶಾಶ್ವತವಾಗಿ ಏಕೆ ಹತ್ತಿಕ್ಕಲಾಗುತ್ತಿಲ್ಲ? ಮತಬ್ಯಾಂಕ್ ಪಾಲಿಟಿಕ್ಸ್’ನ ಕರಾಳಮುಖವನ್ನು ಈ ಗಲಭೆ ಅನಾವರಣ ಮಾಡಿದೆಯಾ? ದು.ಗು. ಲಕ್ಷ್ಮಣ ಅವರು ಇಲ್ಲಿ ಬರೆದಿದ್ದಾರೆ. ಓದಿ..
ಯಾವ ದೇವರೂ ಧರ್ಮವೂ ಹಿಂಸೆಯನ್ನು ಪ್ರಚೋದಿಸುವುದಿಲ್ಲ. ಎಲ್ಲ ಧರ್ಮಗಳ ಮೂಲ ಉದ್ದೇಶ ಶಾಂತಿ ಮತ್ತು ಸಹಬಾಳ್ವೆ ಎಂಬ ಮಾತನ್ನು ಲಗಾಯ್ತಿನಿಂದ ಕೇಳುತ್ತಲೇ ಇದ್ದೇವೆ. ಆದರೆ ಕಳೆದ ಸಾವಿರಕ್ಕೂ ಹೆಚ್ಚಿನ ವರ್ಷದ ಇತಿಹಾಸವನ್ನು ಕೆದಕಿ ನೋಡಿದರೆ ಈ ಮಾತು ಸತ್ಯಕ್ಕೆ ದೂರ ಎಂಬುದು ಕಣ್ಣಿಗೆ ಹೊಡೆಯುವಷ್ಟು ಸ್ವಷ್ಟವಾಗಿ ಗೋಚರಿಸುತ್ತದೆ. ದೇವರು, ಧರ್ಮದ ಹೆಸರಿನಲ್ಲಿ ಗಲಭೆ ನಡೆಸುವುದು, ಧಾಂದಲೆ ಮಾಡುವುದು ಜೀವಕ್ಕೆ ಆಸ್ತಿ-ಪಾಸ್ತಿಗೆ ಹಾನಿ ಮಾಡುವುದನ್ನು ಕೆಲವರು ನಿರಂತರವಾಗಿ ವ್ಯವಸ್ಥಿತವಾಗಿ ಮುಂದುವರೆಸಿಕೊಂಡು ಬರುತ್ತಲೇ ಇದ್ದಾರೆ. ಈ ರೀತಿಯ ಹಿಂಸಾಪ್ರವೃತ್ತಿ ಇತ್ತೀಚೆಗಿನ ದಿನಗಳಲ್ಲಿ ಒಂದಷ್ಟು ಹೆಚ್ಚೇ ನಡೆಯುತ್ತಿದೆ ಎನ್ನುವುದಕ್ಕೆ ನಿದರ್ಶನಗಳು ಹಲವಾರು. ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆ, ಆಸ್ತಿ-ಪಾಸ್ತಿ ನಾಶ ಇಂಥದ್ದೇ ಒಂದು ವ್ಯವಸ್ಥಿತ ಷಡ್ಯಂತ್ರ ಎನ್ನುವುದು ಹಗಲಿನಷ್ಟೇ ನಿಶ್ಚಳವಾಗಿರುವ ಸಂಗತಿ.
