ಕೈಲಾಸ ದೇಶದಲ್ಲಿ ಕಾಂಚಾಣ, ಮೂಗಿನ ಮೇಲೆ ಬೆರಳಿಟ್ಟುಕೊಂಡ ಜನ
ಬೆಂಗಳೂರು: ಅತ್ಯಾಚಾರ, ಅಪಹರಣ ಸೇರಿದಂತೆ ಹಲವಾರು ಕೇಸುಗಳಲ್ಲಿ ಸಿಕ್ಕಿಹಾಕಿಕೊಂಡು ಬೆಂಗಳೂರಿನ ಬಿಡದಿ ಏನು? ಭಾರತದಿಂದಲೇ ಕಾಲ್ಕಿತ್ತಿರುವ ನಿತ್ಯಾನಂದ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ.
ಈಗ ಈ ವ್ಯಕ್ತಿ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಯಾವುದೋ ದ್ವೀಪವನ್ನು ತೆಗೆದುಕೊಂಡು ಅಲ್ಲಿ ಕೈಲಾಸ ಎಂಬ ದೇಶವನ್ನು (ಈಕ್ವೆಡಾರ್ ಸಮೀಪದ ಒಂದು ದ್ವೀಪ) ಮಾಡಿಕೊಂಡಿದ್ದಲ್ಲದೆ ಇದೀಗ ಅಲ್ಲಿ ತನ್ನ ಸಾಮ್ರಾಜ್ಯಕ್ಕೆ ಪ್ರತ್ಯೇಕ ರಿಜರ್ವ್ ಬ್ಯಾಂಕ್ (ಕೇಂದ್ರ ಬ್ಯಾಂಕ್) ಸ್ಥಾಪನೆ ಮಾಡಿಕೊಂಡು ಹೊಸ ಕರೆನ್ಸಿಯನ್ನು ರಿಲೀಸ್ ಮಾಡಿದ್ದಾರೆ. ಸಹಜವಾಗಿಯೇ ಭಾರತದಲ್ಲಿ ಈ ಸುದ್ದಿಯ ಬಗ್ಗೆ ಕೊಂಚ ಕುತೂಹಲ ಹೆಚ್ಚಾಗಿದೆ.
ಆದರೆ, ಅಪರಾಧವೆಸಗಿ ದೇಶವನ್ನೇ ಬಿಟ್ಟು ಪಲಾಯನ ಮಾಡಿದ ಈ ವ್ಯಕ್ತಿಗೆ ಹೊಸ ದೇಶ ಮಾಡಿಕೊಂಡಿದ್ದೂ ಸಾಧ್ಯವಾಗಿದೆ ಹಾಗೂ ಹೊಸ ಬ್ಯಾಂಕು, ಹೊಸ ಕರೆನ್ಸಿಯನ್ನು ರೂಪಿಸಿಕೊಳ್ಳುವುದು ಸಾಧ್ಯವಾಗಿದೆ. ಅದು ಹೇಗೆ ಎಂಬುದು ಆತನಿಗೆ ಭಕ್ತರೂ ಆಗಿದ್ದವರೂ (ಈಗಲ್ಲ) ಹಾಗೂ ಜನಸಾಮಾನ್ಯರ ಪ್ರಶ್ನೆಯಾಗಿದೆ.
ತಮಾಷೆ ಎಂದರೆ, ಇತರೆ ದೇಶಗಳಲ್ಲೂ ತನ್ನ ಹೊಸ ಕರೆನ್ಸಿ ಚಲಾವಣೆ ಆಗುತ್ತಿದೆ ಎಂದು ನಿತ್ಯಾನಂದ ಹೇಳಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ವಿವಿಧ ದೇಶಗಳ ಜತೆ ಒಪ್ಪಂದ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಅವು ಯಾವ ದೇಶಗಳು ಎಂಬುದನ್ನು ಆತ ಹೇಳಿಲ್ಲ. ಆತನೇ ಹೇಳಿಕೊಂಡಿರುವಂತೆ ಸುಮಾರು 300 ಪುಟಗಳ ಆರ್ಥಿಕ ವಿಧಾನಗಳನ್ನು ರೂಪಿಸಿಕೊಂಡಿದ್ದಾರೆ. ವ್ಯಾಟಿಕನ್ ಬ್ಯಾಂಕು ರೀತಿಯನ್ನಿಯೇ ಕೈಲಾಸ್ ರಿಜರ್ವ್ ಬ್ಯಾಂಕು ಕೂಡ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.
ಸುಮಾರು ಭಾರತದಿಂದ 16ರಿಂದ 17 ಸಾವಿರ ಕಿ.ಮೀ. ದೂರದಲ್ಲಿರುವ ದಕ್ಷಿಣ ಅಮೆರಿಕಾ ಖಂಡದ ಈಕ್ವೆಡಾರ್ ಹತ್ತಿರದ ಒಂದು ಅಜ್ಞಾತ ದ್ವೀಪದಲ್ಲಿ ನಿತ್ಯಾನಂದ ಮೊಕ್ಕಂ ಹೂಡಿದ್ದಾನೆ ಎಂಬುದು ಸದ್ಯಕ್ಕಿರುವ ಮಾಹಿತಿ. ಆ ದ್ವೀಪಕ್ಕೆ ಆತ ಕೈಲಾಸ ಎಂದು ಹೆಸರಿಟ್ಟಿದ್ದಾರೆ. ಗೌರಿ-ಗಣೇಶ ಹಬ್ಬದ ದಿನ ನಿತ್ಯಾನಂದ ಜಗತ್ತಿನ ಕಥೆ ಹಾಗಿರಲಿ, ಹೊಸ ಬ್ಯಾಂಕು ಮತ್ತು ಹೊಸ ಕರೆನ್ಸಿ ಮೂಲಕ ಭಾರತಕ್ಕೂ ಅಚ್ಚರಿ ಮೂಡಿಸಿದ್ದಾನೆ. 100 ಡಾಟರ್ ನೋಟು ಸೇರಿ ಕೆಲ ಮುಖಬೆಲೆಯ ನಾಣ್ಯಗಳನ್ನೂ ಬಿಡುಗಡೆ ಮಾಡಲಾಗಿದೆ.
