ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ವೇಗವಾಗಿ ಹೆಜ್ಜೆಗಳನ್ನು ಇಡುತ್ತಿರುವ ರಾಜ್ಯ ಸರಕಾರವು ಇದೀಗ, ತಾನು ಕೂಡ ಹಲವು ಪ್ರಮುಖ ಸುಧಾರಣೆಗಳಿಗೆ ಕೈಹಾಕಿದೆ. ಈ ನಿಟ್ಟಿನಲ್ಲಿ ಶೀಘ್ರವಾಗಿಯೇ ಪಿಯುಸಿ, ಎಸ್ಸೆಸೆಲ್ಸಿ ಬೋರ್ಡ್ʼಗಳನ್ನು ವಿಲೀನ ಮಾಡಲಿದೆ.
ರಾಜ್ಯದಲ್ಲಿ ಸದ್ಯಕ್ಕೆ ಪದವಿಪೂರ್ವ ಶಿಕ್ಷಣ ಮಂಡಳಿ ಹಾಗೂ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಎಂಬುದಾಗಿ ಎರಡು ಮಂಡಳಿಗಳು ಪ್ರತ್ಯೇಕವಾಗಿ ಇವೆರಡೂ ಮಂಡಳಿಗಳನ್ನು ಜೊತೆಗೂಡಿಸಿ ಒಂದೇ ಮಂಡಳಿಯನ್ನಾಗಿ ಮಾಡಲಾಗುತ್ತಿದೆ. ಇವೆರಡೂ ಸೇರಿದ ಸಂಸ್ಥೆಗೆ ಪ್ರಾಥಮಿಕ ಶಿಕ್ಷಣ ಪರಿಷತ್ ಎಂದು ನಾಮಕರಣ ಮಾಡಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಶೈಕ್ಷಣಿಕ ಚಟುವಟಿಕೆ ನೋಡಿಕೊಳ್ಳಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಇದೆ. ಪಿಯುಸಿ ಶೈಕ್ಷಣಿಕ ಚಟುವಟಿಕೆ ನೋಡಿಕೊಳ್ಳಲು ಪದವಿಪೂರ್ವ ಶಿಕ್ಷಣ ಮಂಡಳಿ ಇದೆ. ಇಂತಹ ಎರಡು ಮಂಡಳಿಗಳನ್ನು ಒಂದೇ ಮಾಡುವಂಥ ನಿರ್ಧಾರವನ್ನು ರಾಜ್ಯ ಸರಕಾರ ಕೈಗೊಳ್ಳುತ್ತಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್, ಎರಡೂ ಮಂಡಳಿಗಳನ್ನು ಒಂದೇ ಮಾಡಿ ವಿಲೀನಗೊಳಿಸುವ ನಿರ್ಧಾರವನ್ನು ರಾಜ್ಯ ಸರಕಾರ ಕೈಗೊಂಡಿದೆ. ಎರಡು ಮಂಡಳಿಗಳನ್ನು ವಿಲೀನಗೊಳಿಸಿ ಪ್ರಾಥಮಿಕ ಶಿಕ್ಷಣ ಪರಿಷತ್ ಎಂಬುದಾಗಿ ಮರುನಾಮಕರಣ ಮಾಡಲಿರುವುದಾಗಿ ತಿಳಿಸಿದರು. ಹೀಗಾಗಿ ಕೆಲವೇ ದಿನಗಳಲ್ಲಿ ಪಿಯು, ಎಸ್‌ಎಸ್‌ಎಲ್ಸಿ ಮಂಡಳಿಗಳು ವೀಲಿನಗೊಂಡು, ಪ್ರಾಥಮಿಕ ಶಿಕ್ಷಣ ಪರಿಷತ್ ಅಸ್ಥಿತ್ವಕ್ಕೆ ಬರಲಿದೆ.
ಕೇಂದ್ರದ ಹೆಜ್ಜೆಯಲ್ಲೇ ಹೆಜ್ಜೆ
ನೂತನ ಶಿಕ್ಷಣ ನೀತಿಯನ್ನು ಪ್ರಕಟಿಸಿದ ದಿನವೇ ಕೇಂದ್ರ ಸರಕಾರವೂ ಮಾನವ ಸಂಪನ್ಮೂಲ ಖಾತೆಯನ್ನು ಶಿಕ್ಷಣ ಖಾತೆ ಎಂದು ಬದಲಾಯಿಸಿತ್ತು. ಆಡಳಿತಕ್ಕೆ ವೇಗ ನೀಡುವುದು ಈ ಕ್ರಮಕ್ಕೆ ಕಾರಣ ಎಂಬ ಕಾರಣವನ್ನು ಸಂಬಂಧಿತ ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದ್ದರು. ಈಗ ಇದೇ ದಾರಿಯಲ್ಲಿ ರಾಜ್ಯ ಸರಕಾರವೂ ಸಾಗುತ್ತಿದೆ.