ಯಾರೋ ಒಬ್ಬ ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿಗಳಿಗೆ ಅವಮಾನವೆಸಗುವ ಸ್ಟೇಟಸ್ ಹಾಕಿದನೆಂದ ಮಾತ್ರಕ್ಕೆ ಕಾನೂನನ್ನೇ ಕೈಗೆತ್ತಿಕೊಂಡು ಹಿಂಸಾಪ್ರವೃತ್ತಿ ಮೆರೆಯಬೇಕಾದ ಅಗತ್ಯ ಖಂಡಿತಾ ಇರಲಿಲ್ಲ. ತಮ್ಮ ಮತದ ಅಥವಾ ಧರ್ಮದ ಭಾವನೆಗಳಿಗೆ ಘಾಸಿಯಾಗಿದ್ದರೆ, ಅನ್ಯಾಯವಾಗಿದ್ದರೆ ಅದನ್ನು ಪ್ರತಿಭಟಿಸಲು ಭಾರತದಂಥ ದೇಶದಲ್ಲಿ ಬೇಕಾದಷ್ಟು ಪ್ರಜಾಸತ್ತಾತ್ಮಕ ದಾರಿಗಳು ತೆರೆದಿವೆ. ಅವಮಾನ ಎಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಬಹುದು, ಕೋರ್ಟಿಗೂ ಹೋಗಬಹುದು, ಶಾಂತಿಯುತ ಪ್ರತಿಭಟನೆ ಮೂಲಕ ಸರಕಾರದ ಮೇಲೆ ಒತ್ತಡ ಹೇರಿ ಆರೋಪಿಯನ್ನು ಬಂಧಿಸುವಂತೆ ಮಾಡಬಹುದು. ಆದರೆ ಹಾಗೆ ಮಾಡದೇ ಕಾನೂನಾತ್ಮಕ ಕ್ರಮಗಳನ್ನು ಕಾಲಿನ ಕಸದಂತೆ ಎಸೆದು ಹಿಂಸಾಚಾರ, ಗಲಭೆ ನಡೆಸುವವರು ಸಮಾಜಘಾತುಕರು, ಗೂಂಡಾಗಳು ಅಲ್ಲದೇ ಮತ್ತೇನು? ಯಾರದೋ ತಪ್ಪಿಗೆ ಇನ್ನಾರದೋ ಮನೆ, ವಾಹನ, ಕೊನೆಗೆ ಪೊಲೀಸ್ ಠಾಣೆಯನ್ನೇ ಬೆಂಕಿ ಹಚ್ಚಿ ಸುಡುವ ಅರಾಜಕತೆ ನಿರ್ಮಿಸಿ ಕೇಕೆ ಹಾಕುವ ದುಷ್ಟರಿಗೆ ಯಾವ ಶಿಕ್ಷೆ ವಿಧಿಸಿದರೂ ಕಡಿಮೆಯೇ.
ಪ್ರವಾದಿಗಳಿಗೆ ಅವಹೇಳನ ಎಸಗಿದವರನ್ನೂ ಬಂಧಿಸುವಂತೆ ಠಾಣೆಗೆ ಬಂದು ದೂರು ಕೊಟ್ಟವರು ಪೊಲೀಸರಿಗೆ ಹಾಗೆ ಮಾಡಲು ಅವಕಾಶವನ್ನೇ ನೀಡದಿರುವುದು ಏನನ್ನು ಸೂಚಿಸುತ್ತದೆ? ಗಲಭೆಕೋರರಿಗೆ ಅವಹೇಳನ ಎಸಗಿದವನ ಬಂಧನವೊಂದೇ ಬೇಡಿಕೆ ಆಗಿರಲಿಲ್ಲ. ಆ ನೆಪದಲ್ಲಿ ಒಂದಷ್ಟು ಗೂಂಡಾಗಿರಿ, ಹಿಂಸಾಚಾರ ನಡೆಸಿ ಜನಮಾನಸದಲ್ಲಿ ಭೀತಿಯ ವಾತಾವರಣವನ್ನು ಬಿತ್ತುವುದೇ ಮುಖ್ಯ ಉದ್ದೇಶವಾಗಿತ್ತು. ಠಾಣೆಗೆ ದೂರು ಕೊಡಲು ಬಂದವರು ನಿಜವಾದ ನಾಗರೀಕರೇ ಆಗಿದ್ದರೆ ಕಾನೂನನ್ನು ಕೈಗೆತ್ತಿಕೊಂಡಿದ್ದೇಕೆ? ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹಾಗೂ ಅವರ ಪಕ್ಕದ ಮನೆಗಳಿಗೆ ಬೆಂಕಿ ಹಚ್ಚಿ ಸರ್ವನಾಶ ಮಾಡಿದ್ದೇಕೆ? ತಮ್ಮ ಹಿಂಸಾಚಾರಕ್ಕೆ ಪೊಲೀಸರು ಅಡ್ಡಿಯಾಗದಿರಲಿ ಎಂದು ಅಲ್ಲಿಗೆ ಬರುವ ರಸ್ತೆಗಳೆಲ್ಲವನ್ನೂ ಬ್ಲಾಕ್ ಮಾಡಿದ್ದೇಕೆ? ನಿಜ ಹೇಳಬೇಕೆಂದರೆ ಅವರಾರೂ ನಾಗರೀಕರಲ್ಲ! ಗೂಂಢಾಗಿರಿ, ಹಿಂಸಾಚಾರ ನಡೆಸಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಸಮಾಜಘಾತುಕರು.
