ಬೆಳಗಾವಿ: ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾಗಿರುವ ಪ್ರವಾಹದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸೋಮವಾರ ವಿವಿಧ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರಲ್ಲದೆ, ಆ ಭಾಗದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು. ಸತತ ಎರಡನೇ ವರ್ಷವೂ ನೆರೆಗೆ ಸಿಕ್ಕಿ ಸಂಕಷ್ಟಕ್ಕೆ ಸಿಲುಕಿರುವ ಈ ಪ್ರದೇಶಗಳನ್ನು ಮತ್ತೆ ಕಟ್ಟುವ ಬಗ್ಗೆ ಅವರು ಸಮಾಲೋಚಿಸಿದರು.
ಇದೇ ವೇಳೆ ಕೃಷ್ಣೆಯನ್ನು ತುಂಬಿಕೊಂಡು ನಳನಳಿಸುತ್ತಿರುವ ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಯಡಿಯೂರಪ್ಪ ಅವರು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಜತೆಯಲ್ಲಿ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು. ಇದೇ ವೇಳೆ ನೆರೆ ನಿರ್ವಹಣೆ ಸೇರಿದಂತೆ ತುರ್ತು ಕೆಲಸಗಳಿಗಾಗಿ ಬೆಳಗಾವಿ ಜಿಲ್ಲೆಗೆ ಮಾತ್ರ 412 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಅತಿವೃಷ್ಟಿಗೆ ಸಂಬಂಧಿಸಿದಂತೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ಜನಪ್ರತಿನಿಧಿಗಳ ಹಾಗೂ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ 972 ಕೋಟಿ ರೂ. ಮೌಲ್ಯದ ಆಸ್ತಿಹಾನಿಯ ಅಂದಾಜು ವರದಿ ನೀಡಿದ್ದಾರೆ. ನೆರೆಯಿಂದ ತೀವ್ರ ತೊಂದರೆ ಅನುಭವಿಸಿರುವ ಬೆಳಗಾವಿ ಜಿಲ್ಲೆಯಲ್ಲಿ ಮನೆಗಳ ನಿರ್ಮಾಣಕ್ಕೆ 174 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಅತಿವೃಷ್ಟಿಯಿಂದ ಸಂಭವಿಸಿರುವ ಹಾನಿಗೆ ಹೆಚ್ಚಿನ ಪರಿಹಾರ ಕೋರಲು ಮುಂದಿನ ವಾರ ದೆಹಲಿಗೆ ತೆರಳಿ ಕೇಂದ್ರ ಸರ್ಕಾರದ ಸಚಿವರಿಗೆ ಮನವಿ ಮಾಡಲಾಗುವುದು. ಶೀಘ್ರ ಎಲ್ಲಾ ನೆರೆ ಸಂತ್ರಸ್ತ ಪ್ರದೇಶಗಳ ಶಾಸಕರ ಸಭೆ ಕರೆದು ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಸಮರ್ಪಕ ಪರಿಹಾರ ನೀಡಲು ಯೋಜನೆ ರೂಪಿಸಲಾಗುವುದು. ಎಲ್ಲ ಮಾಹಿತಿಯನ್ನು ಕೇಂದ್ರ ಸರಕಾರಕ್ಕೆ ಕಳಿಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರಲ್ಲದೆ, ಶಾಸಕರು ತಮ್ಮ ಕ್ಷೇತ್ರದಲ್ಲಿ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಕೋವಿಡ್ ಇರುವುದರಿಂದ ಎನ್.ಡಿ.ಆರ್.ಎಫ್. ಅನುದಾನದಡಿ ತುರ್ತು ಅಗತ್ಯವಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಸೂಚಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಆಗಿರುವ ಹಾನಿ ಮತ್ತು ಅಗತ್ಯವಿರುವ ಅನುದಾನದ ಮಾಹಿತಿಯನ್ನು ತಕ್ಷಣ ಸರ್ಕಾರಕ್ಕೆ ಕಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ಸಿಎಂ, ಮನೆ ಕಳೆದುಕೊಂಡಿರುವ ಬೆಳಗಾವಿಯ 44156 ಫಲಾನುಭವಿಗಳಿಗೆ 488 ಕೋಟಿ ಪರಿಹಾರ ಬಿಡುಗಡೆಯಾಗಿದೆ. ಜಿಲ್ಲೆಯಲ್ಲಿ ಆಗಿರುವ ಹಾನಿ ಮತ್ತು ಅಗತ್ಯವಿರುವ ಅನುದಾನದ ಮಾಹಿತಿಯನ್ನು ತಕ್ಷಣ ಸರಕಾರಕ್ಕೆ ಕಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳಗಾವಿ-ಧಾರವಾಡ ಸಮಸ್ಯೆಗಳನ್ನು ಗಮನಕ್ಕೆ ಬಂದಿದ್ದು, ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಆಧರಿಸಿ ಮನೆ ಹಾಗೂ ಬೆಳೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಸಚಿವರಾದ ರಮೇಶ್ ಜಾರಕಿಹೊಳಿ, ಜಗದೀಶ್ ಶೆಟ್ಟರ್, ಇತರೆ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.