ಇಷ್ಟಕ್ಕೆ ಸುಮ್ಮನಾಗಿಲ್ಲ ನಿತ್ಯಾನಂದ, ತನ್ನ ದೇಶದ ಪ್ರಧಾನಮಂತ್ರಿ, ಸರಕಾರ, ಸಂಪುಟ, ಆಡಳಿತ ವ್ಯವಸ್ಥೆ ಇತ್ಯಾದಿ ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ. ತನ್ನ ದ್ವೀಪದಲ್ಲಿ ಪ್ರತಿಯೊಬ್ಬರು ಶ್ರದ್ಧೆ ಭಕ್ತಿಯಿಂದ ಆಚರಿಸಬೇಕು ಎಂದು ಕರೆ ನೀಡಿದ್ದಾರೆ. ವಿಡಿಯೋದಲ್ಲಿ ಸಾಕಷ್ಟು ಮಾತನಾಡಿರುವ ನಿತ್ಯಾನಂದ, “ನಾನು ಹಿಂದು ಧರ್ಮದ ಸುಧಾರಕನಲ್ಲ, ಬದಲಿಗೆ ಆ ಧರ್ಮದ ಪುನರುಜ್ಜೀವಕ. ಜಗತ್ತಿನಾದ್ಯಂತ ಹಿಂದುತ್ವವನ್ನು ಪಾಲಿಸುತ್ತಿರುವ ಜನರು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ನಾನು ಕೈಲಾಸ ದೇಶವನ್ನು ಸ್ಥಾಪಿಸಿದೆ. ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ಯಾರು ಬೇಕಾದರೂ ಇಲ್ಲಿ ಬಂದು ನೆಲೆಸಬಹುದು” ಎಂದು ಹೇಳಿಕೊಂಡಿದ್ದಾರೆ ನಿತ್ಯಾನಂದ.
ಪಿಎಂಒ ಕೈಲಾಸ:
ಇದೇ ವೇಳೆ ಟ್ವೀಟರಿನಲ್ಲಿ ಪಿಎಂಒ ಕೈಲಾಸ ಎಂಬ ಖಾತೆ ಇದೆ. ಅದರಲ್ಲಿ ನಿತ್ಯಾನಂದ ಕರೆನ್ಸಿ ಪ್ರಕಟಿಸಿದ ಅಪ್’ಡೇಟ್ ಸೇರಿದಂತೆ ಇನ್ನೂ ಹಲವಾರು ಅಪ್’ಡೇಟುಗಳಿವೆ. ಅದರಲ್ಲಿ ಕೈಲಾಸದ ಬಾವುಟ ಪ್ರಕಟಣೆ ಮತ್ತಿತರೆ ಪ್ರಕಟಣೆಗಳಿವೆ. ಈ ವರದಿ ಬರೆಯುವ ಹೊತ್ತಿಗೆ ಈ ಖಾತೆಗೆ 15 ಫಾಲೋವರುಗಳಿದ್ದರೆ, ಅದು 29 ಮಂದಿಯನ್ನು ಫಾಲೋ ಮಾಡಿತ್ತು.
ಇನ್ನೊಂದೆಡೆ, ಕೆಲವರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತ ಹೇಳಿದ್ದು ಹೀಗೆ..,
“ನಿತ್ಯಾನಂದ ಬಿಡದಿ ಬಳಿ ಆಶ್ರಮ ಮಾಡಿಕೊಂಡು ಇದ್ದದ್ದು, ಆಮೇಲೆ ವಿವಾದಕ್ಕೆ ಸಿಲಿಕಿದ್ದು, ವಿವಿಧ ಪ್ರಕರಣಗಳಲ್ಲಿ ಸಿಕ್ಕಿಬಿದ್ದು ಕೋರ್ಟುಗಳಿಗೆ ಅಲೆದದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆದರೆ, ಆ ವ್ಯಕ್ತಿ ದೇಶದಿಂದ ಪಲಾಯನ ಮಾಡಿದ್ದು ಹೇಗೆ? ಯಾರ ಬೆಂಬಲವೂ ಇಲ್ಲದೆ ಹೀಗೆ ದೇಶದಿಂದ ಓಡಿಹೋಗಲು ಹೇಗೆ ಸಾಧ್ಯ? ಆ ವ್ಯಕ್ತಿ ದೇಶ ಕಟ್ಟಲು ಹೇಗೆ ಸಾಧ್ಯ? ಒಂದು ವೇಳೆ ಕಟ್ಟಿದ್ದರೆ ಎಲ್ಲಿ? ಆ ಖರೀದಿ ಮಾಡಿದ ದ್ವೀಪ ಯಾವ ದೇಶದ್ದು? ಈ ಜಗತ್ತಿನಲ್ಲಿ ಯಾವ ದೇಶಕ್ಕೂ ಸೇರದ ಭೂ ಭಾಗ ಇದೆಯಾ? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ..” ಎನ್ನುತ್ತಾರೆ ಅವರು.
ಮತ್ತಷ್ಟು ವಿವರ ಬೇಕಿದ್ದರೆ ಈ ಕೆಳಗಿನ ಲಿಂಕ್ ಒತ್ತಿ…