ಪ್ರವಾದಿಗಳಿಗೆ ಅವಹೇಳನ ವಿದ್ಯಮಾನ ಈ ಮಂದಿಗೆ ಒಂದು ನೆಪ ಮಾತ್ರ ಅಷ್ಟೇ. ಬೇರೆ ಬೇರೆ ಕಾರಣಗಳಿಗಾಗಿ ಒಳಗೊಳಗೇ ಜ್ವಾಲಾಮುಖಿಯಾಗಿ ಕುದಿಯುತ್ತಿದ್ದ ದ್ವೇಷದ ಬೆಂಕಿಯನ್ನು ಶಮನ ಮಾಡಿಕೊಳ್ಳಲು ಈ ಘಟನೆ ನೆಪವಾಯಿತಷ್ಟೇ. ಇಂಥವರಿಗೆ ಕಾನೂನು, ನೆಲದ ನ್ಯಾಯ, ನಾಗರೀಕತೆ, ನಾಗರೀಕ ನಡವಳಿಕೆ ಕಸಕ್ಕೆ ಸಮ. ಅವೆಲ್ಲ ಅವರಿಗೆ ಆಗಿ ಬರುವಂಥದ್ದಲ್ಲ. ಹೊಡಿ, ಬಡಿ, ಕಡಿ ಎನ್ನುವುದೇ ಅವರ ಮಂತ್ರ. ಅದಕ್ಕೆ ಬಲಪಶುಗಳು ಯಾರಾದರೇನು?
ಈ ಹಿಂದೆ ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ಬೀದಿಗಿಳಿದು ಮಂಗಳೂರಿನಲ್ಲಿ ಹಿಂಸಾಚಾರ ನಡೆಸಿದವರು, ಕೋವಿಡ್ ಪರೀಕ್ಷೆಗೆ ಬಂದ ಆರೋಗ್ಯ ಕಾರ್ಯಕರ್ತರನ್ನು ಬೆಂಗಳೂರಿನ ಪಾದರಾಯನಪುರದಲ್ಲಿ ಹಿಡಿದು ಅಟ್ಟಾಡಿಸಿ ಹಿಂಸಾಚಾರ ನಡೆಸಿದವರು ಇದೀಗ ಪ್ರವಾದಿಗಳಿಗೆ ಅವಮಾನವಾಗಿದೆ ಎಂಬ ನೆಪವೊಡ್ಡಿ ಡಿ.ಜೆ. ಹಳ್ಳಿ ಮತ್ತು ಕೆ.ಜಿ.ಹಳ್ಳಿಗಳಲ್ಲಿ ಹಿಂಸಾತಾಂಡವ ನಡೆಸಿವರು- ಇವರೆಲ್ಲರ ಮಾನಸಿಕತೆಯೂ ಒಂದೇ. ಸಾಮಾಜಿಕ ಶಾಂತಿ, ಸಾಮರಸ್ಯ, ಸಹಬಾಳ್ವೆಯನ್ನು ತ್ಯಜಿಸಿ ಜನರ ನಡುವೆ ಸಂಶಯ, ಅಶಾಂತಿ, ಭೀತಿ ಬಿತ್ತುವುದೇ ಇಂಥವರ ಏಕಮೇವ ಅಜೆಂಡಾ.
