ಬೆಂಗಳೂರು: ಇತ್ತೀಚೆಗೆ ʼಗುಂಜನ್ ಸಕ್ಸೇನಾʼ ಚಿತ್ರದ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇದೀಗ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಸಿನಿಮಾ ಶೂಟಿಂಗ್ ಇಲ್ಲದಿದ್ದರೆ ಅವರೇನು ಮಾಡುತ್ತಾರೆ? ಉತ್ತರ ಬೇಕಿದ್ದರೆ ಮುಂದೆ ಓದಿ…
ಕೋವಿಡ್ ಕಾರಣಕ್ಕೆ ಅವರು ಸಿನಿಮಾ ಚಿತ್ರೀಕರಣಕ್ಕೆ ಹೋಗುತ್ತಿಲ್ಲ. ಬದಲಿಗೆ ಮುಂಬಯಿಯ ತಮ್ಮ ಮನೆಯಲ್ಲಿ ಆಕೆ ಟೈಮ್ಪಾಸ್ಗಾಗಿ ಏನು ಮಾಡುತ್ತಿದ್ದಾರೆ ಗೊತ್ತ? ತಮಗಿಷ್ಟವಾದ ಚಿತ್ರಗಳನ್ನು ಕ್ಯಾನ್ವಾಸ್ ಮೇಲೆ ಬಿಡಿಸುತ್ತಾ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ಇಷ್ಟಕ್ಕೂ ಅವರು ಬರೆದಿರುವ ಚಿತ್ರವಾದರೂ ಯಾವುದು? ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ಅವರ ಚಿತ್ರ.
ʼಮನೆಯಲ್ಲಿ ಸುಮ್ಮನೆ ಕೂರುವುದು ಬಿಟ್ಟು ಪೇಂಟಿಂಗ್ ಮಾಡಲು ಟ್ರೈ ಮಾಡಿದ್ದೇನೆʼ ಎಂದು ಅವರು ಹೇಳಿದ್ದಾರೆ. ಅಂದಹಾಗೆ, ಅವರು ಹಲವಾರು ಚಿತ್ರಗಳನ್ನು ಬಿಡಿಸಿದ್ದರೂ, ಬಾಲಾಜಿಯ ಚಿತ್ರ ಮಾತ್ರ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಪ್ರಶಂಸೆಯ ಸುರಿಮಳೆಯೇ ಆಗುತ್ತಿದೆ.
“ನೀವು ಬಿಡಿಸಿರುವ ಬಾಲಾಜಿಯ ಚಿತ್ರ ಮನೋಜ್ಞವಾಗಿದೆ. ಬಿಡುವಿದ್ದಾಗ ಚಿತ್ರಗಳನ್ನು ಚಿತ್ರಿಸುತ್ತಲೇ ಇರಿ” ಎಂದು ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ. ಅಂದಹಾಗೆ ಅವರು ಬರೆದ ಚಿತ್ರಗಳು ಜಾಹ್ನವಿಯ ಅಣ್ಣ ಅರ್ಜುನ್ ಕಪೂರ್ ಮತ್ತು ತಂದೆ ಬೋನಿ ಕಪೂರ್ ಅವರಿಗೂ ತುಂಬಾ ಇಷ್ಟ ಆಗಿವೆಯಂತೆ.
ವೆಂಕಟೇಶ್ವರ ಸ್ವಾಮಿ ಭಕ್ತೆ:
ಜಾಹ್ನವಿ ವೆಂಕಟೇಶ್ವರ ಸ್ವಾಮಿ ಅವರ ಭಕ್ತೆ, ಅವರ ತಾಯಿ ಶ್ರೀದೇವಿ ಅವರು ಇದ್ದಾಗ ಅವರು ದೇಗುಲಕ್ಕೆ ಬಂದು ಸ್ವಾಮಿಯ ದರ್ಶನ ಮಾಡಿಕೊಂಡಿದ್ದರು. ಅದರಲ್ಲೂ ಶ್ರೀದೇವಿ ಅವರಿಗೆ ಬಾಲಾಜಿ ಇಷ್ಟದೈವ. ಹೀಗಾಗಿ ಅವರ ಮಗಳು ಕೂಡ ಆ ದೇವರನ್ನು ನಂಬುತ್ತಿದ್ದಾರೆ ಎಂದು ಅಲ್ಲೊಬ್ಬರು ಕಾಮೆಂಟ್ ಹಾಕಿದ್ದಾರೆ. ಏನೇ ಆದರೂ ಜಾಹ್ನವಿ ಚಿತ್ರಗಳಂತೂ ಎಲ್ಲೆಡೆ ವೈರಲ್ ಆಗಿವೆ.
Lead photo: JANHVI KAPOOR@JanhviUniverse