ಬೆಂಗಳೂರು: ರಾಜ್ಯದಲ್ಲಿ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸೃಷ್ಟಿ ಹಾಗೂ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜು ಪಠ್ಯದಲ್ಲಿಯೇ ಕೌಶಲ್ಯ ತರಬೇತಿ ವಿಷಯವನ್ನು ಸೇರಿಸಲು ರಾಜ್ಯ ಸರಕಾರ ನಿರ್ಧರಿಸಿದೆ.
ಸದ್ಯಕ್ಕೆ ಕೌಶಲ್ಯವಿರುವುದರ ಜತೆಗೆ, ಆ ಕೌಶಲ್ಯಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ನೌಕರಿ ಸಿಗುತ್ತದೆಯೇ ಎಂಬುದು ಬಹಳ ಮುಖ್ಯವಾದ ವಿಚಾರವಾಗಿದೆ. ಹೀಗಾಗಿ ಜಾಬ್ ಮಾರುಕಟ್ಟೆಗೆ ತಕ್ಕಹಾಗೆ, ಅಂದರೆ ಕೈಗಾರಿಕೆಗಳಿಗೆ ಅಗತ್ಯವಿರುವ ದಿಕ್ಕಿನಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಾಂಕ್ಷಿಗಳಿಗೆ ತರಬೇತಿ ನೀಡಿ ಕೆಲಸಕ್ಕೆ ಹಚ್ಚಲು ಸರಕಾರ ಚಿಂತಿಸುತ್ತಿದೆ. ಅದಕ್ಕೆ ಪೂರಕವಾರಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಲಾಗಿರುವ ಹಲವಾರು ಪ್ರಮುಖ ಅಂಶಗಳನ್ನು ಸರಕಾರ ಪರಿಣಿಸಿದೆ ಎಂದಿದ್ದಾರೆ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಣ.
ಹಿಂದಿನಿಂದ ಇದೇ ರೀತಿಯ ವೈರುಧ್ಯವನ್ನು ನಾವು ಗಮನಿಸುತ್ತಾ ಬಂದಿದ್ದೇವೆ. ಕೆಲಸಗಳೇ ಬೇರೆ ಇರುತ್ತವೆ. ಅದಕ್ಕೆ ಬೇಕಾದ ಕುಶಲ ಮಾನವ ಸಂಪನ್ಮೂಲ ಲಭ್ಯ ಇರುವುದಿಲ್ಲ. ಓದಿದ್ದೇ ಬೇರೆ, ಸಿಗುವ ಕೆಲಸಗಳೇ ಬೇರೆ. ಇದರಿಂದ ದಕ್ಷತೆ ಇರುವುದಿಲ್ಲ ಎಂಬುದು ಸಾಬೀತಾಗಿದೆ. ಇಂಥ ಅಂತರದಿಂದ ನಿರುದ್ಯೋಗ ಹೆಚ್ಚುತ್ತಲೇ ಹೋಗುತ್ತಿದೆ. ಇದನ್ನು ನಿವಾರಿಸಲು ಸರಕಾರ ಪಠ್ಯದಲ್ಲೇ ಕೌಶಲ್ಯಕ್ಕೆ ಸಂಬಂಧಿಸಿದ ವಿಷಯವನ್ನು ಅಡಕಗೊಳಿಸಲು ಮುಂದಾಗಿದೆ. ಶಿಕ್ಷಣದ ಹಂತದಲ್ಲೇ ಅಗತ್ಯವಾದ ಕುಶಲತೆಯನ್ನು ಹೊಂದಬೇಕಾಗುತ್ತದೆ. ಉದ್ಯೋಗದ ನಂತರ ಅದನ್ನು ಯಾರೂ ಹೇಳಿಕೊಡುವ ಸನ್ನಿವೇಶ ಇರುವುದಿಲ್ಲ ಎಂದು ಡಿಸಿಎಂ ಹೇಳಿದ ಮಾತು.
ಜಾಬ್ ಮಾರುಕಟ್ಟೆ ಕೊಂದ ಕೋವಿಡ್ :
ಈ ವಿಷಯವನ್ನು ಸರಕಾರ ಒಪ್ಪಿಕೊಂಡಿದೆ. ಕೋವಿಡ್ ಮಹಾಮಾರಿಯಿಂದಾದ ಬಹಳ ಉದ್ಯಮಗಳು ನಷ್ಟಕ್ಕೆ ತುತ್ತಾಗಿ ಅನೇಕ ಯುವಕ-ಯುವತಿಯರು ಕೆಲಸ ಕಳೆದುಕೊಂಡಿದ್ದು, ಭವಿಷ್ಯದ ಬಗ್ಗೆ ಚಿಂತೆಗೀಡಾಗಿದ್ದಾರೆ. ಅಂತಹ ಅನೇಕ ಯುವಜನರಿಗೆ ಅಗತ್ಯ ಕೌಶಲ್ಯದ ಕೊರತೆಯಿದ್ದು, ಸೂಕ್ತವಾದ ಹೊಸ ಕೆಲಸ ಹುಡುಕಿಕೊಳ್ಳಲು ಅವರು ಪರದಾಡುತ್ತಿದ್ದಾರೆ. ಇಂಥವರ ನೆರವಿಗೆ ಸರಕಾರ ಧಾವಿಸಿದೆ. ಕೋವಿಡ್ ನಂತರ ಉಂಟಾಗಿರುವ ಉದ್ಯೋಗ ನಷ್ಟವನ್ನು ಸರಕಾರ ಸರಿಪಡಿಸಲಿದೆ. ಉಪ ಮುಖ್ಯಮಂತ್ರಿಗಳ ಈ ಮಾತು ಭರವಸೆ ಹುಟ್ಟಿಸುವಂತಿದೆ.
ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿವೆ ಎಂದಿರುವ ಅವರು, ಔದ್ಯೋಗಿಕವಾಗಿ ಆಕಾಂಕ್ಷಿಗಳಿಗೆ ಸಹಾಯವಾಗುವ ಹಲವು ಯೋಜನೆಗಳನ್ನು ಹಮ್ಮಿಕೊಂಡಿವೆ. ಅಂತಹುದೇ ಒಂದು ಯೋಜನೆ ಇದಾಗಿದೆ. ಕೋವಿಡ್ʼನಿಂದ ಸಂಕಷ್ಟಕ್ಕೆ ತುತ್ತಾಗಿ ಉದ್ಯೋಗ ವಂಚಿತರಾದ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಯುವಕ- ಯುವತಿಯರಿಗೆ ಕೌಶಲ್ಯ ತರಬೇತಿ ನೀಡುವ ಸಲುವಾಗಿ ʼಮಲ್ಲೇಶ್ವರಂ ಕೌಶಲ್ಯ ಕೇಂದ್ರʼವನ್ನು ಆರಂಭಿಸಲಾಗಿದೆ ಎಂದಿದ್ದಾರೆ.
ಈಗಾಗಲೇ ಸ್ಕಿಲ್ ಕನೆಕ್ಟ್:
ಕುಶಲತೆ ಉಳ್ಳ ಆಭ್ಯರ್ಥಿಗಳಿಗೆ ಸೂಕ್ತ ಉದ್ಯೋಗನ್ನು ಹುಡುಕಿಕೊಡುವ ನಿಟ್ಟಿನಲ್ಲಿ ಸರಕಾರ ಈಗಾಗಲೇ ಹೆಜ್ಜೆ ಇಟ್ಟಿದೆ. ಅದಕ್ಕೆ ಪೂರವಾಗಿ ʼಸ್ಕಿಲ್ ಕನೆಕ್ಟ್ʼ ಎಂಬ ಕಾರ್ಯಕ್ರಮವನ್ನು ಆರಂಭಿಸಿ, ಪ್ರತ್ಯಕವಾದ ವೆಬ್ ಪೋರ್ಟಲ್ ಅನ್ನು ಆರಂಭಿಸಿದೆ. ಈ ಪೋರ್ಟಲ್ʼನಲ್ಲಿ ಉದ್ಯೋಗಾಂಕ್ಷಿಗಳು ಮತ್ತು ಉದ್ಯೋಗದಾತರು ನೋಂದಣಿ ಮಾಡಿಕೊಂಡಿದ್ದು, ಈ ಪೋರ್ಟಲ್ ಉದ್ಯೋಗ ಸೇತುವೆಯಾಗಿ ಕೆಲಸ ಮಾಡುತ್ತಿದೆ.
ಇನ್ನೊಂದು ಸುದ್ದಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಅಂಗೈನಲ್ಲೇ ಉದ್ಯೋಗ; ಸಿಗಲಿದೆ ಟ್ರೆಂಡ್’ಗೆ ತಕ್ಕ ಜಾಬ್
ಎಂಥಾ ತರಬೇತಿ?
ಮುಖ್ಯವಾಗಿ ಮಲ್ಲೇಶ್ವರಂ ಕೌಶಲ್ಯ ಕೇಂದ್ರದಲ್ಲಿ ಪ್ರಾರಂಭಿಕವಾಗಿ ಬ್ಯಾಂಕಿಂಗ್, ಹಣಕಾಸು ಸೇವೆ, ವಿಮಾ ಸೇವೆ, ಲೆಕ್ಕ ನಿರ್ವಹಣೆ, ಐಟಿ ಸೆಕ್ಯೂರಿಟಿ ವಿಶ್ಲೇಷಣೆ ಸೇರಿದಂತೆ ಹಲವು ಉಪಯುಕ್ತ ವಿಭಾಗಗಳಲ್ಲಿ ತರಬೇತಿ ನೀಡಲಾಗುವುದು. ದಿನಕ್ಕೆ ಎರಡು ಬ್ಯಾಚ್ʼಗಳಲ್ಲಿ ಇಲ್ಲಿ ತರಬೇತಿ ನೀಡಲಾಗುವುದು. ಕೌಶಲ್ಯ ತರಬೇತಿ ಕೇಂದ್ರದಲ್ಲಿ, ಉದ್ಯೋಗಾಕಾಂಕ್ಷಿಗಳ ಕಲಿಕೆಗೆ ಅನುಕೂಲವಾಗುವಂತೆ ಸುಸಜ್ಜಿತ ತರಗತಿಗಳು ಮತ್ತು
ಪ್ರಯೋಗಾಲಯಗಳನ್ನೂ ಸಹ ತಯಾರು ಮಾಡಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.
Photo by Anamul Rezwan from Pexels