ಅಸಲಿಗೆ ದೊಂಬಿ ನಡೆಸಿದವರಿಗೆ ಪ್ರವಾದಿಗಳ ಬಗ್ಗೆ ಇರುವ ಗೌರವ, ಶ್ರದ್ಧೆಯ ಬಗ್ಗೆಯೇ ಸಂಶಯ ಮೂಡುತ್ತದೆ. ಪ್ರವಾದಿಗಳ ಬಗ್ಗೆಯಾಗಲಿ, ಕುರಾನ್ ಉಪದೇಶಗಳ ಬಗ್ಗೆಯಾಗಲಿ ಈ ಮಂದಿಗೆ ಏನೇನೂ ಗೊತ್ತಿರಲಿಕ್ಕೆ ಇಲ್ಲ. ಇಸ್ಲಾಮ್ ಧರ್ಮದಲ್ಲಿ ಅನ್ಯಧರ್ಮಗಳ ಕುರಿತಾದ ಸಹನೆಯ ಮನೋಭಾವನೆಯ ಕುರಿತು ಕುರಾನ್’ನ ಸೂಕ್ತಿಗಳೇ ಇವೆ. ಕುರಾನ್ ಅನ್ನು ಕರಗತ ಮಾಡಿಕೊಂಡವರಿಗೆ, ಆಳವಾಗಿ ಅಧ್ಯಯನ ಮಾಡಿದವರಿಗೆ ಅದರಲ್ಲಿರುವ ಹೂರಣ ಅರ್ಥವಾಗಬಹುದು. ದಾಂಧಲೆ ನಡೆಸುವವರ ಮತ ಇಸ್ಲಾಮ್ ಆದ ಮಾತ್ರಕ್ಕೆ ಅವರಿಗೆ ತಮ್ಮ ಧರ್ಮದ ಬಗ್ಗೆ ಗೊತ್ತಿರಬೇಕೇಂದೇನೂ ಇಲ್ಲವಲ್ಲ. ಗೊತ್ತಿದ್ದರೆ ಆ ಮಂದಿ ಹಾಗೆ ಖಂಡಿತಾ ನಡೆದುಕೊಳ್ಳುತ್ತಿರಲಿಲ್ಲ.
ಅಯೋಧ್ಯೆಯ ಉತ್ಖನನ ತಂಡದಲ್ಲಿದ್ದ ಭಾರತೀಯ ಪುರಾತತ್ತ್ವ ಇಲಾಖೆಯ ಅಧಿಕಾರಿ ಕೆ.ಕೆ.ಮಹಮದ್, ತಮ್ಮ ಆತ್ಮಕಥೆಯಲ್ಲಿ ಹೇಳಿರುವುದನ್ನು ಕೊಂಚ ತಾಳ್ಮೆಯಿಂದ ಕೇಳಿಸಿಕೊಳ್ಳಿ. ಮಹಮದ್ ಅವರು ಹೇಳಿದ್ದು, “ಎಲ್ಲರಲ್ಲೂ ವಿಶಾಲ ಮನೋಭಾವ ಬೆಳೆಯಬೇಕು. ಇನ್ನಿತರ ಶ್ರದ್ಧೆ-ವಿಚಾರಗಳನ್ನು ಒಪ್ಪದಿದ್ದರೂ ಅದನ್ನು ಸಹಿಸಿಕೊಳ್ಳುವುದೇ ಧರ್ಮ. ನಾವೆಲ್ಲ ಹಿಂದು, ಮುಸ್ಲಿಮ್, ಕ್ರೈಸ್ತರೆಂದು ಕರೆಸಿಕೊಳ್ಳಲು ಕಾರಣ ನಮ್ಮನ್ನು ಹೆತ್ತವರು ಅನುಸರಿಸುತ್ತಿದ್ದ ಧರ್ಮ, ಜಾತಿ. ನಮ್ಮ ಧರ್ಮ ನಮಗೆ ಶ್ರಷ್ಟವಾದಲ್ಲಿ ಉಳಿದವರ ಧರ್ಮಾವಲಂಭನೆ, ವಿಶ್ವಾಸಗಳನ್ನು ನಾವು ತಾಳಿಕೊಂಡು ಬಾಳಬೇಕಾದ್ದೇ ಪ್ರಮುಖವಾದ ಧರ್ಮಾಚರಣೆ. ಇದಕ್ಕಾಗಿ ನನ್ನದೇ ಸರಿ, ನಿನ್ನದು ತಪ್ಪು ಎನ್ನುವ ಧೋರಣೆಯೂ ಅಸಹಿಷ್ಣುತೆಯ ಬೇರು. ಯಾವುದೇ ಧಾರ್ಮಿಕ ವಿಚಾರಗಳನ್ನಾದರೂ ಕಟ್ಟಿನಿಟ್ಟಾಗಿ ಅಂಧವಾಗಿ ಪಾಲಿಸದೇ ’ನಾವು ಬದುಕೋಣ, ಉಳಿದವರನ್ನೂ ಬದುಕಲು ಬಿಡೋಣ’ ಎಂಬ ಮನೋಭಾವ ಬೆಳೆಸಿಕೊಂಡರೆ ಸಾಮರಸ್ಯ ತಲೆದೋರುತ್ತದೆ.”
ಆದರೆ ಗೂಂಢಾಗಿರಿ ನಡೆಸಿದ ದುರುಳರಿಗೆ ಇತರರು ಬದುಕುವುದು ಇಷ್ಟವಿರಲಿಲ್ಲ. ಹಾಗೆಂದೇ ಕಾಂಗ್ರೆಸ್ ಶಾಸಕರ ಮನೆ ಸುಟ್ಟು ಹಾಕಿದ್ದು ಮತ್ತು ದಾರಿಯಲ್ಲಿದ್ದ ಯಾರು ಯಾರದ್ದೋ ಬೈಕ್, ಸ್ಕೂಟರ್, ಕಾರುಗಳಿಗೆ ಬೆಂಕಿ ಹಚ್ಚಿದ್ದು. ಇಲ್ಲಿನ ಅನ್ನ ತಿಂದು, ಇಲ್ಲಿನದ್ದೇ ಗಾಳಿ ಉಸಿರಾಡಿ, ಇಲ್ಲಿನ ಸರಕಾರ ನೀಡುವ ಎಲ್ಲ ಸೌಲಭ್ಯ ಬಳಸಿಕೊಂಡು ಈ ಸಮಾಜಕ್ಕೇ ದ್ರೋಹ ಬಗೆಯುವ ದುಷ್ಮನ್’ಗಳಿಗೆ ಬೇರೆಯವರ ಬದುಕನ್ನು ಕಟ್ಟಿಕೊಂಡು ಆಗಬೇಕಾದದ್ದಾದರೂ ಏನು?
ಕಾಂಗ್ರೆಸ್ ಬಣ್ಣ ಬಯಲು:
ತಮ್ಮದೇ ಪಕ್ಷದ ಮನೆ ಗೂಂಢಾಗಳ ಕೃತ್ಯದಿಂದ ಸಂಪೂರ್ಣ ಭಸ್ಮವಾಗಿದ್ದರೂ ಆ ಕುಕೃತ್ಯವನ್ನು ಖಂಡಿಸುವ ಎದಗಾರಿಕೆಯೇ ಕಾಂಗ್ರೆಸ್ ಮುಖಂಡರಿಗೆ ಇಲ್ಲದಿರುವುದು ಅವರ ಹೇಡಿತನಕ್ಕೆ ಸಾಕ್ಷಿ. “ಪ್ರವಾದಿಗಳಿಗೆ ಅವಹೇಳನದ ಸ್ವೇಟಸ್ ಹಾಕಿದ ನವೀನ ಬಿಜೆಪಿ ಬೆಂಬಲಿಗ. ಆತನ ವಿರುದ್ಧ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳದಿದ್ದುದ್ದೇ ಇಷ್ಟೆಲ್ಲ ಹಿಂಸಾಚಾರಕ್ಕೆ ಕಾರಣ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಆದರೆ ನವೀನನ ಖಾತೆಯಲ್ಲಿ ಕೊಂಚ ತಡಕಾಡಿದರೆ ಡಿಕೆಶಿ ಅವರು ಕೆಪಿಸಿಸಿ ಅಧ್ಯಕ್ಷರಾದಾಗ ಅವರಿಗೆ ಅಭಿನಂದನೆ ಸಲ್ಲಿಸಿರುವುದು, ಕಾಂಗ್ರೆಸ್ ಸಭೆಗಳಲ್ಲಿ ಭಾಗಿಯಾಗಿರುವ, ಕಾಂಗ್ರೆಸ್ ಮುಖಂಡರೊಂದಿಗಿರುವ ಭಾವಚಿತ್ರಗಳು ಸಿಗುತ್ತವೆ. ಒಟ್ಟಿನಲ್ಲಿ ಈ ಘಟನೆಯನ್ನು ಬಿಜೆಪಿ ಸರಕಾರದ ವೈಫಲ್ಯ ಎಂದು ಸಾಬೀತುಪಡಿಸಲು ಡಿಕೆಶಿ ಸಾಹೇಬರು ಹೆಣಗಾಡುತ್ತಿರುವುದು ಸ್ಪಷ್ಟವಾಗಿದೆ. ತಮ್ಮದೇ ಶಾಸಕರ ಮನೆ ಧ್ವಂಸಗೊಳಿಸಿದ ಗೂಂಢಾಗಳನ್ನು ಖಂಡಿಸುವ ಒಂದೇ ಒಂದು ಶಬ್ದ ಕೆಪಿಸಿಸ ಅಧ್ಯಕ್ಷರ ಬಾಯಿಂದ ಹೊರಹೊಮ್ಮಿಲ್ಲ. ಇಂತಹ ಹೇಡಿತನಕ್ಕೆ ಏನೆನ್ನಬೇಕು?
ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರು (ಅಹಿಂದ) ಒಂದೇ ವೇದಿಕೆ ಮೇಲೆ ಬಂದು ಸಮಾನ ಮನಸ್ಕರಾಗಿ ಕಾಂಗ್ರೆಸ್ ಪಕ್ಷವನ್ನು ಬೆಳೆಸಬೇಕೆಂದು ಸಿದ್ದರಾಮಯ್ಯ ಅವರು ಅಹಿಂದ ಸಂಘಟನೆಗೆ ಜನ್ಮ ನೀಡಿದರು. ಈಗ ಅಲ್ಪಸಂಖ್ಯಾತರೇ ದಲಿತ ಶಾಸಕರ ಮನೆಯನ್ನು ಭಸ್ಮ ಮಾಡಿದ್ದಾರೆ. ಅಹಿಂದ ಸಂಘಟನೆಯಲ್ಲಿ ಅದೆಂಥ ದ್ವೇಷ ಅಥವಾ ಅಸಹನೆ ಹೆಪ್ಪುಗಟ್ಟಿದೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಅಹಿಂದ ಎಂಬ ಸಿದ್ದರಾಮಯ್ಯ ಅವರ ರಾಜಕೀಯ ವೋಟ್ ಬ್ಯಾಂಕ್’ನ ಬಲೂನ್ ಠುಸ್ಸೆಂದು ಒಡೆದುಹೋಗಿದೆ.
ಗಲಭೆಯ ಹಿಂದೆ ಪಿಎಫ್’ಐ, ಎಸ್’ಡಿಪಿಐ?
ಮುಸ್ಲಿಮ್ ಉಗ್ರ ಸಂಘಟನೆಗಳಾದ ಪಿಎಫ್’ಐ, ಎಸ್’ಡಿಪಿಐಗಳ ಕೈವಾಡದ ಶಂಕೆಯೂ ಇದೆ ಎನ್ನಲಾಗುತ್ತಿದೆ. ಹಾಗೇನಾದರೂ ಇದ್ದಲ್ಲಿ ಆ ಸಂಘಟನೆಗಳ ನಿಷೇಧದ ಬಗ್ಗೆ ಪರಿಶೀಲಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಗೃಹ ಸಚಿವರು ಹೇಳಿಕೆ ನೀಡುವುದರಲ್ಲಿ ಪ್ರಸಿದ್ಧರೇ ಹೊರತು ಹೇಳಿಕೆಯನ್ನು ಕೃತಿಗೊಳಿಸುವುದರಲ್ಲಿ ಅಲ್ಲ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾದರೆ ಆ ನಷ್ಟವನ್ನು ಗಲಭೆಕೋರರಿಂದಲೇ ಭರಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನವಿದೆ. ಇದನ್ನೇ ಕಾನೂನು ಎಂದು ಪರಿಗಣಿಸುವಂತೆಯೂ ಸೂಚನೆ ನೀಡಿದೆ. ಆದರೆ, ಘಟನೆ ನಡೆದು ಆಗಲೇ ಎರಡು-ಮೂರು ದಿನಗಳಾದರೂ ಸರಕಾರದಿಂದ ಯಾವುದೇ ದಿಟ್ಟ ಕ್ರಮವಿಲ್ಲ. ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿ ಕೈತೊಳೆದುಕೊಳ್ಳುವ ಹವಣಿಕೆಯಲ್ಲಿದೆ ಸರಕಾರ. ಉತ್ತರ ಪ್ರದೇಶ ಸರಕಾರದ ಮಾದರಿ ಅನುಸರಿಸಿ ಪುಂಡರಿಂದಲೇ ನಷ್ಟವಸೂಲಿಗೆ ದಿಟ್ಟ ನಿರ್ಧಾರವನ್ನು ಸರಕಾರ ತಳೆದಿದ್ದರೆ ಪ್ರಜ್ಞಾವಂತರು ಇದ್ದಲ್ಲೇ ಉಘೇ ಉಘೇ ಎನ್ನುತ್ತಿದ್ದರು. ಆದರೆ ಈಗ ಇದೆಂಥಹ ಸರಕಾರ ಎಂದು ಹಿಡಿಶಾಪ ಹಾಕುವಂತಾಗಿದೆ. ಸರಕಾರದ ಈ ನಡೆಯು ಎಲ್ಲರಲ್ಲೂ ಹೇವರಿಕೆ ತಂದಿದೆ.
ಇದು ಇಲ್ಲಿಗೆ ನಿಲ್ಲುವುದಿಲ್ಲ. ಬಂಧನಕ್ಕೆ ಒಳಗಾದ ಪುಂಡರಿಗೇ ಜಾಮೀನು ದೊರಕಿ ಬಿಡುಗಡೆಯಾಗಿ ಬರುತ್ತಾರೆ. ಆಗ ಜಮೀರ್ ಅಹಮದ್ ಅವರೆಲ್ಲರನ್ನೂ ಸ್ವಾಗತಿಸಿ ಹಾರ, ತುರಾಯಿ ಹಾಕಿ ಸನ್ಮಾನಿಸಿ ಮೆರವಣಿಗೆ ಮಾಡಿಸಲೂಬಹುದು! ಪೊಲೀಸರು ಆ ಮೆರೆವಣಿಗೆ ಸಾಂಗವಾಗಿ ನಡೆಯುವಂತೆ ರಕ್ಷಣೆ ನೀಡಲೂಬಹುದು!
ಮತ್ತೆ ಇನ್ನೊಂದು ದಿನ ಇನ್ನೆಲ್ಲೋ ಇಂತಹುದೇ ಪಿಳ್ಳೆನೆಪದ ಕಾರಣ ಹಿಡಿದು ಮತ್ತೆ ಇದೇ ಬಗೆಯ ಗೂಂಢಾಗಿರಿ, ಹಿಂಸಾಚಾರ ಘಟಿಸುವ ದಿನಗಳು ದೂರವಿಲ್ಲ. ಯಾಕೆಂದರೆ, ತಾವೇನು ಮಾಡಿದರೂ ಕೇಳುವವರಿಲ್ಲ ಎಂಬ ಭಂಡ ಧೈರ್ಯ ಇಂತಹ ಸಮಾಜಘಾತುಕರ ಮಾನಸಿಕತೆಯೊಳಗೆ ಈಗಾಗಲೇ ಇಳಿದುಬಿಟ್ಟಿದೆ. ಅದು ಮುಂದೆ ಬಹುದೊಡ್ಡ ಸಾಮಾಜಿಕ ಸಂಘರ್ಷಕ್ಕೆ ಕಾರಣವಾದರೆ ಅಚ್ಚಯೇನಿಲ್ಲ.
ಹಾಗಾಗದಂತೆ ಸರಕಾರ, ಸಮಾಜದ ಪ್ರಜ್ಞಾವಂತರು, ಸಂಘಟನೆಗಳು, ರಾಜಕೀಯ ಪಕ್ಷಗಳು, ಧಾರ್ಮಿಕ ಮುಖಂಡರು ಈಗಲೇ ಎಚ್ಚರ ವಹಿಸಬೇಕಾದ ಅಗತ್ಯ ಜರೂರಾಗಿದೆ.
Photos: BNMK Photographs